ಗುರುವಾರ , ಅಕ್ಟೋಬರ್ 17, 2019
22 °C

ವೀಳ್ಯದೆಲೆಯಿಂದ ಝಣಝಣ ರೊಕ್ಕ

Published:
Updated:

ವೀಳ್ಯದೆಲೆಯನ್ನು ಒಂದು ಪ್ರಮುಖ ಬೆಳೆಯಾಗಿ ಬೆಳೆಯುತ್ತಿರುವ ರೈತರ ಸಂಖ್ಯೆ ತೀರಾ ವಿರಳ. ಅದರಲ್ಲೂ ಎಕರೆಗಟ್ಟಲೆ ಭೂಮಿ ತುಂಬ ಸಾವಯವ ಗೊಬ್ಬರ ಉಣಿಸಿ ತಲೆ ತಲಾಂತರಗಳಿಂದ ವೀಳ್ಯ ಬೆಳೆದು ಏಳಿಗೆ ಕಂಡಿರುವ ರೈತರಂತೂ ಕಾಣಸಿಗುವುದು ಅಪರೂಪವೇ ಸರಿ.ಆದರೆ ಈ ಮಾತಿಗೆ ಅಪವಾದವೆಂಬಂತೆ ತನ್ನ ಎರಡು ಎಕರೆ ಭೂಮಿಯಲ್ಲಿ ಕಳೆದ 80 ವರ್ಷಗಳಿಂದ ವೀಳ್ಯ ಬೆಳೆದು ಅದರಿಂದಲೇ ಪ್ರತಿ ದಿನ ಕಾಂಚಾಣ ಎಣಿಸುವ ಕುಟುಂಬವೊಂದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಜಲ್ಲಾಪುರದಲ್ಲಿದೆ.ಒಣ ಭೂಮಿಯಲ್ಲೂ ಸುಲಭವಾಗಿ ವೀಳ್ಯ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟ ತುಳಜಾಪ್ರಸಾದ್ ಮಿಶ್ರ ಇಂದು ಅಪ್ಪಟ ಅನುಭವಸ್ಥ ವೀಳ್ಯ ಬೆಳೆಗಾರ ಎಂಬುವುದರಲ್ಲಿ ಅನುಮಾನವೇ ಇಲ್ಲ. ಇದು ಅವರ ಪಾಲಿಗೆ ತಲೆ ತಲಾಂತರದಿಂದ ಬಂದ ಕಸುಬು. ಆದರೆ ಅವರ ಆಸಕ್ತಿಯ ಫಲವಾಗಿ ಇಂದು ಎರಡು ಎಕರೆ ಭೂಮಿ ತುಂಬಾ ಹತ್ತು ಸಾವಿರ ವೀಳ್ಯ ಬುಡಗಳು ಫಸಲು ನೀಡುತ್ತಿವೆ. ಮನಸ್ಸಿದ್ದರೆ ಮಾರ್ಗವೆನ್ನುವಂತೆ ವೀಳ್ಯದ ಜೊತೆಗೆ ದೀರ್ಘಾವಧಿ ಬೆಳೆ ಅಡಕೆ, ತೆಂಗನ್ನೂ ಬೆಳೆದಿದ್ದಾರೆ.ರಸಗೊಬ್ಬರ ಬಳಸಿದರೆ ವೀಳ್ಯಕ್ಕೆ ಬಹುಬೇಗ ರೋಗಗಳು ಬಾಧಿಸುತ್ತವೆ ಎನ್ನುವುದು ಅವರ ಅನುಭವದ ಮಾತು. ಇತರ ಬೆಳೆಗಳಿಗೆ ಹೋಲಿಸಿದರೆ ವರ್ಷದ ಎಲ್ಲಾ ಋತುಗಳಲ್ಲೂ ಮಾರುಕಟ್ಟೆಗೆ ಲಭ್ಯವಾಗುವ ಕೃಷಿ ಎಂಬ ಹೆಗ್ಗಳಿಕೆ ವೀಳ್ಯದ್ದು. ಇನ್ನು, ಅದಕ್ಕೆ ಬಾಧಿಸುವ ರೋಗ ಕೂಡ ಕಡಿಮೆ ಎಂದು ಹೇಳುತ್ತಾರೆ.ಬೆಳೆ ಪದ್ಧತಿ


ಒಮ್ಮೆ ನೆಟ್ಟ ಬಳ್ಳಿ ಬರೋಬ್ಬರಿ ಐವತ್ತು ವರ್ಷ ಬದುಕಬಲ್ಲದು. ಜೂನ್- ಜುಲೈ ತಿಂಗಳಲ್ಲಿ ನಾಟಿ ಮಾಡಿದರೆ ಒಂದು ವರ್ಷದ ಬಳಿಕ ಕಟಾವಿಗೆ ಲಭ್ಯ. ಮೂರುವರೆ ಅಡಿ ಉದ್ದ ಮತ್ತು ಅಗಲದಲ್ಲಿ 4 ಬಳ್ಳಿಗಳನ್ನು ನೆಡಬಹುದಾಗಿದೆ.ಇವಕ್ಕೆ ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಕೊಡಬೇಕು. ಆರು ದಿನಕ್ಕೊಂದು ಸಲ ನೀರುಣಿಸಬೇಕು. ಅಧಿಕ ಇಳುವರಿ ಪಡೆಯುವುದಕ್ಕಾಗಿ ಎರಡು ವರ್ಷಕ್ಕೊಮ್ಮೆ ಬುಡಕ್ಕೆ ಮಣ್ಣು ಹಾಕಿದರೆ ಉತ್ತಮ. ಆರೋಗ್ಯಯುತ ಬಳ್ಳಿ ಸಾಧಾರಣವಾಗಿ 20 ರಿಂದ 22 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಪ್ರತೀ ವರ್ಷ ಉದ್ದನೆಯ ಬಳ್ಳಿಯನ್ನು ಬುಡದಲ್ಲೆೀ ಮಣ್ಣಿನಿಂದ ಮುಚ್ಚಬೇಕು.ಆರಂಭದ ವರ್ಷ ಎರಡು ಎಕರೆ ವೀಳ್ಯಕ್ಕೆ ನಾಟಿ, ನೀರು, ಗೊಬ್ಬರ, ಕೂಲಿಯಾಳು ಸೇರಿ ಎರಡುವರೆ ಲಕ್ಷ ರೂಪಾಯಿ ಖರ್ಚು ತಗಲುತ್ತದೆ. ನಂತರದ ಎರಡು ವರ್ಷಗಳಲ್ಲಿ ಪ್ರತಿ ವರ್ಷ 50-60 ಸಾವಿರ ರೂಪಾಯಿ ಆದಾಯವನ್ನು ಪಡೆಯಬಹುದಾಗಿದೆ. ಐದು ವರ್ಷಗಳ ನಂತರ ವರ್ಷಕ್ಕೆ ಎರಡು ಎಕರೆಯಲ್ಲಿ ಪ್ರತಿ ವರ್ಷ 3 ಲಕ್ಷ ರೂಪಾಯಿಯಂತೆ ಆದಾಯ ಪಡೆದಿದ್ದಾರೆ.   ಅಧಿಕ  ಇಳುವರಿ ದೊರೆಯುವ ದಿನಗಳಲ್ಲಿ ಪ್ರತಿ ದಿನ ಸರಾಸರಿ ಎರಡು ಸಾವಿರ ರೂಪಾಯಿ ಕಿಮ್ಮತ್ತಿನ ಎಲೆಗಳನ್ನು  ಇವರು ಮಾರಾಟ ಮಾಡುತ್ತಾರೆ. ನೂರು ವೀಳ್ಯದೆಲೆಗೆ ಕನಿಷ್ಠ ಇಪ್ಪತ್ತು ರೂಪಾಯಿ ದರ ದೊರೆತರೆ, ಚಳಿಗಾಲದಲ್ಲಿ 40 ರೂಪಾಯಿ ಗಳಿಸುತ್ತಾರೆ.ಒಟ್ಟಾರೆ ಮನಸ್ಸೊಂದಿದ್ದರೆ ಮಾರ್ಗವೆಂಬ ಮಾತಿನಂತೆ ಹಾವೇರಿಯಂತಹ ಬಯಲುಸೀಮೆಯ ನಾಡಿನಲ್ಲೂ ವೀಳ್ಯದೆಲೆಯನ್ನು ಲಾಭದಾಯಕ ಬೆಳೆಯಾಗಿ ಬೆಳೆದು ಅದರಿಂದ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದನ್ನು ತೋರಿಸುವ ಮೂಲಕ ತುಳಜಾಪ್ರಸಾದ್ ಕುಟುಂಬ ಇತರರಿಗೆ ಮಾದರಿಯಾಗಿದೆ.

ಮಾಹಿತಿಗೆ ಅವರ ಸಂಪರ್ಕ ಸಂಖ್ಯೆ 96322 72161.

 

Post Comments (+)