ಶನಿವಾರ, ಅಕ್ಟೋಬರ್ 19, 2019
28 °C

ವೆಬ್‌ಸೈಟ್‌ಗಳ ಹಂಗು... ಹಿಂಗೂ...

Published:
Updated:

ಬೆಂಗಳೂರು ತುಂಬ `ಅಮೆರಿಕನೈಸ್ಡ್~ ಆಗಿದೆ ಎಂದು ಅಮೆರಿಕನ್ನರೂ ಸೇರಿದಂತೆ ಹಲವರು ನಂಬಿದ್ದಾರೆ. ಇಲ್ಲಿ ಕೆಲಸ ಮಾಡುವವರಲ್ಲಿ ನೂರಕ್ಕೆ ಹತ್ತು ಜನ ಐಟಿ ವೃತ್ತಿಯಲ್ಲಿ ತೊಡಗಿರುವುದರಿಂದ ಮತ್ತು ಇಂಥ ಕಂಪೆನಿಗಳು ಹೆಚ್ಚಾಗಿ ಅಮೆರಿಕನ್ ಆಗಿರುವುದರಿಂದ ಈ ಅಭಿಪ್ರಾಯವಿದೆ.

 

ಆದರೆ ಬೆಂಗಳೂರಿನ ಹುಡುಗ ಹುಡುಗಿಯರು ಜೀನ್ಸ್ ಮತ್ತು ಟಿ-ಶರ್ಟ್ ತೊಟ್ಟು, `ಡೂಡ್~, `ಬೇಬ್~ ಎಂದು ಕರೆದುಕೊಂಡರೂ ಮದುವೆಯ ವಿಷಯದಲ್ಲಿ ಅಮೆರಿಕನ್ನರ ಥರ ಆಗಿಲ್ಲ. ಪ್ರೀತಿ ಹುಡುಕುವ ಪರಿಯಲ್ಲಿ ಅಮೆರಿಕನ್ನರೇ ಬೇರೆ, ನಮ್ಮವರೇ ಬೇರೆ. ಆದರೆ ಈ ತಲೆಮಾರಿನ ಒಂದು ಸಾಮಾನ್ಯ ಅಂಶವೆಂದರೆ, ಎರಡು ದೇಶದವರೂ ಇಂಟರ್‌ನೆಟ್‌ನಲ್ಲೇ ಹೆಚ್ಚಾಗಿ ಸಂಗಾತಿಯನ್ನು ಹುಡುಕುತ್ತಿದ್ದಾರೆ.ಪ್ರೀತಿ ಹುಡುಕುವ ಅಮೆರಿಕನ್ನರಿಗೆ ಮೊದಲ ಹೆಜ್ಜೆ ಡೇಟಿಂಗ್ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳುವುದು. ಬೆಂಗಳೂರಿನ ಮತ್ತು ಭಾರತದ ಮಹಾನಗರಗಳ ಯುವಕ-ಯುವತಿಯರಿಗೆ `ಮ್ಯಾಟ್ರಿಮೋನಿಯಲ್ ಸೈಟ್~ಗಳ ಹಂಗು.

 

ಅಮೆರಿಕನ್ ವೆಬ್‌ಸೈಟ್‌ಗಳು ಮದುವೆಯ ಬಗ್ಗೆ ಮಾತಾಡುವುದೇ ಇಲ್ಲ. `ನಿಮಗೆ ದೀರ್ಘಾವಧಿ ಸಂಬಂಧದಲ್ಲಿ ಆಸಕ್ತಿ ಇದೆಯೆ~, `ಸುಮ್ಮನೆ ಭೇಟಿ ಮಾಡುವ ಆಸಕ್ತಿ ಇದೆಯೆ~, `ಬರೀ ಸ್ನೇಹದಲ್ಲಿ ಆಸಕ್ತಿ ಇದೆಯೆ~ ಹೀಗೆ ಹಲವು ಪ್ರಶ್ನೆಗಳನ್ನು ಕೇಳುತ್ತವೆ.ಭಾರತದಲ್ಲಿ ಡೇಟಿಂಗ್ ವೆಬ್‌ಸೈಟ್‌ಗಳು ಯಶಸ್ವಿಯಾಗಿಲ್ಲ. ಅವು ಮರ್ಯಾದಸ್ಥರಿಗೆ ಅಲ್ಲ ಅನ್ನುವ ಭಾವನೆ ಇದಾಗಿದೆ. ಅಮೆರಿಕನ್ನರಿಗೆ ನಮ್ಮಲ್ಲಿರುವಂಥ `ಮ್ಯಾಟ್ರಿಮೋನಿಯಲ್ ಸೈಟ್~ಗಳ ಕಲ್ಪನೆಯೇ ಇಲ್ಲ. ಅಮೆರಿಕನ್ ಡೇಟಿಂಗ್ ಸೈಟ್‌ಗಳಲ್ಲಿ ಗಂಡಸರೂ ಹೆಂಗಸರೂ ಸಮ ಪ್ರಮಾಣದಲ್ಲಿದ್ದಾರೆ (54-46). ಆದರೆ ನಮ್ಮಲ್ಲಿ ಹುಡುಗಿಯರು ಡೇಟಿಂಗ್ ಸೈಟ್‌ಗಳನ್ನು ನಂಬುವುದಿಲ್ಲ.ಪ್ರಪಂಚದ ಅತಿದೊಡ್ಡ ಡೇಟಿಂಗ್ ಸೈಟ್‌ನ ಹೆಸರು ಪ್ಲೆಂಟಿ ಆಫ್ ಫಿಶ್ (www.pof.com). ಇದರಲ್ಲಿ ದಿನಕ್ಕೆ 30,000 ಜನ ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ಈ ಅಮೆರಿಕನ್ ಸೈಟ್‌ನಲ್ಲಿ ಮೂರು ಕೋಟಿ ಜನ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.ಈ ಸೈಟ್‌ನ ಸಂಸ್ಥಾಪಕ ಮಾರ್ಕಸ್ ಅದರ ಭಾರತೀಯ ವಿಭಾಗವನ್ನು ಈಚೆಗೆ ಮುಚ್ಚಿಬಿಟ್ಟ. ಅವನು ಕೊಟ್ಟ ಕಾರಣ: ಇಲ್ಲಿ ಕಂಡುಬಂದ ವಿಚಿತ್ರ ಅಸಮತೋಲನ. ರಿಜಿಸ್ಟರ್ ಮಾಡಿಕೊಂಡ ಪ್ರತಿ ಹೆಣ್ಣಿಗೆ 65 ಗಂಡಸರು ರಿಜಿಸ್ಟರ್ ಮಾಡಿಕೊಳ್ಳುತ್ತಿದ್ದರು.ಡೇಟಿಂಗ್ ಅಂದರೆ ಜೊತೆ ಬಯಸಿ ಭೇಟಿಯಾಗುವುದು. ಭಾರತದಲ್ಲಂತೂ ಡೇಟಿಂಗ್ ಎಂಬುದು ವೆಬ್‌ಸೈಟ್‌ಗಳ ಸಹಾಯದಿಂದ ಆಗುತ್ತಿಲ್ಲ. ಅಂಥ ಭೇಟಿಗಳನ್ನು ಏರ್ಪಡಿಸಿಕೊಳ್ಳಲು ಸಹಾಯ ಮಾಡುತ್ತಿರುವುದು ವಿವಾಹದ ವೆಬ್‌ಸೈಟ್‌ಗಳು. (ಡೇಟಿಂಗ್ ಅನ್ನೋ ಪದಕ್ಕೆ ಕನ್ನಡದಲ್ಲಿ ಸಮಾನಪದ ಇದ್ದಹಾಗಿಲ್ಲ. `ಭೇಟಿಂಗ್~ ಅನ್ನಬಹುದೆ?)

ಮದುವೆಯ ವೆಬ್‌ಸೈಟ್‌ಗಳು ಅದ್ಭುತವಾಗಿ ಬೆಳೆಯುತ್ತಿವೆ.2010ರಲ್ಲಿ ಆನ್‌ಲೈನ್ ಜಾಹೀರಾತುದಾರರಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡದ್ದೇ ಈ ವೆಬ್‌ಸೈಟ್‌ಗಳು. ಹೋದವರ್ಷ 400 ಕೋಟಿ ರೂಪಾಯಿಯಷ್ಟು ವಹಿವಾಟನ್ನು ವಿವಾಹದ ವೆಬ್‌ಸೈಟ್‌ಗಳು ಮಾಡಿವೆ.ಆನ್‌ಲೈನ್ ಸೈಟ್‌ಗಳನ್ನು ಬಳಸಿ ಸುಖವಾಗಿ ಮದುವೆಯಾದವರ ಬಗ್ಗೆ ಕೇಳಿದ್ದೇನೆ, ಆದರೆ ನನ್ನ ಆಪ್ತ ವಲಯದಲ್ಲಿ ಕಂಡು ಕೇಳಿದ ಅನುಭವಗಳು ವಿಚಿತ್ರ.ಬೆಂಗಳೂರಿನ ದೊಡ್ಡ ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಮಲಯಾಳಿ ಸ್ನೇಹಿತನೊಬ್ಬ ಇಂಥ ಒಂದು ವಿವಾಹದ ಸೈಟ್‌ನಲ್ಲಿ ವಧು ಹುಡುಕತೊಡಗಿದ. ಅವನದೇ ಸಮುದಾಯದ ಹುಡುಗಿಯ ಪರಿಚಯವಾಯಿತು. ಅವಳು ಇಂಗ್ಲೆಂಡಿನಲ್ಲಿದ್ದಳು.ಎರಡು ಮೂರು ತಿಂಗಳು ಆನ್‌ಲೈನ್ ಚಾಟ್ ಮಾಡಿದರು. ಖಛಿನಲ್ಲಿ ಮಾತಾಡಿದರು. ಆದರೆ ಅವಳು ವಿಡಿಯೋ ಚಾಟ್ ಮಾಡಲೇ ಇಲ್ಲ. ಕ್ಯಾಮರಾ ಕೆಟ್ಟುಹೋಗಿದೆ ಎಂದು ಹೇಳುತ್ತಿದ್ದಳು. ಹಾಗೇ ಮುಂದುವರಿದು ಮದುವೆಯೂ ನಿಶ್ಚಯವಾಗಿಹೋಯಿತು. ಅವಳು ಅಪ್ಪ, ಅಮ್ಮ, ತಂಗಿಯ ಜೊತೆ ಮುಂಬೈಗೆ ಬಂದಳು. ನಿಶ್ಚಿತಾರ್ಥ ಮಾಡಿಕೊಂಡರು.

 

ನನ್ನ ಸ್ನೇಹಿತ ತುಂಬ ಸಂಕಟದಲ್ಲಿದ್ದ. ಹುಡುಗಿ ಆನ್‌ಲೈನ್ ಚಾಟ್ ಮಾಡುವಾಗ ಇದ್ದ ಸೌಜನ್ಯ ಎದುರಿಗೆ ಬಂದಾಗ ಇರಲಿಲ್ಲ. ತುಂಬಾ ಒರಟಾಗಿ, ಇವನ ಕುಟುಂಬದವರನ್ನು ಅವಮಾನಿಸುವಂತೆ ನಡೆದುಕೊಂಡಳು. ಹೆಣ್ಣು ಮಾಯೆಯೆಂಬ ವೇದಾಂತದ ಮಾತು ತುಂಬಾ `ಲಿಟರಲ್~ ಆಗಿ ಇವನನ್ನು ಬಾಧಿಸಿತು. ಇವನ ತಲೆಯಲ್ಲಿದ್ದ ಹುಡುಗಿಯೇ ಬೇರೆ! ಅವಳು ತೋರಿಸಿದ್ದ ಫೋಟೋಗಳಂತೆ ಅವಳಿರಲಿಲ್ಲ. ಇವನು ಮದುವೆ ಬೇಡ ಎಂದು ಹೊರಬಂದುಬಿಟ್ಟ. ಈಗವನು ಇನ್ನು ಈ ಆನ್‌ಲೈನ್ ಮ್ಯಾಟ್ರಿಮೋನಿಯಲ್ಸ್ ಸಹವಾಸವೇ ಬೇಡ ಅನ್ನುತ್ತಿದ್ದಾನೆ.ಇನ್ನೊಂದು ಅನುಭವ. ತುಂಬಾ ಸೂಕ್ಷ್ಮವಾದ, ಲಂಡನ್‌ನಲ್ಲಿ ಓದಿದ ಬೆಂಗಳೂರಿನ ರೆಡ್ಡಿ ಹುಡುಗಿ ಇಂಥ ಒಂದು ವೆಬ್‌ಸೈಟ್‌ನಲ್ಲಿ ಒಬ್ಬ ಹುಡುಗನನ್ನು ಕಂಡು ಇಷ್ಟಪಟ್ಟಳು.ಅಮೆರಿಕದಲ್ಲಿದ್ದ ಭಾರತೀಯ ಇಂಜಿನಿಯರ್ ಅವನು. ಅವಳನ್ನು ಭೇಟಿಯಾಗಲು ಇಂಗ್ಲೆಂಡಿಗೆ ಹೋದ. ಅವಳ ಜೊತೆ ಒಂದು ವಾರ ಕಳೆದ. ಅವಳ ಅಪ್ಪ-ಅಮ್ಮನ ನೋಡುವ ನೆಪದಲ್ಲಿ ಬೆಂಗಳೂರಿಗೂ ಬಂದು ಜೊತೆಗಿದ್ದ. ಕೊನೆಗೆ ಅವಳಿಗೆ ಗೊತ್ತಾದ ವಿಷಯ: ಅವನು ಹೈದರಾಬಾದ್‌ನ ಹುಡುಗಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಅವಳ ಜೊತೆಗೂ ಇದೇ ನಾಟಕವಾಡುತ್ತಿದ್ದ. ಬೆಂಗಳೂರಿನ ಹುಡುಗಿ ನೊಂದುಕೊಂಡು ಅವನ ಅಕ್ಕನಿಗೆ ಫೋನ್ ಮಾಡಿ ವಿಷಯ ಹೇಳಿಬಿಟ್ಟಳು. ಕೊನೆಗೆ ಹೈದರಾಬಾದ್ ಹುಡುಗಿ ಪಟ್ಟುಹಿಡಿದು, ಅವನ ಕುಟುಂಬದವರಿಗೂ ಹೇಳದೆ ಅವನನ್ನು ಮದುವೆಯಾದಳಂತೆ.