ವೀರಗಂಗಾಧರ ಸ್ವಾಮೀಜಿ ಪುಣ್ಯಾರಾಧನೆ ನಾಳೆ

7

ವೀರಗಂಗಾಧರ ಸ್ವಾಮೀಜಿ ಪುಣ್ಯಾರಾಧನೆ ನಾಳೆ

Published:
Updated:

ಲಕ್ಷ್ಮೇಶ್ವರ: `ಭೂ ಕೈಲಾಸ~ ಎಂದೇ ಪ್ರಸಿದ್ಧವಾಗಿರುವ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದ ಸಂಸ್ಥಾಪಕರಾಗಿದ್ದ ವೀರಗಂಗಾಧರ ಸ್ವಾಮೀಜಿ ಅವರ 29ನೇ ಪುಣ್ಯಾರಾಧನೆ ಇದೇ 14ರಂದು ಶ್ರೀಕ್ಷೇತ್ರದಲ್ಲಿ ಜರುಗಲಿದೆ.ಸ್ಥಳದ ಮಹಿಮೆ: ಈಗಿನ ಮುಕ್ತಿಮಂದಿರ ಹಿಂದೆ ದಟ್ಟಡವಿಯಾಗಿದ್ದು ಇದಕ್ಕೆ ಸಿದ್ದಯ್ಯನಬೆಟ್ಟ ಎಂದು ಕರೆಯುತ್ತಿದ್ದರು.ಕಳಸದ ಗುರು ಗೋವಿಂದಭಟ್ಟರು ಹಾಗೂ ಅವರ ಪರಮಶಿಷ್ಯ ಶಿಶುನಾಳ ಶರೀಫರು ಒಮ್ಮೆ ಈ ಕಾಡಿನ ಮಾರ್ಗವಾಗಿ ಹೋಗುತ್ತಿರುವಾಗ ಕೆಲವು ಸಮಯ ಇಲ್ಲಿ ತಂಗಿದ್ದರು. ಆಗ ಗುರು ಗೋವಿಂದಭಟ್ಟರ ಕೈಯಲ್ಲಿದ್ದ ಚಿಲುಮೆ ಜಾರಿ ಕೆಳಗೆ ಬಿದ್ದಿತು. ಅದನ್ನು ಎತ್ತಿಕೊಳ್ಳುವಾಗ ಭೂಮಿಯೊಳಗಿಂದ ಧೂಪದ ಸುವಾಸನೆ ಬಂತು.ಆಗ ಗೋವಿಂದಭಟ್ಟರು ಶರೀಫರನ್ನು ಉದ್ದೇಶಿಸಿ ಇದು ಅತ್ಯಂತ ಪವಿತ್ರ ಸ್ಥಳವಾಗಿದ್ದು, ಮುಂದೆ ಈ ಸ್ಥಳದಲ್ಲಿ ಸಿದ್ಧ ಪುರುಷನೊಬ್ಬ ಬಂದು ಪವಿತ್ರ ಕ್ಷೇತ್ರವನ್ನಾಗಿ ಮಾಡುತ್ತಾನೆ ಎಂದು ಭವಿಷ್ಯ ನುಡಿದಿದ್ದರು ಎಂಬುದು ಐತಿಹ್ಯ.ಅವರ ಭವಿಷ್ಯ ವಾಣಿಯಂತೆ ಹುಬ್ಬಳ್ಳಿ ತಾಲ್ಲೂಕಿನ ಪಾಲಿಕೊಪ್ಪದಿಂದ  ಗಂಗಾಧರ ಸ್ವಾಮೀಜಿ ದುರ್ಗಮವಾದ ಸಿದ್ದಯ್ಯನ ಕಾಡಿಗೆ ಬಂದು ಘೋರ ತಪಸ್ಸು ಮಾಡಿ ಈ ನೆಲವನ್ನು ಪಾವನಗೊಳಿಸಿದರು. 1942ರ ಶ್ರಾವಣ ಮಾಸದಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದ ಸ್ಥಾಪನೆಗೆ ಗಂಗಾಧರ ಸ್ವಾಮೀಜಿ ಅಡಿಗಲ್ಲು ನೆರವೇರಿಸಿದರು. ಮುಂದೆ ಸ್ವಾಮೀಜಿಯವರು ರಂಭಾಪುರಿ ಪೀಠಾಧ್ಯಕ್ಷರಾಗಿ ನಾಡಿನ ತುಂಬೆಲ್ಲ ಧರ್ಮ ಪ್ರಚಾರ ಮಾಡಿದ್ದು ಇತಿಹಾಸ.ಮುಕ್ತಿಮಂದಿರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಿ ಇಲ್ಲಿನ ಭಕ್ತರಿಗೆ ಮಾನವ ಧರ್ಮ ಕುರಿತು ಬೋಧನೆ ಮಾಡಿದರು. `ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ~ ಎಂಬ ಮಂತ್ರವನ್ನು ಬೋಧಿಸಿ ಜನತೆಯಲ್ಲಿ ಧರ್ಮ ಜಾಗೃತಿ ಮೂಡಿಸಿದರು. ಗಂಗಾಧರ ಸ್ವಾಮೀಜಿ ಶ್ರೀಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪಿಸಬೇಕು ಎಂಬ ಸಂಕಲ್ಪ ಹೊಂದಿದ್ದರು. ಆದರೆ ಅವರ ಜೀವಿತಾವಧಿಯಲ್ಲಿ ಈ ಕಾರ್ಯ ಈಡೇರಲಿಲ್ಲ. ಕ್ಷೇತ್ರದ ಈಗಿನ ಪಟ್ಟಾಧ್ಯಕ್ಷರಾಗಿರುವ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಲಾದಗಿ ಪಂಚಗ್ರಹ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ತ್ರಿಕೋಟಿ ಲಿಂಗ ಸ್ಥಾಪನಾ ಕಾರ್ಯವನ್ನು ಕೈಗೊಂಡಿದ್ದಾರೆ.ಜಗದ್ಗುರು ರಂಭಾಪುರಿ ವೀರ ಸಿಂಹಾಸನ ಶಾಖಾಮಠ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದ ಸಂಸ್ಥಾಪಕರಾದ ಲಿಂ.ರಂ.ಜ. ವೀರಗಂಗಾಧರ ಸ್ವಾಮೀಜಿ ಅವರ 29ನೇ ಪುಣ್ಯಾರಾಧನೆ ದಿನ ಶ್ರೀಶೈಲಪೀಠದ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯರ ಸಾನ್ನಿಧ್ಯದಲ್ಲಿ ಜರುಗಲಿದೆ.ಇದರ ನಿಮಿತ್ತ ಕ್ಷೇತ್ರದ ಪಟ್ಟಾಧ್ಯಕ್ಷರಾದ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹರಿಹರ ತಾಲ್ಲೂಕು ಮಲೆಬೆನ್ನೂರಿನ ಭಕ್ತರು ಪ್ರಸಾದ ಸೇವೆ ವಹಿಸಿಕೊಂಡಿದ್ದಾರೆ. ಅಂದು ಮಧ್ಯಾಹ್ನ 3ಕ್ಕೆ ಲಿಂ.ಜ. ವೀರಗಂಗಾಧರ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುವುದು.ಸಂಜೆ 5ಕ್ಕೆ ನಡೆಯುವ ಧರ್ಮಸಭೆಯಲ್ಲಿ ಉದ್ದಿಮೆದಾರ ಹರೀಸಾ ಖೋಡೆ, ಸಂಸದ ಶಿವಕುಮಾರ ಉದಾಸಿ, ಶಾಸಕ ರಾಮಣ್ಣ ಲಮಾಣಿ, ಕುಂದಗೋಳ ಶಾಸಕ ಎಸ್.ಐ. ಚಿಕ್ಕನಗೌಡ್ರು, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಗಂಗಣ್ಣ ಮಹಾಂತಶೆಟ್ಟರ, ಎಂ.ಎಸ್. ಅಕ್ಕಿ,  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ಧಾರವಾಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಡಿವೆಪ್ಪ ಮನವಿ, ಸದಸ್ಯ ವೆಂಕನಗೌಡ ಹಿರೇಗೌಡ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲಾದಗಿ ಪಂಚಗ್ರಹ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಹಾಗೂ ನಾಡಿನ ಹಲವು ಮಠಗಳ ಮಠಾಧೀಶರು ಸಮಾರಂಭದ ಸಾನ್ನಿಧ್ಯ ವಹಿಸಿಕೊಳ್ಳುವರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry