ಭಾನುವಾರ, ಮಾರ್ಚ್ 7, 2021
18 °C

ವೆಂಕಟಾಪುರ; ತಾರಕಕ್ಕೇರಿದ ಕುಡಿಯುವ ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಂಕಟಾಪುರ; ತಾರಕಕ್ಕೇರಿದ ಕುಡಿಯುವ ನೀರಿನ ಸಮಸ್ಯೆ

ಮೊಳಕಾಲ್ಮುರು: ತಾಲ್ಲೂಕಿನ ವೆಂಕಟಾಪುರದಲ್ಲಿ ಕೆಲ ದಿನಗಳಿಂದ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ದೇವಸಮುದ್ರ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಈ ಗ್ರಾಮದಲ್ಲಿ 800 ಮನೆಗಳಿದ್ದು, ಅಂದಾಜು 2,000 ಸಾವಿರ ಜನಸಂಖ್ಯೆಯಿದೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ  ಇದ್ದರೂ ಪ್ರಸ್ತುತ ನೀರಿನ ಸಮಸ್ಯೆ ಪ್ರಮುಖವಾಗಿದೆ ಎಂದು ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಸುದ್ದಿಗಾರರ ಬಳಿ ಗ್ರಾಮಸ್ಥರಾದ ಓಬಕ್ಕ, ಅನ್ನಪೂರ್ಣಮ್ಮ, ಹನುಮಣ್ಣ, ಮಂಜುನಾಥ್‌ ಅಳಲು ತೋಡಿಕೊಂಡರು.ಗ್ರಾಮದ ಅನೇಕ ಪ್ರಭಾವಿಗಳು, ಸ್ಥಿತಿವಂತರು ಮಿನಿಟ್ಯಾಂಕ್‌ಗೆ ಅಳವಡಿಸಿರುವ ಪೈಪ್‌ಲೈನ್‌ಗೆ ಮೋಟಾರ್‌ ಅಳವಡಿಸಿಕೊಂಡು ನೀರು ಪಡೆಯುತ್ತಿದ್ದಾರೆ. ಅವರಿಗೆ ಸಾಕಾದ ಮೇಲೆ ಮುಂದಕ್ಕೆ ನೀರು ಬಿಡುತ್ತಾರೆ. ಗ್ರಾಮದ ಎಲ್ಲಾ ಮಿನಿಟ್ಯಾಂಕ್‌ಗಳ ಸ್ಥಿತಿ ಇದೇ ಆಗಿದೆ. ಕೂಲಿ ಕಾರ್ಮಿಕರಾದ ನಾವು ನೀರು ಸಂಗ್ರಹಿಸುವುದೇ ಕೆಲಸವಾದರೆ ಹೊಟ್ಟೆಪಾಡು ಹೇಗೆ ಎಂದು ಪ್ರಶ್ನೆ ಮಾಡಿದರು.ಗ್ರಾಮದ ಉರ್ಥಾಳ್‌ ರಸ್ತೆಯಲ್ಲಿ ಹೆಚ್ಚು ಸಮಸ್ಯೆ ಇದೆ. ಅಲ್ಲಿ ನಲ್ಲಿ ಸಂಪರ್ಕ ಸಹ ಮಾಡಿಲ್ಲ, ಮಿನಿಟ್ಯಾಂಕ್‌ಗಳಿಂದ ಯುವಕರು ನೀರು ಸಂಗ್ರಹಿಸುತ್ತಾರೆ. ಅಶಕ್ತರು, ವಯಸ್ಸಾದವರು, ಹೆಣ್ಣುಮಕ್ಕಳ ಪರಿಸ್ಥಿತಿ ಹೇಳತೀರದು. ಟ್ಯಾಂಕರ್‌ ಮೂಲಕ ನೀರಿ ಕೊಡಿಸಿ ಎಂದು ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದರೆ ಟ್ಯಾಂಕರ್‌ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.ಈ ಭಾಗದ ಜನಪ್ರತಿನಿಧಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ, ಅಧಿಕಾರಿಗಳು ಸಬೂಬು ಹೇಳುತ್ತಾರೆ. ಕೂಡಲೇ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.ಅಸಹಾಯಕ ಸ್ಥಿತಿ

ದೇವಸಮುದ್ರ ಗ್ರಾ.ಪಂ. ವ್ಯಾಪ್ತಿಯಲ್ಲಿ 20 ಕೊಳವೆಬಾವಿ ಕೊರೆಸಿದ್ದರೂ ನೀರು ಲಭ್ಯವಾಗಿಲ್ಲ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಈಗಲೂ ಗ್ರಾಮಸ್ಥರು ಪೋನ್‌ ಮಾಡಿದರೆ ಕೊಳವೆಬಾವಿ ಕೊರೆಸಿದ್ದೇವೆ. ಮಂಜೂರಾಗಿರುವ ತುಂಗಭದ್ರಾ ಹಿನ್ನೀರು ಯೋಜನೆ ಅಥವಾ ಉತ್ತಮ ಮಳೆಯಿಂದ ಮಾತ್ರ ಸಮಸ್ಯೆ ಬಗೆಹರಿಯುವ ಪರಿಸ್ಥಿತಿ ಇದೆ. ನಮಗೂ ಗ್ರಾಮಗಳಿಗೆ ಹೋಗಲು ಮುಖ ಇಲ್ಲದಂತಾಗಿದೆ.

–ಎಚ್.ಟಿ.ನಾಗರೆಡ್ಡಿ, ಜಿ.ಪಂ. ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.