ಗುರುವಾರ , ಮಾರ್ಚ್ 4, 2021
18 °C

ವೃದ್ಧರನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೃದ್ಧರನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಲಹೆ

ಚಿತ್ರದುರ್ಗ: ಮಹಿಳೆಯರು ಅತ್ತೆ-ಮಾವಂದಿರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಅವರು ವೃದ್ಧಾಶ್ರಮ ಸೇರುವ ಸನ್ನಿವೇಶ ಸೃಷ್ಟಿಸಬಾರದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ ಕಿವಿಮಾತು ಹೇಳಿದರು.ನಗರದ ಬಾಲಭವನದಲ್ಲಿ ಮಂಗಳವಾರ ಮಹಿಳೆಯರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಿಗಮದಿಂದ ಮಹಿಳೆಯರಿಗೆ ನಾನಾ ರೀತಿಯ ತರಬೇತಿ ನೀಡಲಾಗುತ್ತಿದೆ. ಆಸಕ್ತಿ ವಹಿಸಿದರೆ ಈ ತರಬೇತಿ ನೀಡುವ ಹೊಣೆಯನ್ನು ನಿಗಮ ಮಠಗಳಿಗೆ ವಹಿಸಲು ಸಿದ್ಧವಿದೆ ಎಂದು ನುಡಿದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಇಚ್ಚಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ ಇದ್ದರೆ ಮಹಿಳೆಯರು ಶೋಷಣೆಗೆ ಸಿಲುಕುವುದಿಲ್ಲ. ಇತ್ತ ಮಹಿಳೆಯರು ಗಮನ ಹರಿಸಬೇಕು ಎಂದರು.ಮುರುಘಾಮಠದಿಂದ ನಡೆಸುತ್ತಿದ್ದ ವೃದ್ಧಾಶ್ರಮದ ಬಗ್ಗೆ ಯಾರೋ ಸರಕಾರಕ್ಕೆ ಮೂಗರ್ಜಿ ಬರೆದು ತೊಂದರೆ ನೀಡಿದರು. ಈಗ ಸರಕಾರದ ಯಾವುದೇ ಅನುದಾನ ಇಲ್ಲದೆ ವೃದ್ಧಾಶ್ರಮ ನಡೆಸುತ್ತಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳೆಯರು ತಾವು ಎದುರಿಸುತ್ತಿರುವ ಹಲವು ತೊಂದರೆಗಳನ್ನು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ಗಮನಕ್ಕೆ ತಂದರು.ಕೆಲವು ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ದೊರೆಯುತ್ತಿಲ್ಲ. ಸಾಲ ಪ್ರಮಾಣ ಹೆಚ್ಚಿಸಬೇಕು. ಸ್ತ್ರೀಶಕ್ತಿ ಸಂಘಗಳು ಖಾಸಗಿ ಫೈನಾನ್ಸ್ ಕಂಪೆನಿಯಿಂದ ಸಾಲ ಪಡೆಯುವುದರಿಂದ ಅನೇಕ ಸಮಸ್ಯೆಗಳು ಸೃಷ್ಠಿಯಾಗುತ್ತಿವೆ. ಹಾಗಾಗಿ ಮಹಿಳಾ ಅಭಿವೃದ್ಧಿ ನಿಗಮದಿಂದಲೇ ನೇರ ಸಾಲ ನೀಡುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.ಸ್ತ್ರೀಶಕ್ತಿ ಸಂಘಗಳಿಗೆ ಖಾಸಗಿ ಫೈನಾನ್ಸ್ ಕಂಪೆನಿಗಳು ಸಾಲ ನೀಡುತ್ತಿವೆ. ಮರು ಪಾವತಿಯಲ್ಲಿ ಸಣ್ಣ ವ್ಯತ್ಯಾಸವಾದರೂ ಕಂಪೆನಿಯವರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ ಮತ್ತು ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ. ಇದರಿಂದ ಅನೇಕ ಸಾಂಸಾರಿಕ ಜೀವನವೇ ತೊಂದರೆಗೀಡಾಗಿದೆ ಎಂದು ಅಳಲು ತೋಡಿಕೊಂಡರು.ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ಜಯಸ್ವಾಮಿ, ಇಂತಹ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ವರದಿಯಾಗಿವೆ. ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು.ನಿಗಮದಿಂದಲೇ ಸಾಲ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರೋಜಿನಿ ಭರವಸೆ ನೀಡಿದರು.ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜ್, ಗಿರಿಜಮ್ಮ ಇತರರು ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.