ಹಾಗಾದರೆ ಆನ್‌ಲೈನ್ ಸಂಬಂಧಗಳಲ್ಲಿ ಸುಳ್ಳು ಹೇಳುವುದು ಸುಲಭವೇ? ಮೋಸ ಮಾಡುವುದಕ್ಕೆ ಆ ಮಾಧ್ಯಮ ಸಹಕರಿಸುತ್ತದೆಯೆ? ಹೀಗೆಂದು ಮತ್ತೊಂದು ತಲೆಮಾರಿನವರಿಗೆ ಅನ್ನಿಸಬಹುದು. ಆದರೆ ಇಂಥಲ್ಲಿ ಆಗುತ್ತಿರುವುದೇನೆಂದರೆ, ತಾವು ಹುಡುಕಿ ಮಾಡಿಕೊಂಡ ಸಂಬಂಧಗಳು ಹೇಗೇ ಆದರೂ ಅದಕ್ಕೆ ತಾವೇ ಜವಾಬ್ದಾರಿ ಎಂದು ಹುಡುಗ- ಹುಡುಗಿಯರು ಅರಿತಿದ್ದಾರೆ. ಅಪ್ಪ- ಅಮ್ಮಂದಿರನ್ನು, ಮದುವೆ ಮಾಡಿಸಿದ ನೆಂಟರನ್ನು ಅವರ‌್ಯಾರೂ ದೂರುತ್ತಿಲ್ಲ. ಇನ್ನೊಂದು ವಿಷಯ: ಪ್ರಪಂಚದಲ್ಲಿ ಆಗುತ್ತಿರುವ ವಿವಾಹ ವಿಚ್ಛೇದನಗಳಲ್ಲಿ , ಮೂರರಲ್ಲಿ ಒಂದು ಊಚ್ಚಛಿಚಿಟಟನಿಂದ ಆಗುತ್ತಿದೆಯಂತೆ.ಈ ವರ್ಷ ಬೆಂಗಳೂರಿನ ಚಳಿ ವಿಪರೀತವಾಯಿತು ಎಂದು ಎಲ್ಲರೂ ಹೇಳುತ್ತಿದ್ದಾರೆ. ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸ್ನೇಹಿತರೊಬ್ಬರು ಒಂದು ವಿಷಯ ಗಮನಿಸಿ ಹೇಳಿದರು. ಈ ವರ್ಷ ಚಳಿಗಾಲದಲ್ಲಿ ಪಾರ್ಶ್ವವಾಯು ಪ್ರಕರಣಗಳು ಹೆಚ್ಚಾಗಿವೆಯಂತೆ. ಹಾಗಾಗಿ ಜನರಿಗೆ ಬೆಚ್ಚಗಿರುವಂತೆ ಹೇಳಿದರು.ಬೆಂಗಳೂರಿನಲ್ಲಿ ಸ್ವೆಟರ್ ತೊಡುವ ರೂಢಿ ಈಗ ಸ್ವಲ್ಪ ಬಿಟ್ಟುಹೋಗಿದೆ. ಜ್ಯಾಕೆಟ್‌ಗಳು ಸ್ವೆಟರ್‌ಗಳ ಜಾಗ ಆಕ್ರಮಿಸಿಕೊಂಡಿವೆ. ಸ್ವೆಟರ್ ಹಳೆಯ ಸ್ಟೈಲ್ ಎಂಬ ಅಭಿಪ್ರಾಯವಿರಬಹುದು. ಆದರೆ ಸ್ವೆಟರ್‌ಗಳು ಈಗ ತುಂಬ ಚೆನ್ನಾಗಿರುತ್ತವೆ. ಈಗ ಅಂಗಡಿಗಳಲ್ಲಿ ಕಣ್ಣಿಗೆ ಬೀಳುವ ಸ್ವೆಟರ್‌ಗಳು ಸಮಕಾಲೀನ ವಿನ್ಯಾಸ ಪಡೆದುಕೊಂಡಿವೆ.ಜ್ಯಾಕೆಟ್‌ಗಳಿಗಿಲ್ಲದ ಚೆಲುವು ಸ್ವೆಟರ್‌ಗಳಿಗಿದೆ. ಸ್ವೆಟರ್‌ಗೆ ತಾಯಿಯ ಮಮತೆಯ ಮತ್ತು ಪ್ರಿಯತಮೆಯ ಅಪ್ಪುಗೆಯ ಬೆಚ್ಚನೆಯ ಗುಣ ಇದೆ. ಈ ಜ್ಯಾಕೆಟ್‌ಗಳು ಸ್ವಲ್ಪ ಇಂಡಸ್ಟ್ರಿಯಲ್ ಆಗಿ ಕಾಣುತ್ತವೆ. ನನ್ನ ಸ್ನೇಹಿತ ಹೇಳಿದ ಆರೋಗ್ಯದ ನೆಪದಲ್ಲಾದರೂ ಒಳ್ಳೆಯ ಸ್ವೆಟರ್ ಕೊಂಡು ಧರಿಸಿ!

(ಎಸ್.ಆರ್.ರಾಮಕೃಷ್ಣ ಅವರ `ಸ್ವಪ್ನನಗರಿ~ ಅಂಕಣ ಪ್ರತಿ ಸೋಮವಾರ ಪ್ರಕಟವಾಗಲಿದೆ)

Post Comments (+)