ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮಗಳಲ್ಲ

7
ಚರ್ಚೆ

ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮಗಳಲ್ಲ

Published:
Updated:

ಡಾ. ಎಂ. ಎಂ. ಕಲ್ಬುರ್ಗಿಯವರು ಎಂದಿನಂತೆ ಆಧಾರ ರಹಿತ, ವಿಚಿತ್ರ ವಾದ­ಗಳನ್ನು ಮಂಡಿಸುತ್ತ ‘ಲಿಂಗಾಯತ: ವಲಸೆ ಧರ್ಮ­ವಲ್ಲ, ಕನ್ನಡಿಗರು ಸೃಷ್ಟಿಸಿದ ಮೊದಲ ಧರ್ಮ’ ಎಂಬ ಲೇಖನ­ದಲ್ಲಿ (ಪ್ರ.ವಾ. 2.5.14) ಹಲವು ಭ್ರಮಾಮೂಲ ಕಲ್ಪನೆಗಳನ್ನು ಎತ್ತಿ ಹಿಡಿದು ವಸ್ತುನಿಷ್ಠ ಸಂಶೋಧನೆ, ಸತ್ಯಕ್ಕೆ ಅಪಚಾರ ಮಾಡಿದ್ದಾರೆ.ಉತ್ತರ ಭಾರತದಿಂದ ‘ವಲಸೆ ಬಂದ’ ಬೌದ್ಧ, ಜೈನ, ವೈದಿಕ (ಕಾಶ್ಮೀರ) ಶೈವಧರ್ಮಗಳು ಕರ್ನಾಟಕದಲ್ಲಿ ನಡೆಸಿದ ಪರಸ್ಪರ ಹೋರಾಟದಲ್ಲಿ ‘ಮೊದಲು ನಾಶ­ವಾದುದು ಬೌದ್ಧ ಧರ್ಮ’ ಎಂಬ ಹೇಳಿಕೆ ಗಮನಿಸಿ. ಕರ್ನಾಟಕದಲ್ಲಿದ್ದ ಬೌದ್ಧರ ಸಂಖ್ಯೆ ತೀರ ಕಡಮೆ– ಆ ಧರ್ಮ ‘ಹೋರಾಟದಲ್ಲಿ’ ಸಾಯ­ಲಿಲ್ಲ. ಜೈನಧರ್ಮ ಮೊದಲಿನಿಂದ ಅಹಿಂಸಾ ಪರವಾದ ಧರ್ಮ. ಅದು ಎಂದೂ ಇನ್ನೊಂದು ಧರ್ಮದ ಮೇಲೆ ಆಕ್ರಮಣ ನಡೆ­ಯಿಸಿಲ್ಲ. ಬೌದ್ಧಧರ್ಮಕ್ಕೆ ಜನರ ಬೆಂಬಲ ಎಂದೂ ಸಿಗಲಿಲ್ಲ ಅದು ಕ್ರಮೇಣ ತನಗೆ ತಾನೇ ಕಣ್ಮರೆಯಾಯಿತು. ವೈದಿಕ ಧರ್ಮವು ಬಸದಿಗಳನ್ನು ‘ಬ್ರಹ್ಮ ಜಿನಾಲಯ’ವನ್ನಾಗಿ, ಕಾಳಾ­ಮುಖ ಶೈವವು ಬಸದಿಗಳನ್ನು ‘ಎಕ್ಕೋಟಿ ಜಿನಾಲಯ’ಗಳನ್ನಾಗಿ ಪರಿವರ್ತಿಸಿದವು ಎಂಬ ಹೇಳಿಕೆ­­­ಯಂತೂ ಸಂಪೂರ್ಣ ವ್ಯರ್ಥ. ಬ್ರಾಹ್ಮ­ಣರು ಬಸದಿ­ಯೊಂ­ದನ್ನು ಕಟ್ಟಿಸಿ ‘ಬ್ರಹ್ಮ ಜಿನಾ­ಲಯ’ವೆಂದು ಹೆಸರಿಟ್ಟಿದ್ದಕ್ಕೆ ಸ್ಪಷ್ಟ ಸಾಕ್ಷ್ಯಾ­ಧಾರವಿದೆ. ‘ಎಕ್ಕೋಟಿ’ ಎಂಬುದು ಏಳುಕೋಟಿ ತಪಸ್ವಿ­­ಗಳ ಒಂದು ಪರಿಕಲ್ಪನೆ, ‘ಎಕ್ಕೋಟಿ ಜಿನಾ­ಲಯ’ವೆಂಬ ಹೆಸ­ರಿನ ಜಿನಾಲಯ ಅಥವಾ ಬಸದಿಯನ್ನು ಜೈನರೇ ನಿರ್ಮಿಸಿದ್ದಕ್ಕೆ ಸ್ಪಷ್ಟ ಸಾಕ್ಷ್ಯಾಧಾರವಿದೆ.‘ಜೈನರನ್ನು ಹತ್ತಿಕ್ಕಿದ ಧರ್ಮಗಳಲ್ಲಿ ವೇದಪರ­ವಾದ ವೈದಿಕ ಬ್ರಾಹ್ಮಣವು ಆಗಮಪರವಾದ ಆಗಮಿಕ ಶೈವದ ಮೇಲೆ ತನ್ನ ಪ್ರಭಾವ ಬೀರಿ ಅದನ್ನು ಆಗಮಿಕ ಶೈವ ಬ್ರಾಹ್ಮಣವನ್ನಾಗಿಸಿತು’ ಎಂಬ ಮಾತು ಸಂಪೂರ್ಣ ನಿರಾಧಾರ. ಕರ್ನಾ­ಟಕದ ಇತಿಹಾಸವನ್ನು ಗಮನಿಸಿದರೆ 8, 9, 10, 11ನೇ ಶತಮಾನ­ಗಳಲ್ಲಿ ಕರ್ನಾಟಕದಲ್ಲಿ ಪ್ರಬಲವಾಗಿದ್ದ ಧರ್ಮಗಳು ಎರಡು–ಒಂದು ಜೈನಧರ್ಮ, ಇನ್ನೊಂದು ಲಾಕುಳ (ಪಾಶುಪತ) ಶೈವಧರ್ಮ, ಈ ಎರಡು ಧರ್ಮಗಳ ಮಧ್ಯೆ ತಿಕ್ಕಾಟಗಳಾದುದು ಇಲ್ಲವೇ ಇಲ್ಲವೆನ್ನಬಹುದು. ಹನ್ನೆರಡನೆಯ ಶತಮಾನಗಳ ಬಳಿಕ ಆ ಧರ್ಮ­ಗಳು ಕ್ಷೀಣವಾಗಲು ಸ್ಪಷ್ಟ ಕಾರಣ ವೀರ­ಶೈವ (ಲಿಂಗಾಯತ) ಧರ್ಮ, ಅದರ ಪ್ರಭಾವ. ಲಾಕುಳಶೈವವು ಎಲ್ಲ ಜಾತಿಗಳೂ ಸಮಾನ ಎಂಬುದನ್ನು ಒಪ್ಪಿಕೊಂಡಿದ್ದಿತು. ಅವರ ಪೂಜ್ಯ ಗ್ರಂಥ ‘ಪಾಶುಪತ ಸೂತ್ರ’ದ ಈ ಮಾತನ್ನು ಗಮನಿಸಿ:‘ಪಂಚಾಕ್ಷರೀ ಅಥವಾ ಅಷ್ಟಾಕ್ಷರೀ ಮಂತ್ರ­ವನ್ನು ಜಪಿಸಿ ಶಿವ ಅಥವಾ ವಿಷ್ಣುವನ್ನು ಅರ್ಚಿಸುವ ಶೂದ್ರನು ಶ್ರೇಷ್ಠ ಬ್ರಾಹ್ಮಣ­ನಿಗೆ ಸಮಾನ’. ಲಕುಲೀಶ–ಪಾಶುಪತ ಶೈವರು ಸ್ತ್ರೀ­ಯನ್ನು ಅನಾದರದಿಂದ ಕಂಡಿರಲಿಲ್ಲ. ಜೈನರೂ ಅಷ್ಟೇ. ಅತ್ತಿ­ಮಬ್ಬೆ, ಶಾಂತಲೆ­ಯ­ರಂ­ತಹ ಶ್ರೇಷ್ಠ ಮಹಿಳೆಯರನ್ನು ಆ ಜೈನ­ಧರ್ಮವು ಕರ್ನಾ­ಟಕಕ್ಕೆ ನೀಡಿವೆ; ಕಂತಿಯಂತಹ ಕವಯಿತ್ರಿಯೂ ಉಲ್ಲೇಖಾರ್ಹ.‘ವೀರಶೈವ’, ‘ಲಿಂಗಾಯತ’ ಬೇರೆ ಬೇರೆ ಎಂಬ ಭ್ರಮೆಯಿಂದ ಡಾ. ಕಲಬುರ್ಗಿ ಇನ್ನೂ ದೂರ­ವಾಗಿಲ್ಲ. ಅವರ ಪ್ರಕಾರ ಬಸವಣ್ಣ  ‘ಲಿಂಗಾ­ಯತ’; ಅವನು ‘ವೀರಶೈವ’ ಅಲ್ಲ. ಆದರೆ ಅವರ ಹೆಸರಿನಲ್ಲಿ ಪ್ರಕಟವಾಗಿರುವ ಬಸವಣ್ಣನ ಈ ವಚನ ಗಮನಿಸಬೇಕು ‘ಎನ್ನ ಬಂದ ಭವಂ­ಗಳನು ಪರಿಹರಿಸಿ, ಎನಗೆ ಭಕ್ತಿ ಘನವನೆತ್ತಿ ತೋರಿ, ಎನ್ನ ಹೊಂದಿದ ಶೈವ­ಮಾರ್ಗಂಗಳನತಿ­ಗಳೆದು ವೀರ­ಶೈವಾಚಾರ­ವನರುಹಿ ತೋರಿ....’ ತನಗೆ ಪರಿಚಿತವಿದ್ದ ಸಾಂಪ್ರದಾಯಿಕ ವಿಧಿ ಆಚರಣೆ­ಗಳನ್ನು ಬಿಡಿಸಿ ‘ವೀರಶೈವಾ­ಚಾರ’­ವನ್ನು ಅರುಹಿ ತೋರಿದ ಚನ್ನಬಸವಣ್ಣನಿಗೆ ಕೃತಜ್ಞತೆ ಹೇಳುವ ಸಂದರ್ಭದಲ್ಲಿ ಬಸವಣ್ಣ ತನ್ನನ್ನು ವೀರ­ಶೈವ­ನೆಂದೇ ಪರೋಕ್ಷ­ವಾಗಿ ಕರೆದು­ಕೊಂಡಿದ್ದಾರೆ.ಚನ್ನಬಸವಣ್ಣ ಅಂಗದ ಮೇಲೆ ಲಿಂಗ­ವನ್ನುಳ್ಳವರೇ ನಿಜವಾದ ವೀರಶೈವರು ಎಂದಿ­ದ್ದಾನೆ. ‘ಚತುರ್ವರ್ಣಿಯಾದಡೇನು ಚತುರ್ವ­ರ್ಣಾತೀತನೆ ವೀರಶೈವ’ ಎಂಬ ಸಿದ್ಧ­ರಾಮನ ಮಾತು ವೀರಶೈವದ ಉದಾತ್ತ ತತ್ವ­ವನ್ನು ಹೇಳುತ್ತದೆ. ಆದರೆ ವಚನಗಳಲ್ಲಿ ನೂರಾರು ಕಡೆ ‘ವೀರಶೈವ’ ಪದ ಕಾಣಿಸಿಕೊಳ್ಳು­ವಂತೆ ‘ಲಿಂಗಾಯತ’ ಪದ ಕಾಣಿಸಿಕೊಳ್ಳುವುದಿಲ್ಲ. ಒಂದೆರಡು ಕಡೆ ಬಂದರೂ ಅದರ ಅರ್ಥ ಗುರುವಿನಿಂದ ಶಿಷ್ಯನು ವಿಧ್ಯುಕ್ತವಾಗಿ ಇಷ್ಟಲಿಂಗ­ವನ್ನು ಪಡೆಯುವ ವಿಧಿ ಎಂದು ಮಾತ್ರ.ಬಸವಣ್ಣನಿಗಿಂತ ಹಿಂದೆಯೇ ಇದ್ದ ಕೊಂಡಗುಳಿ ಕೇಶಿರಾಜನಲ್ಲಿ ‘ವೀರಶೈವ’ ಎಂಬ ಧಾರ್ಮಿಕ ಪಂಥದ ಹೆಸರು, ‘ಲಿಂಗಾಯತ’ ಎಂಬ ಹೆಸರಿನ ಧಾರ್ಮಿಕ ವಿಧಿಯ ಹೆಸರಿವೆ; ವಿವರಣೆಯನ್ನೂ ಅಲ್ಲಿ ಅವನು ನೀಡಿದ್ದಾನೆ, ಹದಿಮೂರು ಹದಿ­ನಾಲ್ಕನೇ ಶತಮಾನಗಳ ಬಳಿಕ ‘ಲಿಂಗಾಯತ’ವು ಆ ವಿಧಿಗೆ ಒಳಗಾದವನು, ಗುರುವಿನಿಂದ ಲಿಂಗ­ವನ್ನು ಪಡೆದವನು, ವೀರಶೈವ ಎಂಬ ಅರ್ಥ­ವನ್ನು ಪಡೆಯಿತು. ಈಗಲೂ ವೀರಶೈವಧರ್ಮ, ಲಿಂಗಾಯತಧರ್ಮ ಎಂಬ ಸಮಾನಾರ್ಥಕ ಪದ­ಗಳಿವೆ; ವೀರಶೈವರನ್ನು ಲಿಂಗಾಯತರೆಂದೇ ಕರೆ­ಯು­ತ್ತಾರೆ. ಬಸವಣ್ಣ ವೀರಶೈವನೂ ಹೌದು, ಲಿಂಗಾಯತನೂ ಹೌದು (ಮುಸ್ಲಿಂ, ಮಹಮ್ಮದೀಯ ಎರಡಕ್ಕೂ ಒಂದೇ ಅರ್ಥ). ವೀರಶೈವ ಪಂಥವು ಬಸವನಿಗಿಂತ ಹಿಂದಿನದು ಎಂದು ಹೇಳಲು ಹಲವು ಶಾಸನಾಧಾರಗಳಿವೆ; ವಚನಗಳಲ್ಲೂ ಅದಕ್ಕೆ ಪುಷ್ಟಿ ದೊರಕುತ್ತದೆ.ಇಷ್ಟು ಸರಳ ಅರ್ಥವನ್ನು ಡಾ. ಕಲ್ಬುರ್ಗಿ ಗ್ರಹಿಸದಿದ್ದರೆ ಅದಕ್ಕೆ ಏನು ಹೇಳಬೇಕು? ಬಸವಣ್ಣ­ನಲ್ಲಿ ‘ಲಿಂಗಾಯತ’ ಪದ ಬಂದಿಲ್ಲ; ತಾನು ಶೈವ­ನಾಗಿ­ದ್ದವನು ‘ಲಿಂಗಾಯತ’ನಾದೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ಅವನು ತಾನು ಶೈವನಾ­ಗಿದ್ದ­ವನು ವೀರಶೈವನಾದೆ ಎಂದು ಹೇಳಿಕೊಂಡಿ­ರು­ವಂತೆ, ಶೈವನಾಗಿದ್ದ ತಾನು ಲಿಂಗಾಯತನಾದೆ ಎಂದು ಎಲ್ಲಿ ಹೇಳಿಕೊಂಡಿದ್ದಾನೆ? ಇದಕ್ಕೆ ಡಾ. ಕಲ್ಬುರ್ಗಿಯವರು ನೇರವಾಗಿ ಉತ್ತರಿಸಬೇಕು. ‘ವೀರಶೈವ’ ಪದ ಬಳಸಿರುವ ಕ್ರಿ.ಶ. 1120ರ ಕೊಂಡಗುಳಿ ಕೇಶಿರಾಜನ (ಕ್ರಿ.ಶ. 1100) ಕೃತಿಗಳನ್ನು ಡಾ. ಕಲ್ಬುರ್ಗಿಯವರೇ ಸಂಪಾದಿಸಿದ್ದಾರೆ.ಭಾರತಕ್ಕೆ ಪ್ರತ್ಯೇಕವಾದ ಸಂಸ್ಕೃತಿಯಿರುವಂತೆ ಕರ್ನಾಟಕಕ್ಕೂ ಒಂದು (ಉಪ) ಸಂಸ್ಕೃತಿ­ಯಿದ್ದರೂ ಅದು ಪ್ರತ್ಯೇಕವಾದುದಲ್ಲ. ಕರ್ನಾಟಕ ಸಂಸ್ಕೃ­ತಿಯು ಭಾರತೀಯ ಸಂಸ್ಕೃತಿಯ ಒಂದು ಅವಿ­ಭಾಜ್ಯ ಅಂಗ; ವೀರಶೈವ ಅಥವಾ ಲಿಂಗಾ­ಯತವೂ ಹಿಂದೂಧರ್ಮದ ಒಂದು ಅವಿಭಾಜ್ಯ ಅಂಗ. ಜೈನವು ಉತ್ತರ ಭಾರತದಿಂದ ಕರ್ನಾ­ಟಕಕ್ಕೆ ‘ವಲಸೆ ಬಂದಿತು’ ಎಂಬಂತಹ ಮಾತು­ಗಳು ಅರ್ಥಹೀನ; ‘ವ್ಯಾಪಿಸಿತು’ ಎಂದು ಬೇಕಾ­ದರೆ ಹೇಳಲಿ. ನಾನು ದೆಹಲಿಗೆ ಹೋಗಿ ವಾಸಿಸಿ­ದರೆ ಅದು ‘ವಲಸೆ’ ಹೋದಂತಲ್ಲ; ಆದರೆ ಇಂಗ್ಲೆಂಡಿಗೆ ಹೋಗಿ ಅಲ್ಲಿ ನೆಲಸಿದರೆ ವಲಸೆ ಹೋದಂತೆ. ವಲಸೆ ಪದವನ್ನು ಅವರಂತೆ ಬಳಸಿ­ದರೆ ಲಿಂಗಾಯತ ಧರ್ಮವು ಬಸವಕಲ್ಯಾಣ ಪ್ರದೇಶ­ದಿಂದ ಧಾರವಾಡ ಪ್ರದೇಶಕ್ಕೆ, ಬಳಿಕ ಬೆಂಗಳೂರು ಪ್ರದೇಶಕ್ಕೆ ವಲಸೆ ಬಂದಿತು ಎಂದು ಹೇಳಿದಂತೆ ಅರ್ಥಹೀನ. ಬೌದ್ಧ, ಜೈನ, ಶೈವ (ವೀರಶೈವ) ಮತಗಳು ಭಾರತೀಯ ಮತಗಳು. ವೀರಶೈವವು ಶೈವ ಹಿಂದೂ ಮತದ ಒಂದು ಉಪ ಧರ್ಮ(Religious Denomiation). ಗುರು­ಮಠ, ವಿರಕ್ತಮಠಗಳಿಗೆ ಕರ್ತವ್ಯ ಭೇದ­ಗಳು ತಾತ್ವಿಕವಾಗಿ ಇರಬಹುದೇ ಹೊರತು ಅವೆ­ರಡೂ ಸಮಾನ ಗೌರವಾರ್ಹವಾದುವು; ಇಂದು ಅವೆರಡೂ ಸಮಾಜಕ್ಕಾಗಿ ಶ್ರಮಿಸುತ್ತಿವೆ.11–12ನೇ ಶತಮಾನಗಳ ಬಳಿಕ ಜೈನ ಧರ್ಮದವರ ಸಂಖ್ಯೆ ಕಡಮೆಯಾಗಲು ವೀರಶೈವದ ಸಮಾನತೆಯ ತತ್ವದಿಂದ ಜನ ಹೆಚ್ಚು ಆಕರ್ಷಿತವಾದುದು ಕಾರಣ, ಕ್ರಿಶ್ಚಿಯನ್‌ ಮಿಷನರಿಗಳಂತೆ ವೀರಶೈವರು ಆಮಿಷಗಳನ್ನೊಡ್ಡಿ ಜೈನರನ್ನು ಮತಾಂತರಿಸಲಿಲ್ಲ. ಇದನ್ನು ನಾವೆಲ್ಲ ಮನ­ಗಾಣವುದು ಅಗತ್ಯವಾಗಿದೆ. ಜೈನರಾಗಿದ್ದವರು ಲಿಂಗಾಯತರಾಗಿ ತಾವಾಗಿ ಮತಾಂತರಗೊಂಡವರೇ ಹೊರತು ಅನ್ಯರು ಮತಾಂತರ ಮಾಡಿದವರಲ್ಲ. ವೀರಶೈವದ ಭಕ್ತಿಯ ಪರಿಕಲ್ಪನೆ, ಸಾಮಾಜಿಕ ಸಮಾನತೆ ಇತ್ಯಾದಿ ಉದಾತ್ತ ಸಾಮಾಜಿಕ ಚಿಂತನೆಗಳಿಂದ ಅದು ಜನಪ್ರಿಯಗೊಂಡಿತು ಎಂಬುದು ಸ್ವಯಂವೇದ್ಯ.ಕೆಲವು ವಚನಗಳಲ್ಲಿ ದೇವಾಲಯ ಪರಿಕಲ್ಪನೆಯನ್ನು ನಿರಾಕರಿಸಿದ್ದರೂ ವೀರಶೈವ­ಪಂಥ ಖಂಡಿತವಾಗಿ ದೇವಾಲಯ ವಿರೋಧಿ­ಯಲ್ಲ. ಶರಣರು ಧರಿಸುತ್ತಿದ್ದ, ಈಗಲೂ ಧರಿ­ಸುವ ಇಷ್ಟಲಿಂಗವು ವಾಸ್ತವವಾಗಿ ಕಂತೆ ಬಿಗಿದ ‘ಪುಟ್ಟ ಲಿಂಗ’ವೇ ಆಗಿದೆ– ಆ ಪುಟ್ಟಲಿಂಗ ದೇವಾ­ಲಯದ ಶಿವಲಿಂಗದ ಸಂಕ್ಷಿಪ್ತ ರೂಪ. ಅದಕ್ಕೆ ಗೋಳಕ, ಪಾಣಿಪೀಠ ಉಂಟು. ಇಷ್ಟಲಿಂಗವನ್ನು ಯಾರು ಬೇಕಾದರೂ ಧರಿಸಬಹುದು; ಎಲ್ಲಿ ಬೇಕಾದರೂ ಪೂಜಿಸಬಹುದು; ಅದರ ಪೂಜಾ ವಿಧಾನಕ್ಕೆ ಶಾಸ್ತ್ರ ಬೇಕಾಗಿಲ್ಲ; ಅರ್ಚಕರು ಬೇಕಾಗಿಲ್ಲ; ಅದನ್ನು ಇಡಲು ಕಟ್ಟಡ ಬೇಕಾಗಿಲ್ಲ. ದೇವಾಲಯದ ಶಿವಲಿಂಗದ ಸಾಮಾಜೀ­ಕ­ರಣವೇ ಇಷ್ಟಲಿಂಗ; ಜಾತಿಭೇದ ವಿನಾಶಕ್ಕೆ ವೀರಶೈವವು ಕಂಡುಕೊಂಡ ಒಂದು ಪ್ರಬಲ ಅಸ್ತ್ರ ಅದು. ಬಹುತೇಕ ಎಲ್ಲ ಪ್ರಮುಖ ವಚನಕಾರರ ಅಂಕಿತ­ಗಳು ದೇವಾಲಯಗಳ ಶಿವಲಿಂಗಗಳ ಹೆಸರುಗಳೇ ಆಗಿವೆ.ಉದಾಹರಣೆಗೆ ರಾಮ­ನಾಥ, ಕೂಡಲ ಸಂಗಮದೇವ. ವಚನಕಾರ ಶಂಕರ ದಾಸಿಮಯ್ಯ ಇಳಕಲ್‌ ತಾಲ್ಲೂಕಿನ ಗ್ರಾಮ ಶಿವಾಲಯ ಜಡೆಯ ಶಂಕರಲಿಂಗ ದೇವರ ಭಕ್ತ. ಬಸವಣ್ಣ, ಅಲ್ಲಮ, ಅಕ್ಕಮಹಾ­ದೇವಿ­ಯರು ತಮ್ಮ ಕೊನೆಯ ದಿನಗಳನ್ನು ಕಳೆದದ್ದು ಸಂಗಮೇಶ್ವರ, ಮಲ್ಲಿಕಾರ್ಜುನ ದೇವಾಲಯಗಳಿದ್ದ ಕೂಡಲ ಸಂಗಮದಲ್ಲಿ, ಶ್ರೀಶೈಲದಲ್ಲಿ. ಜೈನರ ಬಸದಿಗಳನ್ನು ನಾಶ­ಮಾಡುವ ಆದೇಶ ಯಾವ ವಚನ­ದಲ್ಲಿಯೂ ಇಲ್ಲ. ಆದರೆ ಕೆಲವು ಲಿಂಗಾಯತರು ಆವೇಶ­ಭರಿತರಾಗಿ ಬಸದಿಗಳ ನಾಶಕ್ಕೆ ಯತ್ನಿಸಿರ­ಬಹುದು, ಉದಾಹರಣೆಗೆ, ಏಕಾಂತ­ರಾಮಯ್ಯನು ಅಬ್ಬಲೂರಿನ ಬಸದಿ ನಾಶ­ಮಾಡಿ­ದುದು, ಲಿಂಗಾ­ಯತರಿಗೂ ಜೈನರಿಗೂ ತಿಕ್ಕಾಟಗಳಾಗಿ ಕೋಪದ ಭರದಲ್ಲಿ ಬಸದಿಗಳು ನಾಶವಾಗಿರುವ ಸಾಧ್ಯತೆ ಇದೆ. ಆದರೆ ಸಾಮೂಹಿಕ ನಾಶ ಆಗಿಲ್ಲ. ಜೈನರ ಸಂಖ್ಯೆ ಕಡಮೆ­ಯಾದಂತೆ ಅವರ ಬಸದಿಗಳು ಕಳಾಹೀನ­ವಾದುವು, ಭಾರತೀಯ ಧರ್ಮ­ಗಳಾದ ಹಿಂದೂ, ಜೈನ, ಬೌದ್ಧ, ಸಿಖ್‌ ಧರ್ಮಗಳು ಹಿಂಸಾ ಪ್ರವೃತ್ತಿಯವಲ್ಲ (ಭಾರತೀಯೇತರ ಒಂದೆರಡು ಧರ್ಮಗಳು ಹಿಂಸಕ ಸ್ವಭಾವದವು). ‘ವೈದಿಕ ಬ್ರಾಹ್ಮಣ’, ‘ಹಿಂದೂ’ ಪದಗಳನ್ನು ಸಮಾನಾರ್ಥಕವಾಗಿ ಡಾ. ಕಲ್ಬುರ್ಗಿಯವರು ಬಳಸಿರುವಂತೆ ಸೂಚನೆ ಇದೆ. ಬ್ರಾಹ್ಮಣ ಎಂಬುದು ಒಂದು ಪಂಗಡ, ವೀರಶೈವದಂತೆ; ಅವೆ­ರಡೂ ಹಿಂದೂ ಧರ್ಮದ ಒಳ ಪಂಗಡ­ಗಳು, ಬ್ರಾಹ್ಮಣರಲ್ಲಿ ಲಿಂಗಾಯತರಲ್ಲಿ ಉದಾತ್ತ ತತ್ವಗಳಿದ್ದರೂ ಅವೆರಡರಲ್ಲೂ ಇಂದಿಗೂ ಮೇಲು ಕೀಳು, ಸ್ಪೃಶ್ಯ–ಅಸ್ಪೃಶ್ಯ ಭಾವನೆ ಮರೆ­ಯಾಗಿಲ್ಲ (ಈಗೀಗ ಕಡಿಮೆಯಾಗುತ್ತಿರುವುದು ಸಮಾಧಾನದ ಸಂಗತಿ).