ಬುಧವಾರ, ಮೇ 12, 2021
23 °C

ವೇಗ ನಿಯಂತ್ರಕ ಅಳವಡಿಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಅಳವಡಿಸುವುದನ್ನು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಮತ್ತು ಬೆಂಗಳೂರು ಪ್ರವಾಸಿ ಟ್ಯಾಕ್ಸಿ ಮಾಲೀಕರ ಸಂಘ ತೀವ್ರವಾಗಿ ವಿರೋಧಿಸಿವೆ.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, `ರಾಜ್ಯದ ರಸ್ತೆಗಳು ಉತ್ತಮವಾಗಿರುವಾಗ ಈ ನಿರ್ಧಾರ ಅವೈಜ್ಞಾನಿಕವಾಗಿದೆ. ವೇಗ ನಿಯಂತ್ರಕ ಅಳವಡಿಸಿದರೆ ನಗರದಿಂದ ಹುಬ್ಬಳ್ಳಿ, ಮೈಸೂರಿಗೆ ಪ್ರಯಾಣಿಸಲು ಕ್ರಮವಾಗಿ 18 ಹಾಗೂ 5 ಗಂಟೆ ಬೇಕಾಗುತ್ತದೆ. ನಿಯಂತ್ರಕ ಅಳವಡಿಕೆ ಕುರಿತು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೂಕ್ತ ಚಿಂತನೆ ನಡೆಸಬೇಕಿದೆ~ ಎಂದರು.`ಈಗಾಗಲೇ ಇಂಧನ, ಟೈರ್, ವಿಮಾ ದರಗಳು ಏರಿಕೆಯಾಗಿವೆ. ಟೋಲ್, ಹಾಗೂ ವಾಹನಗಳ ಬಿಡಿ ಭಾಗಗಳನ್ನು ಕೂಡ ಏರಿಕೆ ಮಾಡಲಾಗಿದೆ. ಹೀಗಿರುವಾಗ ವೇಗ ನಿಯಂತ್ರಕ ಅಳವಡಿಸಿದರೆ ವಾಹನ ಮಾಲೀಕರ ಮೇಲೆ ಇನ್ನಷ್ಟು ಹೊರೆ ಬಿದ್ದಂತಾಗುತ್ತದೆ. ಇದರ ಬದಲು ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಇಂಟರ್‌ಸೆಪ್ಟರ್‌ಗಳನ್ನು ಅಳವಡಿಸಬಹುದು~ ಎಂದು  ಸಲಹೆ ನೀಡಿದರು.`ರಾಜ್ಯದಲ್ಲಿ ಇಂಧನದ ಮೇಲಿನ ಸೆಸ್ 9 ರೂಪಾಯಿ ಇದೆ. ಆದರೆ ಪಂಜಾಬ್, ಆಂಧ್ರಪ್ರದೇಶ ಹಾಗೂ ತಮಿಳುನಾಡು ಕ್ರಮವಾಗಿ ರೂ 4.80, ರೂ 6.80 ಹಾಗೂ ರೂ 6.40 ಮಾತ್ರ ಸೆಸ್ ವಿಧಿಸುತ್ತಿವೆ. ರಾಜ್ಯದಲ್ಲಿ ಸೆಸ್ ದರವನ್ನು ಎರಡು ರೂಪಾಯಿಗಳಷ್ಟು ಕಡಿಮೆ ಮಾಡಿದರೆ ವಾಹನ ಮಾಲೀಕರಿಗೆ ಅನುಕೂಲವಾಗುತ್ತದೆ~ ಎಂದರು.ಬೆಂಗಳೂರು ಪ್ರವಾಸಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಜಿ.ಶಿವಣ್ಣ, `ತಾಂತ್ರಿಕವಾಗಿ ಕೂಡ ವೇಗ ನಿಯಂತ್ರಕ ಅಳವಡಿಕೆ ಸಮಸ್ಯೆ ಸೃಷ್ಟಿಸಲಿದೆ.ಎಂಜಿನ್ ಬಾಳಿಕೆ ಮೇಲೆ ವೇಗ ನಿಯಂತ್ರಕ ಮಾರಕ ಪರಿಣಾಮ ಬೀರಲಿದೆ. ವಾಹನಗಳು ಕೆಟ್ಟಾಗ ಪ್ರತಿ ಬಾರಿಯೂ ಈ ಸಾಧನವನ್ನು ಬೇರ್ಪಡಿಸಬೇಕಾಗುತ್ತದೆ~ ಎಂದು ಹೇಳಿದರು.ಸಂಘದ ಉಪಾಧ್ಯಕ್ಷ ರವೀಂದ್ರ, ಪ್ರಧಾನ ಕಾರ್ಯದರ್ಶಿ ಆರ್.ಕೆ. ಹೊಳ್ಳ, ಜಂಟಿ ಕಾರ್ಯದರ್ಶಿ ದೇವರಾವ್, ಖಜಾಂಚಿ ಸತ್ಯರಾವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.