ವೇತನ ತಾರತಮ್ಯ ನಿವಾರಿಸಿ

7

ವೇತನ ತಾರತಮ್ಯ ನಿವಾರಿಸಿ

Published:
Updated:

ಯಾದಗಿರಿ: ವೇತನ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೌಢಶಾಲಾ ಸಹ ಶಿಕ್ಷಕರು ಶನಿವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಶಿಕ್ಷಕರು, ಸುಭಾಷ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು.ಪ್ರೌಢಶಾಲಾ ಸಹ ಶಿಕ್ಷಕರ ವೇತನ ತಾರತಮ್ಯ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಹಲವಾರು ಶಿಫಾರಸ್ಸು ಮಾಡಿವೆ. ಶಿಕ್ಷಣ ಇಲಾಖೆ ಆಯುಕ್ತರು 5 ನೇ ವೇತನ ಆಯೋಗದಲ್ಲಿ ರೂ.10,800-20,025 ಗಳಿಗೆ ಸಮಾನವಾದ ವೇತನವನ್ನು ಪ್ರೌಢಶಾಲಾ ಶಿಕ್ಷಕರಿಗೆ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ. ಪ್ರೌಢಶಾಲಾ ಸಹಶಿಕ್ಷಕರಿಗೆ ತತ್ಸಮಾನ ವೃಂದದ ಪೊಲೀಸ್ ಇನ್ಸ್‌ಪೆಕ್ಟರ್, ತಾಂತ್ರಿಕ ಕಾಲೇಜಿನ ಉಪನ್ಯಾಸಕರು, ಅರಣ್ಯ ಅಧಿಕಾರಿಗಳು ರೂ.11,400-21,600 ವೇತನ ಪಡೆಯುತ್ತಿದ್ದು, ಪ್ರೌಢಶಾಲಾ ಸಹಶಿಕ್ಷಕರಿಗೆ ರೂ.10,800-20,025 ವೇತನ ನೀಡುವ ಮೂಲಕ ತಾರತಮ್ಯ ನಿವಾರಿಸಬೇಕು ಎಂದು ಆಗ್ರಹಿಸಿದರು.ಪ್ರೌಢಶಾಲಾ ಸಹಶಿಕ್ಷಕರ ಬಡ್ತಿ ಪ್ರಮಾಣವನ್ನು ಶೇ.75 ರಿಂದ 100ಕ್ಕೆ ಏರಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ವೈದ್ಯಕೀಯ ಭತ್ಯೆ, ಕನ್ನಡ ತೇರ್ಗಡೆ ವಿಶೇಷ ಬಡ್ತಿ, ಕಾಲಮಿತಿ ಬಡ್ತಿ, ಸ್ವಯಂಚಾಲಿತ ಬಡ್ತಿ ಮುಂತಾದ ಸೌಲಭ್ಯಗಳನ್ನು ನೀಡಬೇಕು. ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಪದ್ಧತಿಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವೀಧರರಿಗೆ ಮುಂಬಡ್ತಿ ನೀಡಬೇಕು. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಶಿಕ್ಷಕರ ನಿಗದಿಗೊಳಿಸಿರುವ ವಾರ್ಷಿಕ ಬಡ್ತಿಯನ್ನು ಹಿಂಪಡೆಯಲು ಸೂಚಿಸಿರುವ ಪ್ರಸ್ತಾವನೆಯನ್ನು ರದ್ದುಪಡಿಸಬೇಕು. ಅರೆಕಾಲಿಕ ಶಿಕ್ಷಕರಿಗೆ ಸೇವೆಗೆ ಸೇರಿದ ದಿನದಿಂದ ವಾರ್ಷಿಕ ಬಡ್ತಿ ರಜೆ ಸೌಲಭ್ಯ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.ಎಸ್ಸೆಸ್ಸೆಲ್ಸಿ  ಮೌಲ್ಯಮಾಪನ ದರ, ಪರೀಕ್ಷಾ ದರ, ದಿನಭತ್ಯೆಗಳನ್ನು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಸಮನಾಗಿ ನೀಡಬೇಕು. ಶಿಕ್ಷಣ ಸಂಯೋಜಕ ಹುದ್ದೆಗಳನ್ನು ವಿಷಯ ಪರಿವೀಕ್ಷಕರ ಹುದ್ದೆಗಳಾಗಿ ಪರಿವರ್ತಿಸಬೇಕು. ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರೌಢಶಾಲಾ ವಿಭಾಗಗಳನ್ನು ಪ್ರತ್ಯೇಕಿಸಿದ್ದು, ಉಪಪ್ರಾಂಶುಪಾಲರ ಹುದ್ದೆಗಳನ್ನು ಸೃಷ್ಟಿಸಬೇಕು. ಪ್ರತಿತಿಂಗಳು ಒಂದನೇ ತಾರೀಖಿನಂದು ಸರ್ಕಾರವೇ ನೇರವಾಗಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಶಂಕರಲಿಂಗಪ್ಪ, ಪದಾಧಿಕಾರಿಗಳಾದ ಅಶೋಕುಮಾರ ಕೆಂಭಾವಿ, ಸಿದ್ಧಪ್ಪ ಆವಂತಿ, ಎಂ.ಎಸ್. ಪಾಟೀಲ, ಎಂ.ಕೆ. ಬೀರನೂರ, ನಾಗೇಂದ್ರಪ್ಪ ಕೋತಂಬರಿಕರ್, ಚಂದ್ರಕಾಂತ ಕೊಣ್ಣೂರ,  ಬಸವರಾಜ ವಂದಲಿ, ವಿ.ಎಂ. ಬೆಳ್ಳಬ್ಬಿ, ರಾಜಶೇಖರಗೌಡ, ಎಂ.ಕೆ. ಚಂದ್ರಯ್ಯ, ರೇಖು ಚವ್ಹಾಣ, ಅರವಿಂದ ಪಾಟೀಲ, ವಿಠಲ್ ಚವ್ಹಾಣ, ಎಸ್.ಎಂ. ಬೂತಾಳ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry