ವೃಷಭಾವತಿ ಹೂಳೆತ್ತಲು ಸೂಚನೆ

7

ವೃಷಭಾವತಿ ಹೂಳೆತ್ತಲು ಸೂಚನೆ

Published:
Updated:
ವೃಷಭಾವತಿ ಹೂಳೆತ್ತಲು ಸೂಚನೆ

ಬೆಂಗಳೂರು: ‘ಕೊಳಚೆ ನೀರು ಸಾಗಿಸುವ ಕಾಲುವೆ­ಯಾಗಿ ಪರಿವರ್ತನೆ ಹೊಂದಿರುವ ವೃಷಭಾವತಿ ನದಿ ಪಾತ್ರದಲ್ಲಿ ಬೆಳೆದು ನಿಂತಿರುವ ಗಿಡ-ಗಳನ್ನು ಕತ್ತರಿಸಿ, ಹೂಳು ತೆಗೆಯುವ ಮೂಲಕ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಎಂಜಿನಿಯರ್‌ಗಳಿಗೆ ಸೂಚಿಸಿದರು.ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು ಈ ವೃಷಭಾವತಿ ಕಣಿವೆಯ ದುಸ್ಥಿತಿ ಗಮನಿಸಿ ಈ ಆದೇಶ ನೀಡಿದರು.ಬೃಹತ್ ನೀರುಗಾಲುವೆ ಮೇಲೆ ನಿರ್ಮಿಸಿರುವ ಸೇತುವೆ ಅಕ್ಕ-ಪಕ್ಕ ತಡೆಗೋಡೆ ಇಲ್ಲದಿರುವುದನ್ನು ಗಮನಿಸಿದ ಅವರು, ತಡೆಗೋಡೆ ನಿರ್ಮಾಣ ಕಾಮಗಾರಿ­ ತಕ್ಷಣ ಆರಂಭಿಸಬೇಕು ಎಂದು ಹೇಳಿದರು.ವೃಷಭಾವತಿನಗರದಲ್ಲಿ ಮಾರುತಿ ಮಂದಿರ ಪ್ರದೇಶದ ೪ನೇ ಮುಖ್ಯರಸ್ತೆಗೆ ಭೇಟಿ ನೀಡಿ, ಹಾಳಾಗಿರುವ ಪಾದಚಾರಿ ಮಾರ್ಗ ಮತ್ತು ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ತಿಳಿಸಿದರು. ನಂತರ ಕುಳ್ಳೇಗೌಡ ಕೈಗಾರಿಕಾ ಪ್ರದೇಶಕ್ಕೆ (ಸಣ್ಣಕ್ಕಿ ಬಯಲು) ಭೇಟಿ ನೀಡಿ, ಸದರಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಬಹಳ ಕಿರಿದಾಗಿದ್ದು, ಈ ರಸ್ತೆಯನ್ನು ವಿಸ್ತರಣೆ ಮಾಡಲು ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.ಶಕ್ತಿಗಣಪತಿನಗರದ ಕುವೆಂಪು ಸರ್ಕಲ್ ಹತ್ತಿರ­ವಿರುವ ನಿವಾಸಿಗಳು, ಸುಮಾರು ೨೫ ವರ್ಷ­ಗಳಿಂದ ವಾಸ­ವಿದ್ದು, ಹಕ್ಕುಪತ್ರ ಹಾಗೂ ಕ್ರಯಪತ್ರ ಪಡೆದಿ­ದ್ದರೂ ವಿಭಜನೆ ಮಾಡಿಕೊಳ್ಳಲು ಸಾಧ್ಯವಾಗು­ತ್ತಿಲ್ಲ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡ­ಬೇಕು ಎಂದು ಮನವಿ ಮಾಡಿದರು. ಸಂಬಂಧಪಟ್ಟ ಅಧಿಕಾರಿ­ಗಳು ಹಾಗೂ ತಹಶೀಲ್ದಾರರ ಸಭೆ ಕರೆದು, ಆದಷ್ಟು ಬೇಗ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗು­ವುದು ಎಂದು ಮೇಯರ್‌ ಭರವಸೆ ನೀಡಿದರು.ಸ್ಥಳೀಯ ಶಾಸಕ ಕೆ. ಗೋಪಾಲಯ್ಯ ಮಾತನಾಡಿ, ನನ್ನ ಮತಕ್ಷೇತ್ರಕ್ಕೆ ಹೊಸ ವರ್ಷದ ಮೊದಲ ದಿನ ಮೇಯರ್‌ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾದ ಹಣಕಾಸು ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿರುವುದು ಸಂತಸ ಉಂಟು­ಮಾಡಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry