ವೆಂಕಟೇಶ್‌ಗೆ ಡಿಆರ್‌ಕೆ ರಂಗಸಿರಿ ಪ್ರಶಸ್ತಿ

7

ವೆಂಕಟೇಶ್‌ಗೆ ಡಿಆರ್‌ಕೆ ರಂಗಸಿರಿ ಪ್ರಶಸ್ತಿ

Published:
Updated:

ಬಳ್ಳಾರಿ: ಕಳೆದ 40 ವರ್ಷಗಳಿಂದ ಪ್ರಸಾದನ ಕಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ರಂಗಭೂಮಿ ಕಲಾವಿದ ವೆಂಕಟೇಶ ಅವರನ್ನು ಪ್ರಸಕ್ತ ಸಾಲಿನ ಧರ್ಮಾವರಂ ರಾಮಕೃಷ್ಣಮಾಚಾರ್ಯ (ಡಿಆರ್‌ಕೆ) ರಂಗಸಿರಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಘವ ಮೆಮೋರಿಯಲ್ ಅಸೋಸಿಯೇಶನ್‌ನ ಅಧ್ಯಕ್ಷ ಕೆ.ಚೆನ್ನಪ್ಪ, ಪ್ರಸಾದನ ಕಲೆಯಲ್ಲಿನ  ಇವರ ವಿಶೇಷ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇದೇ 21ರಂದು ಸಂಜೆ 6.30ಕ್ಕೆ ರಾಘವ ಕಲಾಮಂದಿರದಲ್ಲಿ ನಡೆಯಲಿರುವ ಧರ್ಮಾವರಂ ರಾಮಕೃಷ್ಣಮಾಚಾರ್ಯ ಅವರ ಪುಣ್ಯಸ್ಮರಣೆಯ ಶತಮಾನೋತ್ಸವ  ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.`ಆಂಧ್ರ ನಾಟಕ ಪಿತಾಮಹ' ಎಂದು ಖ್ಯಾತರಾಗಿರುವ ಧರ್ಮಾವರಂ ರಾಮ ಕೃಷ್ಣಮಾಚಾರ್ಯ ಅವರು 1912ರಲ್ಲೇ ನಿಧನರಾಗಿದ್ದು, ಅವರ ಪುಣ್ಯಸ್ಮರಣೆಯ ಶತಮಾನೋತ್ಸವದ ಅಂಗವಾಗಿ ಅವರು ರಚಿಸಿರುವ `ಭಕ್ತಪ್ರಹ್ಲಾದ' ಕನ್ನಡ ನಾಟಕವನ್ನು ಮರು ಮುದ್ರಿಸಲಾಗಿದ್ದು, ಇದೇ ವೇಳೆ ಅದರ ಬಿಡುಗಡೆಯೂ ನಡೆಯಲಿದೆ.

ಬಳ್ಳಾರಿ ಮೂಲದವರಾಗಿರುವ ಕೇರಳ ಹೈಕೋರ್ಟ್‌ನ ಮುಖ್ಯ  ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್, ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ  ಕೆ.ಶ್ರೀಧರರಾವ್ ಅವರು ಪುಣ್ಯಸ್ಮರಣೆ ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.ಡಿಆರ್‌ಕೆ ರಂಗಸಿರಿಯಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದ್ದು, ಎಂಜಿನಿಯರಿಂಗ್‌ನ ನಾಲ್ವರು ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಾಗುವುದು. ಕಾರ್ಯಕ್ರಮದ ನಂತರ, ಶಂಕರ ನಾಯ್ಡು ಅನುವಾದಿಸಿರುವ ಡಿಆರ್‌ಕೆ ವಿರಚಿತ `ರೋಷನಾರಾ ಶಿವಾಜಿ' ನಾಟಕವನ್ನು ಅಣ್ಣಾಜಿ ಕೃಷ್ಣಾರೆಡ್ಡಿ ನಿರ್ದೇಶನದಲ್ಲಿ ಪ್ರದರ್ಶಿಸಲಾಗುವುದು.

ಕಲಾ ಪೋಷಕರು ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದರು.ಮಹೇಂದ್ರನಾಥ, ಬಿ.ಸಿದ್ದನಗೌಡ, ರಮೇಶಗೌಡ, ಶಂಕರ ನಾಯ್ಡು ಈ ಸಂದರ್ಭ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry