ವೇತನ ಹೆಚ್ಚಳ: ನೌಕರರ ಆಗ್ರಹ

7

ವೇತನ ಹೆಚ್ಚಳ: ನೌಕರರ ಆಗ್ರಹ

Published:
Updated:

ಬೆಂಗಳೂರು: `ಅಧಿಕಾರಿಗಳ ವೇತನ ಸಮಿತಿ~ಯು ಕೂಡಲೇ ತನ್ನ ವರದಿಯನ್ನು ಸಲ್ಲಿಸಬೇಕು ಮತ್ತು ಸರ್ಕಾರ ಆ ವರದಿಯನ್ನು ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ಒತ್ತಾಯಿಸಿದ್ದಾರೆ.ಸಂಘವು ನಗರದ ಬಹುಮಹಡಿ ಕಟ್ಟಡದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಕೇಂದ್ರ ಸರ್ಕಾರ ತನ್ನ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದ ನಂತರ ರಾಜ್ಯ ಸರ್ಕಾರವು, ಹೆಚ್ಚುವರಿ ಮುಖ್ಯ ಕಾರ್ಯ ಕಾರ್ಯದರ್ಶಿ ಸುಬೀರ ಹರಿಸಿಂಗ್ ಅವರ ನೇತೃತ್ವದಲ್ಲಿ `ಅಧಿಕಾರಿಗಳ ವೇತನ ಸಮಿತಿ~ಯನ್ನು ರಚಿಸಿತು. ಆ ಸಮಿತಿ ಫೆ.16ರೊಳಗೆ ವರದಿ ನೀಡಬೇಕು. ಆದರೆ ಈವರೆಗೂ ವರದಿ ನೀಡುವ ಬಗ್ಗೆ ಯಾವುದೇ ಸೂಚನೆಗಳು ಸಿಕ್ಕಿಲ್ಲ. ಈ ತಿಂಗಳ 25ರೊಳಗೆ ಸಮಿತಿಯು ಸರ್ಕಾರಕ್ಕೆ ವರದಿ ನೀಡಬೇಕು.ಆ ವರದಿ ಆಧರಿಸಿ ಮುಖ್ಯಮಂತ್ರಿ ಅವರು ನೌಕರರ ವೇತನ ಪರಿಷ್ಕರಣೆಯನ್ನು ಬಜೆಟ್‌ನಲ್ಲಿ ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಶೇ 52ರಷ್ಟು ವ್ಯತ್ಯಾಸವಿದೆ. ಬೇರೆ ರಾಜ್ಯಗಳಲ್ಲಿ ಈ ತಾರತಮ್ಯ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬೆಲೆಗಳು ಗಗನಕ್ಕೇರಿರುವುದರಿಂದ ರಾಜ್ಯ ಸರ್ಕಾರಿ ನೌಕರರು ಸಂಕಷ್ಟ ಎದುರಿಸುವಂತಾಗಿದೆ. ಸಮಿತಿಯು ಈ ತಿಂಗಳ 25ರೊಳಗೆ ವರದಿ ನೀಡದಿದ್ದರೆ. ಸಂಘದ ಕಾರ್ಯಕಾರಿ ಸಮಿತಿಯ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.ಹಲ್ಲೆ, ದೌರ್ಜನ್ಯ ನಿಲ್ಲಲಿ: ಜನ ಪ್ರತಿನಿಧಿಗಳು ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡುವುದು ಮತ್ತು ದೌರ್ಜನ್ಯ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಆದ್ದರಿಂದ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು.  ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೈರಪ್ಪ ಒತ್ತಾಯಿಸಿದರು.ಹೋರಾಟ ಮಾಡದೆ ಕೆಲ ಬೇಡಿಕೆಗಳು ಈಡೇರಿವೆ. ಹಾಗೆಂದ ಮಾತ್ರಕ್ಕೆ ಸಂಘ ನಿಷ್ಕ್ರಿಯ ಆಗಬಾರದು. ನಮ್ಮ ಬೇಡಿಕೆಗಳು ಈಡೇರದಿದ್ದರೆ ಉಗ್ರ ಹೋರಾಟಕ್ಕೆ ಎಲ್ಲರೂ ಸಿದ್ಧರಿರಬೇಕು ಎಂದು ಸಂಘದ ಉಪಾಧ್ಯಕ್ಷ ಪ್ರಭಾಕರ್ ಪ್ರಸಾದ್ ಹೇಳಿದರು.ಸಂಘದ ಉಪಾಧ್ಯಕ್ಷ ಪಟೇಲ್ ಪಾಂಡು, ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಖಚಾಂಚಿ ಚೌಡಯ್ಯ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಪುಟ್ಟೇಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry