ಶನಿವಾರ, ಮೇ 15, 2021
22 °C

ವೃತ್ತಿ ಶಿಕ್ಷಣ ಕಾಯ್ದೆಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ 2006ರಲ್ಲಿ ಜಾರಿಗೊಳಿಸಿರುವ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಯನ್ನು 2013- 14ನೇ ಶೈಕ್ಷಣಿಕ ಸಾಲಿನಲ್ಲಿ ತಡೆಹಿಡಿಯಲು ವಿಧಾನಸಭೆ ಗುರುವಾರ ಒಪ್ಪಿಗೆ ನೀಡಿದೆ.ವೈದ್ಯಕೀಯ/ ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕ ಮತ್ತು ಸೀಟು ಹಂಚಿಕೆಯನ್ನು ಖಾಸಗಿ ಕಾಲೇಜುಗಳು ಮತ್ತು ಸರ್ಕಾರ ಈಗಾಗಲೇ ಪರಸ್ಪರ ಮಾತುಕತೆ ಮೂಲಕವೇ ನಿಗದಿಪಡಿಸಿಕೊಂಡಿವೆ. ಹೀಗಾಗಿ ಕಾಯ್ದೆಯನ್ನು ತಡೆಹಿಡಿಯಲು ಸದನವು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ವಿಶೇಷ ಉಪಬಂಧಗಳು ಮಸೂದೆ ಮಂಡಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ತಾಂತ್ರಿಕ ಕಾರಣಗಳಿಂದಾಗಿ ಈ ವರ್ಷ ಕಾಯ್ದೆ ಜಾರಿಗೊಳಿಸಲು ಆಗುತ್ತಿಲ್ಲ.ಕಾಯ್ದೆ ಪ್ರಕಾರ ಶುಲ್ಕ ನಿಗದಿಗೆ ಹಾಗೂ ಪ್ರವೇಶ ಪ್ರಕ್ರಿಯೆ ಮೇಲ್ವಿಚಾರಣೆಗೆ ಎರಡು ಪ್ರತ್ಯೇಕ ಸಮಿತಿಗಳನ್ನು ಡಿಸೆಂಬರ್ ಒಳಗೆ ರಚಿಸಬೇಕಾಗಿತ್ತು. ಈ ಪ್ರಕ್ರಿಯೆ ಆಗದೆ ಇರುವುದರಿಂದ ಕಾಯ್ದೆ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.ಬಿಜೆಪಿಯ ಸಿ.ಟಿ.ರವಿ ಮಾತನಾಡಿ, ಕೆಲವು ಖಾಸಗಿ ಕಾಲೇಜುಗಳು ನಿಗದಿಗಿಂತ ಹೆಚ್ಚಿನ ಶುಲ್ಕ ಪಡೆಯುತ್ತಿವೆ. ಅಂತಹ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಬೇಕು. ನಿಗದಿತ ಪ್ರಮಾಣದಲ್ಲಿ ಅಲ್ಪಸಂಖ್ಯಾತರಿಗೆ ಸೀಟುಗಳನ್ನು ನೀಡದ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಹೆಚ್ಚಿನ ಶುಲ್ಕ ಸಂಗ್ರಹದ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬುದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಗೊತ್ತಿಲ್ಲ. ಜಾಗೃತದಳ ರಚಿಸಬೇಕು ಎಂದು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ, ಗ್ರಂಥಾಲಯ ಶುಲ್ಕ, ಕ್ರೀಡಾ ಶುಲ್ಕ, ಗುರುತಿನ ಚೀಟಿ ಶುಲ್ಕ ಸೇರಿದಂತೆ ಬೇರೆ ಬೇರೆ ಹೆಸರಿನಲ್ಲಿ ಶುಲ್ಕ ಸಂಗ್ರಹಿಸುತ್ತಿರುವುದು ನಿಜ. ಈಗಾಗಲೇ ಖಾಸಗಿ ಕಾಲೇಜುಗಳೊಂದಿಗೆ ಎರಡು ಬಾರಿ ಚರ್ಚೆ ಆಗಿದೆ. ಮತ್ತೊಮ್ಮೆ ಚರ್ಚೆ ನಡೆಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.