ವೇತನಕ್ಕೆ ಒತ್ತಾಯಿಸಿ ಜೈಲ್‌ಭರೋ

7

ವೇತನಕ್ಕೆ ಒತ್ತಾಯಿಸಿ ಜೈಲ್‌ಭರೋ

Published:
Updated:

ರಾಯಚೂರು: ಕಾರ್ಮಿಕರಿಗೆ ಕನಿಷ್ಠ 10ಸಾವಿರ ರೂಪಾಯಿಗಳ ವೇತನ ನೀಡಬೇಕು ಹಾಗೂ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಸಮಿತಿ(ಜೆಸಿಟಿಯು) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜೈಲ್‌ಭರೋ ಚಳವಳಿ ನಡೆಸಿದರು.ಮಧ್ಯಾಹ್ನ ಕಾರ್ಮಿಕರ ಸಂಘಟನೆಗಳ  ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದ ಟಿಪ್ಪು ಸುಲ್ತಾನ ಉದ್ಯಾನವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಕಾರ್ಮಿಕರ ಸಂಘಟನೆಗಳ ಹಕ್ಕುಗಳ ಮೇಲಿನ ದಾಳಿ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ ಎಂದರು.ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಬೆಲೆ ಎರಿಕೆಯನ್ನು ತಡೆಯಬೇಕು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಉದ್ಯೋಗ ಸೃಷ್ಟಿಸಲು ಯೋಜನೆ ರೂಪಿಸಬೇಕು, ಕಾರ್ಮಿಕ ಕಾನೂನು ಜಾರಿಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳಿಂದ ಬಂಡವಾಳ ಹಿಂದೆ ಪಡೆಯುವುದನ್ನು  ನಿಲ್ಲಿಸಬೇಕು, ಕಾಯಂ ಹಾಗೂ ನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಬೋನಸ್, ಭವಿಷ್ಯನಿಧಿ ಪಾವತಿಗೆ ಇರುವ ಎಲ್ಲ ಮಿತಿಗಳನ್ನು ತೆಗೆದು ಹಾಕಿ ಗ್ರಾಚ್ಯುಟಿ ಮೊತ್ತ ಹೆಚ್ಚು ಮಾಡಿ ಎಲ್ಲ ಕಾರ್ಮಿಕರಿಗೆ ದೊರಕುವಂತೆ ಯೋಜನೆಯನ್ನು ಸರಳೀಕರಣಗೊಳಿಸಬೇಕು ಎಂದು ಆಗ್ರಹಿಸಿದರು.ಎಲ್ಲ ಕಾರ್ಮಿಕರಿಗೆ ಕಡ್ಡಾಯವಾಗಿ ನಿವೃತ್ತಿ ವೇತನ ನೀಡಬೇಕು, 45 ದಿನದೊಳಗಾಗಿ ಕಾರ್ಮಿಕ ಸಂಘಟನೆಗಳ ನೋಂದಣಿ ಕಡ್ಡಾಯಗೊಳಿಸಬೇಕು, ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ 87 ಮತ್ತು 98ನೇ ಸಮಾವೇಶಗಳ ತಿದ್ದುಪಡಿಗಳನ್ನು ಕೂಡಲೇ ದೃಢೀಕರಿಸಬೇಕು ಎಂದು ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ. ಚನ್ನಬಸಯ್ಯ, ವಿ.ಎಚ್ ಮಾಸ್ತರ್, ಸಂಧ್ಯಾ, ಮಲ್ಲಿಕಾ, ವೀರೇಶ, ಡಿ.ಎಸ್ ಶರಣಬಸವ ಗೋಕರಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry