ಭಾನುವಾರ, ಅಕ್ಟೋಬರ್ 20, 2019
27 °C

ವೃತ್ತ ವೃತ್ತದಲ್ಲಿ ಚಿಕಿತ್ಸಾ ಪೆಟ್ಟಿಗೆ

Published:
Updated:

ನಗರದ ಬೆಳವಣಿಗೆಗೆ ತಳುಕು ಹಾಕಿಕೊಂಡಂತೆ ಇಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ದಿನೇದಿನೇ ಏರುತ್ತಲೇ ಇದೆ. 2011ರ ಜನವರಿಯಿಂದ ನವೆಂಬರ್ ಕೊನೆಯ ಹೊತ್ತಿಗೆ ನಗರದಲ್ಲಿ ಸಂಭವಿಸಿರುವ ಒಟ್ಟು ಅಪಘಾತಗಳ ಸಂಖ್ಯೆ 5,488.ಇದರಲ್ಲಿ 658 ಅಪಘಾತಗಳಲ್ಲಿ ಸಾವು ಸಂಭವಿಸಿದ್ದು, ಉಳಿದ 4,830 ಅಪಘಾತ ಪ್ರಕರಣಗಳಲ್ಲಿ ವಾಹನ ಸವಾರರಿಗೆ ಸಣ್ಣ ಅಥವಾ ಗಂಭೀರ ಸ್ವರೂಪದ ಗಾಯಗಳಾಗಿರುವುದಾಗಿ ಪೊಲೀಸ್ ಇಲಾಖೆ ಮೂಲಗಳು ತಿಳಿಸುತ್ತವೆ.ಮಿತಿಮೀರಿದ ಸಂಚಾರ ದಟ್ಟಣೆಯಿಂದ ಅಂಬುಲೆನ್ಸ್‌ಗಳು ಅಪಘಾತದ ಸ್ಥಳಕ್ಕೆ ತಕ್ಷಣವೇ ತಲುಪಲು ಸಾಧ್ಯವಾಗುತ್ತಿಲ್ಲ. ಅಪಘಾತ ಸಂಭವಿಸಿದ ತಕ್ಷಣ ಪ್ರಥಮ ಚಿಕಿತ್ಸೆ ಇಲ್ಲದೆ ಎಷ್ಟೋ ಮಂದಿ ನೋವಿನಿಂದ ನರಳಿರುವ ಘಟನೆಗಳು ದಿನನಿತ್ಯ ವರದಿಯಾಗುತ್ತಿವೆ.ಅಲ್ಲದೆ ಸಣ್ಣ ಅಥವಾ ಗಂಭೀರ ಸ್ವರೂಪದ ಗಾಯಗಳಾದವರು ರಸ್ತೆಯುದ್ದಕ್ಕೂ ರಕ್ತಸುರಿಯುತ್ತಲೇ ಆಸ್ಪತ್ರೆ ತಲುಪುವ ಪಡಿಪಾಟಲನ್ನು ಗಮನಿಸಬಹುದು.ಈ ರೀತಿ ಅಪಘಾತ ಸಂಭವಿಸಿದಾಗ ತುರ್ತು ಚಿಕಿತ್ಸೆಗಾಗಿ ಪರದಾಡುವುದನ್ನು ತಪ್ಪಿಸುವುದಕ್ಕಾಗಿಯೇ ಸೂರ್ಯ ಸೇವಾ ಕೇಂದ್ರ ಎಂಬ ಸಾಮಾಜಿಕ ಹಾಗೂ ಸಾಂಸ್ಕೃತಿಕ ಯುವ ಸಂಘಟನೆಯೊಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರಮುಖ ವೃತ್ತ ಹಾಗೂ ಪೊಲೀಸ್ ಚೌಕಿಗಳಲ್ಲಿ `ಪ್ರಥಮ ಚಿಕಿತ್ಸಾ ಪೆಟ್ಟಿಗೆ~ಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ.ಸೂರ್ಯ ಸೇವಾ ಕೇಂದ್ರ ಕೈಗೊಂಡಿರುವ ಈ ವಿನೂತನ ಜನಪರವಾದ ಕಾರ್ಯವನ್ನು ಮೆಚ್ಚಿ ನಗರದ ಸಂಚಾರ ಪೊಲೀಸ್ ಇಲಾಖೆ 510 ಪೊಲೀಸ್ ಚೌಕಿಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸಲು ಅನುಮತಿ ನೀಡಿದೆ.ಪ್ರಾಯೋಗಿಕವಾಗಿ ಈಗಾಗಲೇ ಶಿವಾನಂದ ವೃತ್ತ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಜಿಪಿಓ (ಮುಖ್ಯ ಅಂಚೆ ಕಚೇರಿ), ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಹಾಗೂ ಮೆಟ್ರೊ ರೈಲು ನಿಲ್ದಾಣ ಸಮೀಪದ ಪೊಲೀಸ್ ಚೌಕಿಗಳು ಸೇರಿದಂತೆ ಹಲವೆಡೆ ಈ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ.ನಿರ್ವಹಣೆ ಹಾಗೂ ರಕ್ಷಣೆ

ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಈ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳ ಮೇಲ್ವಿಚಾರಣೆಯನ್ನು ಸಂಚಾರ ಪೊಲೀಸರು ಒಳಗೊಂಡಂತೆ ಹತ್ತಿರದಲ್ಲಿರುವ ಔಷಧ ಮಳಿಗೆಗಳು ಅಥವಾ ಸೇವಾ ಮನೋಭಾವವುಳ್ಳ ಸಂಘ ಸಂಸ್ಥೆಗಳಿಗೆ ವಹಿಸಲಾಗುತ್ತದೆ.ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ಕೂಡಲೇ ಪ್ರಥಮ ಚಿಕಿತ್ಸೆ ನೀಡುವುದೇ ಈ ಯೋಜನೆಯ ಹಿಂದಿನ ಉದ್ದೇಶ. ಈ ಕೆಲಸವನ್ನು ಅಪಘಾತ ನಡೆಯುವ ಸ್ಥಳದಲ್ಲಿರುವ ಯಾವುದೇ ವ್ಯಕ್ತಿ ಮಾಡಬಹುದು.`ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಪತ್ತೆ ಹಚ್ಚುವುದಕ್ಕಾಗಿ ಎಲ್ಲಾ ಪ್ರಮುಖ ರಸ್ತೆಗಳ ಸಿಗ್ನಲ್‌ನಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿರುವುದರಿಂದ ಈ ಪೆಟ್ಟಿಗೆಗಳನ್ನು ಕದ್ದೊಯ್ಯುವ ಕಿಡಿಗೇಡಿಗಳ ಪ್ರಯತ್ನ ಫಲಿಸದು~ ಎಂದು ಕೇಂದ್ರದ ಮುಖ್ಯಸ್ಥ ಟಿ.ಎನ್.ರವಿಕುಮಾರ್ ಹೇಳುತ್ತಾರೆ.ಪೆಟ್ಟಿಗೆಯಲ್ಲಿ ಏನೇನಿವೆಯೆಂದರೆ...

ಪೆನ್ ಮತ್ತು ಕೈಪಿಡಿ ಪುಸ್ತಕ (ಸಮಯ, ಹೆಸರು, ನೀಡಿದ ಔಷಧದ ವಿವರ ನಮೂದಿಸಲು), ಬ್ಯಾಂಡೇಜ್ ಬಟ್ಟೆ, ಸೇಫ್ಟಿ ಪಿನ್ ಸೆಟ್, ಬಿಟಾಡಿಸ್ ಮುಲಾಮು, ಹತ್ತಿ, ಪ್ಲಾಸ್ಟರ್, ಸರ್ಜಿಕಲ್ ಸ್ಪೀರಿಟ್, ಸೆವಲಾನ್ ಲೋಶನ್, ಹೈಡ್ರೋಜನ್ ಪೆರಾಕ್ಸೈಡ್, ಕತ್ತರಿ, ಬ್ಲೇಡ್, ನೋವಿಗೆ ಹಾಕುವ ಬೆಲ್ಲೊಡೊನಾ ಪ್ಲಾಸ್ಟರ್ ಸೇರಿದಂತೆ 30ಕ್ಕೂ ಹೆಚ್ಚು ವಸ್ತುಗಳನ್ನು ಈ ಪೆಟ್ಟಿಗೆ ಒಳಗೊಂಡಿರುತ್ತದೆ.ಅಪಘಾತ ಸಂಭವಿಸಿದಾಗ ಅಸಹಾಯಕರಾಗಿ ಮೂಕಪ್ರೇಕ್ಷಕರಾಗುವ ಬದಲು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮುಂಚೆ ಪ್ರಥಮ ಚಿಕಿತ್ಸೆ ನೀಡಿ ಸಂತೈಸುವ ಈ ಕಾರ್ಯಕ್ಕೆ  ಸಾರ್ವಜನಿಕರ ಸಹಕಾರ ಅತಿ ಮುಖ್ಯ.ಆಪತ್ಕಾಲದ ನೆರವು ಅಪಘಾತಕ್ಕೊಳಗಾದವರಿಗೆ ಮರುಜನ್ಮ ನೀಡಿದಂತೆ ಅಲ್ಲವೆ? ನಿಮ್ಮ ಮನೆಯ ಆಸುಪಾಸಿನ ರಸ್ತೆಗಳಲ್ಲೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆಯೆ? ಮನೆಯ ಹತ್ತಿರದ ರಸ್ತೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯೊಂದರ ಅಗತ್ಯ ಇದೆ ಎಂದು ನಿಮಗನ್ನಿಸುತ್ತದೆಯೆ? ಅದರ ಮೇಲ್ವಿಚಾರಣೆಗೆ ನೀವು ತಯಾರಿದ್ದೀರಾ? ಹಾಗಿದ್ದರೆ ಕೂಡಲೇ ಸಂಪರ್ಕಿಸಿ ದೂರವಾಣಿ ಸಂಖ್ಯೆ 2226 4205, 98442 52147.  

Post Comments (+)