ಶುಕ್ರವಾರ, ಮೇ 14, 2021
31 °C

ವೀರೂ ಪಡೆಯಿಂದ ತಿರುಗೇಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಡೆಲ್ಲಿ ಡೇರ್‌ಡೆವಿಲ್ಸ್ ತಂಡದವರ ಮನದಲ್ಲಿ ಸೇಡಿನ ಕಿಡಿ ಸಿಡಿದಿದೆ. ತಮ್ಮ ಗೆಲುವಿನ ಓಟಕ್ಕೆ ತೊಡರುಗಾಲು ಹಾಕಿದ ಪುಣೆ ವಾರಿಯರ್ಸ್‌ಗೆ ತಿರುಗೇಟು ನೀಡಬೇಕು. ಅದೇ ವೀರೇಂದ್ರ ಸೆಹ್ವಾಗ್ ಉದ್ದೇಶ ಹಾಗೂ ಗುರಿ.ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸೌರವ್ ಗಂಗೂಲಿ ನಾಯಕತ್ವದ ಪುಣೆ ವಾರಿಯರ್ಸ್ ನೀಡಿದ ಆಘಾತವು `ವೀರೂ~ ಪಡೆಗೆ ಸಹನೀಯ ಎನಿಸಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಜಯದ ಹಾದಿ ಹಿಡಿದು ಸಾಗಿದ್ದ ಡೆವಿಲ್ಸ್ ಓಟಕ್ಕೆ `ದಾದಾ~ ಬಳಗವು ತೊಡಕಾಯಿತು. ಇಪ್ಪತ್ತು ರನ್‌ಗಳ ಅಂತರದ ಸೋಲಂತೂ ನಿದ್ದೆ ಗೆಡಿಸಿತು.ಈಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಬೇಕು. ಅದಕ್ಕೆ ಡೆವಿಲ್ಸ್ ಸಿದ್ಧ. ಮಂಗಳವಾರ ವಾರಿಯರ್ಸ್ ಎದುರು ಹೋರಾಟ ನಡೆಸಿ ಎರಡು ಪಾಯಿಂಟುಗಳನ್ನು ಗಿಟ್ಟಿಸಬೇಕು. ಅದಕ್ಕಾಗಿ ಕೆಲವು ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಮಾಡಿದ ಪ್ರಮಾದಗಳು ಮರುಕಳಿಸದಂತೆ ಸೆಹ್ವಾಗ್ ನಾಯಕತ್ವದ ತಂಡವು ಎಚ್ಚರಿಕೆಯಿಂದ ಆಡಿದರೆ ಒಳಿತು.ಮುಖ್ಯವಾಗಿ ವಾರಿಯರ್ಸ್‌ಗೆ ಸಮಬಲವಾಗಿ ನಿಲ್ಲುವಂತೆ ರನ್ ಗಳಿಸುವ ತಾಕತ್ತು ಪ್ರದರ್ಶಿಸಬೇಕು. ಅದೇ ಮುಖ್ಯ ಹಾಗೂ ನಿರ್ಣಾಯಕ. ಏಕೆಂದರೆ ಬ್ಯಾಟಿಂಗ್‌ನಲ್ಲಿ ಬಲ ಇಲ್ಲದಿದ್ದರೆ ಬೌಲರ್‌ಗಳು ಪಟ್ಟ ಶ್ರಮವೆಲ್ಲ ವ್ಯರ್ಥ ಆಗುತ್ತದೆ.ಡೆವಿಲ್ಸ್ ತಂಡದವರು ಈ ಮೊದಲು ವಾರಿಯರ್ಸ್ ಎದುರು ಆಡಿದಾಗ ಸಂಕಷ್ಟ ಅನುಭವಿಸಿದ್ದು ಗುರಿಯನ್ನು ಬೆನ್ನಟ್ಟಿದಾಗ. ಸೌರವ್ ನೇತೃತ್ವದಲ್ಲಿ ವಿಶ್ವಾಸದಿಂದ ಆಡುತ್ತಿರುವ ವಾರಿಯರ್ಸ್ ನೀಡಿದ್ದು ಅಸಾಧ್ಯ ಎನ್ನಿಸುವಂಥ ಸವಾಲು ಆಗಿರಲಿಲ್ಲ.ಆಕ್ರಮಣಕಾರಿ ಆಟವಾಡಬಲ್ಲ ಸತ್ವಯುತ ಬ್ಯಾಟ್ಸ್‌ಮನ್‌ಗಳಿದ್ದರೂ ಡೇರ್‌ಡೆವಿಲ್ಸ್ ಕಳೆಗುಂದಿತು. ಮಧ್ಯದಲ್ಲಿ ರನ್‌ಗತಿಯು ಕುಗ್ಗಿದ್ದಂತೂ ಅದಕ್ಕೆ ಭಾರಿ ಪ್ರತಿಕೂಲವಾಗಿ ಪರಿಣಮಿಸಿತು.ವಾರಿಯರ್ಸ್ ದೊಡ್ಡ ಮೊತ್ತ ಗಳಿಸುವ ಶಕ್ತಿ ಹೊಂದಿರುವ ಜೊತೆಗೆ ಬೌಲಿಂಗ್‌ನಲ್ಲಿಯೂ ಪ್ರಭಾವಿ. ಸ್ವತಃ ಗಂಗೂಲಿ ಕೂಡ ಬಿಗುವಿನಿಂದ ದಾಳಿ ನಡೆಸಬಲ್ಲರು.ಅವರು ಕೋಟ್ಲಾ ಅಂಗಳದಲ್ಲಿ ತಮ್ಮ ಪಾಲಿನ ನಾಲ್ಕು ಓವರುಗಳಲ್ಲಿ ಕೇವಲ ಇಪ್ಪತ್ತೇಳು ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಅಲ್ಫಾನ್ಸೊ ಥಾಮಸ್ ಹಾಗೂ ಆಶಿಶ್ ನೆಹ್ರಾ ಕೂಡ ಎದುರಾಳಿ ಬ್ಯಾಟ್ಸ್ ಮನ್‌ಗಳು ಆಕ್ರಮಣಕಾರಿ ಆಗದಂತೆ ತಡೆಯುವಂಥ ಸತ್ವ ಹೊಂದಿದ್ದಾರೆ.ಆದ್ದರಿಂದ ವಾರಿ ಯರ್ಸ್ ಎದುರು ಹೇಗೆ ರನ್ ಗತಿಗೆ ವೇಗ ನೀಡಬೇಕೆಂದು ಡೇರ್‌ಡೆವಿಲ್ಸ್ ತಂಡದವರು ಯೋಚಿಸಬೇಕು.ಪಂದ್ಯ ಆರಂಭ: ಸಂಜೆ 4.00ಕ್ಕೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.