ವೆಬ್‌ಸೈಟ್‌ಗಿಂತ ಇನ್‌ಸೈಟ್ ಮುಖ್ಯ

7

ವೆಬ್‌ಸೈಟ್‌ಗಿಂತ ಇನ್‌ಸೈಟ್ ಮುಖ್ಯ

Published:
Updated:

ರಾಯಚೂರು: ಅಂತರ್ಜಾಲ ಜಗತ್ತಿನ ಈ ದಿನಗಳಲ್ಲಿ ಮನುಷ್ಯ ವೆಬ್‌ಸೈಟ್‌ಗಿಂತ ಇನ್‌ಸೈಟ್‌ನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು.  ಬದುಕಿನಲ್ಲಿ ಬರುವ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಮನೋಬಲ ಬೆಳೆಸುವುದೇ ನಿಜವಾದ ಶಿಕ್ಷಣ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಶ್ರೀ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದರು.ಭಾನುವಾರ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಬಿ.ಎ ಕಾಲೇಜಿನ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.ವ್ಯವಸ್ಥಾಪನೆ ಅಥವಾ ವ್ಯವಸ್ಥಾಪನಾ ಅಧ್ಯಯನ(ಮ್ಯಾನೇಜ್‌ಮೆಂಟ್) ಎಂಬುದಕ್ಕೆ ವಿಶಾಲ ಅರ್ಥವಿದೆ. ಅದೊಂದು ಕಲೆಯಾಗಿದ್ದು, ಜೀವನವಿಧಾನವೂ ಹೌದು. ಇರುವ ಸಂಪನ್ಮೂಲಗಳಲ್ಲಿಯೇ ಅಚ್ಚುಕಟ್ಟಾಗಿ ತನಗಿಷ್ಟವಾದ ರೀತಿ ಮನುಷ್ಯ ಬದುಕುವುದು, ಹಲವಾರು ಕೊರತೆಗಳ ಮಧ್ಯೆಯೂ ಅಚ್ಚುಕಟ್ಟಾಗಿ ಬುದುಕುವುದೂ ವ್ಯವಸ್ಥಾಪನೆ ಎಂದು ಎಂಬಿಎ ವಿದ್ಯಾರ್ಥಿ ಸಮೂಹಕ್ಕೆ ವಿವರಿಸಿದರು.ಮಹಾದೇವಪ್ಪ ರಾಂಪುರೆಯವರ ದೂರದೃಷ್ಟಿಯಿಂದ ರೂಪಗೊಂಡ ಎಚ್‌ಕೆಇ ಸಂಸ್ಥೆ ಈಗ ಬೃಹತ್ ಸಮೂಹ ಸಂಸ್ಥೆಯಾಗಿ ಬೆಳೆದಿದೆ ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಸೂರ್ಯಕಾಂತ ಪಾಟೀಲ, “ಸಂಸ್ಥೆಯು ಈ ಭಾಗದ ಶೈಕ್ಷಣಿಕ ಕೊರತೆ ನೀಗಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ ಮಹಾದೇವಪ್ಪ ರಾಂಪುರೆಯವರ ಕಾರ್ಯ ಸದಾ ಸ್ಮರಣೀಯ” ಎಂದರು.ಸಂಸ್ಥೆಯ ಸಹ ಕಾರ್ಯದರ್ಶಿ ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ಎನ್.ಗಿರಿಜಾಶಂಕರ, ಆಡಳಿತ ಮಂಡಳಿ ಸದಸ್ಯರಾದ ಶಿವಶರಣಪ್ಪ ಮಂಠಾಳೆ, ವಿಶ್ವನಾಥರೆಡ್ಡಿ ಇಟಗಿ, ಎಸ್‌ಎಲ್‌ಎನ್ ಎಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ ಚೆಟ್ಟಿ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸತ್ಕರಿಸಲಾಯಿತು. ಬಸವರಾಜ ಗದುಗಿನ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry