ವೀಸಾ ಶುಲ್ಕ ಹೆಚ್ಚಳ: ಎಸ್.ಎಂ.ಕೃಷ್ಣ-ಹಿಲರಿ ಕ್ಲಿಂಟನ್ ಚರ್ಚೆ

7

ವೀಸಾ ಶುಲ್ಕ ಹೆಚ್ಚಳ: ಎಸ್.ಎಂ.ಕೃಷ್ಣ-ಹಿಲರಿ ಕ್ಲಿಂಟನ್ ಚರ್ಚೆ

Published:
Updated:

ನ್ಯೂಯಾರ್ಕ್ (ಪಿಟಿಐ): ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರು ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.ನಲವತ್ತೈದು ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ವೀಸಾ ಶುಲ್ಕ ಹೆಚ್ಚಳ, ವಿಸ್ಕನ್ಸಿನ್ ಗುರುದ್ವಾರ ದಾಳಿ, ಪಾಕಿಸ್ತಾನದೊಂದಿಗಿನ ವ್ಯಾಪಾರ ವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಉಭಯ ನಾಯಕರು ಚರ್ಚಿಸಿದರು.ಸೋಮವಾರ ನಡೆದ ಮಾತುಕತೆಯು `ಧನಾತ್ಮಕ~ ಹಾಗೂ `ಫಲಪ್ರದ~ವಾಗಿತ್ತು. ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು ಎಂದು ಎಸ್.ಎಂ. ಕೃಷ್ಣ ಸುದ್ದಿಸಂಸ್ಥೆಗೆ ತಿಳಿಸಿದರು.ವೀಸಾ ಶುಲ್ಕ ಹೆಚ್ಚಳ ಮಾಡಿರುವ  ವಿಚಾರದಲ್ಲಿ ಭಾರತ ಹೊಂದಿರುವ ಆತಂಕವನ್ನು ಕ್ಲಿಂಟನ್ ಅವರ ಮುಂದೆ ಪ್ರಸ್ತಾಪಿಸಲಾಗಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ವಿಚಾರದಲ್ಲಿ ತಕ್ಷಣಕ್ಕೆ ಯಾವುದೇ ಭರವಸೆ ಅಥವಾ ಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.ಈ ವರ್ಷದಲ್ಲಿ ಎಸ್.ಎಂ. ಕೃಷ್ಣ ಅವರು ಕ್ಲಿಂಟನ್ ಅವರೊಂದಿಗೆ ನಡೆಸುತ್ತಿರುವ ಮೂರನೇ ಮಾತುಕತೆ ಇದಾಗಿದೆ. ಈ ಮೊದಲು ಉಭಯ ನಾಯಕರು ಏಪ್ರಿಲ್‌ನಲ್ಲಿ ನವದೆಹಲಿಯಲ್ಲಿ ಮತ್ತು ಜೂನ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಪರಸ್ಪರ ಭೇಟಿಯಾಗಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry