ವೆಚ್ಚಆಧಾರಿತ ಬೆಳೆ ವರದಿಗೆ ಸೂಚನೆ

7

ವೆಚ್ಚಆಧಾರಿತ ಬೆಳೆ ವರದಿಗೆ ಸೂಚನೆ

Published:
Updated:

ಯಾದಗಿರಿ: ರೈತರು ಬೆಳೆಯುವ ಬೆಳೆಗಳಿಗೆ ಆಗುವ ಬೆಳೆ ವೆಚ್ಚ, ರಸಗೊಬ್ಬರ ಬಳಕೆ, ಬೆಳೆ ಉತ್ಪಾದನೆ ಲಾಭ-ಹಾನಿಗಳ ಕುರಿತಾದ ಖರ್ಚು- ವೆಚ್ಚದ ಬಗ್ಗೆ    ಸಮಗ್ರ ಅಧ್ಯನ ನಡೆಸಿ ವರದಿಯೊಂದನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಸಂಬಂಧಪಟ್ಟ ಅಧಿಕಾರಿಗಳಿಗೆ  ಸಲಹೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬತ್ತ, ಸಜ್ಜೆ, ಮೆಕ್ಕೆಜೋಳ, ಬಿಳಿ ಜೋಳ ಮತ್ತು ರಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಕುರಿತು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

ಈ ಹಿಂದೆ ಜಿಲ್ಲಾ ರೈತಪರ ಸಂಘಟನೆಗಳು ನೀಡಿದ ಮನವಿ ಅನ್ವಯ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೋರಲಾಗಿತ್ತು. ಅದರನ್ವಯ ಸರ್ಕಾರವು ಬತ್ತ, ಬಿಳಿ ಜೋಳ, ಸಜ್ಜೆ, ಮೆಕ್ಕೆಜೋಳ, ಸೇರಿದಂತೆ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ನಿಗದಿಪಡಿಸಿದೆ.  ರೈತರ ಬೆಳೆಗಳಿಗೆ ಇನ್ನೂ ಹೆಚ್ಚಿನ ಬೆಲೆ ಸಿಗಬೇಕೆಂಬ ಸಲಹೆಯೂ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಎಪಿಎಂಸಿ. ಅಧ್ಯಕ್ಷ ಭೀಮನಗೌಡ ಕ್ಯಾತನಾಳ ಹಾಗೂ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರಿಂದ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈತರು ಬೆಳೆಯುವ ಬೆಳೆಗಳ ವೆಚ್ಚ, ವ್ಯವಸಾಯ ವೆಚ್ಚ, ರಸಗೊಬ್ಬರ ವೆಚ್ಚ, ಉತ್ಪಾದನೆ  ಮತ್ತು ಲಾಭ ಹಾನಿಗಳ ಕುರಿತಂತೆ ಈ ಮುಖಂಡರೊಂದಿಗೆ ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಪರಸ್ಪರ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ನೀಡಬೇಕು.  ಈ ಕುರಿತಂತೆ ಅಧಿಕಾರಿಗಳಿಂದ ಮಾಡಲಾಗುವ ಸಮಗ್ರ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಕನಿಷ್ಠ ಸೂಕ್ತ ಬೆಂಬಲ ಬೆಲೆ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.2012-13ನೇ ಸಾಲಿಗೆ ಬತ್ತ ಬೆಳೆ ಸಾಮಾನ್ಯ ಪ್ರತಿ ಕ್ವಿಂಟಲ್‌ಗೆ ರೂ. 1,250, ಎ ಶ್ರೇಣಿ ಬತ್ತಕ್ಕೆ ರೂ. 1,280, ಹೈಬ್ರಿಡ್ ಬಿಳಿ ಜೋಳಕ್ಕೆ ರೂ. 1,500, ಮಾಲ್ದಂಡಿ ಬಿಳಿಜೋಳಕ್ಕೆ ರೂ. 1,520, ಸಜ್ಜೆ, ಮೆಕ್ಕೆಜೋಳಕ್ಕೆ ರೂ. 1,175, ರಾಗಿಗೆ ರೂ.1,500 ನಿಗದಿ ಪಡಿಸಿದೆ.  ಅದರಂತೆ  ಹೆಸರು ಕಾಳುಗೆ ಕನಿಷ್ಠ ಬೆಂಬಲ ಬೆಲೆ ರೂ. 4,400, ತೊಗರಿಗೆ ರೂ. 3850,  ಸೋಯಾಬಿನ್ ಹಳದಿ ರೂ. 2240, ಸೋಯಾಬಿನ್ ಕಪ್ಪು ರೂ.2,200, ಹತ್ತಿ ರೂ. 3,600, ಮತ್ತು 3,900,  ಸೂರ್ಯಪಾನ ರೂ. 3,700 ಸೇರಿದಂತೆ ವಿವಿಧ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳಿಗೆ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry