ಗುರುವಾರ , ನವೆಂಬರ್ 21, 2019
20 °C

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:

ಬೀದರ್: ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ನಗರದ ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ ಸಂಘದ ಕಾರ್ಯಕರ್ತರು, ಅಲ್ಲಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.ಬಿಸಿಯೂಟ ನೌಕರರು ಅತ್ಯಲ್ಪ ವೇತನದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಬಳ ಹೆಚ್ಚಳದ ಬಗ್ಗೆ ಅಧಿಕಾರಿಗಳು, ಸರ್ಕಾರ ಭರವಸೆ ನೀಡುತ್ತಲೇ ಬಂದಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ದೂರಿದ್ದಾರೆ.ಬರ ಪೀಡಿತ ತಾಲ್ಲೂಕುಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲೂ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರನ್ನು ಜನಶ್ರೀ ವಿಮಾ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಿದ್ದು, ಬಿಸಿಯೂಟ ನೌಕರರನ್ನು ಇದರ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಘದ ಜಿಲ್ಲಾ ಅಧ್ಯಕ್ಷೆ ರೇಖಾ ಹಮಿಲಾಪೂರಕರ್, ಕಾರ್ಯದರ್ಶಿ ವೀರಭದ್ರಪ್ಪ ತವದಿ, ಸಿಐಟಿಯು ಜಿಲ್ಲಾ ಮುಖಂಡ ಆರ್.ಪಿ. ರಾಜಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)