ವೃದ್ಧಾಪ್ಯ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

7

ವೃದ್ಧಾಪ್ಯ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
ವೃದ್ಧಾಪ್ಯ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ವೃದ್ಧಾಪ್ಯ ವೇತನ ಹೆಚ್ಚಳ, ವೃದ್ಧಾಪ್ಯ ವೇತನ ಪಡೆಯಲು ಅರ್ಹತೆಯ ವಯೋಮಿತಿ ಇಳಿಕೆ ಮತ್ತಿತರ ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟದ ಸದಸ್ಯರು ನಗರದ ಸ್ವಾತಂತ್ರ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಲತಮ್ಮ, `ರಾಜ್ಯ ಸರ್ಕಾರ ವೃದ್ಧರಿಗೆ ಸದ್ಯ ಮಾಸಿಕವಾಗಿ 400 ರೂಪಾಯಿ ವೃದ್ಧಾಪ್ಯ ವೇತನ ನೀಡುತ್ತಿದೆ. ಇದರಿಂದ ವೃದ್ಧರು ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಆದ್ದರಿಂದ ವೃದ್ಧಾಪ್ಯ ವೇತನವನ್ನು ಸರ್ಕಾರ ಎರಡು ಸಾವಿರ ರೂಪಾಯಿಗಳಿಗೆ ಹೆಚ್ಚಿಸಬೇಕು~ ಎಂದು ಒತ್ತಾಯಿಸಿದರು.`ವೃದ್ಧಾಪ್ಯ ವೇತನ ಪಡಯುವ ವಯೋಮಿತಿಯನ್ನು ಈಗ 65 ವರ್ಷಕ್ಕೆ ನಿಗದಿಗೊಳಿಸಲಾಗಿದೆ. ಈ ಮಿತಿಯನ್ನು 60 ವರ್ಷಕ್ಕೆ ಇಳಿಸಬೇಕು. ಹಿರಿಯ ನಾಗರಿಕರಿಗಾಗಿ ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು~ ಎಂದರು.`ಅನರ್ಹರು ಎಂಬ ಕಾರಣ ನೀಡಿ ರಾಜ್ಯದ ಸುಮಾರು ಎಂಟು ಲಕ್ಷ ವೃದ್ಧರನ್ನು ಪಿಂಚಣಿ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಪಟ್ಟಿಯಿಂದ ಕೈಬಿಟ್ಟವರನ್ನು ಪಿಂಚಣಿ ವ್ಯಾಪ್ತಿಗೆ ಸೇರಿಸಬೇಕು~ ಎಂದು ಅವರು ಆಗ್ರಹಿಸಿದರು.`ಪಿಂಚಣಿ ಪಡೆಯುವುದು ಹಿರಿಯ ನಾಗರಿಕರ ಹಕ್ಕು ಎಂದು ಸರ್ಕಾರ ಘೋಷಿಸಬೇಕು. ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಶೇ 50ರಷ್ಟು ರಿಯಾಯಿತಿ ನೀಡಬೇಕು~ ಎಂದು ಅವರು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ, `ಹಿರಿಯ ನಾಗರಿಕರ ಬೇಡಿಕೆಗಳ ಈಡೇರಿಕೆಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಡಿಸೆಂಬರ್ ವೇಳೆಗೆ ವೃದ್ಧಾಪ್ಯ ವೇತನದ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲಾಗುವುದು~ ಎಂದು ಭರವಸೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry