ವೀರ ಭಾರತದ ವಿಜಯಾರಂಭ

7

ವೀರ ಭಾರತದ ವಿಜಯಾರಂಭ

Published:
Updated:

ಢಾಕಾ: ಭಾರತದ ಬಲಿಷ್ಠ ಬ್ಯಾಟಿಂಗ್ ಶಕ್ತಿಯೆದುರು ಬಾಂಗ್ಲಾದೇಶ ಶರಣಾಯಿತು. ಬಾಂಗ್ಲಾ ಹುಲಿಗಳನ್ನು ಭಾರತ ಬಗ್ಗುಬಡಿಯದಿದ್ದರೂ ನಿರೀಕ್ಷೆಯಂತೆ ಸುಲಭವಾಗಿ 87 ರನ್‌ಗಳಿಂದ ಮಣಿಸಿತು. ಬಾಂಗ್ಲಾದೇಶ ಆರಂಭದಲ್ಲಿ ಹೋರಾಟ ತೋರಿದರೂ ಭಾರತ ನೀಡಿದ್ದ 371 ರನ್ನುಗಳ ಸವಾಲಿನ ಬೆಟ್ಟವನ್ನು ಏರಲು ಅದಕ್ಕೆ ಸಾಧ್ಯವಾಗಲಿಲ್ಲ.ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹತ್ತನೇ ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ 87 ರನ್ನುಗಳಿಂದ ಗೆದ್ದು, ನಾಲ್ಕು ವರ್ಷಗಳ ಹಿಂದೆ ಅನುಭವಿಸಿದ್ದ ಸೋಲಿನ ಸೇಡು ತೀರಿಸಿಕೊಂಡಿತು. ಆದರೆ ಮುಟ್ಟಿನೋಡಿಕೊಳ್ಳುವಂಥ ಪೆಟ್ಟು ಕೊಡುವ ಗುರಿ ಮಾತ್ರ ಈಡೇರಲಿಲ್ಲ. ಶ್ರೀಶಾಂತ್ ಅವರ ಕೆಟ್ಟ ಬೌಲಿಂಗ್‌ನಿಂದ ಭರ್ಜರಿ ಆಟ ಆರಂಭಿಸಿದ್ದ ಬಾಂಗ್ಲಾದೇಶ ನಂತರ ಗೆಲುವಿನ ಆಸೆ ಕೈಬಿಟ್ಟಿತು.ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಫೀಲ್ಡಿಂಗ್ ಆಯ್ದುಕೊಂಡಾಗ ಆಶ್ಚರ್ಯವಾಗಿತ್ತು. ಭಾರತದ ಬ್ಯಾಟ್ಸಮನ್ನರನ್ನು ಕಟ್ಟಿಹಾಕಲು ರಾತ್ರಿ ಬೌಲ್ ಮಾಡುವುದು ಕಷ್ಟ ಎಂದು ಭಾವಿಸಿದ ಶಕೀಬ್ ಭಾರತವನ್ನು ಮೊದಲು ಆಡಲು ಇಳಿಸಿದರು. ವೀರೇಂದ್ರ ಸೆಹ್ವಾಗ್ ಅವರ ಪ್ರಚಂಡ ಆಟ (175), ವಿರಾಟ್ ಕೊಹ್ಲಿ ಅವರ ಅಜೇಯ ನೂರು ರನ್‌ಗಳ ಬ್ಯಾಟಿಂಗ್‌ನಿಂದ ಭಾರತ 50 ಓವರುಗಳಲ್ಲಿ 4 ವಿಕೆಟ್‌ಗೆ 370 ರನ್ ಗಳಿಸಿತು.           

ಸಚಿನ್ ತೆಂಡೂಲ್ಕರ್ ಅನಗತ್ಯವಾಗಿ ಗಡಿಬಿಡಿ ಮಾಡಿ ರನ್‌ಔಟ್ ಆಗಿದ್ದು ಬಿಟ್ಟರೆ ಬೇರೆ ಯಾರೂ ಹರಾಕಿರಿ ತೋರಲಿಲ್ಲ.  ಭಾರತದ ಬ್ಯಾಟಿಂಗ್ ವಿಜೃಂಭಿಸಿದರೂ ಬೌಲಿಂಗ್ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಶ್ರೀಶಾಂತ್‌ಗೆ ಎಲ್ಲಿ ಬೌಲ್ ಮಾಡಬೇಕೆಂಬುದೇ ಗೊತ್ತಾಗಲಿಲ್ಲ. ಮೊದಲ ಮೂರು ಓವರುಗಳಲ್ಲೇ ಅವರು 36 ರನ್ ಕೊಟ್ಟರು. ಅದರಲ್ಲಿ 24 ರನ್‌ಗಳು ಅವರ ಮೂರನೇ ಓವರ್‌ನಲ್ಲೇ ಬಂದವು. ಆರಂಭ ಆಟಗಾರ ಇಮ್ರುಲ್ ಕೇಯ್ಸಾ ಬೌಂಡರಿ ಮೇಲೆ ಬೌಂಡರಿ ಹೊಡೆಯತೊಡಗಿದರು.ಶ್ರೀಶಾಂತ್ ಅವರನ್ನು ಬದಲಿಸಿ ಮುನಾಫ್ ಪಟೇಲ್ ಅವರನ್ನು ದಾಳಿಗಿಳಿಸಿದ ನಡೆ ಫಲ ನೀಡಿತು. ಇಮ್ರುಲ್ ಚೆಂಡನ್ನು ಕಟ್ ಮಾಡಲು ಹೋಗಿ ಸ್ಟಂಪ್‌ಗೆ ಎಳೆದುಕೊಂಡರು. ಇವರ ನಂತರ ಜುನೈದ್ ಸಿದ್ದಿಕಿ ಬಿರುಸಿನ ಆಟಕ್ಕಿಳಿದರಾದರೂ ರನ್ ಗಳಿಕೆಯ ವೇಗ ಕಡಿಮೆಯಾಯಿತು. ಶಕೀಬ್ ಅರ್ಧಶತಕ ಗಳಿಸಿದರಾದರೂ ರನ್ ವೇಗ ಹೆಚ್ಚಿಸಲಾಗಲಿಲ್ಲ. ವಿಕೆಟ್‌ಗಳೂ ಬೀಳತೊಡಗಿದವು, ರನ್ನುಗಳೂ ಬರಲಿಲ್ಲ. ಅಗೊಂದು ಈಗೊಂದು ಬಂದ ಬೌಂಡರಿ, ಸಿಕ್ಸರ್ ಪ್ರೇಕ್ಷಕರಿಗೆ ಸ್ವಲ್ಪ ಖುಷಿ ಕೊಟ್ಟರೂ ಗೆಲುವಿನ ಅವಕಾಶ ಇಲ್ಲ ಎಂದು ಗೊತ್ತಾಗಿದ್ದರಿಂದ ಅವರ ಅಬ್ಬರ ಕಡಿಮೆಯಾಗಿತ್ತು. ಪಂದ್ಯ ಮುಗಿಯುವುದರೊಳಗೇ ಕ್ರೀಡಾಂಗಣ ಮುಕ್ಕಾಲು ಭಾಗ ಖಾಲಿಯಾಗಿಹೋಗಿತ್ತು. 50 ಓವರುಗಳಲ್ಲಿ ಅದರ ಸ್ಕೋರು 9 ವಿಕೆಟ್‌ಗೆ 283 ರನ್.ಪಂದ್ಯ ಮುಗಿಯುವ ಆ ಮೊದಲೇ ಪಂದ್ಯದ ಆಟಗಾರ ಯಾರು ಎಂಬ ನಿರ್ಧಾರವಾಗಿತ್ತು. ವೀರೇಂದ್ರ ಸೆಹ್ವಾಗ್ ಅವರನ್ನು ಬಿಟ್ಟು ಬೇರೆ ಯಾರಿಗೂ ಕೊಡುವ ಪ್ರಶ್ನೆಯೇ ಇರಲಿಲ್ಲ.ಟಾಸ್ ಗೆದ್ದಿದ್ದರೆ ತಾನೂ ಫೀಲ್ಡಿಂಗ್ ಆಯ್ದು ಕೊಳ್ಳುತ್ತಿದ್ದೆ (ರಾತ್ರಿ ಇಬ್ಬನಿಯಿಂದ ಮೈದಾನ ತೇವಗೊಂಡು ಬೌಲಿಂಗ್ ಕಷ್ಟವಾಗುವುದೆಂದು) ಎಂದು ದೋನಿ ಹೇಳಿದರಾದರೂ, ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕಿದ್ದು ಅನುಕೂಲವೇ ಆಯಿತು. ಚೆಂಡು ಸ್ವಲ್ಪ ತಡೆದು ಬರುತ್ತಿದ್ದರಿಂದ ಸ್ವಲ್ಪ ಎಚ್ಚರಿಕೆಯಿಂದಲೇ ಆಡಬೇಕಿತ್ತು.ಆದರೆ ವೀರೇಂದ್ರ ಸೆಹ್ವಾಗ್ ಲೆಕ್ಕಾಚಾರವೇ ಬೇರೆ ಆಗಿತ್ತು. ದಿನದ ಮೊದಲ ಎಸೆತವನ್ನೇ ಕವರ್ ಬೌಂಡರಿಗೆ ಡ್ರೈವ್ ಮಾಡಿದ ವೀರೂ ನಂತರ ಸರಾಗವಾಗಿ ಆಡತೊಡಗಿದರು. ಸಚಿನ್ ತೆಂಡೂಲ್ಕರ್ ಕೂಡ ವೀರೂ ಜೊತೆಯೇ ರನ್ ಗಳಿಸುವತ್ತ ಹೆಜ್ಜೆ ಇಟ್ಟರು.ಸಚಿನ್ ರನ್ ಔಟ್ ಆಗಿದ್ದಕ್ಕೆ ತಮ್ಮನ್ನು ತಾವೇ ಹಳಿದುಕೊಂಡರು. ಮಿಡ್‌ಆನ್ ಕಡೆ ಚೆಂಡನ್ನು ತಳ್ಳಿದ್ದ ಅವರು ಇಲ್ಲದ ರನ್ ಕದಿಯುವ ಯತ್ನದಲ್ಲಿ ವೀರೂ ಅವರನ್ನು ಕರೆಯದೇ ಓಡಿ ಬಂದರು. ಚೆಂಡಿನ ಗತಿಯನ್ನೇ ಗಮನಿಸುತ್ತಿದ್ದ ವೀರೂ ಮಿಡ್‌ಆನ್‌ನಲ್ಲಿ ಶಕೀಬ್ ಚೆಂಡನ್ನು ತಡೆದಾಗ ವಾಪಸ್ಸು ತಮ್ಮ ಗಡಿಯೊಳಗೆ ಬಂದರು.ಆದರೆ ಸಚಿನ್ ಓಡಿ ಬಂದಾಗಿತ್ತು. ತಿರುಗಿ ಹೋಗುವ ಅವಕಾಶವೇ ಇರಲಿಲ್ಲ. ಅಷ್ಟರೊಳಗೆ ಇಬ್ಬರಿಂದ 10.5 ಓವರುಗಳಲ್ಲಿ 69 ರನ್ ಬೋರ್ಡ್ ಮೇಲೆ ಇದ್ದವು. ಸಚಿನ್ ಈ ತಪ್ಪು ಮಾಡಿರದಿದ್ದರೆ ಅವರಿಗೂ ನೂರರ ಸಂಭ್ರಮ ಲಭಿಸಬಹುದಿತ್ತು.ಬಾಂಗ್ಲಾದೇಶದ ಬೌಲಿಂಗ್‌ನಲ್ಲಿ ವಿಶೇಷವೇನೂ ಇಲ್ಲ. ನಿಧಾನ ಗತಿಯ ಪಿಚ್‌ನ ಉಪಯೋಗ ತೆಗೆದುಕೊಳ್ಳುವಲ್ಲಿ ನಾಲ್ವರು ಸ್ಪಿನ್ನರುಗಳೂ ವಿಫಲರಾದರು.ಅದಕ್ಕೆ ಕಾರಣ ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್. ವೀರೂಗೆ ಉತ್ತಮ ಜೊತೆಗಾರನಾಗುವದರಲ್ಲಿ ಗೌತಮ್ ಗಂಭೀರ್ ಕೂಡ ಹಿಂದೆ ಬೀಳಲಿಲ್ಲ. ಎರಡನೇ ವಿಕೆಟ್‌ಗೆ 83 ರನ್ ಬಂದವು.

ವಿರಾಟ್ ಕೊಹ್ಲಿ ಬಂದ ಮೇಲೆ ರನ್ನಿನ ವೇಗವೂ ಹೆಚ್ಚಿತು. ಭಾರತದ ರನ್ ಗತಿ ಓವರ್‌ಗೆ ಆರಕ್ಕಿಂತ ಯಾವ ಹಂತದಲ್ಲೂ ಕಡಿಮೆಯಾಗಿ ರಲಿಲ್ಲ.ಮೂರನೇ ವಿಕೆಟ್‌ಗೆ 24.1 ಓವರುಗಳಲ್ಲಿ 203 ರನ್ನುಗಳು ಬಂದವು. ಕಾಲು ನೋವಿನಿಂದಾಗಿ ವೀರೂ ತಮ್ಮ ಆಟದ ಕೊನೆಯ ಹಂತದಲ್ಲಿ ರನ್ನರ್ (ಗಂಭೀರ್) ಜೊತೆ ಆಡಿದರಾದರೂ ಸಿಕ್ಸರ್ ಹೊಡೆಯಲೇನೂ ಅವರಿಗೆ ತೊಂದರೆಯಾಗಲಿಲ್ಲ.ಕಳೆದ ಒಂದು ವರ್ಷದಿಂದ ಚೆನ್ನಾಗಿ ಆಡುತ್ತಿ ರುವ ವಿರಾಟ್ ಕೊಹ್ಲಿ ದೊಡ್ಡ ಹೊಡೆತಗಳಿಗೆ ಕೈಹಾಕದೇ ಚೆಂಡನ್ನು ಡ್ರೈವ್ ಮಾಡುತ್ತ ಬೌಲರುಗಳನ್ನು ಕಾಡಿದರು. ಆಫ್‌ಸ್ಪಿನ್ನರ್ ನಯೀಮ್ ಇಸ್ಲಾಮ್ ಬೌಲಿಂಗ್ ಬಂದ ಎರಡು ಕವರ್ ಡ್ರೈವ್‌ಗಳು ದಿನದ ಅತ್ಯುತ್ತಮ ಬೌಂಡರಿಗಳಾಗಿದ್ದವು.ಸೆಹ್ವಾಗ್ ಮತ್ತು ಕೊಹ್ಲಿ ಜೊತೆಯಾಟ ಬೆಳೆಯತೊಡಗಿದಂತೆ ಭಾರತದ ಮೊತ್ತ 350 ದಾಟುವುದು ಖಚಿತವಾಗಿತ್ತು. ಇನಿಂಗ್ಸ್‌ನ ಕೊನೆಯ 15 ಎಸೆತಗಳು ಉಳಿದಿದ್ದಾಗ ಶಕೀಬ್ ಬೌಲಿಂಗ್‌ನಲಿ ಚೆಂಡನ್ನು ಸ್ಟಂಪ್‌ಗೆ ಎಳೆದು ಕೊಂಡ ಸೆಹ್ವಾಗ್ ತಂಡದ ದೊಡ್ಡ ಮೊತ್ತ ಗಳಿಸುವ ಗುರಿಯನ್ನು ಸಫಲಗೊಳಿಸಿಯಾಗಿತ್ತು. ಸಾಧ್ಯವಾದಷ್ಟು ರನ್ನುಗಳು ಬರಲಿ ಎಂದು ಭರ್ಜರಿ ಹೊಡೆತಗಾರ ಯೂಸುಫ್ ಹೆಚ್ಚೇನೂ ಮಾಡಲಾಗಲಿಲ್ಲ. ಆದರೆ ವಿರಾಟ್ ಕೊಹ್ಲಿ ತಮ್ಮ ಮೊಟ್ಟಮೊದಲ ವಿಶ್ವ ಕಪ್ ಪಂದ್ಯದಲ್ಲೇ ಶತಕ ಗಳಿಸುವ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ. ಅಲ್ಲದೇ ಸರಿಯಾಗಿ ನೂರು ರನ್ನುಗಳೊಡನೆ ಅಜೇಯವಾಗುಳಿದರು.

ಇಂದಿನ ಪಂದ್ಯಗಳು

ನ್ಯೂಜಿಲೆಂಡ್-ಕೀನ್ಯಾ
.

ಸ್ಥಳ: ಚೆನ್ನೈ  ಆರಂಭ: ಬೆಳಿಗ್ಗೆ 9.30ಕ್ಕೆ

ಶ್ರೀಲಂಕಾ-ಕೆನಡಾ

ಸ್ಥಳ: ಹಂಬಂಟೋಟಾ ಕ್ರೀಡಾಂಗಣ, ಢಾಕಾ (ಮೀರ್‌ಪುರ)

ಆರಂಭ: ಮಧ್ಯಾಹ್ನ 2.30ಕ್ಕೆ

ನೇರ ಪ್ರಸಾರ: ಇಎಸ್‌ಪಿಎನ್/ಸ್ಟಾರ್ ಕ್ರಿಕೆಟ್ಫಲಿತಾಂಶ

ಭಾರತ: 370/4 (50)

ಬಾಂಗ್ಲಾದೇಶ: 283/9(50)

ಭಾರತಕ್ಕೆ 87ರನ್ ಜಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry