ವೃತ್ತಿಶಿಕ್ಷಣ ಪ್ರವೇಶ: ಸಿಇಟಿ ಸಡಿಲ, ಕಾಮೆಡ್-ಕೆ ಪ್ರಬಲ

7

ವೃತ್ತಿಶಿಕ್ಷಣ ಪ್ರವೇಶ: ಸಿಇಟಿ ಸಡಿಲ, ಕಾಮೆಡ್-ಕೆ ಪ್ರಬಲ

Published:
Updated:
ವೃತ್ತಿಶಿಕ್ಷಣ ಪ್ರವೇಶ: ಸಿಇಟಿ ಸಡಿಲ, ಕಾಮೆಡ್-ಕೆ ಪ್ರಬಲ

ಎಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ರಾಜ್ಯದಲ್ಲಿ 1994ರಿಂದ ಜಾರಿಗೆ ಬಂದಿರುವ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ವ್ಯವಸ್ಥೆಯ ಬುಡವೇ ಅಲುಗಾಡುತ್ತಿದೆ. ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ಹಗ್ಗಜಗ್ಗಾಟದಿಂದಾಗಿ ಸಾಮಾಜಿಕ ನ್ಯಾಯದ ಮೂಲ ಆಶಯವೇ ಭಂಗಗೊಂಡಿದೆ. ಸಿಇಟಿ ವ್ಯವಸ್ಥೆ ಜಾರಿಗೆ ಬಂದ ಆರಂಭದ ವರ್ಷಗಳಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿತ್ತು. ಇದು ಅತ್ಯುತ್ತಮವಾದ ವ್ಯವಸ್ಥೆ ಎಂದು ಮೆಚ್ಚುಗೆ ಸೂಚಿಸಿದ ಹಲವು ರಾಜ್ಯಗಳು ಈ ಮಾದರಿಯನ್ನೇ ಅನುಸರಿಸಿದ್ದವು. ಆದರೆ ಇತ್ತೀಚಿನ ಏಳೆಂಟು ವರ್ಷಗಳಲ್ಲಿ ರಾಜ್ಯದಲ್ಲಿ ಸಿಇಟಿ ವ್ಯವಸ್ಥೆಯ ಬೇರುಗಳು ಸಡಿಲಗೊಳ್ಳುತ್ತಿದ್ದು, ಈಗ ಅದರ ಬುಡಕ್ಕೇ ಕೊಡಲಿ ಏಟು ಬೀಳುವ ಆತಂಕ ಎದುರಾಗಿದೆ.

ಈ ವ್ಯವಸ್ಥೆ ಜಾರಿಗೆ ಬಂದಾಗ ಶೇ 85ರಷ್ಟು ಸೀಟುಗಳು ಸರ್ಕಾರಿ ಕೋಟಾದ ಮೂಲಕವೇ ಹಂಚಿಕೆಯಾಗುತ್ತಿದ್ದವು. ಆದರೆ ಇಂದು ಅರ್ಧದಷ್ಟು ಸೀಟುಗಳು ಸಹ ಸರ್ಕಾರಕ್ಕೆ ಸಿಗುತ್ತಿಲ್ಲ. ಈಗ ಸಿಇಟಿ ವ್ಯವಸ್ಥೆ ಬಹುತೇಕ ಖಾಸಗಿಯವರ ಹಿಡಿತಕ್ಕೆ ಸಿಲುಕಿದ್ದು, ಶೇ 60ರಿಂದ 80ರಷ್ಟು ಸೀಟುಗಳು ಅವರ ಪಾಲಾಗಿವೆ. ಅಲ್ಲದೆ ಶುಲ್ಕವೂ ಸಾಕಷ್ಟು ದುಬಾರಿಯಾಗಿದೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಂದೊಂದು ದಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಸಂಪೂರ್ಣವಾಗಿ ಸರ್ಕಾರದ ಕೈತಪ್ಪಿ ಹೋಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ರಾಜ್ಯದಲ್ಲಿ ಸಿಇಟಿ ವ್ಯವಸ್ಥೆ ಜಾರಿಗೆ ಬರುವ ಮುನ್ನ ಎಂಜಿನಿಯರಿಂಗ್, ವೈದ್ಯಕೀಯದಂತ ವೈದ್ಯಕೀಯ ಕೋರ್ಸ್‌ಗಳಿಗೆ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ವೈದ್ಯಕೀಯ ನಿರ್ದೇಶನಾಲಯ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತಿತ್ತು. 1983ರಿಂದ 93ರವರೆಗೆ ತಾಂತ್ರಿಕ ಶಿಕ್ಷಣ ಮಂಡಳಿಯೇ ಪ್ರವೇಶ ಪರೀಕ್ಷೆ ನಡೆಸಿ ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿತ್ತು. ಆದರೆ ಆಗ ಪಾರದರ್ಶಕವಾದ ವ್ಯವಸ್ಥೆ ಇರಲಿಲ್ಲ. ವೈದ್ಯಕೀಯ ಸೀಟುಗಳ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಇದರಲ್ಲಿ ಪ್ರಭಾವಿ ರಾಜಕಾರಣಿ ಗಳು, ಗಣ್ಯರ ಮಕ್ಕಳ ಪಾತ್ರವೂ ಇತ್ತು ಎಂಬುದನ್ನು ಅಲ್ಲಗಳೆ ಯುವಂತಿಲ್ಲ. ಆಗೆಲ್ಲ ದುಡ್ಡಿದವರು ಮಾತ್ರ ಸೀಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. 1980-85ರ ಸುಮಾರಿಗೆ ರಾಜ್ಯದಲ್ಲಿ ಲಕ್ಷಾಂತರ ರೂಪಾಯಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೀಟು ಗಳು ಮಾರಾಟವಾದ ಹಲವು ಪ್ರಕರಣಗಳಿವೆ.ಹೀಗಾಗಿ ವ್ಯವಸ್ಥೆಯ

ಮೇಲೆ ನಂಬಿಕೆಯೇ ಇರಲಿಲ್ಲ. ‘ಸೀಟು ಹಂಚಿಕೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ಉತ್ತಮ ಅಂಕಗಳನ್ನು ಗಳಿ ಸಿದ್ದರೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಸಿಗುವುದಿಲ್ಲ. ಕಾಲೇಜು ಬದಲಾವಣೆ ಮಾಡಿಕೊಳ್ಳಬೇಕಾದರೆ ಎರಡು ತಿಂಗಳಾಗುತ್ತದೆ’ ಎಂಬ ಅನೇಕ ದೂರುಗಳು ಆಗ ಕೇಳಿ ಬರುತ್ತಿದ್ದವು.

ಇಂತಹ ಪರಿಸ್ಥಿತಿ ಇರುವಾಗಲೇ ಸುಪ್ರೀಂ ಕೋರ್ಟ್ 1993ರಲ್ಲಿ ಉನ್ನಿಕೃಷ್ಣನ್ ಪ್ರಕರಣದಲ್ಲಿ ನೀಡಿದ ಐತಿಹಾಸಿಕ ತೀರ್ಪು ಲಕ್ಷಾಂತರ ಮಂದಿ ವಿದ್ಯಾರ್ಥಿಗಳು, ಪೋಷಕರಿಗೆ ವರದಾನವಾಗಿ ಪರಿಣಮಿಸಿತು. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಶೇ 85ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು, ಕೇವಲ ಶೇ 15ರಷ್ಟು ಸೀಟುಗಳನ್ನು ಮಾತ್ರ ಆಡಳಿತ ಮಂಡಳಿ ಕೋಟಾದಡಿ ಭರ್ತಿ ಮಾಡಿಕೊಳ್ಳಬಹುದಾಗಿದೆ ಎಂದು ನ್ಯಾಯಾಲಯ ಹೇಳಿತು.

ಎಲ್ಲ ರಾಜ್ಯಗಳು ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆಸಬೇಕಾದುದು ಕಡ್ಡಾಯ ಎಂದು ನ್ಯಾಯಮೂರ್ತಿ ಜೀವನರೆಡ್ಡಿ ನೇತೃತ್ವದ ನ್ಯಾಯ ಪೀಠ ಐತಿಹಾಸಿಕ ತೀರ್ಪು ನೀಡಿತು. ಖಾಸಗಿ ಶಿಕ್ಷಣ ಸಂಸ್ಥೆಗಳ ಕಪಿಮುಷ್ಟಿಯಿಂದಾಗಿ ಬಡವರು, ಮಧ್ಯಮ ವರ್ಗದವರಿಗೆ ಆಗುತ್ತಿರುವ ಅನ್ಯಾಯ ಹಾಗೂ ಸಾಮಾಜಿಕ ನ್ಯಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ತೀರ್ಪನ್ನು ನೀಡಲಾಯಿತು ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ.

ಸುಪ್ರೀಂ ಕೋರ್ಟ್ 1993ರಲ್ಲಿ ನೀಡಿದ ಈ ತೀರ್ಪನ್ನು ಆಧರಿಸಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ‘ಸಾಮಾನ್ಯ ಪ್ರವೇಶ ಪರೀಕ್ಷೆ’ (ಸಿಇಟಿ) ನಡೆಸುವ ದಿಟ್ಟಕ್ರಮವನ್ನು ಕೈಗೊಂಡವರು ಆಗ ಮುಖ್ಯಮಂತ್ರಿ ಆಗಿದ್ದ ಎಂ.ವೀರಪ್ಪ ಮೊಯಿಲಿ. ಆ ಕಾಲದಲ್ಲಿ ಅವರಿಗೆ ಬೆಂಬಲವಾಗಿ ನಿಂತವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ತೆರೇಸಾ ಭಟ್ಟಾಚಾರ್ಯ. ಅದರ ಫಲವಾಗಿಯೇ  ಐಎಎಸ್ ಅಧಿಕಾರಿ ಶಿವಕುಮಾರ ರೆಡ್ಡಿ ಅವರು ವಿಶೇಷಾಧಿಕಾರಿಯಾಗಿದ್ದ ಸಿಇಟಿ ಘಟಕ ಅಸ್ತಿತ್ವಕ್ಕೆ ಬಂದದ್ದು. ಸುಮಾರು ಒಂದು ವರ್ಷ ಕಾಲ ಈ ಹುದ್ದೆಯಲ್ಲಿದ್ದ ಶಿವಕುಮಾರ ರೆಡ್ಡಿ ಸಿಇಟಿಯ ಸಿದ್ಧತೆಗಳನ್ನು ಆರಂಭಿಸಿದರೆ ನಂತರ ಬಂದ ಬಿ.ಎ.ಹರೀಶ್ ಗೌಡ ಅವರು ಈ ವ್ಯವಸ್ಥೆಗೆ ಭದ್ರವಾದ ಬುನಾದಿಯನ್ನು ಹಾಕಿ ಇದಕ್ಕೊಂದು ಸ್ಪಷ್ಟ ರೂಪ ನೀಡಿದರು. ಇದರ ಫಲವಾಗಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ 1994ರಲ್ಲಿ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆಯಿತು.

ಸಿಇಟಿ ವ್ಯವಸ್ಥೆ ಜಾರಿಗೆ ಬಂದ ನಂತರ ಅತ್ಯಂತ ಪಾರದರ್ಶಕವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ವೃತ್ತಿ ಶಿಕ್ಷಣ ಕೋರ್ಸ್‌ಗಳ ಕೌನ್ಸೆಲಿಂಗ್ ನಡೆಯುತ್ತಿತ್ತು. ಅಲ್ಲಿಯವರೆಗಿನ ಅವ್ಯವಸ್ಥೆ, ಭ್ರಷ್ಟಾಚಾರಕ್ಕೆ ತೆರೆ ಬಿತ್ತು. ಪೋಷಕರು ಮತ್ತು ವಿದ್ಯಾರ್ಥಿಗಳಿಂದಲೂ ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಶ್ರೀಮಂತ ಮತ್ತು ಮೇಲುಮಧ್ಯಮ ವರ್ಗಕ್ಕಷ್ಟೇ ಸೀಮಿತವಾಗಿದ್ದ ವೃತ್ತಿ ಶಿಕ್ಷಣವನ್ನು ಮಧ್ಯಮವರ್ಗದವರು ಮಾತ್ರವಲ್ಲ ಸಣ್ಣ ರೈತರು, ಕೂಲಿಕಾರ್ಮಿಕರು, ರಿಕ್ಷಾಚಾಲಕರು...ಹೀಗೆ ಕೆಳವರ್ಗಗಳ ಕುಟುಂಬದ ವಿದ್ಯಾರ್ಥಿಗಳು ಕೂಡಾ ಪಡೆಯುವಂತಾಯಿತು. ಇದರ  ಪರಿಣಾಮವಾಗಿ ರಾಜ್ಯದ ಸಾಮಾಜಿಕ ಚಿತ್ರವೇ ಬದಲಾಯಿತು. ಇದೊಂದು ರೀತಿಯ ಮೌನ ಕ್ರಾಂತಿ.

 2003ರ   ಸುಪ್ರೀಂಕೋರ್ಟ್ ತೀರ್ಪಿನ ನಂತರ ಈ ಚಿತ್ರವೇ ಬದಲಾಯಿತು. ಮೊದಲ ಬಾರಿಗೆ 2004ರಲ್ಲಿ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಒಪ್ಪಂದವಾದಾಗ ಸರ್ಕಾರಿ ಕೋಟಾದಡಿ ಶೇ 60 ಹಾಗೂ ಆಡಳಿತ ಮಂಡಳಿ ಕೋಟಾದಡಿ ಶೇ 40ರಷ್ಟು ಸೀಟುಗಳು ಇದ್ದವು. ಆದರೆ ನಂತರದ ದಿನಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆ ಕಡಿವೆುಯಾಗಿ, ಆಡಳಿತ ಮಂಡಳಿಯ ಕೋಟಾದ ಸೀಟುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು.

ಈ ವರ್ಷ ವೈದ್ಯಕೀಯ ಕೋರ್ಸ್‌ಗಳಲ್ಲಿ ಶೇ 60ರಷ್ಟು ಸೀಟುಗಳನ್ನು ಆಡಳಿತ ಮಂಡಳಿ ಕೋಟಾದಡಿ ಹಾಗೂ ಶೇ 40ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಂಚಲು ತೀರ್ಮಾನವಾಗಿದೆ. ಇನ್ನು ದಂತ ವೈದ್ಯಕೀಯ ವಿಭಾಗದಲ್ಲಂತೂ ಶೇ 80ರಷ್ಟು ಸೀಟುಗಳನ್ನು ಆಡಳಿತ ಮಂಡಳಿಗಳಿಗೆ ಬಿಟ್ಟುಕೊಡಲಾಗಿದೆ. ಕೇವಲ ಶೇ 20ರಷ್ಟು ಸೀಟುಗಳು ಮಾತ್ರ ಸರ್ಕಾರಿ ಕೋಟಾದಡಿ ಲಭ್ಯವಾಗಲಿವೆ.

ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಬಗ್ಗೆ ಸರ್ಕಾರ ಮತ್ತು ಖಾಸಗಿಯವರ ನಡುವೆ ಇನ್ನೂ ಹಗ್ಗಜಗ್ಗಾಟ ಮುಂದುವರಿದಿದೆ. ಕಳೆದ ವರ್ಷ ಸರ್ಕಾರ ಮತ್ತು ಆಡಳಿತ ಮಂಡಳಿ ನಡುವೆ ಶೇ 50: 50ರ ಪ್ರಮಾಣದಲ್ಲಿ ಸೀಟು ಹಂಚಿಕೆಯಾಗಿತ್ತು. ಆದರೆ ಈ ವರ್ಷ ಸರ್ಕಾರವೇ ‘ಶೇ 60ರಷ್ಟು ಸೀಟುಗಳನ್ನು ನಿಮಗೆ (ಆಡಳಿತ ಮಂಡಳಿಗಳಿಗೆ) ಬಿಟ್ಟುಕೊಡುತ್ತೇವೆ. ಶುಲ್ಕ ಹೆಚ್ಚಳಕ್ಕೆ ಆಗ್ರಹಿಸಬೇಡಿ’ ಎಂಬ ಪ್ರಸ್ತಾವವನ್ನು ಮುಂದಿಟ್ಟಿದೆ.

ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಕ್ಕೆ ಒಪ್ಪುತ್ತಿಲ್ಲ. ಪ್ರತಿ ಯೊಂದು ಸೀಟಿಗೆ 50 ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡ ಬೇಕು ಎಂದು ಪಟ್ಟುಹಿಡಿದಿವೆ. ಹೀಗಾಗಿ 3-4 ಬಾರಿ ನಡೆದ ಮಾತುಕತೆ ಫಲಪ್ರದವಾಗಿಲ್ಲ. ಸರ್ಕಾರ ಏನೇ ತೀರ್ಮಾನ ತೆಗೆದು ಕೊಂಡರೂ ಈ ವರ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಂತೂ ಖಚಿತ. ಸರ್ಕಾರ ಖಾಸಗಿಯವರಿಗೆ ಹೆಚ್ಚಿನ ಸೀಟುಗಳನ್ನು ಬಿಟ್ಟು ಕೊಟ್ಟರೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಡಿಮೆ ಶುಲ್ಕದಡಿ ವ್ಯಾಸಂಗ ಮಾಡುವ ಅವಕಾಶದಿಂದ ಬಡ ಮಕ್ಕಳು ವಂಚಿತರಾಗಲಿದ್ದಾರೆ.

ಖಾಸಗಿಯವರ ಒತ್ತಡಕ್ಕೆ ಸರ್ಕಾರ ಪ್ರತಿ ವರ್ಷ ಮಣಿಯುತ್ತಿರುವ ಪರಿಣಾಮ ವೃತ್ತಿಶಿಕ್ಷಣದಲ್ಲಿ ಕಾಯಂ ಆದ ವ್ಯವಸ್ಥೆಯೇ ಇಲ್ಲದಂತಾಗಿದೆ. ಈ ವರ್ಷ ಇದ್ದಷ್ಟು ಸೀಟುಗಳು, ಶುಲ್ಕ ಮತ್ತೊಂದು ವರ್ಷ ಇರುವುದಿಲ್ಲ. ಸಿಇಟಿ ಪರೀಕ್ಷೆ ಹತ್ತಿರ ಬಂದರೂ ಯಾವ ಕೋರ್ಸ್‌ಗೆ ಎಷ್ಟು ಶುಲ್ಕ ಎಂಬುದು ನಿರ್ಧಾರವಾಗಿರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ಪೋಷಕರಿಗೆ ಕೊನೆಯವರೆಗೂ ಆತಂಕ ತಪ್ಪಿದ್ದಲ್ಲ.

ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆಧಾರವಾಗಿಟ್ಟು ಕೊಂಡು ಉನ್ನಿಕೃಷ್ಣನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್  ನೀಡಿದ್ದ ತೀರ್ಪು ಐತಿಹಾಸಿಕವಾದುದು. ಖಾಸಗಿ ಕಾಲೇಜುಗಳಲ್ಲೂ ಶೇ 85 ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾ ಮೂಲಕ ಹಾಗೂ ಕೇವಲ ಶೇ 15ರಷ್ಟು ಸೀಟುಗಳನ್ನು ಆಡಳಿತ ಮಂಡಳಿ ಕೋಟಾದಡಿ ಹಂಚಬೇಕು. ಅಲ್ಲದೆ ಶುಲ್ಕವನ್ನು ಸಹ ಸರ್ಕಾರವೇ ನಿರ್ಧರಿಸಬೇಕು ಎಂಬ ತೀರ್ಪು ಮಹತ್ವದ್ದಾಗಿತ್ತು.

ಶೇ 85ರಷ್ಟು ಸೀಟುಗಳಲ್ಲಿ ಶೇ 15ರಷ್ಟು ಸೀಟುಗಳನ್ನು ಕರ್ನಾಟಕೇತರ ಅಭ್ಯರ್ಥಿಗಳಿಗೆ ನೀಡಲಾಗುತ್ತಿತ್ತು. ಇನ್ನುಳಿದ ಶೇ 70ರಷ್ಟು ಸೀಟುಗಳಲ್ಲಿ ತಲಾ ಅರ್ಧದಂತೆ ಎರಡು ಭಾಗ ಮಾಡಿ ಉಚಿತ ಹಾಗೂ ಪೇಮೆಂಟ್ ಸೀಟು ಎಂದು ವಿಂಗಡಿಸಲಾಗಿತ್ತು. ಹೆಚ್ಚಿನ ಮೆರಿಟ್ ಇದ್ದವರಿಗೆ ಉಚಿತವಾಗಿ ಸೀಟು ಸಿಗುತ್ತಿದ್ದರೆ, ಕಡಿಮೆ ಅಂಕ ಪಡೆದವರು ಪೇಮೆಂಟ್ ಸೀಟುಗಳ ಕೋಟಾದಡಿ ಪ್ರವೇಶ ಪಡೆಯುತ್ತಿದ್ದರು.

ಸಿಇಟಿಯಂತಹ ಉತ್ತಮ ವ್ಯವಸ್ಥೆ ಹಾಳಾಗಲು ಎಲ್ಲ ರಾಜ ಕೀಯ ಪಕ್ಷಗಳೂ ಕೊಡುಗೆ ನೀಡಿವೆ.ಬಹುತೇಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಮಾಲೀಕರು ರಾಜಕಾರಣಿಗಳೇ ಆಗಿರುವುದು ಇದಕ್ಕೆ ಮುಖ್ಯ ಕಾರಣ. ಬಹುಶಕ್ತಿಶಾಲಿಯಾದ ಈ ಕ್ಯಾಪಿಟೇಷನ್ ಕಾಲೇಜು ಒಡೆಯರ ಗುಂಪು ತಮ್ಮಲ್ಲಿರುವ ಅಪಾರ ಸಂಪನ್ಮೂಲವನ್ನು ಧಾರೆಯೆರೆದು ನ್ಯಾಯಾಂಗ ಹೋರಾಟವನ್ನು ನಡೆಸಿದ ಕಾರಣದಿಂದಾಗಿಯೇ ಉನ್ನಿಕೃಷ್ಣನ್ ಪ್ರಕರಣದ ತೀರ್ಪು ರದ್ದಾಗಿದ್ದು. ಇವರಿಗೆ ಬಡವರ ಬಗ್ಗೆ ಪ್ರಾಮಾಣಿಕವಾದ ನಿಜವಾದ ಕಾಳಜಿ ಇದ್ದಿದ್ದರೆ 2003ರ ನ್ಯಾಯಾಲಯದ ತೀರ್ಪಿನ ನಂತರ ಸಂವಿ ಧಾನಕ್ಕೆ ಸೂಕ್ತ ತಿದ್ದುಪಡಿ ತಂದು ಹಿಂದಿನ ವ್ಯವಸ್ಥೆಯನ್ನು ಉಳಿಸಿ ಕೊಳ್ಳಬ ಹುದಾಗಿತ್ತು. ಆದರೆ ಈ ಪ್ರಯತ್ನಕ್ಕೆ ಯಾರೂ ಮುಂದಾಗಲಿಲ್ಲ.

ಗ್ರಾಮೀಣ ಭಾಗದ ಹಾಗೂ ಮಧ್ಯಮ ವರ್ಗದವರಿಂದ ಸಿಇಟಿಗೆ ಈಗಲೂ ಹೆಚ್ಚಿನ ಬೇಡಿಕೆ ಇದೆ. ದುಬಾರಿ ಶುಲ್ಕ ನೀಡಿ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆಯಲು ಸಾಧ್ಯ ವಾಗದ ಬಡ, ಮಧ್ಯಮ ವರ್ಗದವರು ಕಷ್ಟಪಟ್ಟು ಓದಿ ಸಿಇಟಿ ಮೂಲಕ ಸರ್ಕಾರಿ ಕೋಟಾದಡಿ ಸೀಟು ಪಡೆಯುತ್ತಿದ್ದಾರೆ. ಆದರೆ ಸರ್ಕಾರಿ ಕೋಟಾದ ಸೀಟುಗಳೇ ಈಗ ಕಡಿಮೆ ಆಗುತ್ತಿರುವು ದರಿಂದ ಆ ವರ್ಗದ ಜನರಲ್ಲಿ ಆತಂಕ ಮನೆ ಮಾಡಿದೆ. ಉಳ್ಳವರ ಮಕ್ಕಳು ಮಾತ್ರ ಕಡಿಮೆ ಅಂಕಗಳಿದ್ದರೂ ಲಕ್ಷಾಂತರ ರೂಪಾಯಿ ವಂತಿಗೆ ನೀಡಿ ಸೀಟು ಪಡೆಯುವುದು ಮುಂದುವರಿದಿದೆ.

ಇದರಿಂದಾಗಿ ಕ್ಯಾಪಿಟೇಶನ್ ಲಾಬಿ ಮತ್ತೆ ಮೇಲುಗೈ ಸಾಧಿಸುತ್ತಿದೆ. ಸಿಇಟಿ ವ್ಯವಸ್ಥೆ ಜಾರಿಗೆ ಬರುವ ಮುನ್ನ ಇದ್ದ ವ್ಯವಸ್ಥೆಯತ್ತ ವಾಲುತ್ತಿರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ತಮಿಳುನಾಡಿನಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಸರ್ಕಾರಿ ಕೋಟಾದ ಪ್ರಮಾಣ ಶೇ 65ರಷ್ಟು ಇದ್ದರೆ, ಕರ್ನಾಟಕದಲ್ಲಿ ಈ ಪ್ರಮಾಣ ಶೇ 40ರಷ್ಟು ಇದೆ.

ಅಲ್ಲಿನ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿಯದೆ ಕಠಿಣ ನಿಲುವನ್ನು ತಳೆದಿದ್ದು, ಶೇ 65ರಷ್ಟು ಸೀಟುಗಳನ್ನು ಬಿಟ್ಟುಕೊಡಲು ನಿರಾಕರಿಸಿದ ಎರಡು ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸಿದೆ. ಆದರೆ ಇಂತಹ ದಿಟ್ಟ ನಿರ್ಧಾರವನ್ನು ಕೈಗೊಳ್ಳುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇದೆಯೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry