ಶನಿವಾರ, ಏಪ್ರಿಲ್ 17, 2021
31 °C

ವೇತನ ಬಿಡುಗಡೆ: ಶಿಕ್ಷಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ವೇತನ ಬಿಡುಗಡೆ ವಿಳಂಬವಾಗುತ್ತಿದೆ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರು ಜಿಲ್ಲಾ ಪಂಚಾಯಿತಿ ಕಚೇರಿ ಸಮುಚ್ಚಯದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಕೆ.ವಿ.ಕಲ್ಲೇಶ್, ಶಿಕ್ಷಕರಿಗೆ 6 ತಿಂಗಳಿನಿಂದ ವೇತನವೇ ಬಿಡುಗಡೆಯಾಗದೆ ಬಹಳ ತೊಂದರೆಯಾಗಿದೆ. ಈ ಕೂಡಲೇ ವೇತನ ನೀಡಲು ಅನುದಾನ ಬಿಡುಗಡೆಗೊಳಿಸಬೇಕು. ಆ ಮೂಲಕ ಶಿಕ್ಷಕರು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಶಿಕ್ಷಕರಿಂದ ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಫುಲ್ಲಾ, ಶಿಕ್ಷಣ ಇಲಾಖೆ ವ್ಯವಸ್ಥಾಪಕ ದೇವೇಗೌಡ ಅವರನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಪಡೆದರು. ಶಿಕ್ಷಕರ ಸಂಘದ ಮುಖಂಡರ ಜತೆ ಚರ್ಚಿಸಿ ಯೋಜನೇತರ ಖಾತೆಯಲ್ಲಿರುವ ರೂ. 52 ಲಕ್ಷವನ್ನು ಸಂಬಳ ಖಾತೆಗೆ ವರ್ಗಾಯಿಸಿ ತಾತ್ಕಾಲಿಕ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ಉಳಿದ ರೂ. 1 ಕೋಟಿ ವೇತನವನ್ನು ಸರ್ಕಾರದಿಂದ ತಕ್ಷಣ ಬಿಡುಗಡೆ ಮಾಡಿಸುವ ಆಶ್ವಾಸನೆ ನೀಡಿದರು.ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಆರ್.ಪ್ರಭಾಕರ್, ಮುಖ್ಯೋಪಾಧ್ಯಾಯರ ಸಂಘ ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಉಮಾಮಹೇಶ್ವರಪ್ಪ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ ದೇವರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.