ವೇತನಕ್ಕಾಗಿ ಪೌರ ಕಾರ್ಮಿಕರ ಪ್ರತಿಭಟನೆ

7

ವೇತನಕ್ಕಾಗಿ ಪೌರ ಕಾರ್ಮಿಕರ ಪ್ರತಿಭಟನೆ

Published:
Updated:

ಹಾಸನ: ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಕಾರ್ಮಿಕರಿಗೆ ಸುಮಾರು ಒಂದೂವರೆ ತಿಂಗಳಿಂದ ವೇತನ ನೀಡದಿರುವುದನ್ನು ವಿರೋಧಿಸಿ ಬುಧವಾರ ಹಾಸನ ಜಿಲ್ಲಾ ಪೌರ ಕಾರ್ಮಿಕರ ಸಂಘದವರು ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿ ಅಧ್ಯಕ್ಷ ಸಿ.ಆರ್. ಶಂಕರ್ ಅವರಿಗೆ ಮನವಿ ಪತ್ರ ನೀಡಿದರು.`ಹತ್ತಾರು ವರ್ಷಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಅನೇಕ ಕಾರ್ಮಿಕರನ್ನು ಈಚೆಗೆ ಏಕಾಏಕಿ ಕೆಲಸದಿಂದ ತೆಗೆದಿದ್ದಾರೆ. ಮಾತ್ರವಲ್ಲದೆ ಅವರಿಗೆ 40 ದಿನಗಳಿಂದ ವೇತನ ನೀಡಿಲ್ಲ. ಸರ್ಕಾರದ ಆದೇಶದಂತೆ ಪೌರ ಕಾರ್ಮಿಕರಿಗೆ ದಿನಕ್ಕೆ 180 ರೂಪಾಯಿ ಕೂಲಿ ನೀಡಬೇಕು.ಆದರೆ ಇಲ್ಲಿ ಕಡಿಮೆ ಕೂಲಿ ನೀಡಿದ್ದಾರೆ. ಕೂಡಲೇ ಈ ಅನ್ಯಾಯ ಸರಿಪಡಿಸಬೇಕು~ ಎಂದು ಸಂಘದ ಅಧ್ಯಕ್ಷ ಧರ್ಮೇಶ್ ಆಗ್ರಹಿಸಿದರು. ವೇತನ ನೀಡುವುದರ ಜತೆಗೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಕೂಡಲೇ ಕೆಲಸ ನೀಡಬೇಕು.ಏಪ್ರಿಲ್‌ನಿಂದಲೇ ಪೂರ್ವಾನ್ವಯವಾಗುವಂತೆ ನಮಗೆ 180 ರೂಪಾಯಿ ವೇತನ ನೀಡಬೇಕು, ಉದ್ಯೋಗ ಕಳೆದುಕೊಂಡಿರುವುದರಿಂದ ನೂರಾರು ಪೌರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ನಾವು ಗುತ್ತಿಗೆ ಕಾರ್ಮಿಕರಾಗಿದ್ದರೂ ನಗರಸಭೆ ಪ್ರಧಾನ ಮಾಲೀಕನಾಗಿರುವುದರಿಂದ ಮಧ್ಯಪ್ರವೇಶ ಮಾಡಿ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನಾಕಾರರಿಂದ ಅರ್ಜಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, `ಇವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ವಿಚಾರ ನಗರಸಭೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಮಾನವೀಯತೆಯ ದೃಷ್ಟಿಯಿಂದ ಇವರಿಗೆ ಸೌಲಭ್ಯಗಳನ್ನು ನೀಡಬೇಕೆಂಬ ನೆಲೆಯಲ್ಲಿ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ~ ಎಂದು ಭರವಸೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry