ಸೋಮವಾರ, ಮಾರ್ಚ್ 1, 2021
24 °C
ಪರ್ಯಾಯ ದರ್ಬಾರ್‌ನಲ್ಲಿ ಮಾತನಾಡಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ

ವೃಕ್ಷ ಸಂಪತ್ತು ವೃದ್ಧಿಗೆ ಉಚಿತ ಗಿಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೃಕ್ಷ ಸಂಪತ್ತು ವೃದ್ಧಿಗೆ ಉಚಿತ ಗಿಡ

ಉಡುಪಿ: ‘ಪರ್ಯಾಯದ ಅವಧಿಯಲ್ಲಿ ಭಕ್ತರಿಗೆ ಗಿಡಗಳನ್ನು ನೀಡುವ ಮೂಲಕ ವೃಕ್ಷ ಸಂಪತ್ತು ವೃದ್ಧಿಸಲಾಗುತ್ತದೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.ಪರ್ಯಾಯ ಪೀಠಾರೋಹಣದ ನಂತರ ಆನಂದತೀರ್ಥ ಮಂಟಪದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಮಾತನಾಡಿದ ಅವರು, ‘ಶ್ರೀಕೃಷ್ಣ ಸಹ ವನಸಂಪತ್ತು, ಗಿಡ, ಮರಗಳನ್ನು ಪ್ರೀತಿಸುತ್ತಿದ್ದ. ವೃಕ್ಷ ಸಂಪತ್ತು ವೃದ್ಧಿ ಇಂದಿನ ಅಗತ್ಯವಾಗಿರುವುದರಿಂದ ಎಲ್ಲ ಭಕ್ತರಿಗೆ ಗಿಡಗಳನ್ನು ನೀಡಲಾಗುವುದು. ದುಶ್ಚಟಗಳಿಂದ ಮುಕ್ತಿ ನೀಡಲು‘ ದುರ್ವ್ಯಸನ ಮುಕ್ತಿ ಹುಂಡಿ’ಯನ್ನು ಇಡಲಾಗುವುದು. ತಮಗಿರುವ ದುಶ್ಚಟಗಳ ವಿವರವನ್ನು ಚೀಟಿಯಲ್ಲಿ ಬರೆದು ಹುಂಡಿಯಲ್ಲಿ ಹಾಕುವ ಮೂಲಕ ಅದರಿಂದ ಮುಕ್ತಿಹೊಂದಬೇಕು ಎಂಬುದು ಚಿಂತನೆಯಾಗಿದೆ. ವೃದ್ಧರಿಗಾಗಿ ಉಡುಪಿ ನಗರ ಅಥವಾ ಪಾಜಕದಲ್ಲಿ ವೃದ್ಧಾಶ್ರಮ ನಿರ್ಮಿಸಲಾಗುವುದು’ ಎಂದು ಹೇಳಿದರು.‘ಶೂದ್ರರು, ದಲಿತರು ನಿತ್ಯನಾರಕಿಗಳು ಎಂದು ಮಧ್ವಾಚಾರ್ಯರು ಹೇಳಿದ್ದಾರೆ ಎಂದು ಪೂರ್ವಾಗ್ರಹಪೀಡಿತ ಬುದ್ಧಿಜೀವಿಗಳು ಆರೋಪ ಮಾಡಿದ್ದಾರೆ. ಜಾತಿ ಯಾವುದೇ ಇರಲಿ ಕರ್ತವ್ಯ ನಿಷ್ಠೆಯಿದ್ದರೆ ಭಗವಂತನ ಅನುಗ್ರಹ ಪಡೆಯಬಹುದು ಎಂದು ಆಚಾರ್ಯರು ಹೇಳಿದ್ದಾರೆ. ಆದ್ದರಿಂದ, ನಿತ್ಯನಾರಕಿಗಳು ಎಂದು ಎಲ್ಲಿ ಹೇಳಿದ್ದಾರೆ ಎಂದು ತೋರಿಸಿ ಸಾಬೀತುಪಡಿಸಬೇಕು, ಇಲ್ಲದಿದ್ದರೆ ಕ್ಷಮೆ ಯಾಚಿಸಬೇಕು’ ಎಂದು ಅವರು ಆಗ್ರಹಿಸಿದರು.‘ಕ್ರೈಸ್ತರು, ಮುಸಲ್ಮಾನರು ಎಲ್ಲರೂ ಸಹಕಾರ ನೀಡುವ ಮೂಲಕ ಪರ್ಯಾಯವನ್ನು ಸೌಹಾರ್ದ ಪರ್ಯಾಯವನ್ನಾಗಿ ಮಾಡಿದ್ದಾರೆ’ ಎಂದು ಹೇಳಿದರು.‘ಪೇಜಾವರ ಸ್ವಾಮೀಜಿ ಅವರು ಐದನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡುವ ಮೂಲಕ ಹೊಸ ಅಧ್ಯಾಯವೊಂದು ಆರಂಭವಾಗಿದೆ. ನೂರಾರು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿದ್ದರೂ ಈವರೆಗೆ ಇಂತಹ ಅದ್ವಿತೀಯ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ’ ಎಂದು ಸಂಸದ ಎಲ್‌.ಕೆ. ಅಡ್ವಾಣಿ ಹೇಳಿದರು.ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾತನಾಡಿ, ‘ಎಲ್ಲರನ್ನೂ ಸಮಾನಾಗಿ ನೋಡಿ ಅಸ್ಪೃಶ್ಯತೆ ವಿರುದ್ಧ ಹೋರಾಟ ಆರಂಭಿಸಿದ ಪೇಜಾವರ ಶ್ರೀಗಳು ಸಮಾಜ ಸುಧಾರಕರಾಗಿದ್ದಾರೆ. ಕೇವಲ ಸಂದೇಶ ನೀಡುವುದು ಮಾತ್ರವಲ್ಲದೆ ಅದನ್ನು ಸ್ವತಃ ಪಾಲಿಸುತ್ತಿದ್ದಾರೆ. ಸಾವಿರಾರು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ದೇಶದಲ್ಲಿ ಭಾರಿ ಬದಲಾವಣೆಯನ್ನು ತರಲು ಅವರು ಪ್ರಯತ್ನಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಪಶುಸಂಗೋಪನಾ ಸಚಿವ ಎ. ಮಂಜು ಅವರು ಪೇಜಾವರ ಮಠದ ಗೋಶಾಲೆಗೆ ₹ 34 ಲಕ್ಷ ಸಹಾಯ ಧನದ ಚೆಕ್‌ ನೀಡಿದರು.ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ, ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ, ವಿಧಾನಪರಿಷತ್‌ ಸಭಾಪತಿ ಡಿ.ಎಚ್‌. ಶಂಕರ ಮೂರ್ತಿ, ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಕೇಂದ್ರ ಸಚಿವರಾದ ಅನಂತ್‌ ಕುಮಾರ್‌, ಉಮಾ ಭಾರತಿ, ಸಚಿವರಾದ ಆರ್‌.ವಿ. ದೇಶಪಾಂಡೆ, ಮನೋಹರ್ ತಹಸೀಲ್ದಾರ್‌, ಎಚ್‌. ಆಂಜನೇಯ, ವಿನಯ ಕುಮಾರ್ ಸೊರಕೆ, ಎಚ್‌.ಕೆ. ಪಾಟೀಲ್‌, ಸಂಸದರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ವೀರಪ್ಪ ಮೊಯಿಲಿ, ಆಸ್ಕರ್‌ ಫರ್ನಾಂ ಡಿಸ್‌, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ನಗರಸಭೆ ಅಧ್ಯಕ್ಷ ಪಿ. ಯುವರಾಜ ಉಪಸ್ಥಿತರಿದ್ದರು.ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ ಹಾಗೂ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ದರ್ಬಾರ್‌ ಸಭೆಯಲ್ಲಿ ಭಾಗವಹಿಸಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.