ಬುಧವಾರ, ಮಾರ್ಚ್ 3, 2021
31 °C

ವೀರೂ ಅಬ್ಬರ; ವಾರಿಯರ್ಸ್ ತಬ್ಬಿಬ್ಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀರೂ ಅಬ್ಬರ; ವಾರಿಯರ್ಸ್ ತಬ್ಬಿಬ್ಬು

ಪುಣೆ (ಪಿಟಿಐ): ವೀರೇಂದ್ರ ಸೆಹ್ವಾಗ್ ಅಬ್ಬರಿಸಲು ಆರಂಭಿಸಿದರೆ ಬೌಲರ್‌ಗಳಿಗೆ ಕಷ್ಟಕಾಲ ಎದುರಾಗುವುದು ಖಚಿತ. ಮಂಗಳವಾರ ಪುಣೆ ವಾರಿಯರ್ಸ್ ಬೌಲರ್‌ಗಳಿಗೆ `ವೀರೂ~ ಬ್ಯಾಟಿಂಗ್‌ನ ಬಿಸಿ ಚೆನ್ನಾಗಿ ತಟ್ಟಿತು.

48 ಎಸೆತಗಳಲ್ಲಿ ಅಜೇಯ 87 ರನ್ (10 ಬೌಂ, 3 ಸಿಕ್ಸರ್) ಗಳಿಸಿದ ಸೆಹ್ವಾಗ್ ಬ್ಯಾಟಿಂಗ್‌ನ ಬಲದಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಎಂಟು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.

ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ವಾರಿಯರ್ಸ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 146 ರನ್ ಪೇರಿಸಿತು. ಸೆಹ್ವಾಗ್ ಅಬ್ಬರಿಸಿದ ಕಾರಣ ಡೇರ್‌ಡೆವಿಲ್ಸ್ ತಂಡಕ್ಕೆ ಈ ಮೊತ್ತ ಸವಾಲಾಗಿ ಕಾಣಲೇ ಇಲ್ಲ. 16 ಓವರ್‌ಗಳಲ್ಲಿ 2 ವಿಕೆಟ್‌ಗೆ 148 ರನ್ ಗಳಿಸಿ ಗೆಲುವಿನ ನಗು ಬೀರಿತು.

ಡೇರ್‌ಡೆವಿಲ್ಸ್ ತಂಡಕ್ಕೆ ಏಳು ಪಂದ್ಯಗಳಲ್ಲಿ ದೊರೆತ ಐದನೇ ಗೆಲುವು ಇದು. ಈ ಮೂಲಕ ಸೆಹ್ವಾಗ್ ಬಳಗ ಒಟ್ಟು 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು. ನವದೆಹಲಿಯಲ್ಲಿ ಶನಿವಾರ ಇವೆರಡು ತಂಡಗಳು ಎದುರಾಗಿದ್ದ ಸಂದರ್ಭ ವಾರಿಯರ್ಸ್ ಜಯ ಸಾಧಿಸಿತ್ತು. ಆ ಸೋಲಿಗೆ ಡೇರ್‌ಡೆವಿಲ್ಸ್ ಮುಯ್ಯಿ ತೀರಿಸಿಕೊಂಡಿದೆ.

ಟಾಸ್ ಗೆದ್ದ ಸೌರವ್ ಗಂಗೂಲಿ ಬ್ಯಾಟಿಂಗ್ ಆಯ್ದುಕೊಂಡರು. ಮನೀಷ್ ಪಾಂಡೆ (ಔಟಾಗದೆ 80, 56 ಎಸೆತ, 7 ಬೌಂ, 3 ಸಿಕ್ಸರ್) ಮತ್ತು ರಾಬಿನ್ ಉತ್ತಪ್ಪ (ಔಟಾಗದೆ 60, 58 ಎಸೆತ, 6 ಬೌಂ) ಅವರ ಆಕರ್ಷಕ ಅರ್ಧಶತಕ ವಾರಿಯರ್ಸ್ ಇನಿಂಗ್ಸ್‌ನ ಹೈಲೈಟ್ ಆಗಿತ್ತು.

ವಾರಿಯರ್ಸ್‌ನ ಆರಂಭ ಆಘಾತಕಾರಿಯಾಗಿತ್ತು. ಸ್ಕೋರ್‌ಬೋರ್ಡ್‌ನಲ್ಲಿ ಒಂದು ರನ್ ಆಗಿದ್ದಾಗ ಎರಡು ವಿಕೆಟ್‌ಗಳು ಉರುಳಿದ್ದವು. ಜೆಸ್ಸಿ ರೈಡರ್ (0) ಮತ್ತು ನಾಯಕ ಗಂಗೂಲಿ (1) ಕ್ರಮವಾಗಿ ಇರ್ಫಾನ್ ಮತ್ತು ಮಾರ್ನ್ ಮಾರ್ಕೆಲ್‌ಗೆ ವಿಕೆಟ್ ಒಪ್ಪಿಸಿದರು.

ಮನೀಷ್ ಪಾಂಡೆ ಮತ್ತು ರಾಬಿನ್ ಮುರಿಯದ ಮೂರನೇ ವಿಕೆಟ್‌ಗೆ 145 ರನ್‌ಗಳನ್ನು ಸೇರಿಸಿದರು. ಕರ್ನಾಟಕ ರಣಜಿ ತಂಡದ ಆಟಗಾರರು ಆರಂಭದಲ್ಲಿ ಅಲ್ಪ ಪರದಾಟ ನಡೆಸಿದರೂ, ಬಳಿಕ ಎದುರಾಳಿ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು. ಪಾಂಡೆ ಆಕ್ರಮಣಕಾರಿ ಮೂಡ್‌ನಲ್ಲಿದ್ದರು.

ರಾಬಿನ್‌ಗೆ ಟ್ವೆಂಟಿ-20 ಪಂದ್ಯದ ಬೇಡಿಕೆಗೆ ತಕ್ಕಂತೆ ಬ್ಯಾಟ್ ಬೀಸಲು ಆಗಲಿಲ್ಲ. ಡೇರ್ ಡೆವಿಲ್ಸ್ ತಂಡದ ಪ್ರಭಾವಿ ಬೌಲಿಂಗ್ ಇದಕ್ಕೆ ಕಾರಣ. ಉಮೇಶ್ ಯಾದವ್ ಅವರನ್ನು ಹೊರತುಪಡಿಸಿ ಇತರ ಎಲ್ಲ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಡಲಿಲ್ಲ.

ಸೆಹ್ವಾಗ್ ಮಿಂಚು: ಸೆಹ್ವಾಗ್ ಅಬ್ಬರದ ಬ್ಯಾಟಿಂಗ್ ಮುಂದೆ ಪಾಂಡೆ ಮತ್ತು ರಾಬಿನ್ ಆಟಕ್ಕೆ ಬೆಲೆಯಿಲ್ಲದಾಯಿತು. ಡೇರ್‌ಡೆವಿಲ್ಸ್ ತಂಡ ರನ್ ಬೆನ್ನಟ್ಟುವ ವೇಳೆ ಅಲ್ಪವೂ ಒತ್ತಡಕ್ಕೆ ಒಳಗಾಗಲಿಲ್ಲ. `ವೀರೂ~ ಜೊತೆ ಇನಿಂಗ್ಸ್ ಆರಂಭಿಸಿದ ಮಾಹೇಲ ಜಯವರ್ಧನೆ (18) ಬೇಗನೇ ಔಟಾದರು. ಸೆಹ್ವಾಗ್ ಮತ್ತು ಕೆವಿನ್ ಪೀಟರ್ಸನ್ (21 ಎಸೆತಗಳಲ್ಲಿ 27) ಎರಡನೇ ವಿಕೆಟ್‌ಗೆ 8.2 ಓವರ್‌ಗಳಲ್ಲಿ 89 ರನ್‌ಗಳನ್ನು ಸೇರಿಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು.

ರಾಹುಲ್ ಶರ್ಮ ಅವರು ಕೆವಿನ್ ಪೀಟರ್ಸನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ, ಆ ವೇಳೆಗೆ ಡೇರ್‌ಡೆವಿಲ್ಸ್ ಜಯವನ್ನು ಖಚಿತಪಡಿಸಿಕೊಂಡಿತ್ತು. ಸೆಹ್ವಾಗ್ ಅವರನ್ನು ಕೂಡಿಕೊಂಡ ರಾಸ್ ಟೇಲರ್ (ಅಜೇಯ 9) ತಂಡವನ್ನು ಗೆಲುವಿನತ್ತ ಮುನ್ನಡೆಸಿದಾಗ ಇನ್ನೂ 24 ಎಸೆತಗಳು ಬಾಕಿಯುಳಿದಿದ್ದವು!

ಸೆಹ್ವಾಗ್‌ಗೆ ತಡೆಯೊಡ್ಡುವ ಉದ್ದೇಶದಿಂದ ಗಂಗೂಲಿ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ತಂದರೂ ಯಶ ಕಾಣಲಿಲ್ಲ. ಅವರು ಆರಂಭದಿಂದ ಕೊನೆಯವರೆಗೂ ಒಂದೇ ಲಯದಲ್ಲಿ ಬ್ಯಾಟ್ ಬೀಸಿದರು. ವಾರಿಯರ್ಸ್ ತಂಡಕ್ಕೆ ಟೂರ್ನಿಯಲ್ಲಿ ಎದುರಾದ ನಾಲ್ಕನೇ ಸೋಲು ಇದು.

ಪುಣೆ ವಾರಿಯರ್ಸ್: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 146

ಜೆಸ್ಸಿ ರೈಡರ್ ಬಿ ಇರ್ಫಾನ್ ಪಠಾಣ್  00

ಮನೀಷ್ ಪಾಂಡೆ ಔಟಾಗದೆ  80

ಸೌರವ್ ಗಂಗೂಲಿ ಸಿ ನದೀಮ್ ಬಿ ಮಾರ್ಕೆಲ್  01

ರಾಬಿನ್ ಉತ್ತಪ್ಪ ಔಟಾಗದೆ  60

ಇತರೆ: (ಬೈ-4, ಲೆಗ್‌ಬೈ-1)  05

ವಿಕೆಟ್ ಪತನ: 1-0 (ರೈಡರ್; 0.2), 2-1 (ಗಂಗೂಲಿ; 1.2).

ಬೌಲಿಂಗ್: ಇರ್ಫಾನ್ ಪಠಾಣ್ 4-0-23-1, ಮಾರ್ನ್ ಮಾರ್ಕೆಲ್ 4-0-34-1, ಉಮೇಶ್ ಯಾದವ್ 4-0-40-0, ಪವನ್ ನೇಗಿ 4-0-22-0, ಶಹಬಾಜ್ ನದೀಮ್ 4-0-22-0

ಡೆಲ್ಲಿ ಡೇರ್‌ಡೆವಿಲ್ಸ್: 16 ಓವರ್‌ಗಳಲ್ಲಿ 2 ವಿಕೆಟ್‌ಗೆ 148

ಮಾಹೇಲ ಜಯವರ್ಧನೆ ರನೌಟ್  18

ವೀರೇಂದ್ರ ಸೆಹ್ವಾಗ್ ಔಟಾಗದೆ  87

ಕೆವಿನ್ ಪೀಟರ್ಸನ್ ಸಿ ರೈಡರ್ ಬಿ ರಾಹುಲ್ ಶರ್ಮ 27

ರಾಸ್ ಟೇಲರ್ ಔಟಾಗದೆ  09

ಇತರೆ: (ಲೆಗ್‌ಬೈ-5, ವೈಡ್-2)  07

ವಿಕೆಟ್ ಪತನ: 1-22 (ಜಯವರ್ಧನೆ; 2.5), 2-111 (ಪೀಟರ್ಸನ್; 11.1).

ಬೌಲಿಂಗ್: ಅಲ್ಫೋನ್ಸೊ ಥಾಮಸ್ 2-0-14-0, ಆಶೀಶ್ ನೆಹ್ರಾ 3-0-34-0, ಲೂಕ್ ರೈಟ್ 2-0-24-0, ಸೌರವ್ ಗಂಗೂಲಿ 1-0-12-0, ಮುರಳಿ ಕಾರ್ತಿಕ್ 4-0-26-0, ರಾಹುಲ್ ಶರ್ಮ 4-0-33-1

ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ 8 ವಿಕೆಟ್ ಗೆಲುವು

ಪಂದ್ಯಶ್ರೇಷ್ಠ: ವೀರೇಂದ್ರ ಸೆಹ್ವಾಗ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.