ಬುಧವಾರ, ಮೇ 18, 2022
27 °C

`ವೀರ ಬಸವಣ್ಣ'ನ ಚಿತ್ರಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಸಮಾನತೆಯ ಹರಿಕಾರ ಅಹಿಂಸಾ ಪ್ರತಿಪಾದಕ ಬಸವಣ್ಣನ ಹೆಸರಲ್ಲಿ ಹಿಂಸೆ ಸಾರುವ ಸಿನಿಮಾ ತಯಾರಿಸಿ ಬಸವಣ್ಣನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮೂಲಕ ಕೋಟ್ಯಂತರ ಬಸವ ಅನುಯಾಯಿಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿ ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.ಇಲ್ಲಿನ ಚಂದಾಪುರ ಕನಕ ದಾಸ್ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿದ ಸಮಾಜದ ಮುಖಂಡರು, ಸರ್ಕಾರ ತಕ್ಷಣ `ವೀರ ಬಸವಣ್ಣ'ನ ಹೆಸರಿನ ಚಿತ್ರ ಬಿಡುಗಡೆ ತಡೆಯಬೇಕು, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಸಿನಿಮಾ ತಂಡದವರು ಬಸವಣ್ಣನ ಭಕ್ತರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುವ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಸಲ್ಲಿಸಿದರು.ಬಹಿರಂಗ ಸಭೆಯಲ್ಲಿ ಮಾತನಾಡಿದ ಸಮಾಜ ಬಾಂಧವರು ಹಾಗೂ ಬಸವ ಅನುಯಾಯಿಗಳು, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರದಿಂದ ಬಸವಣ್ಣ ಹೆಸರಿನ ಸಿನಿಮಾ ತಯಾರಿಸಿ ಹಣ ಮಾಡಲು ಹೊರಟ ಸಿನಿಮಾ ನಿರ್ದೇಶಕ ಶ್ರೀನಿವಾಸ ರಾಜು ಅವರನ್ನು ಬಂಧಿಸಬೇಕು ಹಾಗೂ ಚಿತ್ರದ ಶೀರ್ಷಿಕೆ ಬದಲಿಸಬೇಕು ಮತ್ತು ಬಸವಣ್ಣ ಭಾವನೆ ಮತ್ತು ತತ್ವಕ್ಕೆ ವಿರುದ್ಧವಾಗಿ ಚಿತ್ರಿಕರಿಸಿದ ಬಂದೂಕು ಹಾಗೂ ಖಡ್ಗ ಹಿಡಿದ ದೃಶ್ಯಾವಳಿಗಳನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದರು.ಮಹಾಸಭೆಯ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ, ಯುವ ವೇದಿಕೆ ಅಧ್ಯಕ್ಷ ರಮೇಶ ಸೀಳಿನ್, ಮಲ್ಲಿಕಾರ್ಜುನ ಪಾಲಾಮೂರು, ಬಸವಣ್ಣ ಪಾಟೀಲ, ಚಂದ್ರಶೇಖರ ಗುತ್ತೇದಾರ, ಶಿವನಾಗಯ್ಯಸ್ವಾಮಿ, ಸಂಜೀವಕುಮಾರ ಪಾಟೀಲ, ಜಗನ್ನಾಥ ಇದಲಾಯಿ, ಸಿದ್ರಾಮಪ್ಪ ಭದ್ರಗೊಂಡ, ಉಮಾ ಪಾಟೀಲ, ಶಾಮರಾವ್ ಕೋರವಾರ, ಭೋಗಲಿಂಗಪ್ಪ ಶಾಬಾದಿ, ನಂದಿಕುಮಾರ ಪಾಟೀಲ, ಸೂರ್ಯಕಾಂತ ಹುಲಿ, ಅಜೀತ ಪಾಟೀಲ, ಮಲ್ಲಿಕಾರ್ಜುನ ಭೂಶೆಟ್ಟಿ, ದಿನೇಶ ದುಗ್ಗಾಣಿ, ಬಸವರಾಜ ಪಾಟೀಲ ಹದನೂರು, ಸಂಗಯ್ಯ ಸ್ವಾಮಿ, ಸುರೇಶ ದೇಶ್ಪಾಂಡೆ, ರೇವಣಸಿದ್ದಪ್ಪ ಮಜ್ಜಗಿ  ಮುಂತಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.