ಶನಿವಾರ, ಮೇ 28, 2022
22 °C

ವೃತ್ತಿಗೆ ನಿವೃತ್ತಿಯಿದೆ ಪ್ರವೃತ್ತಿಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಪಿಯುಸಿ ಓದುವಾಗಿನಿಂದ ಬೆಳಿಗ್ಗೆ 4 ಗಂಟೆಗೆ ಎದ್ದು ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕೆಗಳನ್ನು ಹಂಚುತ್ತ ಬಿಸಿಎ ಮುಗಿಸಿದೆ. ಎಲ್ಲ ವಿದ್ಯಾರ್ಥಿಗಳು ತಂದೆ-ತಾಯಿಗೆ ಭಾರವಾಗದೆ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಪತ್ರಿಕೆ ವಿತರಕ ವಿಶಾಲ ಅಭಿಪ್ರಾಯಪಟ್ಟರು.ನಗರದ ಚಂದ್ರಶೇಖರ ಪಾಲಿಟೆಕ್ನಿಕ್ ವಸತಿ ನಿಲಯದಲ್ಲಿ ಶರಣ ಸಂಸ್ಕೃತಿ ವೇದಿಕೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಗಾಂಧೀವಾದಿ ಅಣ್ಣಾ ಹಜಾರೆ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿದ ದಿ. ಕಾಗಲಕರ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಸ್.ಆರ್. ಮಣೂರ, ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಮಾತನಾಡಿ, ಸರ್ಕಾರಿ ನೌಕರರಿಗೆ ಸೇವೆಯಿಂದ ನಿವೃತ್ತಿ ಹೊರತು ಅವರ ಪ್ರವೃತ್ತಿಗೆ ಅಲ್ಲ.ನಾಡುನಾದ್ಯಂತ ಶರಣ ಸಂಸ್ಕ್ಕೃತಿಯನ್ನು ತಮ್ಮ ರೂಪಕಗಳ ಮೂಲಕ ಪ್ರಚುರಪಡಿಸಿದ ಅಮರಪ್ರಿಯ ಹಿರೇಮಠ ಅವರು ತಮ್ಮ ಸಂಗೀತ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಇದೀಗ ಸಾಕಷ್ಟು ಸಮಯ ದೊರೆತಿದೆ. ಅವರಿಂದ ಇನ್ನಷ್ಟು ಸಮಾಜ ಸೇವೆ ಕೆಲಸ ನಡೆಯಲಿ ಎಂದು ಅಭಿಪ್ರಾಯಪಟ್ಟರು.ಸೇವಾ ನಿವೃತ್ತಿ ಹೊಂದಿದ ಅಮರಪ್ರಿಯ ಹಿರೇಮಠ, ಕೋಡ್ಲಿ ಕಂಟೆಪ್ಪ ಮಾಸ್ತರ ಪ್ರತಿಷ್ಠಾನದ ರಂಗ ದಿಗ್ಗಜ ಪ್ರಶಸ್ತಿ ಪುರಸ್ಕೃತ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ, ಪತ್ರಿಕೆ ವಿತರಕರಾದ ಸಂಜೀವ, ಮಹಾದೇವ, ಕೇಶವ ಅವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸೂರ್ಯಕಾಂತ ಕದಮ್, ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಹಿರಿಯ ರಂಗಕರ್ಮಿ ಈಶ್ವರಪ್ಪ ಫರಹತಾಬಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಚಕ್ಕಿ ಪ್ರಾರ್ಥಿಸಿದರು. ಸಿದ್ದಣ್ಣ ಕೋಲಾರ ನಿರೂಪಿಸಿದರು. ಮಾಣಿಕ ನಾಗೊಂಡ ಸ್ವಾಗತಿಸಿದರು. ಪದ್ಮಾವತಿ ಅಂಬೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಶಾಬಾದಿ, ಶಂಕರ ಬಿರಾದಾರ, ಗುಂಡಣ್ಣ ಡಿಗ್ಗಿ, ಸಂತೋಷ ತೋಟ್ನಳ್ಳಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.