ಬುಧವಾರ, ನವೆಂಬರ್ 13, 2019
28 °C

ವೆಬ್‌ಸೈಟ್, ಬ್ಲಾಗ್, ಪಿಆರ್‌ಓ ಬಳಕೆ

Published:
Updated:

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕೊಂಚ ಸಮಾಧಾನಗೊಂಡಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಚುನಾವಣೆ ಪ್ರಚಾರಕ್ಕಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಬೇಕು ಮತ್ತು ಮತ ಯಾಚಿಸಬೇಕು ಎಂಬ ಗುರಿಯಿಟ್ಟುಕೊಂಡಿರುವ ಅಭ್ಯರ್ಥಿಗಳು, ಅವರ ಬೆಂಬಲಿಗರು ಹೊಸ ರೀತಿ ಆಲೋಚನೆಗಳಿಗೆ ಮೊರೆ ಹೋಗುತ್ತಿದ್ದಾರೆ. ಕೆಲ ಅಭ್ಯರ್ಥಿಗಳು ಹೈಟೆಕ್ ಮಾದರಿ ಅನುಸರಿಸಿದರೆ, ಇನ್ನೂ ಕೆಲವರು ಸಾಂಪ್ರದಾಯಿಕ ಮಾದರಿಯನ್ನೇ ಪಾಲಿಸಲು ಬಯಸುತ್ತಿದ್ದಾರೆ.ಸಿಪಿಎಂ: ಹೋರಾಟ ಮತ್ತು ಪ್ರತಿಭಟನೆ ಮಾಡುತ್ತಲೇ ಬಂದಿರುವ ಸಿಪಿಎಂ ಈ ಬಾರಿ ಚುನಾವಣೆಯಲ್ಲಿ ಅಂತರ್ಜಾಲ ಸಂವಹನ ವೆಬ್‌ಸೈಟ್‌ಗಳನ್ನು ಬಳಸಲು ತೀರ್ಮಾನಿಸಿದೆ. ಗ್ರಾಮಗಳಿಗೆ ಮತ್ತು ನಗರಪ್ರದೇಶಗಳಿಗೆ ಹೋಗುವುದಕ್ಕೆ ಮಾತ್ರ ಸೀಮಿತಗೊಳ್ಳದೆ ವೆಬ್‌ಸೈಟ್ ಮತ್ತು ಇ-ಮೇಲ್‌ಗಳ ಮೂಲಕ ಚುನಾವಣೆ ಪ್ರಚಾರ ಮಾಡಲು ನಿರ್ಧರಿಸಲಾಗಿದೆ. ಬಾಗೇಪಲ್ಲಿ, ಚಿಂತಾಮಣಿ ಮತ್ತು ಗೌರಿಬಿದನೂರಿನಲ್ಲಿ ಕಣಕ್ಕೆ ಇಳಿದಿರುವ ಸಿಪಿಎಂ ಅಭ್ಯರ್ಥಿಗಳು `ಫೇಸ್‌ಬುಕ್' ಪುಟವೊಂದನ್ನು ತೆರೆದು ಮತಯಾಚನೆ ಮಾಡಲು ಬಯಸಿದ್ದಾರೆ.`ಮೊಬೈಲ್ ಫೋನ್‌ಗಳನ್ನೂ ಚುನಾವಣೆ ಸಂದರ್ಭದಲ್ಲಿ ಬಳಸಲು ತೀರ್ಮಾನಿಸಿದ್ದೇವೆ. ಫೋನ್‌ಗಳಲ್ಲಿ ಯಾರೇ ಕರೆ ಸ್ವೀಕರಿಸಿದರೂ ಅವರಿಗೆ ಸಿಪಿಎಂ ಪರ ಮತ ಯಾಚಿಸುವ ಧ್ವನಿ ಸಂದೇಶ ಕೇಳುತ್ತದೆ. ಚುನಾವಣೆ ಆಯೋಗದ ಅನುಮತಿ ಪಡೆಯಬೇಕೆ ಅಥವಾ ಬೇರೆಯೇನಾದರೂ ಕ್ರಮ ತೆಗೆದುಕೊಳ್ಳಬೇಕೆ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮಾಹಿತಿ ತಂತ್ರಜ್ಞಾನದಲ್ಲಿ ಎಷ್ಟೆಲ್ಲ ಅವಕಾಶವಿದೆಯೋ ಅವುಗಳನ್ನೆಲ್ಲ ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಪ್ರಥಮ ಬಾರಿಗೆ ಇಂತಹ ಪ್ರಯೋಗ ಮಾಡುತ್ತಿದ್ದೇವೆ' ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಬಿಜೆಪಿ: ಮಾಹಿತಿ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯ ಪೂರ್ಣಗೊಳಿಸಿರುವ ಬಿಜೆಪಿ ನಾಯಕರು ಕೂಡ ವೆಬ್‌ಸೈಟ್, ಬ್ಲಾಗ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಹಳ್ಳಿಗಾಡಿನ ಜನರಲ್ಲದೇ ನಗರ-ಪಟ್ಟಣ ಪ್ರದೇಶದ ಜನರಿಗೂ ತಲುಪಲು ವ್ಯವಸ್ಥಿತವಾಗಿ ಪ್ರಯತ್ನ ನಡೆಸಿರುವ ಪಕ್ಷದ ಮುಖಂಡರು ಈಗಾಗಲೇ ಅದರ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಬಗೆಬಗೆಯ ತಂತ್ರಗಳನ್ನು ಅನುಸರಿಸಲು ಚರ್ಚಿಸುತ್ತಿದ್ದಾರೆ.`ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸುವುದಲ್ಲದೇ ವೆಬ್‌ಸೈಟ್, ಬ್ಲಾಗ್ ಮತ್ತು ಮೊಬೈಲ್‌ಫೋನ್‌ಗಳ ಮೂಲಕ ಹೆಚ್ಚಿನ ಜನರನ್ನು ತಲುಪಬಹುದು. ಕಾರ್ಯನಿಮಿತ್ತ ಮತ್ತು ಬೇರೆ ಬೇರೆ ಕಾರಣಗಳಿಂದ ಊರ ಹೊರಗಿರುವ ಮತದಾರರನ್ನು ಕೂಡ ಬೇರೆ ಬೇರೆ ತಂತ್ರಜ್ಞಾನಗಳ ಮೂಲಕ ತಲುಪಬಹುದು' ಎಂದು ಬಿಜೆಪಿ ಅಭ್ಯರ್ಥಿ ಎ.ವಿ.ಬೈರೇಗೌಡ ತಿಳಿಸಿದರು.ಜೆಡಿಎಸ್: ಸಾಂಪ್ರದಾಯಿಕ ಶೈಲಿಗೆ ಹೆಚ್ಚಿನ ಮಹತ್ವ ನೀಡಲು ಬಯಸುವ ಜೆಡಿಎಸ್ ಸದ್ಯಕ್ಕೆ ಯಾವುದೇ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಬಯಸುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಿರುವ ಜೆಡಿಎಸ್ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಲುಪಲು ಪ್ರಯತ್ನ ನಡೆಸುತ್ತಿದೆ. ಪಕ್ಷದ ಪ್ರಚಾರ ಚಟುವಟಿಕೆ ತಿಳಿಸಲು, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸುದ್ದಿ-ಚಿತ್ರಗಳನ್ನು ವಿತರಿಸಲು ವಕ್ತಾರರೊಬ್ಬರನ್ನು ಜೆಡಿಎಸ್ ಮುಖಂಡರು ನೇಮಿಸಿದ್ದಾರೆ.ಪಕ್ಷದ ವಕ್ತಾರರು `ಇ-ಮೇಲ್' ಮೂಲಕ ಮಾಧ್ಯಮಗಳಿಗೆ ಸುದ್ದಿ ಮತ್ತು ಚಿತ್ರಗಳನ್ನು ವಿತರಿಸುವುದಲ್ಲದೇ ಪಕ್ಷದ ಪ್ರಚಾರ ಕಾರ್ಯಕ್ರಮ ಮತ್ತು ಸಭೆಗಳ ಕುರಿತು ಮಾಹಿತಿ ಒದಗಿಸುತ್ತಾರೆ. ಪಕ್ಷದಲ್ಲಿ ಯಾವುದೇ ಹೊಸ ಬೆಳವಣಿಗೆ ಕಂಡು ಬಂದಲ್ಲಿ ಅಥವಾ ಬದಲಾವಣೆಗಳು ಆದಲ್ಲಿ, ಅದರ ಕುರಿತು ಮಾಹಿತಿ ನೀಡುವ ಜವಾಬ್ದಾರಿಯನ್ನು ವಕ್ತಾರರಿಗೆ ವಹಿಸಲಾಗಿದೆ.ಕಾಂಗ್ರೆಸ್: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಚುನಾವಣೆ ಪ್ರಚಾರಕ್ಕಾಗಿ, ಮುದ್ರಣ-ದೃಶ್ಯ ಮಾಧ್ಯಮಗಳಿಗೆ ಸುದ್ದಿ-ಚಿತ್ರಗಳನ್ನು ವಿತರಿಸಲು ಬೆಂಗಳೂರಿನಿಂದ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು (ಪಿಆರ್‌ಓ) ನೇಮಿಸಿಕೊಂಡಿದ್ದಾರೆ. ಡಾ.ಕೆ.ಸುಧಾಕರ್ ಎಲ್ಲೇ ಸಂಚರಿಸಿದರೂ `ಪಿಆರ್‌ಓ' ಸಿಬ್ಬಂದಿ ಅದರ ಸುದ್ದಿ-ಚಿತ್ರವನ್ನು ಮಾಧ್ಯಮ ಪ್ರತಿನಿಧಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಯಾವುದೇ ಕಾರ್ಯಕ್ರಮ ಕೈಗೊಂಡರೂ ಮಾಧ್ಯಮದವರಿಗೆ ಮಾಹಿತಿ ತಲುಪಿಸುತ್ತಾರೆ.ಜನರನ್ನು ತಲುಪಲು ಹೈಟೆಕ್ ತಂತ್ರ ಅನುಸರಿಸುತ್ತಿರುವ ಅವರು ಎರಡು ದಿನಗಳ ಹಿಂದಷ್ಟೇ ಮೊಬೈಲ್ ಫೋನ್‌ಗಳಿಗೆ ಎಸ್‌ಎಂಎಸ್‌ಗಳನ್ನು ರವಾನಿಸುವ ಮೂಲಕ ನಾಮಪತ್ರ ಸಲ್ಲಿಸುವ ವಿಷಯವನ್ನು ತಿಳಿಸಿದ್ದರು. ಇತ್ತೀಚೆಗೆ ಅವರೇ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡವರ ಮೊಬೈಲ್ ಫೋನ್‌ಗಳ ಸಂಖ್ಯೆಗಳನ್ನು ಹೊಂದಿರುವ ಅವರು ಅದರ ಮೂಲಕ ಮಾಹಿತಿಯನ್ನು ರವಾನಿಸುವ ಉದ್ದೇಶ ಹೊಂದಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರನ್ನು ತಲುಪಲು ಬಗೆಬಗೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)