ಭಾನುವಾರ, ಡಿಸೆಂಬರ್ 8, 2019
25 °C

ವೃಕ್ಷೋ ರಕ್ಷತಿ ರಕ್ಷಿತಃ

Published:
Updated:
ವೃಕ್ಷೋ ರಕ್ಷತಿ ರಕ್ಷಿತಃ

ಪರಿಸರ ರಕ್ಷಿಸಬೇಕೆಂಬ ಹಂಬಲದಿಂದ ಪಟ್ಟುಬಿಡದೆ ಮರಗಳನ್ನು ನೆಟ್ಟ ಸಾಲುಮರದ ತಿಮ್ಮಕ್ಕನನ್ನು ನೋಡಿದ್ದೇವೆ... `ಮರಗಳೂ ಜೀವಿಗಳು ಅವುಗಳ ಮರಣ ನಮ್ಮ ಮರಣವೇ ಸರಿ~ ಎಂದು ಕಡಿಯಲು ಬಿಡದ ಚಿಪ್ಕೊ ಚಳವಳಿಯನ್ನು ಕೇಳಿದ್ದೇವೆ. ಆದರೆ ಮಹಾನಗರಿಯಲ್ಲೊಂದು ಸಂಸ್ಥೆ ಮರಗಳು ಮತ್ತು ಸಂಸ್ಕೃತಿಯ ಉಳಿವಿಗಾಗಿ ಸದ್ದಿಲ್ಲದೆ ಶ್ರಮಿಸುತ್ತದೆ.

ಈ ಕಾಯಕಕ್ಕೆ ಅದು ಆಯ್ದುಕೊಂಡದ್ದು ದೇವಾಲಯಗಳನ್ನ. `ಗುಡಿಯ ಸಂಭ್ರಮ~ದ ಮುಖಾಂತರ ನಮ್ಮ ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ಜ್ಞಾನಕೇಂದ್ರಕ್ಕೆ ಮರಳಿ ಎಂದು ಕರೆಯುತ್ತಿದೆ ಹೆರಿಟೇಜ್ ಸಂಸ್ಥೆ. ಮುಜರಾಯಿ ಇಲಾಖೆಯೂ ಇದಕ್ಕೆ ಕೈಜೋಡಿಸಿದೆ.

ಕಳೆದ ಎರಡು ವರ್ಷಗಳಿಂದ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಸಂಸ್ಥೆ ನಿರತವಾಗಿದೆ. `ಬೆಂಗಳೂರು ದೇವಾಲಯಗಳ ಉತ್ಸವ~ವು ನಮ್ಮ ಪರಂಪರೆ ಹಾಗೂ ಸರ್ವ ಸಂಸ್ಕೃತಿಯ ದೈವತ್ವವನ್ನು ಪ್ರತಿಬಿಂಬಿಸುತ್ತದೆ.

ಏನಿದು `ಗುಡಿಯ ಸಂಭ್ರಮ~

ಸಂಸ್ಕೃತಿ, ವೃಕ್ಷ, ಪರಿಸರದ ಕುರಿತು ಜನರಲ್ಲಿ ಅರಿವು ಮೂಡಿಸಲೋಸುಗ ಹುಟ್ಟುಹಾಕಿರುವ ಭಿನ್ನ ಆಚರಣೆಯಿದು. ನಗರದ ಕೆಲವು ಪ್ರಮುಖ ದೇವಾಲಯಗಳಲ್ಲಿ ಇಂದಿನಿಂದ ಮಾರ್ಚ್ 11ರವರೆಗೆ ನಿಗದಿಯಾದ ದೇವಸ್ಥಾನಗಳಲ್ಲಿ ಪ್ರತಿದಿನ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲ್ಲಿ ನಾಟಕ, ಹಾಡು, ನೃತ್ಯ ಬೊಂಬೆಯಾಟ ಇತ್ಯಾದಿ ಮನರಂಜನಾ ಮಾಧ್ಯಮದೊಂದಿಗೆ ಸಂಸ್ಕೃತಿಯ ಮಹತ್ವವನ್ನು ಇಂದಿನ ಪೀಳಿಗೆಗೆ ದಾಟಿಸುವ ಕಾಯಕ.

ದೇವಾರ್ಪಿತ ವೃಕ್ಷಗಳು

`ವೃಕ್ಷೋ ರಕ್ಷತಿ ರಕ್ಷಿತಃ~ ಇದರ ಮೂಲ ಧ್ಯೇಯವಾಗಿದ್ದು, ಪ್ರತಿವರ್ಷವೂ ಒಂದೊಂದು ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಬೇಕೆಂಬುದು ಇವರ ಆಶಯ. ಈ ಬಾರಿಯ ಶೀರ್ಷಿಕೆ `ದೇವಾರ್ಪಿತ ವೃಕ್ಷಗಳು~. ಇಂದು ತ್ರಿಕರಣಗಳ ಪ್ರಾಪ್ತಿಯಿಂದಾಗಿ ಪರಿಸರ ಇಲ್ಲವಾಗುತ್ತಿದೆ. ಮರಗಳ ಮಾರಣಹೋಮ ದಿನೇ ದಿನೇ ಹೆಚ್ಚಾಗುತ್ತಿದೆ. ಪರಿಣಾಮ ವೃಕ್ಷಗಳ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಲು ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಈ ಕಾಯಕದಲ್ಲಿ ಹೆರಿಟೇಜ್ ಸಂಸ್ಥೆ ಭಿನ್ನವಾಗಿ ನಿಲ್ಲುತ್ತದೆ. ನೈಸರ್ಗಿಕ ವಿಜ್ಞಾನಿಗಳು, ಪರಿಸರ ವಿಜ್ಞಾನಿಗಳು ಹಾಗೂ  ವಿದ್ವಾಂಸರು ಒಂದೇ ಸೂರಿನಡಿ ಭಾರತೀಯ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಯತ್ನಕ್ಕೆ ಮುಂದಾಗಿದ್ದಾರೆ.

ಜೊತೆಗೆ ಉತ್ಸವದಲ್ಲಿ ದೇಶದ ವಿವಿಧ ಭಾಗಗಳ ಸುಮಾರು 250 ಕಲಾವಿದರು ಪಾಲ್ಗೊಂಡು ತಮ್ಮ ಪ್ರತಿಭೆ ಮೂಲಕ ಅರಿವು ಮೂಡಿಸುವ ಕಾಯಕದಲ್ಲಿ ತಮ್ಮ ಪಾಲನ್ನೂ ಹಂಚಿಕೊಳ್ಳಲಿದ್ದಾರೆ.

ಹೆರಿಟೇಜ್ ಬಗ್ಗೆ ಒಂದಿಷ್ಟು

ಈ ಸಂಸ್ಥೆ ಆರಂಭವಾದದ್ದು 1994ರಲ್ಲಿ.  ವಿಚಾರಗೋಷ್ಠಿ, ಶಿಬಿರ ಹಾಗೂ ಉತ್ಸವಗಳಲ್ಲಿ ನಮ್ಮ ಸಂಸ್ಕೃತಿಯನ್ನು ವಿಚಾರಕ್ಕೆ ಒಡ್ಡಿ ಒಂದಷ್ಟು ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. ವಿಜಯಂ ಸಮಿತಿಯ ಮೂಲಕ ಇನ್ನೂರಕ್ಕೂ ಹೆಚ್ಚು ಗ್ರಾಮೀಣ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುವ ಮೂಲಕ ಅನ್ನದಾನಕ್ಕೂ ಮುಂದಾಗಿದೆ.

ದೇವಸ್ಥಾನವೆಂದರೆ ಯಾರೂ ನಿರಾಕರಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ಬರುವಂತಹ ಸ್ಥಳವಿದು. ಹಾಗಾಗಿ ನಮ್ಮ ವಿಚಾರಗಳನ್ನು ಬಹುಬೇಗ ಜನರಿಗೆ ತಲುಪಿಸಬಹುದೆಂಬ ಆಲೋಚನೆಯಿಂದ ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಹೇಳುವ ಸಂಸ್ಥೆಯ ಕಾರ್ಯದರ್ಶಿ ವಿಜಯ ಲಕ್ಷ್ಮಿ ಇಂದಿನ ಪೀಳಿಗೆ ಕೆಟ್ಟದನ್ನು ಬೇಗ ಅಪ್ಪಿಕೊಳ್ಳುತ್ತಿದೆ, ಒಳ್ಳೆಯದರ ಕುರಿತು ಪ್ರಜ್ಞೆ ಮೂಡಿಸುವ ಭಾಗವಾಗಿ ಉತ್ಸವ ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂಬ ಸಾರ್ಥಕ್ಯ ಅವರಿಗಿದೆ.

ಎಲ್ಲೆಲ್ಲಿ ಗುಡಿಯ ಸಂಭ್ರಮ

ಮಹಾನಗರಿಯ ಪ್ರಮುಖ 20 ದೇವಾಲಯಗಳಲ್ಲಿ ಈ ಉತ್ಸವ ನಡೆಯಲಿದೆ.

ಬಸವನಗುಡಿಯ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ (ಜ.20-21),

ಬಸವನಗುಡಿಯ ಬುಗಲ್ ರಾಕ್ ಪಾರ್ಕ್ (ಜ.22)

ಹಲಸೂರಿನ ಸೋಮೇಶ್ವರ ದೇವಸ್ಥಾನ (ಜ.28-29)

ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನ, ನಂದಿ ತೀರ್ಥ, ಲಕ್ಷ್ಮಿ ನಾರಾಯಣ ಸ್ವಾಮಿ ದೇವಸ್ಥಾನ, ಶ್ರೀ ಗಂಗಮ್ಮ ದೇವಿ ದೇವಸ್ಥಾನ (ಫೆ.3-5)

ಗವಿಪುರಂ ಮತ್ತು ಹನುಮಂತ ನಗರದ ಗವಿಗಂಗಾ ಧರೇಶ್ವರ ದೇವಸ್ಥಾನ, ಹರಿಹರೇಶ್ವರ ದೇವಸ್ಥಾನ, ಗುಡ್ಡದ ಆಂಜನೇಯ ದೇವಸ್ಥಾನ, (ಫೆ.10-12)

ದೊಮ್ಮಲೂರಿನ ಶ್ರೀದೇವಿ ಭೂದೇವಿ ಸಮೇತ ಚೊಕ್ಕನಾಥಸ್ವಾಮಿ ದೇವಸ್ಥಾನ (ಫೆ18-19)

ಬನಶಂಕರಿಯ ವರಪ್ರದ ವೆಂಕಟೇಶ್ವರ ದೇವಸ್ಥಾನ (ಫೆ-24-26)

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ, ದೊಡ್ಡ ಬಸವನ ದೇವಸ್ಥಾನ, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬೇಡರ ಕಣ್ಣಪ್ಪ ದೇವಸ್ಥಾನ, ಬಾಲಪ್ರಸನ್ನ ಆಂಜನೇಯ ದೇವಸ್ಥಾನ, ನವಮಂತ್ರಾಲಯ ಮಂದಿರ, ಗೋವರ್ಧನಗಿರಿ ಪುತ್ತಿಗೆ ಮಠ ದೇವಸ್ಥಾನ (ಮಾ.2-4)

ಈ ದೇವಸ್ಥಾನಗಳ ಬಳಿ ಸೂಕ್ತ ವೇದಿಕೆಯನ್ನು ನಿರ್ಮಿಸಿ ಜಾನಪದ ನೃತ್ಯ, ಉಪನ್ಯಾಸ, ಚರ್ಚೆ ಮೊದಲಾದವುಗಳನ್ನು ಆಯೋಜಿಸಲಾಗುತ್ತದೆ.

ಗುಡಿಯ ಸಂಭ್ರಮದಲ್ಲಿ ಇಂದು...

ಉದ್ಘಾಟನಾ ಸಮಾರಂಭ: ಬಸವನಗುಡಿ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ, ಉದ್ಘಾಟನೆ- ಸಚಿವ ಗೋವಿಂದ ಕಾರಜೋಳ, ಸಂಜೆ 6.30.

ಸುಚಿತ್ರ ಫಿಲಂ ಮತ್ತು ನಾಟಕ ಕೇಂದ್ರ ತಂಡದಿಂದ ವೃಕ್ಷಕತೆ. ನಂತರ `ದಾನಶೂರ ಕರ್ಣ~ ನಾಟಕ ಪ್ರದರ್ಶನ: ಸುಚಿತ್ರ ಫಿಲಂ ನಾಟಕ ಕೇಂದ್ರ. ನಿದೇರ್ಶನ-ಪ್ರಕಾಶ್ ಬೆಳವಾಡಿ. ಸಂಜೆ 7.15.

ಪ್ರತಿಕ್ರಿಯಿಸಿ (+)