ವೃಕ್ಷ ರಸ್ತೆಗಳ ಬಡಾವಣೆ

7

ವೃಕ್ಷ ರಸ್ತೆಗಳ ಬಡಾವಣೆ

Published:
Updated:
ವೃಕ್ಷ ರಸ್ತೆಗಳ ಬಡಾವಣೆ

ವಿಮಾನ ನಿಲ್ದಾಣಕ್ಕೆ, ಯಾವುದೋ ರಸ್ತೆಗೆ ಹೆಸರಿಡುವಾಗ ಸ್ವಾತಂತ್ರ್ಯ ಯೋಧರ, ಚಲನಚಿತ್ರ ನಟ-ನಟಿಯರ, ಜಾತಿ ನಾಯಕರ, ಮಾಜಿ ರೌಡಿಗಳ ಹೆಸರುಗಳು ಸೇರಿದಂತೆ ತಲೆಗೊಂದು ಸಲಹೆ ಬರುವುದು ಸಹಜ. ಬೀದಿಗೆ ಇಡುವ ಹೆಸರನ್ನೇ ತಮ್ಮ ರಾಜಕೀಯ ಅನುಕೂಲಕ್ಕೆ ಬಳಸಿಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಇಂಥ ಸಂದರ್ಭದಲ್ಲಿ ರಸ್ತೆಗಳಿಗೆ ವೃಕ್ಷಗಳ ಹೆಸರನ್ನಿಟ್ಟು ಅದರ ಮೂಲಕವೇ ತಮ್ಮ ಮನೆಗಳ ವಿಳಾಸವನ್ನು ತಿಳಿಸುವ ಹೊಸ ಪರಿಪಾಠವನ್ನು ನಗರದ ಹೆಣ್ಣೂರು ಬಂಡೆ ಬಳಿ ಇರುವ ಭೈರವೇಶ್ವರ ಬಡಾವಣೆಯ ನಾಗರಿಕರು ಆರಂಭಿಸಿದ್ದಾರೆ.ಇದೊಂದು ಪುಟ್ಟ ಬಡಾವಣೆ. ಇಲ್ಲಿರುವುದು 22 ಬೀದಿಗಳು ಮಾತ್ರ. ಪಾರಿಜಾತ, ಮಂದಾರ, ಇಳಂಜಿ, ಚಂಪಕ, ಬಿಲ್ವ, ಅರಳಿ, ಬಾದಾಮಿ, ಸಂಪಿಗೆ, ಗುಲ್‌ಮೊಹರ್, ಚಂದನ, ಅಶೋಕ, ಬೋಧಿ ಇತ್ಯಾದಿ ಸೇರಿದಂತೆ ಇಲ್ಲಿನ ಹತ್ತೊಂಬತ್ತು ಬೀದಿಗಳಿಗೂ ಒಂದೊಂದು ವೃಕ್ಷಗಳ ಹೆಸರು. ಅವುಗಳಲ್ಲಿ ಕೆಲವು ಹಣ್ಣುಗಳನ್ನು ನೀಡುವ ವೃಕ್ಷಗಳಾದರೆ, ಇನ್ನು ಕೆಲವು ಬಣ್ಣದ ಹೂವುಗಳನ್ನು ಬಿಡುವಂಥವು. ಮತ್ತೂ ಕೆಲವು ಸುಗಂಧ ಬೀರುವ ಹೂವುಗಳಿಂದ ಈ ಬಡಾವಣೆಯ ಎಲ್ಲೆಲ್ಲೂ ಹಕ್ಕಿಗಳ ಇಂಚರ, ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ. ಕಣ್ಣಿಗೆ ಹೂಗಳ ಅಂದ, ಇದರಿಂದ ಇಡೀ ಬಡಾವಣೆಯೇ ಹಸಿರು ಹೊದ್ದು ನವ ವಧುವನಂತೆ ನಿತ್ಯ ಕಂಗೊಳಿಸುತ್ತಿದೆ.ಇವೆಲ್ಲ ಆರಂಭವಾದದ್ದು ಆರು ವರ್ಷಗಳ ಹಿಂದೆ (2007). ಭೈರವೇಶ್ವರ ಬಡಾವಣೆಯ ಬೀದಿಗಳಿಗೆ ಹೆಸರು ಇಡಬೇಕು ಎಂದು ನಿರ್ಧರಿಸಲಾಯಿತು. ಅದರಂತೆ ಭೈರವೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿಯು ಬಡಾವಣೆಯ ನಿವಾಸಿಗಳನ್ನು ಕರೆದು ಈ ಕುರಿತು ಚಿಂತಿಸಿ ಸೂಕ್ತ ಹೆಸರುಗಳೊಂದಿಗೆ ಮುಂದಿನ ಸಭೆಗೆ ಹಾಜರಾಗಲು ಸೂಚಿಸಲಾಯಿತು. ಎಲ್ಲಾ ಬಡಾವಣೆಗಳಲ್ಲೂ ಇಡುವಂತೆ ಸ್ವಾತಂತ್ರ್ಯ ಯೋಧರ, ರಾಷ್ಟ್ರ ನಾಯಕರ, ಧಾರ್ಮಿಕ ನಾಯಕರ ಇತ್ಯಾದಿ ಹೆಸರುಗಳನ್ನು ಇಡಬೇಕೆಂಬ ಸಲಹೆಗಳು ಕೇಳಿಬಂದವು. ಅಂತಿಮವಾಗಿ ಬಡಾವಣೆಯ ನಿವಾಸಿ ರೀನಾ ಕಪ್ಪನ್ ವೃಕ್ಷಗಳ ಹೆಸರನ್ನಿಡಲು ಸೂಚಿಸಿದಾಗ ಕ್ಷಣ ಕಾಲ ಎಲ್ಲರೂ ಸ್ತಬ್ಧವಾದರೂ ಯಾವುದೇ ವಿರೋಧವಿಲ್ಲದೆ ಅದನ್ನು ಒಪ್ಪಿಕೊಂಡರು.ಇದರ ಫಲವಾಗಿಯೇ ಮೊದಲ ವರ್ಷ ಬಡಾವಣೆಯ ನಾಗರಿಕರೇ ತಲಾ 145 ರೂಪಾಯಿ ಹಣ ನೀಡಿ ಮನೆ ಮುಂದೆ ಒಂದೊಂದು ಗಿಡ, ಅದಕ್ಕೆ ರಕ್ಷಣಾ ಬೇಲಿ ಪಡೆದು, ನಿತ್ಯ ಅದಕ್ಕೊಂದಿಷ್ಟು ನೀರು ಹಾಕಿ ಬೆಳೆಸಿದರು. ಹೀಗೆ ನೆಟ್ಟಿದ್ದು 44 ಗಿಡಗಳು. ಬಡಾವಣೆಯ ಮಣ್ಣು ಅಷ್ಟೇನೂ ಉತ್ತಮ ಗುಣಮಟ್ಟದ್ದಾಗಿರಲಿಲ್ಲ. ಆದರೆ ಬಡಾವಣೆ ನಿವಾಸಿಗಳ ಮುತುವರ್ಜಿ ಹಾಗೂ ಆರೈಕೆಯೇ ಈ ಗಿಡಗಳನ್ನು ಇಂದು ಬೆಳೆದು ನೆರಳು ನೀಡುವಂತೆ ಮಾಡಿದೆ. ಇವರ ಈ ಯೋಜನೆಗೆ ನೆರವಾದವರು ಪರಿಸರವಾದಿ ಯಲ್ಲಪ್ಪ ರೆಡ್ಡಿ. ಅವರ ಮಾರ್ಗದರ್ಶನದಲ್ಲೇ ಬಡಾವಣೆಯಲ್ಲಿ 15-20 ವಿವಿಧ ಪ್ರಭೇದಗಳ ಸಸ್ಯಗಳನ್ನು ನೆಡಲಾಗಿದೆ. ಈ ಮೂಲಕ ನೆರಳು ಹಾಗೂ ಶುದ್ಧಗಾಳಿಯ ಜತೆಗೆ ಪ್ರಾಣಿ, ಪಕ್ಷಿಗಳಿಗೆ ಆಶ್ರಯತಾಣಗಳನ್ನು ನೀಡುವ ಮೂಲಕ ಪರಿಸರದ ಸಮತೋಲನ ಕಾಪಾಡಲು ತಮ್ಮ ಕೈಲಾದ ಶ್ರಮ ವಹಿಸಿದ್ದಾರೆ.ಮೂರು ವರ್ಷ ಬಡಾವಣೆಯ ನಿವಾಸಿಗಳೇ ಮರ ನೆಡುವ ಕಾರ್ಯದಲ್ಲಿ ತೊಡಗಿಕೊಂಡರು. ನಂತರದ ವರ್ಷದಲ್ಲಿ ಬಡಾವಣೆಯ ವೃಕ್ಷ ಪ್ರೀತಿಯನ್ನು ಗಮನಿಸಿ ಬಿಬಿಎಂಪಿ ಕೂಡ ಇವರ ಕಾಳಜಿಗೆ ಸಹಮತ ವ್ಯಕ್ತಪಡಿಸಿ ಈಗ ಪಾಲಿಕೆಯೂ ಇವರೊಂದಿಗೆ ಕೈಜೋಡಿಸಿದೆ. ಈಗ ಬಡಾವಣೆಯಲ್ಲಿ 300ಕ್ಕೂ ಅಧಿಕ ಮರಗಿಡಗಳಿವೆ. ಪ್ರತಿವರ್ಷ ಅರಣ್ಯ ಇಲಾಖೆ ಈ ಬಡಾವಣೆಗೆ ಸಸಿಗಳನ್ನು ಪೂರೈಸುತ್ತದೆ. ವಿದ್ಯುತ್ ತಂತಿ ಇರುವ ಬದಿಯಲ್ಲಿ ಕಡಿಮೆ ಎತ್ತರದ ಸಸ್ಯಗಳು, ಮತ್ತೊಂದು ಬದಿಯಲ್ಲಿ ಎತ್ತರದ ಗಿಡಗಳನ್ನು ನೆಡಲಾಗಿದೆ. ಜತೆಗೆ ಆಯಾ ಪ್ರಭೇದದ ಮರಗಳು ಹೆಚ್ಚಿರುವ ಬೀದಿಗೆ ಅದೇ ಹೆಸರನ್ನು ಇಡಲಾಗಿದೆ.`150 ಮನೆಗಳಿರುವ ಈ ಬಡಾವಣೆಯಲ್ಲಿ ಮರಗಳ ಹೆಸರುಗಳಿಂದ ಆಯಾ ಬೀದಿಯನ್ನು ಕರೆಯುವುದು ಹೆಚ್ಚು ಆಪ್ತವೆನಿಸುತ್ತದೆ. ಬೆಳಿಗ್ಗೆಯಾಗುತ್ತಲೇ ಹಕ್ಕಿಗಳ ಕಲರವ, ಬಿಸಿಲ ಝಳದಿಂದ ರಕ್ಷಣೆ, ಉತ್ತಮ ಗಾಳಿಯನ್ನು ಇಡೀ ಬಡಾವಣೆಯವರು ಪಡೆಯುತ್ತಿದ್ದೇವೆ. ಇದರೊಂದಿಗೆ ಟ್ಯಾಕ್ಸಿ ಡ್ರೈವರ್‌ಗಳು, ಕಟ್ಟಡ ಕಾರ್ಮಿಕರು ಇಲ್ಲಿರುವ ಮರದ ಕೆಳಗೆ ಊಟ ಮುಗಿಸಿ, ತಣ್ಣಗೆ ನಿದ್ರೆ ಮಾಡುತ್ತಾರೆ. ದೂಳು ಕಡಿಮೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಬಡಾವಣೆಗೆ ಹೊಸ ಮೆರಗು ಬಂದಿದೆ' ಎಂದು ಬಡಾವಣೆಯ ಸಿ.ಎಫ್.ಜಾನ್ ಹೆಮ್ಮೆಪಡುತ್ತಾರೆ.`ಬಡಾವಣೆಯ ಬೀದಿಗಳಿಗೆ ಹೆಸರನ್ನಿಡಲು ನಿರ್ಧರಿಸಿದಾಗ ಅದಕ್ಕೊಂದು ಸಮಿತಿ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಎಂದು ಪಾಲಿಕೆ ಸದಸ್ಯ ಗೋವಿಂದರಾಜ್ ಸೂಚಿಸಿದರು. ಅದರಂತೆಯೇ ಏಳು ಸದಸ್ಯರ ಸಮಿತಿಯೊಂದನ್ನು ರಚಿಸಿ ಯಾವ ಬಗೆಯ ಹೆಸರನ್ನು ಇಡಬೇಕೆಂದು ಚರ್ಚಿಸಲಾಯಿತು. ಆಯಾ ಬೀದಿಗೆ ಒಬ್ಬರಂತೆ ಆಯ್ಕೆ ಮಾಡಿ, ಅವರು ಆ ಬೀದಿಯ ಉಳಿದ ನಿವಾಸಿಗಳೊಂದಿಗೆ ಚರ್ಚಿಸಿ ಹೆಸರು ನಿರ್ಧರಿಸಿ ಅದನ್ನು ಸಮಿತಿಯ ಮುಂದೆ ಇಡಲಾಯಿತು. ಒಂದಕ್ಕಿಂತ ಹೆಚ್ಚು ಬೀದಿಗಳಿಗೆ ಒಂದೇ ಹೆಸರು ಇಡದಂತೆ ಎಚ್ಚರ ವಹಿಸಲಾಯಿತು. ಮನೆ ಮುಂದೆ ನೆಡಲಾದ ಗಿಡಗಳಿಗೆ ಆಯಾ ಮನೆಯವರೇ ನೀರು, ಗೊಬ್ಬರ, ರಕ್ಷಣಾ ಬೇಲಿಗಳ ಜವಾಬ್ದಾರಿ ಹೊತ್ತುಕೊಳ್ಳುವಂತೆ ಸೂಚಿಸಲಾಯಿತು. ಜತೆಗೆ ಮಕ್ಕಳ ತಂಡ ಕಟ್ಟಿಕೊಂಡು ಗಿಡಗಳ ಆರೈಕೆ ಮಾಡುವ ಪ್ರಕ್ರಿಯೆಯೂ ಶುರುವಾಯಿತು' ಎಂದು ಜಾನ್ ಬಡಾವಣೆಯ ಜನರ ವೃಕ್ಷಪ್ರೀತಿಯನ್ನು ಹಂಚಿಕೊಂಡರು.`ಇದೀಗ ಗಿಡಗಳ ದಾಖಲಾತಿ ನಡೆಸುವ ಯೋಜನೆ ಇದೆ. ಜತೆಗೆ ಆಯಾ ಗಿಡಗಳ ಗುಣಲಕ್ಷಣಗಳನ್ನು ತಿಳಿಸುವ ಹಾಗೂ ಅವುಗಳಿಂದ ಆಗುವ ಲಾಭದ ಕುರಿತು ವರದಿ ಸಿದ್ಧಪಡಿಸಲು ಚಿಂತನೆ ನಡೆಸಲಾಗುತ್ತಿದೆ. ಹೀಗೆ ಸಿದ್ಧಗೊಂಡ ವರದಿಯನ್ನು ಇತರರಿಗೂ ಹಂಚುವ ಯೋಜನೆ ಇದೆ' ಎನ್ನುವ ಅವರ ನುಡಿ ನಗರದಲ್ಲಿ ಅಪರೂಪವೆನ್ನಿಸುವ ದೊಡ್ಡ ಆಶಾವಾದದಂತೆ ಕಾಣುತ್ತದೆ.ವಿವಿಧ ಮರಗಳನ್ನು ನೆಟ್ಟು ಪ್ರಾಣ ವಾಯು ಹೆಚ್ಚಿಸಿ

ಬಡಾವಣೆಗಳಲ್ಲಿ ವಿವಿಧ ಜಾತಿಯ ಮರಗಳು ಇದ್ದಲ್ಲಿ ಅಲ್ಲಿ ಪರಿಸರ ಸಮತೋಲನ ಕಾಪಾಡಿದಂತೆ. ಅದರಂತೆ ಕೆಲವು ಪ್ರಭೇದಗಳ ಮರಗಳಿಗೆ ಕೆಲವು ಬಗೆ ವಿಶಿಷ್ಟ ಗುಣಗಳಿರುತ್ತವೆ. ಉದಾಹರಣೆಗೆ ಬೇವಿನ ಮರಗಳು ಇದ್ದಲ್ಲಿ ದೇಹದ ಮೇಲೆ ದಾಳಿ ಮಾಡುವ ವೈರಾಣು ಹಾಗೂ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ. ಇದರಿಂದ ಬಡಾವಣೆಯಲ್ಲಿ ಚಿಟ್ಟೆಗಳು, ಜೇನು, ಪಕ್ಷಿ ಸಂಕುಲಗಳ ಸಂಖ್ಯೆ ಹೆಚ್ಚುವುದರಿಂದ ಪರಾಗ ಕ್ರಿಯೆ ನಡೆದು ಬಡಾವಣೆಯಲ್ಲಿ ಸದಾ ಒಂದಿಲ್ಲೊಂದು ಗಿಡ-ಮರ ಹೂ, ಹಣ್ಣುಗಳನ್ನು ಬಿಡುತ್ತಲೇ ಇರುತ್ತದೆ. ಹೀಗಾಗಿ ಪರಿಸರ ಸಮತೋಲನ, ಸುಗಂಧದ ಪರಿಮಳ, ಪ್ರಾಣವಾಯು ಹೆಚ್ಚಾಗಲಿದೆ. ಇದೇ ರೀತಿ ಎಲ್ಲಾ ಬಡಾವಣೆಯವರು ವೃಕ್ಷ ಪ್ರೇಮ ಹೆಚ್ಚಿಸಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿದಲ್ಲಿ ವಾಯುಮಾಲಿನ್ಯ ತಗ್ಗಿಸುವುದರ ಜತೆಗೆ ಶುದ್ಧ ಗಾಳಿಯ ಪ್ರಮಾಣವನ್ನು ಹೆಚ್ಚಿಸಬಹುದು.     ಯಲ್ಲಪ್ಪ ರೆಡ್ಡಿ, ಪರಿಸರವಾದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry