ಸೋಮವಾರ, ಜನವರಿ 20, 2020
27 °C
ವಿವಿ ಒಳಗೊಂದು ಸುತ್ತು– ಕೆಲವು ವಿಭಾಗಗಳಿಗೆ ‘ಸಿಬ್ಬಂದಿ’ಯೇ ಇಲ್ಲ

ವಿ ವಿ: ಶೇ 45ರಷ್ಟು ಹುದ್ದೆ ಖಾಲಿ!

ಸುಭಾಸ ಎಸ್.ಮಂಗಳೂರ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ಜ್ಞಾನಗಂಗೆ’ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇದೀಗ ಮತ್ತೆ ಜೀವ ಬಂದಿದೆ. ಈ ಮೊದಲು ವಿ.ವಿ ಹುದ್ದೆಗಳ ಭರ್ತಿಗೆ ಮುಂದಾಗಿತ್ತಾ­ದರೂ ಸಂವಿಧಾನದ 371 (ಜೆ) ತಿದ್ದುಪಡಿಯಿಂದಾಗಿ ಸ್ಥಗಿತ­ಗೊಳಿಸ­ಲಾಗಿತ್ತು.ಗುಲ್ಬರ್ಗ ವಿ.ವಿಯಲ್ಲಿ ಸದ್ಯ ಶೇ 45ರಷ್ಟು ಬೋಧಕ ಹುದ್ದೆಗಳು ಹಾಗೂ ಶೇ 65ರಷ್ಟು ಬೋಧಕೇತರ ಹುದ್ದೆಗಳು ಖಾಲಿ ಉಳಿದಿವೆ. 36 ಪ್ರಾಧ್ಯಾಪಕರ ಹುದ್ದೆಗಳಲ್ಲಿ 16 ಹುದ್ದೆ­ಗಳನ್ನು ಭರ್ತಿ ಮಾಡಲಾಗಿದ್ದು, ಇನ್ನೂ 10 ಹುದ್ದೆಗಳು ಖಾಲಿ ಉಳಿ­ದಿವೆ. ಅದೇ ರೀತಿ ಸಹಾಯಕ ಪ್ರಾಧ್ಯಾ­ಪಕರ 67 ಹುದ್ದೆ ಮಂಜೂರಾಗಿದ್ದು, 30 ಹುದ್ದೆಗಳು ಭರ್ತಿಯಾಗಿವೆ. ಸಹ ಪ್ರಾಧ್ಯಾಪಕರ 146 ಹುದ್ದೆಗಳಲ್ಲಿ 67 ಭರ್ತಿಯಾಗಿದ್ದು, 79 ಹುದ್ದೆ­ಗಳು ಖಾಲಿ ಉಳಿದಿವೆ. ಬೋಧಕೇತರ ಸಿಬ್ಬಂದಿಯ 704 ಹುದ್ದೆಗಳಲ್ಲಿ 457 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 247 ಹುದ್ದೆಗಳು ಖಾಲಿ ಇವೆ.ಕಚೇರಿ ಅಧೀಕ್ಷಕ 7, ದ್ವಿತೀಯ ದರ್ಜೆ ಸಹಾಯಕ 27, ಟೈಪಿಸ್ಟ್ 7, ಜವಾನ 63, ಉದ್ಯಾನ ಕೆಲಸಗಾರ 15, ಕಿರಿಯ ಎಂಜಿನಿಯರ್ 3, ಸಹಾಯಕ ಎಂಜಿನಿಯರ್ 2, ಮೇಸ್ತ್ರಿ 9, ಪ್ರಯೋಗಾಲಯ ಸಹಾಯಕ 15, ಲ್ಯಾಬ್ ಟೆಕ್ನಿಸಿಯನ್ 1, ಸಂಶೋ­ಧನಾ ಸಹಾಯಕ 15 ಹುದ್ದೆ­ಗಳು ಸೇರಿದಂತೆ ಒಟ್ಟು 247 ಹುದ್ದೆ­ಗಳು ಖಾಲಿ ಉಳಿದಿವೆ.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಪರಿಸರ ವಿಜ್ಞಾನ, ಇಂಗ್ಲಿಷ್, ದೃಶ್ಯ ಕಲಾ ವಿಭಾಗ ಹಾಗೂ ಮಹಿಳಾ ಅಧ್ಯಯನ ವಿಭಾಗ ಸೇರಿದಂತೆ ಹಲವು ವಿಭಾಗಗಳು ಆರಂಭ­ವಾಗಿ 8–10 ವರ್ಷಗಳಾ­ದರೂ ಕಾಯಂ ಸಿಬ್ಬಂದಿ ನೇಮಕ ಮಾಡಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ವಿಭಾಗ­ಗಳನ್ನು ನಡೆಸಲಾಗುತ್ತಿದೆ. ಅಷ್ಟೇ ಅಲ್ಲ, ಪಿಎಚ್.ಡಿಯನ್ನೂ ನೀಡಲಾ­ಗುತ್ತಿದೆ.300ಕ್ಕೂ ಹೆಚ್ಚು ಉಪನ್ಯಾಸಕರು: ಸದ್ಯ ವಿ.ವಿಯಲ್ಲಿ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ­ಕೊಳ್ಳಲಾಗಿದೆ.

ಪ್ರತಿ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅರ್ಜಿ ಆಹ್ವಾನಿಸಿ, ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಶೈಕ್ಷಣಿಕ ವರ್ಷ ಪೂರ್ಣಗೊಂಡ ಬಳಿಕ ಮತ್ತೆ ಅರ್ಜಿ ಸಲ್ಲಿಸಿದ ಬಳಿಕವಷ್ಟೇ ಅತಿಥಿ ಶಿಕ್ಷಕರಿಗೆ ನೇಮಕಾತಿ ಪತ್ರ ನೀಡುವ ಪರಿಪಾಠ ಬೆಳೆಸಿಕೊಂಡು ಬರಲಾಗಿದೆ.ಈ ಮೊದಲು ಖಾಲಿ ಹುದ್ದೆಗಳ ಭರ್ತಿಗೆ ವಿ.ವಿ ಮುಂದಾಗಿತ್ತು. ಆದರೆ, ಹೈದರಾಬಾದ್ ಕರ್ನಾಟಕ ವ್ಯಾಪ್ತಿ­ಯ ಆರು ಜಿಲ್ಲೆಗಳಿಗೆ ಸಂವಿಧಾನದ 371 (ಜೆ) ವಿಶೇಷ ಸ್ಥಾನಮಾನ ನೀಡುವ ಪ್ರಕ್ರಿಯೆ ಆರಂಭವಾದ್ದರಿಂದ ನೇಮಕಾತಿ ಸ್ಥಗಿತಗೊಳಿಸಲಾಗಿತ್ತು.

ಇದೀಗ 371 (ಜೆ) ತಿದ್ದುಪಡಿ ರಾಷ್ಟ್ರ­ಪತಿ ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ನೇಮಕಾತಿ ಮಾರ್ಗಸೂಚಿ ಹೊರಡಿಸ­ಬೇಕಿದೆ.‘ಬೋಧಕ ವಿಭಾಗದಲ್ಲಿ 136 ಹುದ್ದೆಗಳು ಖಾಲಿ ಇದ್ದು, ಈ ಪೈಕಿ 53 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಆದರೆ, ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳನ್ನು ನೇಮಕ ಮಾಡಬೇಕು. ತುರ್ತು ಅಗತ್ಯವಿರುವ ಹುದ್ದೆಗಳು ಎಷ್ಟು ಎಂಬ ವಿವರಗಳನ್ನು ಕಳಿಸಿ­ಕೊಡು­ವಂತೆ ಶಿಕ್ಷಣ ಇಲಾಖೆ ಸೂಚಿ­ಸಿದೆ. 371 (ಜೆ) ಜಾರಿಯಾದ್ದರಿಂದ ಖಾಲಿ ಹುದ್ದೆಗಳ ಭರ್ತಿಗೆ ಮರುಜೀವ ಬಂದಂತಾಗಿದೆ’ ಎಂದು ವಿ.ವಿ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)