ವೇಗದ ಸ್ಕೂಟರ್ಗೆ ಅಪ್ರಿಲಾ ಮುಂದಡಿ

ಭಾರತದಲ್ಲಿ ಸ್ಕೂಟರ್ಗಳಿಗೆ ಉತ್ತಮ ಮಾರುಕಟ್ಟೆಯಿದೆ. ದಶಕಗಳ ಹಿಂದಿನ ವೆಸ್ಪಾ, ಪ್ರಿಯಾ, ಲ್ಯಾಂಬ್ರೆಟಾಗಳಿಂದ ಹಿಡಿದು ಈಗಿನ ಆಕ್ಟಿವಾ, ವೆಸ್ಪಾವರೆಗೂ ಜನರನ್ನು ಸೆಳೆಯುವಲ್ಲಿ ಸ್ಕೂಟರ್ಗಳು ವಿಫಲವಾದದ್ದು ಕಡಿಮೆ. ನಮ್ಮಲ್ಲಿ ಈ ಹಿಂದೆ ಇದ್ದ ಗಿಯರ್ ಸ್ಕೂಟರ್ಗಳೆಲ್ಲಾ 150ಸಿ.ಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದವು. ಗಿಯರ್ ಲೆಸ್ ಸ್ಕೂಟರ್ ಜಾಯಮಾನ ಬಜಾಜ್ ಸನ್ನಿ ಕೈನೆಟಿಕ್ ಹೋಂಡಾದಿಂದ ಆರಂಭವಾದರೂ ಅವು ಚಿಕ್ಕ ಎಂಜಿನ್ ಸ್ಕೂಟರ್ಗಳಾಗಿದ್ದವು.
ನಂತರದ ದಿನಗಳಲ್ಲಿ ಹೆಚ್ಚು ಸದ್ದು ಮಾಡಿದ ಸ್ಕೂಟಿಯಂತೂ ಕೇವಲ 65 ಸಿಸಿ ಸಾಮರ್ಥ್ಯದ್ದು. ಈಗ ಸ್ಕೂಟಿ 110 ಸಿಸಿವರೆಗೂ ಬಂದು ನಿಂತಿದೆ. 110 ಸಿಸಿ ಈಗಿನ ಬಿಸಿ ದೋಸೆ. ಇವುಗಳ ಮಧ್ಯೆಯೇ 125 ಸಿಸಿ ಸಾಮರ್ಥ್ಯದ ಹಲವು ಸ್ಕೂಟರ್ಗಳು ನಮ್ಮ ಮಾರುಕಟ್ಟೆಯಲ್ಲಿವೆ. ಉತ್ತಮ ಶಕ್ತಿ ಇರುವ ಇವುಗಳಿಗೂ ಮಾರುಕಟ್ಟೆ ಉತ್ತಮವಾಗೇ ಇದೆ.
ಆದರೆ ಹೆಚ್ಚು ಶಕ್ತಿ ಬಯಸಿದವರಿಗೆ ನಮ್ಮಲ್ಲಿ ಒಂದೂ ಆಯ್ಕೆ ಇರಲಿಲ್ಲ. ಪಿಯಾಗ್ಯೊ ವೆಸ್ಪಾ 150 ಅವತರಣಿಕೆಯನ್ನು ಬಿಡುಗಡೆ ಮಾಡಿತಾದರೂ, 1 ಲಕ್ಷ ಮೀರಿದ ಅದರ ಬೆಲೆ ಜನರನ್ನು ಅದರಿಂದ ದೂರ ಉಳಿಯುವಂತೆ ಮಾಡಿದೆ. ಜತೆಗೆ ಭಾರಿ ತೂಕದ ದೇಹವನ್ನು ಎಳೆಯುವಲ್ಲೇ ಅದರ ಶಕ್ತಿಯೆಲ್ಲಾ ವ್ಯಯವಾಗುತ್ತದೆ.
ಏಳೆಂಟು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದಿದ್ದ ಹೋಂಡಾ ಇಟೆರ್ನೊ 150 ಸಿಸಿ ಗಿಯರ್ ಸ್ಕೂಟರ್ ಸಹ ತನ್ನ ಕಿರಿಯ ತಂಗಿ ಆಕ್ಟಿವಾದಷ್ಟು ಯಶಸ್ಸು ಗಳಿಸಲಿಲ್ಲ. ಭಾರಿ ಗಾತ್ರದ, 165 ಸಿಸಿ ಎಂಜಿನ್ ಕೈನೆಟಿಕ್ ಬ್ಲೇಜ್ ಸಹ ಹೆಚ್ಚು ಸದ್ದು ಮಾಡಲಿಲ್ಲ. ಇವುಗಳ ನಡುವೆ ಹೆಚ್ಚು ಶಕ್ತಿ ಬಯಸುತ್ತಿರುವವರಿಗೆ ನಿಜಕ್ಕೂ ಒಂದು ಶಕ್ತಿಯುತ ಸ್ಕೂಟರ್ನ ಕೊರತೆ ಕಾಡುತ್ತಲೇ ಇತ್ತು. ಆದರೂ ಈ ವರ್ಗ ಬಹಳ ಚಿಕ್ಕದು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಪಿಯಾಗ್ಯೊ ಸೋದರ ಕಂಪೆನಿ ಅಪ್ರಿಲಾ ಎಸ್ಆರ್150 ಎಂಬ ಸ್ಪೋರ್ಟ್ಸ್ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕಡಿಮೆ ತೂಕ
ವೆಸ್ಪಾ 150ಯಲ್ಲಿರುವ ಎಂಜಿನ್ ಇದರಲ್ಲಿದೆ. ಅಂದರೆ ಈ ಎಂಜಿನ್ ಗರಿಷ್ಠ 11.2 ಬಿಎಚ್ಪಿ ಮತ್ತು 11.5 ಎನ್ಎಂ ಟಾರ್ಕ್ ಶಕ್ತಿ ಉತ್ಪಾದಿಸುತ್ತದೆ. ಒಂದು ಸ್ಕೂಟರ್ಗೆ ಇದು ಸಾಕಷ್ಟು ಶಕ್ತಿಯಾಯಿತು. ಎಸ್ಆರ್ 150 ಫೈಬರ್ ದೇಹದ ಸ್ಕೂಟರ್. ಹೀಗಾಗಿ ತೂಕ ಕಡಿಮೆ ಇದೆ. ಜತೆಗೆ ಅನಗತ್ಯ ಕಾಸ್ಮೆಟಿಕ್ಗಳು ಕಡಿಮೆ ಇರುವುದರಿಂದ ತೂಕ ಮತ್ತಷ್ಟು ಕಡಿಮೆಯಾಗಿದೆ.
125 ಸಿಸಿ ಸಾಮರ್ಥ್ಯದ 8 ಬಿಎಚ್ಪಿ ಶಕ್ತಿ ಉತ್ಪಾದಿಸುವ ಸುಜುಕಿ ಸ್ವಿಷ್, ಆಕ್ಸೆಸ್ಗಳೇ ವೇಗದ ಸ್ಕೂಟರ್ಗಳು. ಹೀಗಿದ್ದಲ್ಲಿ 11.2 ಬಿಎಚ್ಪಿ ಶಕ್ತಿಯ ಹಾಗೂ ಅವಕ್ಕಿಂತಲೂ ಕಡಿಮೆ ತೂಕವಿರುವ ಎಸ್ಆರ್150ಯ ವೇಗವನ್ನು ಊಹಿಸಿಕೊಂಡರೇ ವೇಗದ ಸ್ಕೂಟರ್ ಪ್ರೇಮಿಗಳಿಗೆ ರೋಮಾಂಚನವಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಇದು ಸ್ಪೋರ್ಟ್ಸ್ ಸ್ಕೂಟರ್. ಹೀಗಾಗಿ ಅದರ ವಿನ್ಯಾಸ ಸಾಂಪ್ರದಾಯಿಕ ಸ್ಕೂಟರ್ಗಳಿಗಿಂತ ಭಿನ್ನವಾಗಿದೆ. ಹಿಂಬದಿ, ಮುಂಬದಿ ಮಡ್ಗಾರ್ಡ್ಗಳು ತೀರಾ ಮೇಲಕ್ಕೆ ಎತ್ತಿಕೊಂಡಂತೆ ಕಾಣುತ್ತದೆ. ಫ್ರಂಟ್ ಶೀಲ್ಡ್ನಲ್ಲಿ ಹೆಡ್ಲೈಟ್ ಅಳವಡಿಸಲಾಗಿದೆ. ಅದೂ ಡಿಸಿ ಹೆಡ್ಲೈಟ್. ಸೂಕ್ಷ್ಮವಾಗಿ ಗಮನಿಸದಿದ್ದರೆ ಅದು ಪ್ರೊಜೆಕ್ಟರ್ ಲ್ಯಾಂಪ್ನಂತೆ ಭಾಸವಾಗುತ್ತದೆ. ಇನ್ನು ಇಂಡಿಕೇಟರ್ ಲ್ಯಾಂಪ್ಗಳು ಹ್ಯಾಂಡಲ್ ಬಾರ್ನಲ್ಲಿವೆ.
ಸ್ಪೋರ್ಟಿ ಲುಕ್
ಎರಡು ಬಣ್ಣದ ಸೀಟ್ ಸ್ಕೂಟರ್ಗೆ ಸ್ಪೋರ್ಟಿ ನೋಟ ನೀಡುತ್ತದೆ. ಹಲವೆಡೆ ಗಡಸು ರಬ್ಬರ್ ಬಳಸಿರುವುದರಿಂದ ಫಿನಿಷಿಂಗ್ ಅತ್ಯುತ್ತಮವಾಗಿದೆ. ಇದು ಸ್ಪೋರ್ಟ್ಸ್ ಸ್ಕೂಟರ್ ಆಗಿರುವುದರಿಂದ 14 ಇಂಚಿನ, ಹೆಚ್ಚು ಅಗಲವಾದ ಟೈರ್ಗಳನ್ನು ನೀಡಲಾಗಿದೆ. ಮುಂಬದಿಯಲ್ಲಿ ಟೆಲಿಸ್ಕೋಪಿಕ್, ಹಿಂಬದಿಯಲ್ಲಿ ಮೋನೊಶಾಕ್ಸ್ ಸಸ್ಪೆನ್ಷನ್ ಇದೆ. ಹೀಗಾಗಿ ರಸ್ತೆ ಹಿಡಿತ ಉತ್ತಮವಾಗಿರಲಿದೆ. ಮುಂಬದಿಯಲ್ಲಿ 220 ಎಂಎಂನ ಡಿಸ್ಕ್ ಬ್ರೇಕ್ ಇರುವುದರಿಂದ ನಿಯಂತ್ರಣ ಸುಲಭ.
ಇಷ್ಟೆಲ್ಲಾ ಇದ್ದರೂ ಇದರ ಎಕ್ಸ್ಷೋರೂಂ ಬೆಲೆ 65 ಸಾವಿರ ರೂಪಾಯಿ ಇದೆ. ಈ ಮೂಲಕ ಅಪ್ರಿಲಾ ದರಸಮರಕ್ಕೆ ಇಳಿದಿದೆ. ಅಪ್ರಿಲಾ ಸಾಹಸಕ್ಕೆ ನಮ್ಮ ಮಾರುಕಟ್ಟೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.