ವೀರಯೋಧನ ಅಂತಿಮ ಯಾತ್ರೆಗೆ ಜನಸ್ತೋಮ
ಸುರಪುರ: ಕಾಶ್ಮೀರ ಗಡಿ ಭಾಗದಲ್ಲಿ ಉಗ್ರರ ಗುಂಡಿಗೆ ಬಲಿಯಾದ ತಾಲ್ಲೂಕಿನ ಕವಡಿಮಟ್ಟಿಯ ವೀರ ಯೋಧ ಶರಣಬಸವ ಕೆಂಗೂರಿ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕವಡಿಮಟ್ಟಿಯಲ್ಲಿ ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಮಾತೃಭೂಮಿಯ ಸೇವೆಯಲ್ಲಿ ವೈರಿಗಳ ವಿರುದ್ಧ ಹೋರಾಡುತ್ತಲೇ ವೀರಮರಣವನ್ನಪ್ಪಿದ ಶರಣಬಸವ ಅವರ ಪಾರ್ಥಿವ ಶರೀರ ಮಣ್ಣಿನಲ್ಲಿ ಮಣ್ಣಾಗಿ ಹೋಯಿತು.
ವಿಮಾನದ ಮೂಲಕ ಹೈದರಾಬಾದ್ಗೆ ಆಗಮಿಸಿದ ಪಾರ್ಥಿವ ಶರೀರವನ್ನು ಲಾತೂರಿನ ಯೋಧ ಪಡೆ ಸ್ವಗ್ರಾಮಕ್ಕೆ ತಂದರು. ಪಟ್ಟಣದ ಗಾಂಧಿವೃತ್ತದಲ್ಲಿ ಬೆಳಿಗ್ಗೆಯಿಂದಲೆ ವೀರಯೋಧನ ಅಂತಿಮ ದರ್ಶನ ಪಡೆಯಲು ಸಾವಿರಾರು ಜನ ನೆರೆದಿದ್ದರು. ಬೆಳಿಗ್ಗೆ 9 ಗಂಟೆಗೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ `ಭಾರತ ಮಾತಾ ಕಿ ಜೈ~, ಶರಣಬಸವ ಅಮರ ರಹೇ~, `ಮತ್ತೆ ಹುಟ್ಟಿ ಬಾ ಶರಣಬಸವ~ ಎಂಬ ಘೋಷಣೆಗಳು ಮುಗಿಲು ಮುಟ್ಟದ್ದವು.
ಶಾಲಾ ಮಕ್ಕಳು ಪುಷ್ಪ ನಮನ ಸಲ್ಲಿಸಿದರು. ಎಲ್ಲರ ಕೈಯಲ್ಲೂ ರಾಷ್ಟ್ರ ಧ್ವಜ ಹಾರಾಡುತ್ತಿತ್ತು. ಎಲ್ಲಿ ನೋಡಿದರಲ್ಲಿ ಜನದಸಂದಣಿ. ದೇಶಕ್ಕಾಗಿ ಪ್ರಾಣ ತೆತ್ತ ವೀರಯೋಧನ ದರ್ಶನ ಪಡೆಯಲು ಜನ ತಾ ಮುಂದು ತಾ ಮುಂದು ಎನ್ನುತ್ತಿದ್ದರು. ಮಹಡಿಯ ಮೇಲೆ, ಅಂಗಡಿಗಳ ಮೇಲೆ ಜನ ಸಾಗರ ತುಂಬಿ ತುಳುಕುತ್ತಿತ್ತು. ಪೊಲೀಸರು ನಿಯಂತ್ರಿಸಿ ಎಲ್ಲರಿಗೂ ಅವಕಾಶ ಮಾಡಿಕೊಟ್ಟರು.
ಮೆರವಣಿಗೆ ಪಟ್ಟಣದ ಗಾಂಧಿವೃತ್ತ, ವಲ್ಲಭಭಾಯಿ ಪಟೇಲ ವೃತ್ತ, ವೇಣುಗೋಪಾಲ ಸ್ವಾಮಿ ರಸ್ತೆ, ವಾಲ್ಮೀಕಿ ವೃತ್ತದ ಮೂಲಕ ಕುಂಬಾರಪೇಟೆ ಮಾರ್ಗವಾಗಿ ಯೋಧನ ಸ್ವಗ್ರಾಮ ಕವಡಿಮಟ್ಟಿಗೆ ತಲುಪಿತು. ಶರಣಬಸವನ ಕುಟುಂಬ ವರ್ಗದವರ ರೋದನ ಕರುಳು ಕಿತ್ತು ಬರುವಂತಿತ್ತು. ಇಡೀ ಗ್ರಾಮ ತಮ್ಮ ಹೆಮ್ಮೆಯ ಪುತ್ರನ ದರ್ಶನದಿಂದ ಮೂಕವಿಸ್ಮಿತರಾದರು. ಎಲ್ಲರ ಕಣ್ಣಲ್ಲೂ ಅಶ್ರುಧಾರೆ ಹರಿಯುತಿತ್ತು.
ಮೃತರ ಗೌರವಾರ್ಥ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದರು. ಯೋಧ ಪಡೆ ಅಂತಿಮ ಸಲ್ಯೂಟ್ ನೀಡಿದರು. ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಾಜೂಗೌಡ ಅಂತಿಮ ನಮನ ಸಲ್ಲಿಸಿದರು. ಪಟ್ಟಣದ ಎಲ್ಲಾ, ಶಾಲಾ ಕಾಲೇಜುಗಳಲ್ಲಿ ಮೃತರ ಗೌರವಾರ್ಥ ಮೌನಾಚರಣೆ ಮಾಡಲಾಯಿತು.
ಮಾಜಿ ಸಚಿವ ರಾಜಾ ಮದನಗೋಪಾಲನಾಯಕ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶರಣಮ್ಮ ಸಾಹುಕಾರ್, ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ದಂಡಿನ್, ತಹಸೀಲ್ದಾರ್ ಸಂಗನಬಸಯ್ಯ ಗಣಾಚಾರಿ, ಪ್ರಮುಖರಾದ ರಾಜಾ ಹನುಮಪ್ಪನಾಯಕ್, ರಾಜಾ ವೇಣುಗೋಪಾಲನಾಯಕ್, ಶಂಭನಗೌಡ ಕೊಡೇಕಲ್, ವೇಣುಗೋಪಾಲ ಜೇವರ್ಗಿ, ನಿಂಗಣ್ಣ ಚಿಂಚೋಡಿ, ಶಿವಣ್ಣ ಮಂಗಿಹಾಳ, ಯಲ್ಲಪ್ಪ ಕುರಕುಂದಿ, ನಿಂಗಣ್ಣ ಬಾಚಿಮಟ್ಟಿ, ಉಸ್ತಾದ್ ವಜಾಹತ್ ಹುಸೇನ್, ವೆಂಕಟೇಶ ಭಕ್ರಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಿಜಕಾರ್ಜುನ ಕ್ರಾಂತಿ, ಮೈಲಾರೆಪ್ಪ ಸಗರ, ಮಲ್ಲೇಶಿ ಪಾಟೀಲ, ಗುಂಡಪ್ಪ ಸೋಲಾಪುರ, ಸಿದ್ರಾಮ ಪಾಟೀಲ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.