ಶನಿವಾರ, ಡಿಸೆಂಬರ್ 14, 2019
20 °C

ವೇಣೂರಿನ ಬಾಹುಬಲಿಗೆ ಮಹಾ ಮಜ್ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೇಣೂರಿನ ಬಾಹುಬಲಿಗೆ ಮಹಾ ಮಜ್ಜನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಫಲ್ಗುಣಿ ನದಿ ತೀರದಲ್ಲಿ ಕಣ್ಮನ ಸೆಳೆಯುವ ಪುಟ್ಟ ಊರು ವೇಣೂರು. ಕವಿ ರತ್ನಾಕರ ವರ್ಣಿಯ ಹುಟ್ಟೂರು ಜೈನಕಾಶಿ ಎಂದೇ ಹೆಸರಾದ ಮೂಡುಬಿದ್ರೆಯಿಂದ ಇದು 20 ಕಿ.ಮೀ. ದೂರದಲ್ಲಿದೆ. ಭಗವಾನ್ ಬಾಹುಬಲಿಯ ಚಿತ್ತಾಕರ್ಷಕ ಮೂರ್ತಿಯಿಂದಾಗಿ ವೇಣೂರು ಬಹಳ ಹೆಸರುವಾಸಿಯಾಗಿದೆ.ಸುಂದರ ವನಸಿರಿಯ ಮಧ್ಯೆ ಕಂಗೊಳಿಸುತ್ತಿರುವ ಈ ಊರನ್ನು ಎಷ್ಟು ಚಂದದ ಊರು `ಏನೂರು~, `ಏಣೂರು~ ಎಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಎಂಟು ಊರುಗಳ ಒಕ್ಕೂಟ ಇಲ್ಲಿತ್ತು, ಅದಕ್ಕಾಗಿ `ಎಣ್ಣೂರು~ ಎಂದಾಗಿ ಮತ್ತೆ ಅದೇ `ವೇಣೂರು~ ಆಯಿತು ಎಂಬುದು ಐತಿಹ್ಯ. ಸ್ಥಳೀಯ ಕೆಲ ಹಿರಿಯರ ಪ್ರಕಾರ, ಏಳು ನೂರು ಜೈನ ಶ್ರಾವಕರ ಮನೆಗಳು ಇಲ್ಲಿದ್ದ ಕಾರಣ `ಏಳ್ನೂರು~ ಎಂದೆನಿಸಿ ಮುಂದೆ ಇದು ವೇಣೂರು ಎಂದು ಚಿರಪರಿಚಿತವಾಯಿತಂತೆ.ಮಹಾ ಮಸ್ತಕಾಭಿಷೇಕ

ಇಲ್ಲಿನ ಮಂದಸ್ಮಿತ ಬಾಹುಬಲಿಗೆ 28ರಿಂದ ಫೆಬ್ರುವರಿ 5ರ ವರೆಗೆ ವೈಭವೋಪೇತವಾಗಿ ನಡೆಯುವ ಮಹಾಮಸ್ತಕಾಭಿಷೇಕ ಒಂದರ್ಥದಲ್ಲಿ ಜೈನರ ಮಹಾ ಕುಂಭಮೇಳ.ವಿಶ್ವಶಾಂತಿ, ತ್ಯಾಗ, ಅಹಿಂಸೆ ಮತ್ತು ಪ್ರೀತಿಯ ಸಂದೇಶವನ್ನು ಬಿತ್ತರಿಸುವುದು ಮತ್ತು ಲೋಕ ಕಲ್ಯಾಣ ಇದರ ಉದ್ದೇಶ.ಪ್ರತಿ ವರ್ಷ ಫಾಲ್ಗುಣ ಶುದ್ಧ 15ನೇ ದಿನ ಇಲ್ಲಿ ರಥೋತ್ಸವ. ಇಲ್ಲಿ ಮೊದಲ ಮಹಾಮಸ್ತಕಾಭಿಷೇಕ ನಡೆದದ್ದು 1928ರಲ್ಲಿ. ಸಂಪ್ರದಾಯದಂತೆ ಶ್ರವಣಬೆಳಗೊಳ, ವೇಣೂರು, ಕಾರ್ಕಳ ಮತ್ತು ಧರ್ಮಸ್ಥಳದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.ಇತಿಹಾಸ, ವಿಶೇಷ

407 ವರ್ಷಗಳ ಹಿಂದೆ (ಕ್ರಿ.ಶ 1604) ತಿಮ್ಮಣ್ಣಾಜಿಲ ಅರಸರು ಇಲ್ಲಿ 35 ಅಡಿ ಎತ್ತರದ ಭಗವಾನ್ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.ಅಜಿಲ ವಂಶ ವಿಜಯನಗರದ ಸಾಳ್ವ ವಂಶಸ್ಥರಾಗಿದ್ದು 600 ವರ್ಷ ಇಲ್ಲಿ ಆಡಳಿತ ನಡೆಸಿತ್ತು. ಇಲ್ಲಿದ್ದ ಏಳಂತಸ್ತಿನ ಅರಮನೆ ಶತ್ರುಗಳಿಂದ ನಾಶವಾದ ಬಳಿಕ ಪಕ್ಕದ ಅಳದಂಗಡಿಗೆ ಹೋಗಿ ಅದನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡಿತು.ಅಳದಂಗಡಿಯ ಈಗಿನ ಅರಸರು ಡಾ. ಪದ್ಮಪ್ರಸಾದ ಅಜಿಲ. ಈ ಸಲದ ಮಹಾಮಸ್ತಕಾಭಿಷೇಕಕ್ಕೆ ಅವರದೇ ನೇತೃತ್ವ.ಶ್ರವಣಬೆಳಗೊಳ, ಕಾರ್ಕಳ ಮತ್ತು ಧರ್ಮಸ್ಥಳದಲ್ಲಿ ಬಾಹುಬಲಿ ಸ್ವಾಮಿ ಮೂರ್ತಿ ಬೆಟ್ಟದ ಮೇಲಿದ್ದರೆ, ವೇಣೂರಿನಲ್ಲಿ ಮಾತ್ರ ಸಮತಟ್ಟಾದ ಸ್ಥಳದಲ್ಲಿದೆ. ಕಗ್ಗಲ್ಲಿನಿಂದ ಹಾಸಿ ಕಟ್ಟಿದ ಮುಖ ಮಂಟಪವಿದೆ. ಎದುರು ಮಾನಸ್ತಂಭವಿದ್ದು ವಿಗ್ರಹದ ಪೀಠವನ್ನೇರುವ ಉಭಯ ಪಾರ್ಶ್ವಗಳಲ್ಲಿ ಕಲ್ಲಿನಿಂದ ನಿರ್ಮಿಸಿದ ಆನೆಗಳಿವೆ.ಮೂರ್ತಿಯ ಹಿಂದೆ ಕಲ್ಲಿನ ಚಪ್ಪರ ನಿರ್ಮಿಸಲಾಗಿದೆ. ಮೂರ್ತಿಯ ಪಾದಗಳ ನಡುವಿನಿಂದ ಎರಡು ಬಳ್ಳಿಗಳು ತೊಡೆಗಳನ್ನು ಬಳಸಿ ಕೈಯ ಮಣಿಗಂಟಿನ ಮೇಲಿಂದ ತೋಳುಗಳವರೆಗೆ ಸುತ್ತುವರಿದ ಚಿತ್ರಣವಿದೆ. ಗುಂಗುರಾದ ತಲೆಗೂದಲು, ಮಂದಸ್ಮಿತ ಮುಖಮುದ್ರೆ ಕಣ್ಮನ ಸೆಳೆಯುತ್ತದೆ.ಪಕ್ಕದಲ್ಲಿ ಶ್ರೀ ಆದೀಶ್ವರ ಸ್ವಾಮಿ ಬಸದಿ, ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ಶ್ರೀ ಶಾಂತೀಶ್ವರ ಸ್ವಾಮಿ ಬಸದಿ, 24 ತೀರ್ಥಂಕರರ ಬಸದಿ, ಅಕ್ಕಂಗಳ ಬಸದಿ, ಬಿನ್ನಾಣಿ ಸದಿ ಇದೆ. ಅನತಿ ದೂರದಲ್ಲಿ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನವೂ ಇದ್ದು, ವೇಣೂರು ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಬೆಳಗುತ್ತಿದೆ, ಬೆಳೆಯುತ್ತಿದೆ.ನಾಡ ಹಬ್ಬ

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಜೈನರು ಹಾಗೂ ಜೈನೇತರರನ್ನು ಆಮಂತ್ರಿಸಿ, ಸರ್ವಧರ್ಮೀಯರನ್ನೂ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಮಹಾ ಮಸ್ತಕಾಭಿಷೇಕವನ್ನು ನಾಡಹಬ್ಬವಾಗಿ ಆಚರಿಸಲಾಗುವುದು ಎಂದು ಹೇಳುತ್ತಾರೆ ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರೂ ಆದ ವಿ.ಧನಂಜಯ ಕುಮಾರ್.ನವದೆಹಲಿಯ ಏಲಾಚಾರ್ಯ ವಿದ್ಯಾನಂದ ಮುನಿ ಮಹಾರಾಜರ ಆಶೀರ್ವಾದ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಮೂಡುಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ ಪಾಲ್ಗೊಳ್ಳಲು ಅನೇಕ ಮುನಿಗಳು, ಆರ್ಯಿಕೆಯರು ವೇಣೂರಿನತ್ತ ಆಗಮಿಸುತ್ತಿದ್ದಾರೆ.ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದ ಸ್ವಾಗತ ಸಮಿತಿ ಭರದಿಂದ ಸಿದ್ಧತೆ ನಡೆಸುತ್ತಿದೆ. ಮಹಾ ಮಸ್ತಕಾಭಿಷೇಕಕ್ಕಾಗಿ ಅಟ್ಟಣಿಗೆ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ.ವೇಣೂರನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳ ದುರಸ್ತಿ ಹಾಗೂ ಡಾಂಬರೀಕರಣ ಕಾಣುತ್ತಿವೆ. ಇದೆಲ್ಲದರ ಜತೆಗೇ ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನೂ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.ವೇಣೂರು  ಎಲ್ಲಿದೆ?

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ಪೂರ್ವಕ್ಕೆ 55 ಕಿ.ಮೀ ದೂರದಲ್ಲಿದೆ ವೇಣೂರು. ಮಂಗಳೂರು, ಮೂಡುಬಿದ್ರೆ, ಬೆಳ್ತಂಗಡಿ, ಬಂಟ್ವಾಳದಿಂದ ಬಸ್ ಸೌಲಭ್ಯವಿದೆ. ಸಮೀಪದ ರೈಲು ಮತ್ತು ವಿಮಾನ ನಿಲ್ದಾಣ ಮಂಗಳೂರು.ಮಾಹಿತಿಗೆ: ಮಹಾ ಮಸ್ತಕಾಭಿಷೇಕ ಸಮಿತಿ, ವೇಣೂರು - 574 242. ದೂ: 08256  286488, 286288.

ಪ್ರತಿಕ್ರಿಯಿಸಿ (+)