ರಾಮಾಯಣ, ಮಹಾಭಾರತ, ಪಂಚತಂತ್ರ ಇವು ಭಾರ­ತೀಯ ಕಾವ್ಯಗಳು, ‘ಉತ್ತರ ಭಾರತೀಯ’ ಅಲ್ಲ. ಅವು ಇಡೀ ಭಾರ­ತೀಯ ಸಂಸ್ಕೃತಿಯನ್ನು ರೂಪಿಸಿದ ಶ್ರೇಷ್ಠ ಕೃತಿಗಳು, ರಾಮ, ಕೃಷ್ಣ, ಹನುಮಾನ್‌, ಸೀತಾ ಇವರು ಕೇವಲ ‘ಉತ್ತರ ಭಾರತ’­ದವರೆಂದು ಭಾವಿಸು­ವುದು ಖಂಡಿತ ವಿವೇಕ ಅಲ್ಲ. ವೀರ­ಶೈವರ ಆರಾಧ್ಯ­ದೈವ ಶಿವ, ಅವನ ಮೂರ್ತಿ ಇವು ಭಾರತಾ­ದ್ಯಂತ ಇವೆ; ನೇಪಾಳದಲ್ಲಿಯೂ ಇವೆ. ಉತ್ತರ ಭಾರತೀಯ, ದಕ್ಷಿಣ ಭಾರತೀಯ ಕನ್ನಡಿಗರು, ಕನ್ನಡೇತರರು ಎಂಬ ಭಾವನೆ­ಗಳು ಧಾರ್ಮಿಕ ಸಾಂಸ್ಕೃತಿಕ ಮಟ್ಟದಲ್ಲಿ ಸ್ಥಾನ ವಹಿ­ಸದೇ ಇರು­ವಂತೆ ನೋಡಿಕೊಳ್ಳಬೇಕು.ಪಂಪ­ಭಾರತ, ಕುಮಾರವ್ಯಾಸ ಭಾರತ ಇವು ಉತ್ತರ ಭಾರತದಿಂದ ಬಂದ ಕನ್ನಡ ಅನುವಾದ ಸಾಹಿತ್ಯ ಎಂದು ಲಘುವಾಗಿ ಭಾವಿಸುವುದು ನಗೆ­­ಪಾಟ­ಲಿನ ಸಂಗತಿ. ಬಸವಣ್ಣನ ಚಳವಳಿ ಉತ್ತರ­ಭಾರತದ ವಿರುದ್ಧ, ಸಂಸ್ಕೃ­ತದ ವಿರುದ್ಧ ನಡೆದ ಚಳವಳಿ ಅಲ್ಲ. ಆ ಚಳವಳಿ ಹಿಂದೂ­ಧರ್ಮದ ಒಳಗೆ, ಅದರ ಕಾಲುಷ್ಯವನ್ನು ಹೋಗ­ಲಾಡಿಸಲು ನಡೆಸಿದ ಅಪೂರ್ವ ಚಳವಳಿ. ತಮ್ಮನ್ನು ತಾವು ‘ಸನಾತನಿ ಹಿಂದೂ’ ಎಂದು ಹೆಮ್ಮೆಯಿಂದ ಕರೆ­ದು­ಕೊಂಡ ಗಾಂಧೀಜಿ­­ಯ­ವರು ಅಸ್ಪೃಶ್ಯತೆ ವಿರುದ್ಧ ನಡೆಸಿದ ಹೋರಾಟ ಹಿಂದೂ­ಧರ್ಮದ ಸುಧಾ­ರಣೆಗಾಗಿ ನಡೆಸಿದ ಹೋರಾಟ; ‘ಸರ್ವೇ ಜನಾ ಸುಖಿನಃ ಸಂತು’ (ಎಲ್ಲ ಜನರೂ ಸುಖ­ವಾಗಿ­­ರಲಿ) ಎಂಬ ಭಾರ­­­ತೀಯ ಘೋಷಣೆಯನ್ನು ನಿಜ­ವಾಗಿಸಲು ನಡೆ­ಸಿದ ಹೋ­ರಾಟ. ಅಂತೆಯೇ ಹನ್ನೆರಡನೇ ಶತಮಾನದ ಶರಣ ಚಳವಳಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry