`ವೀರೇಶ ಪುಣ್ಯಾಶ್ರಮ ಅಂಧರ ಬಾಳಿನ ಬೆಳಕು'

7
ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳ ದ್ವಿತೀಯ ಪುಣ್ಯ ಸ್ಮರಣೆ

`ವೀರೇಶ ಪುಣ್ಯಾಶ್ರಮ ಅಂಧರ ಬಾಳಿನ ಬೆಳಕು'

Published:
Updated:

ಹಾನಗಲ್: `ಲಿಂ.ಕುಮಾರ ಶಿವಯೋಗಿಗಳವರ ಸಮಾಜಮುಖಿ ಚಿಂತನೆಯಿಂದಾಗಿ ಪುಟ್ಟರಾಜರು, ಪಂಚಾಕ್ಷರರು ಸಂಗೀತ ದಿಗ್ಗಜರಾದರು. ಪಂಚಾಕ್ಷರರ  ಸಂಗೀತ ಪರಂಪರೆಯನ್ನು ಪುಟ್ಟರಾಜರು ಮುಂದುವರಿಸಿ ಪುಣ್ಯಾಶ್ರಮದ ಮೂಲಕ ಅಂಧ ಕಲಾವಿದರ ಬಾಳಿಗೆ ಬೆಳಕು ನೀಡಿದ್ದಾರೆ.

ಅಂಥವರನ್ನು ಸಂಗೀತದ  ಮೂಲಕವೇ ನೆನೆಯಬೇಕು' ಎಂದು ಹುಬ್ಬಳ್ಳಿ  ಮೂರುಸಾವಿರಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ನುಡಿದರು.ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ಪಂ. ಪುಟ್ಟರಾಜ ಗಾನಕಲಾ ವೇದಿಕೆ ಸಂಸ್ಕೃತಿ ಇಲಾಖೆ, ಪುಟ್ಟರಾಜ ಸೇವಾ ಸಮಿತಿ, ಪುಟ್ಟರಾಜ ಯುವಕ ಮಂಡಳಿ, ಪುಟ್ಟರಾಜ ಅಭಿಮಾನಿ ಬಳಗದ ಆಶ್ರಯದಲ್ಲಿ ಆಯೋಜಿಸಿದ  ಪಂ. ಪುಟ್ಟರಾಜ ಗವಾಯಿಗಳ ದ್ವಿತೀಯ ಪುಣ್ಯಸ್ಮರಣೆ  ಹಾಗೂ ಗಾನಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಾನಗಲ್ ಲಿಂ.ಕುಮಾರೇಶ್ವರರು ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯಾಗಿ ಪಂ. ಡಾ.ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿ ಅವರನ್ನು ನೀಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿದ್ದ  ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಪುಟ್ಟರಾಜರು ಅಂಧ -ಅನಾಥರನ್ನು ಶಿಷ್ಯರನ್ನಾಗಿ ಸ್ವೀಕರಿಸಿ  ಸಂಗೀತ ಕಲಾವಿದರನ್ನಾಗಿ ಪರಿವರ್ತಿಸಿ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ತಮ್ಮ ಸಂಗೀತ ಪಾಂಡಿತ್ಯದ ಮೂಲಕ ನಾಡಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದ ಅವರು, ಪುಣ್ಯ ಪುರುಷರ ಹೆಸರಿನಲ್ಲಿ ಪುರಸ್ಕಾರ ನೀಡಿ, ಕಲಾವಿದರನ್ನು ಪ್ರೋತ್ಸಾಹಿಸಿ ಅವಕಾಶಗಳನ್ನು ಕಲ್ಪಿಸಿದಾಗ ಸ್ಮರಣೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.ಸಾನ್ನಿಧ್ಯ ವಹಿಸಿದ್ದ ಕೂಡಲ ವಿರಕ್ತಮಠದ ಮಹೇಶ್ವರ ದೇವರು, ದೇಶದ ಸಂಸ್ಕೃತಿಗೆ ಜಗತ್ತಿನಲ್ಲಿ ಪವಿತ್ರ ಸ್ಥಾನವಿದೆ. ಆದರೆ, ಯುವ ಸಮುದಾಯ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಖೇದಕರ. ಕುಣಿದು ಕುಪ್ಪಳಿಸುವ ಕಾರ್ಯಕ್ರಮಗಳಿಗೆ ಹಾತೊರೆಯುವ ಸಾರ್ವಜನಿಕರು ಸಂಗೀತ ಕಾರ್ಯಕ್ರಮಕ್ಕೆ ಆಸಕ್ತಿ ತೋರದಿರುವುದು ನಮ್ಮ ಸಂಸ್ಕೃತಿಗೆ  ಹಿನ್ನಡೆಯಾಗುತ್ತದೆ. ಪುಣ್ಯ ಪುರುಷರ ಸ್ಮರಣೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಜೀವನ ಪಾವನವಾಗುತ್ತದೆ ಎಂದರು.ಜಿ.ಪಂ. ಉಪಾಧ್ಯಕ್ಷೆ ಗೀತಾ ಅಂಖಸಕಾನಿ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ತೀರ್ಥಯ್ಯ ಶಾಸ್ತ್ರಿ ಕುಲಕರ್ಣಿ, ರಾಜಣ್ಣಾ ಗೌಳಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಉಸ್ತಾದ್ ಹೂಮಾಯೂನ್ ಹರ್ಲಾಪೂರ, ಸೋಮಯ್ಯ ಬಿಳೇಬಾಳ, ನೌಶಾದ್ ಮತ್ತು ನಿಷಾದ ಸಹೋದರರು, ವೆಂಕಟೇಶ ಪೂಜಾರ ಸಂಗೀತ ಸೇವೆ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ರಾಮಚಂದ್ರಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಬಸವಣ್ಣೆಯ್ಯಶಾಸ್ತ್ರಿ ವೆಂಕಟಾಪುರಮಠ ಕಾರ್ಯಕ್ರಮ ನಿರ್ವಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry