ಭಾನುವಾರ, ಮೇ 9, 2021
26 °C
ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ

ವೀಸಾ ಅವಧಿಯೊಳಗೆ ಸೌದಿ ತೊರೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ವೀಸಾ ಅವಧಿ  ಮುಗಿಯುವ ಮುನ್ನವೇ ಸೌದಿ ಅರೇಬಿಯಾ ತೊರೆಯಿರಿ ಎಂದು ಸೌದಿಯಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ.ವೀಸಾ ಅವಧಿ ಮುಗಿದ ನಂತರವೂ ಸೌದಿಯಲ್ಲಿ ಭಾರತೀಯರು ಉಳಿದಲ್ಲಿ ಅಲ್ಲಿನ `ನಿತಾಕತ್' ಕಾನೂನು ಪ್ರಕಾರ ಜೈಲು ಶಿಕ್ಷೆ, ದಂಡ ಇಲ್ಲವೇ ಪುನರ್ ಆಗಮನಕ್ಕೆ ನಿರ್ಬಂಧದ ಶಿಕ್ಷೆ ನೀಡಲಾಗುವುದು ಎಂದೂ ಭಾರತೀಯ ರಾಯಭಾರಿ ಕಚೇರಿ ಎಚ್ಚರಿಸಿದೆ.ಈ ರೀತಿಯ ಶಿಕ್ಷೆಯಿಂದ ಪಾರಾಗಲು ಭಾರತೀಯ ನಾಗರಿಕರು ಸೌದಿ ಸರ್ಕಾರ ನಿಗದಿಪಡಿಸಿರುವ ಕಾಲಾವಧಿ ಜುಲೈ 3ರ ಒಳಗೆ ಸೌದಿ ತೊರೆಯಬೇಕು. ಭಾರತೀಯ ರಾಯಭಾರ ಕಚೇರಿಯಿಂದ `ತುರ್ತು ಪ್ರಮಾಣಪತ್ರ' ಪಡೆದಿರುವ ಭಾರತೀಯ ನಾಗರಿಕರ ಮೂಲ ಪಾಸ್‌ಪೋರ್ಟ್‌ಗಳು ರದ್ದುಗೊಂಡಿವೆ.ಅವಧಿ ಇದ್ದರೂ ಇಂಥ ಪಾಸ್‌ಪೋರ್ಟ್ ಬಳಸಿ ಭಾರತೀಯ ನಾಗರಿಕರು ಭಾರತದಿಂದ ಇತರೆಡೆ ಪ್ರಯಾಣಿಸಲು ಸಾಧ್ಯವಿಲ್ಲ. ಉದ್ಯೋಗ ನಿಮಿತ್ತ ಹೊಸ ಪಾಸ್‌ಪೋರ್ಟ್ ಪಡೆಯ ಬಯಸುವವರಿಗೆ ಸೌದಿ ಸರ್ಕಾರ ಕೆಲ ಷರತ್ತು ಮತ್ತು ನಿಯಮಗಳನ್ನು ಅನುಸರಿಸಬೇಕು. ನಿಯಮಾನುಸಾರವೇ  ನೂತನ ಪಾಸ್‌ಪೋರ್ಟ್‌ಗಳನ್ನು ನೀಡಲಾಗುವುದು ಎಂದೂ ರಾಯಭಾರ ಕಚೇರಿ ಸ್ಪಷ್ಟ ಸೂಚನೆ ನೀಡಿದೆ.`ತುರ್ತು ಪ್ರಮಾಣಪತ್ರ'ಕ್ಕಾಗಿ ಅರ್ಜಿ ಸಲ್ಲಿಸಿರುವ ಭಾರತೀಯ ನಾಗರಿಕರು ಜೂನ್ 20ರ ಒಳಗೆ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, `ತುರ್ತು ಪ್ರಮಾಣಪತ್ರ' ಪಡೆಯಬೇಕೆಂದು ಸೂಚಿಸಲಾಗಿದೆ.ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಸಲ್ಮಾನ್ ಖುರ್ಷಿದ್ ಅವರ ಜತೆಗೆ ಈಚೆಗೆ ಸೌದಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾತುಕತೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸೌದಿಯ ನೂತನ `ನಿತಾಕತ್' ಕಾನೂನು ಸೌದಿ ಅರೇಬಿಯಾದಲ್ಲಿ ದೀರ್ಘಕಾಲದಿಂದ ನೆಲೆಸಿರುವ ಇತರ ದೇಶಗಳ ಉದ್ಯೋಗಿಗಳನ್ನು ಗುರುತಿಸಿದೆ.ನೂತನ ಕಾನೂನಿನ ಪ್ರಕಾರ, ಸೌದಿಯ ಸ್ಥಳೀಯ ಕಂಪೆನಿಗಳಲ್ಲಿ ಪ್ರತಿ 10 ವಲಸೆ ಕಾರ್ಮಿಕರಲ್ಲಿ ಒಬ್ಬ ಸೌದಿ ಕಾರ್ಮಿಕ ಇರಬೇಕು ಎಂದು ನಿಯಮ ರೂಪಿಸಿದೆ. ಸೌದಿ ಸರ್ಕಾರ ನೀಡಿರುವ ಗಡುವು ಜುಲೈ 3ಕ್ಕೆ ಮುಗಿಯಲಿದ್ದು, ಈ ಅವಧಿಯೊಳಗೆ ಭಾರತೀಯ ನಾಗರಿಕರು ಸೌದಿ ತೊರೆಯದಿದ್ದಲ್ಲಿ ಅಥವಾ ಸೂಕ್ತ ದಾಖಲೆಗಳಿಲ್ಲದೇ ಸೌದಿಯಲ್ಲಿ ಅಕ್ರಮವಾಗಿ ವಾಸವಿರುವುದು ಕಂಡು ಬಂದಲ್ಲಿ ಅಂಥವರಿಗೆ ಜೈಲು ಶಿಕ್ಷೆ ಮತ್ತು ಭಾರೀ ಮೊತ್ತದ ದಂಡ ವಿಧಿಸಲಾಗುವುದು.ಸೌದಿ ಅರೇಬಿಯಾದಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದು, ಮೇ 20ರ ತನಕ 75 ಸಾವಿರಕ್ಕೂ ಹೆಚ್ಚು ಭಾರತೀಯರು `ತುರ್ತು ಪ್ರಮಾಣಪತ್ರ' ಕ್ಕಾಗಿ ಭಾರತೀಯ ರಾಯಭಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೆ ವಿಲೇವಾರಿಯಾಗಿರುವ ಒಟ್ಟು 56,734 ಅರ್ಜಿಗಳಲ್ಲಿ 21,331 ಅರ್ಜಿಗಳು ಉತ್ತರ ಪ್ರದೇಶ ಹಾಗೂ 3,610 ಅರ್ಜಿಗಳು ಕೇರಳದ ನಾಗರಿಕರಿಗೆ ಸಂಬಂಧಿಸಿವೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ವಲಸಿಗರ ವಿರುದ್ಧ ಮಾತ್ರ ಕ್ರಮ: ಮೆಹ್ತಾ ಸ್ಪಷ್ಟನೆ

ದುಬೈ (ಪಿಟಿಐ):
ಅಕ್ರಮವಾಗಿ ವಲಸೆ ಬಂದಿರುವ ಮತ್ತು ಕಾನೂನು ಉಲ್ಲಂಘಿಸಿ ಸೌದಿಯಲ್ಲಿ ನೆಲೆಸಿರುವವರ ವಿರುದ್ಧ ಮಾತ್ರ ಸೌದಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಸತೀಶ್ ಸಿ. ಮೆಹ್ತಾ ಸ್ಪಷ್ಟಪಡಿಸಿದ್ದಾರೆ.ಸೌದಿ ಸರ್ಕಾರ ಕೇವಲ ಭಾರತೀಯ ನಾಗರೀಕರನ್ನಷ್ಟೇ ಗುರಿಯಾಗಿಸಿಕೊಂಡು ಈ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಈಚೆಗೆ ತಮ್ಮನ್ನು ಭೇಟಿಯಾದ ಕುವೈತ್‌ನಲ್ಲಿರುವ  ಭಾರತೀಯ ಮುಖಂಡರಿಗೆ ತಿಳಿಸಿರುವುದಾಗಿ ಸತೀಶ್ ಹೇಳಿದ್ದಾರೆ.ಸೌದಿಯಲ್ಲಿರುವ ಭಾರತೀಯರಿಗೆ ತೊಂದರೆಯಾಗದಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ `ಸಹಾಯವಾಣಿ'ಯನ್ನೂ ಕೂಡಾ ಆರಂಭಿಸಿದೆ. ಅಲ್ಲದೇ, ಚೆಕ್‌ಇನ್ ಸಮಯದಲ್ಲಿ ಭಾರತೀಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು ಎಂದೂ ಭಾರತೀಯ ರಾಯಭಾರ ಕಚೇರಿ ಸೌದಿ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.