ಶುಕ್ರವಾರ, ಮೇ 7, 2021
21 °C

ವೀಕ್ಷಕರ ಮುಂದೆ ಬಲಾಬಲ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕನ ಆಯ್ಕೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕೆಪಿಸಿಸಿ ವೀಕ್ಷಕರು ಮಂಗಳವಾರ ಅಭಿಪ್ರಾಯ ಸಂಗ್ರಹಿಸುವಾಗ ಎರಡೂ ಗುಂಪುಗಳು ಪರಸ್ಪರ ಬಲಾಬಲ ಪ್ರದರ್ಶನಕ್ಕೆ ಇಳಿದಿದ್ದರಿಂದ ಎರಡೂ ಕಡೆಯ ನಾಯಕರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.ದಶರಥ ವಾಲಿ ಪರ ವಕಾಲತು ವಹಿಸಿದ ಎಫ್.ಎಚ್. ಜಕ್ಕಪ್ಪನವರ ಮತ್ತು ಯಾಸೀನ್ ಹಾವೇರಿಪೇಟ ಪರ ವಾದಿಸಿದ ವಿನಯ್ ಕುಲಕರ್ಣಿ ಮಧ್ಯೆ ತೀವ್ರ ವಾಗ್ವಾದ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಪಾಲಿಕೆ ವಿಪಕ್ಷ ನಾಯಕರನ್ನಾಗಿ ವಾಲಿ ಅವರನ್ನು ಏಕಾಏಕಿ ನೇಮಕ ಮಾಡಿದ್ದಾರೆ ಎಂದು ಹಲವು ಸದಸ್ಯರು ಸಿಟ್ಟಿಗೆದ್ದು, ಕೆಪಿಸಿಸಿ ಅಧ್ಯಕ್ಷರಿಗೆ ದೂರು ಒಯ್ದಿದ್ದರು. ಬಿಕ್ಕಟ್ಟು ಶಮನಮಾಡಲು ಡಾ. ಪರಮೇಶ್ವರ್ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸಿ.ಎಸ್. ನಾಡಗೌಡ, ಕಾರ್ಯದರ್ಶಿ ಆರ್.ಬಿ. ತಿಮ್ಮಾಪುರ ಹಾಗೂ ವೆಂಕಟೇಶಗೌಡ ಅವರನ್ನು ವೀಕ್ಷರನ್ನಾಗಿ ನೇಮಿಸಿದ್ದರು.ವೀಕ್ಷಕರು ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ಮುಂದಾದಾಗ ಅಸಮಾಧಾನ ಮತ್ತೊಮ್ಮೆ ಸ್ಫೋಟಗೊಂಡಿತು. ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಪಡೆಯಲಾಯಿತು. 7-8 ಜನ ಸದಸ್ಯರನ್ನು ಜಕ್ಕಪ್ಪನವರ ವೀಕ್ಷಕರ ಮುಂದೆ ಒಟ್ಟಿಗೇ ಕಳುಹಿಸಲು ಯತ್ನಿಸಿದಾಗ ವಿನಯ್ ಅದಕ್ಕೆ ಆಕ್ಷೇಪ ಎತ್ತಿದರು ಮೂಲಗಳು ಹೇಳಿವೆ.ಜಿಲ್ಲೆಯ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿಪಕ್ಷ ನಾಯಕನ ಹುದ್ದೆಗೆ ವಾಲಿ ಅವರನ್ನು ಹಿಂಡಸಗೇರಿ ಏಕಪಕ್ಷೀಯವಾಗಿ ನೇಮಕ ಮಾಡಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ ಮತ್ತಿತರು ವಿರೋಧ ವ್ಯಕ್ತಪಡಿಸಿದರು. ಹಲವು ಪಾಲಿಕೆ ಸದಸ್ಯರ ಆಕ್ಷೇಪವೂ ಇದೇ ಆಗಿತ್ತು ಎಂದು ಅವು ಸ್ಪಷ್ಟಪಡಿಸಿವೆ.ಸಭೆ ಆರಂಭವಾಗುವ ಹೊತ್ತಿಗೆ ಜಕ್ಕಪ್ಪನವರ ತಮ್ಮ ಗುಂಪಿನ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ನಿಂತಿದ್ದರು. ಪಾಲಿಕೆಯಲ್ಲಿ ಕಾಂಗ್ರೆಸ್ 22 ಜನ ಸದಸ್ಯ ಬಲವನ್ನು ಹೊಂದಿದ್ದು, ಬಹುಮತಕ್ಕೆ ಅಗತ್ಯವಾದ 13 ಸದಸ್ಯರನ್ನು ಕಲೆ ಹಾಕಲು ಎರಡೂ ಗುಂಪುಗಳು ಹವಣಿಸುತ್ತಿದ್ದವು. ಇನ್ನೊಂದೆಡೆ ದೀಪಕ್ ಚಿಂಚೋರೆ, ಯಾಸೀನ್ ಮತ್ತು ಗಣೇಶ ಟಗರಗುಂಟಿ ಅವರ ತಂಡ ತಮ್ಮ `ಬಲ~ವನ್ನು ಕ್ರೋಡೀಕರಿಸಲು ಅತ್ತಿತ್ತ ಓಡಾಡುತ್ತಿತ್ತು.ತಮ್ಮ ಬೆಂಬಲಿಗ ಸದಸ್ಯರನ್ನು ಕಲೆಹಾಕಲು ವಾಲಿ ಕೂಡ ಭಾರಿ ಕಸರತ್ತು ನಡೆಸಿದರು. ಎರಡೂ ಗುಂಪುಗಳ ನಾಯಕರೂ ಒಬ್ಬೊಬ್ಬರಾಗಿ ಬಂದು ಸೇರಿಕೊಂಡರು. ಕೋಣೆಯಲ್ಲಿ ಗೊಂದಲ ಉಂಟಾದಾಗ ವೀಕ್ಷಕರು ಪಾಲಿಕೆಯ 22 ಜನ ಸದಸ್ಯರ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಪಡೆಯಲು ನಿರ್ಧರಿಸಿದರು. ಯಾವ ಸದಸ್ಯರು, ಯಾರನ್ನು ಬೆಂಬಲಿಸಿದರು, ಯಾರಿಗೆ ಬಹುಮತ ಸಿಕ್ಕಿತು ಎಂಬ ಲೆಕ್ಕಾಚಾರ ಸಭೆ ನಡೆದ ಸರ್ಕೀಟ್ ಹೌಸ್ ಆವರಣದಲ್ಲಿ ಜೋರಾಗಿತ್ತು.ವಾಲಿ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಕದಲಿಸಿದರೆ ಪಕ್ಷದ ವರ್ಚಸ್ಸಿನ ಮೇಲೆ ದೊಡ್ಡ ಪೆಟ್ಟು ಬೀಳುತ್ತದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಸದಸ್ಯರು ಸಹಕಾರ ನೀಡಬೇಕಾಗುತ್ತದೆ ಎಂಬ ಸಂಗತಿಯನ್ನು ವೀಕ್ಷಕರು ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಯಾಸೀನ್ ಪರವೇ ಅಧಿಕ ಸದಸ್ಯರ ಒಲವು ವ್ಯಕ್ತವಾದರೆ ಬೇರೆ ಯೋಚನೆ ಮಾಡುವ ಸಾಧ್ಯತೆಯೂ ಇದೆ ಎಂಬುದನ್ನೂ ಹೇಳಿದ್ದಾರೆ ಎನ್ನಲಾಗಿದೆ. ಶಿಕ್ಕಿಲಗಾರ ಸಮಾಜದ 50ಕ್ಕೂ ಅಧಿಕ ಮಂದಿ ತಮ್ಮ ಸಮುದಾಯದ ವಾಲಿ ಅವರನ್ನೇ ವಿಪಕ್ಷ ನಾಯಕರನ್ನಾಗಿ ಮುಂದುವರಿಸಬೇಕು ಎಂದು ವೀಕ್ಷಕರಲ್ಲಿ ಮನವಿ ಮಾಡಿಕೊಂಡರು. ಎಲ್ಲ ಸದಸ್ಯರು ಮತ್ತು ಮುಖಂಡರ ಅಭಿಪ್ರಾಯ ಪಡೆದ ವೀಕ್ಷಕರು ಕೆಪಿಸಿಸಿ ಅಧ್ಯಕ್ಷರಿಗೆ ವರದಿ ನೀಡಲಾಗುವುದು ಎಂದು ತಿಳಿಸಿ ಹೊರಟುಹೋದರು.ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಶಿವಳ್ಳಿ, ಮಾಜಿ ಮೇಯರ್ ಅನಿಲಕುಮಾರ್ ಪಾಟೀಲ, ಮಹೇಂದ್ರ ಸಿಂಘಿ, ನಾಗರಾಜ ಛಬ್ಬಿ, ಮೋಹನ ಹಿರೇಮನಿ ಸೇರಿದಂತೆ ಹಲವು ಜನ ಮುಖಂಡರು ಸಭೆಯ ಬೆಳವಣಿಗೆಗಳನ್ನು ಗಮನಿಸಲು ಬಂದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.