ಶನಿವಾರ, ಮೇ 15, 2021
22 °C

ವೇತನ ತಾರತಮ್ಯ: ಅಧಿಕಾರಿಗಳಿಗೆ ಬುಲಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಂಧ್ರಪ್ರದೇಶ ಹಾಗೂ ಇತರ ರಾಜ್ಯಗಳಿಂದ ವಲಸೆ ಬರುವ ಕೂಲಿ ಕಾರ್ಮಿಕರಿಗೆ ನೀಡುವ ವೇತನದಲ್ಲಿ ತಾರತಮ್ಯ ಎಸಗುತ್ತಿರುವ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಖುದ್ದು ಹಾಜರು ಇರಬೇಕು ಎಂದು ಸೋಮವಾರ ಆದೇಶಿಸಿದೆ.`ಕೂಲಿ ಮಾಡುವವರಿಗೆ ಸರಿಯಾದ ವೇತನ ಕೊಡಲು ಬಾರದು ಎಂದರೆ ಏನರ್ಥ, ಸರ್ಕಾರ ಇರುವುದು ಯಾವ ಉದ್ದೇಶಕ್ಕೆ? ಬಡವರನ್ನು ಇಷ್ಟು ಕನಿಷ್ಠವಾಗಿ ನೋಡುವುದು ಎಂದರೆ ಹೇಗೆ? ಇದು ತುಂಬಾ ದುರದೃಷ್ಟಕರದ ಸಂಗತಿಯಾಗಿದೆ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.`ಮೆಹಬೂಬನಗರ ಜಿಲ್ಲಾ ಪಲಮೂರಿ ವಲಸೆ ಕಾರ್ಮಿಕರ ಒಕ್ಕೂಟ~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.ರಾಯಚೂರಿನ ಸಿರವಾರ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಡ್ಡರಹಳ್ಳಿ ಬಳಿ ನಿರ್ಮಾಣ ಆಗುತ್ತಿರುವ ತುಂಗಭದ್ರಾ ಕಾಲುವೆ ಕಾಮಗಾರಿಯಲ್ಲಿ 300ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಸರ್ಕಾರ ನೇಮಿಸಿಕೊಂಡಿದ್ದರೂ ಸ್ಥಳೀಯರಿಗೆ ನೀಡುವಷ್ಟು ವೇತನ ಅವರಿಗೆ ನೀಡುತ್ತಿಲ್ಲ ಎನ್ನುವುದು ಅರ್ಜಿದಾರರ ದೂರು.`1996ರಲ್ಲಿ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪೆನಿ ಇದೇ ರೀತಿ ವರ್ತಿಸಿದ್ದಾಗ  ಹೈಕೋರ್ಟ್, ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡು ವಲಸೆ ಕಾರ್ಮಿಕರ ಹಿತ ಕಾಪಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.ಕಾರ್ಮಿಕರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಮಾರ್ಗಸೂಚಿಯನ್ನೂ ನ್ಯಾಯಾಲಯ ರೂಪಿಸಿತ್ತು. ಆದರೆ ಇವೆಲ್ಲವನ್ನೂ ಧಿಕ್ಕರಿಸಿರುವ ಸರ್ಕಾರ ಪುನಃ ಅದೇ ಕ್ರಮ ಮುಂದುವರಿಸಿದೆ. ಈ ಬಗ್ಗೆ ನಾವು ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ~ ಎಂದು ಅರ್ಜಿದಾರರು ದೂರಿದ್ದಾರೆ.ಈ ಆರೋಪಗಳ ಕುರಿತು ನ್ಯಾಯಮೂರ್ತಿಗಳು ಹೆಚ್ಚಿನ ಮಾಹಿತಿ ಬಯಸಿದ್ದಾರೆ. ಆದುದರಿಂದ ಸಂಬಂಧಿಸಿದ ಅಧಿಕಾರಿಗಳು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರು ಇರುವಂತೆ ನಿರ್ದೇಶಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.