ವೇದವ್ಯಾಸ ಶ್ರೀನಿವಾಸ ಆಚಾರ್ಯ ಸಂಘ ಜೀವಿ- ಶ್ರೇಷ್ಠ ನಾಯಕ

7

ವೇದವ್ಯಾಸ ಶ್ರೀನಿವಾಸ ಆಚಾರ್ಯ ಸಂಘ ಜೀವಿ- ಶ್ರೇಷ್ಠ ನಾಯಕ

Published:
Updated:

ಡಾ. ವೇದವ್ಯಾಸ ಶ್ರೀನಿವಾಸ (ವಿ.ಎಸ್) ಆಚಾರ್ಯ ಒಬ್ಬ ಸಮೂಹ ನಾಯಕ ಅಲ್ಲದಿರಬಹುದು, ಆದರೆ ಅವರೊಬ್ಬ ಶ್ರೇಷ್ಠ ನಾಯಕ ಎಂಬುದು ನನ್ನ ಭಾವನೆ. ಉಡುಪಿ ಪುರಸಭೆಯನ್ನು ದೇಶದ ಮಾದರಿ ಪುರಸಭೆಯಾಗಿ ಪರಿವರ್ತಿಸಿದಾಗಲೇ ಅವರ ನಾಯಕತ್ವದ ಗುಣ ಗೊತ್ತಾಗಿತ್ತು. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಅಕ್ಕಿಗೆ ಬರಗಾಲ ಬಂದಿತು. ಆಗ ಜಿಲ್ಲೆಯ ಗಡಿಯಲ್ಲಿ ಹಾಕಲಾಗಿದ್ದ ತಡೆ ಗೇಟುಗಳನ್ನು ಮುರಿದು ಕಾನೂನು ಭಂಗ ಮಾಡುವ ಮೂಲಕ ಅವರು ಇಡೀ ಜಿಲ್ಲೆ ಮತ್ತು ರಾಜ್ಯದ ನಾಯಕರಾಗಿ ಗಮನ ಸೆಳೆದರು. ಒಬ್ಬ ಯಶಸ್ವಿ ವೈದ್ಯ ರಾಜಕೀಯದಲ್ಲಿಯೂ ಯಶಸ್ವಿ ಆಗಬಹುದು ಎಂಬುದಕ್ಕೆ ಅವರೊಬ್ಬ ಉತ್ತಮ ನಿದರ್ಶನವಾಗಿಬಿಟ್ಟರು. ಅವರ ವ್ಯಕ್ತಿತ್ವವೇ ಹಾಗೆ.ವಿ.ಎಸ್. ಆಚಾರ್ಯ ಅವರು ಜ್ಞಾನದ ಭಂಡಾರ. ಯೋಜನೆ, ಹಣಕಾಸು ವಿಚಾರದಲ್ಲಿ ಅವರಿಗೆ ವಿಶೇಷ ಕಾಳಜಿ ಇತ್ತು. ಆಳವಾದ ಅಧ್ಯಯನ ನಡೆಸಿ ಎಲ್ಲಾ ವಿಚಾರಗಳನ್ನೂ ತಿಳಿದುಕೊಳ್ಳುತ್ತಿದ್ದರು. ಅದು ಅವರನ್ನು ಪಕ್ಷದ `ಚಿಂತನ ಚಿಲುಮೆ~ ಎಂಬಂತೆ ಮಾಡಿಬಿಟ್ಟಿತು. ಹಲವು ರಾಜಕೀಯ, ಮಠಗಳ ಒತ್ತಡಗಳ ನಡುವೆಯೂ ಅವರು ಪಕ್ಷದ ನೀತಿ, ನಿಲುವನ್ನು ಬಿಟ್ಟುಕೊಟ್ಟವರಲ್ಲ. ಕೊನೆ ಉಸಿರಿನವರೆಗೂ ನಂಬಿದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿಯೇ ಬಾಳಿದರು.ನಾನು ಸಂಘದಿಂದ ಜನಸಂಘಕ್ಕೆ ಬಂದವ, ಆಚಾರ್ಯರು ಜನಸಂಘದಿಂದ ಸಂಘಕ್ಕೆ ಬಂದವರು. ನನಗಿಂತ ಅವರು 10 ವರ್ಷ ಕಿರಿಯರು. ಆದರೆ ಪಕ್ಷದ ಸಂಘಟನೆ, ಹೊಣೆಗಾರಿಕೆಯಲ್ಲಿ ನಾವು ಸಮಕಾಲೀನರು ಎನ್ನಬೇಕು. ಪುತ್ತೂರಿನಲ್ಲಿನ ಪುರಸಭೆಯನ್ನು ನಾನೂ ಮುನ್ನಡೆಸಿದ್ದೆ. ಆದರೆ ಪುತ್ತೂರಿನದು ಉಡುಪಿಯಷ್ಟು ಶ್ರೀಮಂತ ಪುರಸಭೆ ಅಲ್ಲ. ಹೀಗಾಗಿ ಅವರಂತೆ ಗಮನ ಸೆಳೆಯುವ ರೀತಿ ಕೆಲಸ ಮಾಡುವುದು ನನಗೆ ಸಾಧ್ಯವಾಗಲಿಲ್ಲ.1970ರ ಸಮಯದಲ್ಲಿ ಅಕ್ಕಿಗೆ ಬರಗಾಲ ಬಂದಿತ್ತು ಎಂದೆನಲ್ಲ, ಅದು ಜಿಲ್ಲೆಯ ರಾಜಕೀಯ ಚಿತ್ರಣವನ್ನೇ ಬದಲಿಸಿದ ಘಟನೆ ಎನ್ನಬೇಕು. ಆಗಿನ್ನೂ ದಕ್ಷಿಣ ಕನ್ನಡ ಅವಿಭಜಿತ ಜಿಲ್ಲೆ. ಜಿಲ್ಲೆಯ ಗಡಿ ಭಾಗಗಳಲ್ಲಿ ಅಕ್ಕಿ ಸಾಗಣೆಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಅದೆಷ್ಟೋ ಕುಟುಂಬಗಳು ಹೊತ್ತಿನ ತುತ್ತಿಗೂ ಪರದಾಡುವಂತಾಗಿತ್ತು. ಆಹಾರ ಸಾಗಣೆ ನಿರ್ಬಂಧವನ್ನು ಮುರಿಯುವ ಹೋರಾಟಕ್ಕೆ ಆಚಾರ್ಯ ನೇತೃತ್ವ ವಹಿಸಿದ್ದರು. ಅದರಲ್ಲಿ ಯಶಸ್ವಿಯಾಗುತ್ತಿದ್ದಂತೆಯೇ ಅವರು ಉಡುಪಿ ಪುರಸಭೆ ನಾಯಕರಾಗಿಯಷ್ಟೇ ಉಳಿಯಲಿಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆಯ ನಾಯಕರಾದರು. ಅಷ್ಟೇಕೆ ರಾಜ್ಯ ಮಟ್ಟದಲ್ಲಿಯೂ ದೊಡ್ಡದಾಗಿ ಗುರುತಿಸಿಕೊಂಡರು. ಆಮೇಲಿನದು ತುರ್ತು ಪರಿಸ್ಥಿತಿಯ ಕಾಲ.ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಮತ್ತು ಆಚಾರ್ಯ ಅವರು ಮೂರು ತಿಂಗಳು ಮಂಗಳೂರು ಸಬ್‌ಜೈಲ್‌ನಲ್ಲಿ ಬಂಧನದಲ್ಲಿದ್ದೆವು. ನಂತರ ನನ್ನನ್ನು ಬಳ್ಳಾರಿ ಜೈಲಿಗೆ ಕಳುಹಿಸಿದರು. ನಾನು ಬಂಧನಕ್ಕೆ ಒಳಗಾಗುವ ಮೊದಲು ಒಂದೂವರೆ ತಿಂಗಳು ಭೂಗತನಾಗಿದ್ದೆ. ಆಚಾರ್ಯ ಅವರನ್ನು ಬಳಿಕ ಬಂಧಿಸಲಾಗಿತ್ತು. ಆದರೂ ನಮ್ಮೆಲ್ಲರ ಗುರಿ ಒಂದೇ ಆಗಿತ್ತು. ಕಾಂಗ್ರೆಸ್ ದುರಾಡಳಿತವನ್ನು ವಿರೋಧಿಸಿ ನಾವೆಲ್ಲ ಸ್ವಂತ ಕೆಲಸಗಳನ್ನು ಮರೆತು ಹೋರಾಟಕ್ಕೆ ಧುಮುಕಿದ್ದೆವು. ಜನರ ಪ್ರೀತಿ, ವಿಶ್ವಾಸ ಗಳಿಸುವುದಕ್ಕೆ ನಮಗೆ ಇದೂ ಒಂದು ಕಾರಣವಾಗಿತ್ತು.ಆರಂಭದಿಂದಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೇ ಬಿಜೆಪಿಯ ಭದ್ರ ಕೋಟೆ ಎಂಬುದು ಸಾಬೀತಾಗಿತ್ತು. ಅಡ್ವಾಣಿ ತಮ್ಮ ಆತ್ಮಕಥನದಲ್ಲಿ ಇದಕ್ಕಾಗಿಯೇ ಕರ್ನಾಟಕದಲ್ಲಿನ ಪಕ್ಷದ ಬೆಳವಣಿಗೆ ವಿಚಾರ ಬಂದಾಗ ಜಿಲ್ಲೆಯಲ್ಲಿ ನನ್ನ ಮತ್ತು ಆಚಾರ್ಯ ಅವರ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಾರೆ.1983ರ ವಿಧಾನಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಬಿಜೆಪಿ ರಾಜ್ಯದಲ್ಲಿ ಒಟ್ಟು 18 ಸ್ಥಾನಗಳನ್ನು ಗೆದ್ದಿತ್ತು. ಈ ಪೈಕಿ ಜಿಲ್ಲೆಯಲ್ಲಿ 8 ಸ್ಥಾನಗಳಲ್ಲಿ ಪಕ್ಷ ಗೆದ್ದಿತ್ತು. ಅದರಲ್ಲಿ ನಾನು, ಆಚಾರ್ಯರೂ ಸೇರಿದ್ದೆವು. ಆಚಾರ್ಯರು ಆಗ ನಮ್ಮ ಸದನದ ನಾಯಕರಾಗಿದ್ದರು. ಮುಂದೆ ಹೆಗಡೆ ಅವರೊಂದಿಗೆ ವಿರಸ ತಲೆದೋರಿದ ನಂತರ ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ಶಾಸಕರ ಬಲ ಎರಡಕ್ಕೆ ಕುಸಿದಿತ್ತು. ಆಗ ಗೆದ್ದವರು ಯಡಿಯೂರಪ್ಪ ಮತ್ತು ವಸಂತ ಬಂಗೇರ ಮಾತ್ರ. ಬಂಗೇರ ಅವರು ಹೆಗಡೆ ಬಣಕ್ಕೆ ಸೇರಿದ ನಂತರ ಉಳಿದದ್ದು ಯಡಿಯೂರಪ್ಪ ಮಾತ್ರ. ನಂತರ ನಡೆದ ಬೆಳವಣಿಗೆಗಳು ಎಲ್ಲರಿಗೂ ಗೊತ್ತೇ ಇದೆ. ಬಿಜೆಪಿ ಅಧಿಕಾರಕ್ಕೂ ಬಂದುಬಿಟ್ಟಿದೆ.

ವಿರೋಧ ಪಕ್ಷಗಳು ಸಹ ಮೆಚ್ಚಿಕೊಳ್ಳುವಂತಹ ಆಡಳಿತ ಗುಣ ಆಚಾರ್ಯ ಅವರಲ್ಲಿತ್ತು. ಪೊಲೀಸ್ ಸ್ಟೇಷನ್‌ನಲ್ಲಿ ಪ್ರಭಾವ ಬಳಸಿ ಪ್ರಕರಣ ಸಡಿಲಗೊಳಿಸುವಂತಹ `ಚಿಲ್ಲರೆ~ ಕೆಲಸಗಳಿಗೆ ಅವರು ಇಳಿಯುತ್ತಿರಲಿಲ್ಲ. ಪ್ರಭಾವ ಬೀರುವ ವಿಚಾರವೇ ಅವರಿಗೆ ಕಿರಿಕಿರಿ ಉಂಟುಮಾಡುತ್ತಿತ್ತು. ಹೀಗಾಗಿಯೇ ಅವರನ್ನು ಜನನಾಯಕ ಅಲ್ಲ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಅವರು ನಂಬಿದ್ದ ತತ್ವ, ಸಿದ್ದಾಂತ ಮತ್ತು ಪಕ್ಷ ಪ್ರೀತಿ ಅವರನ್ನು ಇಲ್ಲಿಯವರೆಗೂ ಕಳಂಕರಹಿತ ನಾಯಕನನ್ನಾಗಿ ಮಾಡಿಬಿಟ್ಟಿತ್ತು.ಅವರ ದೌರ್ಬಲ್ಯಗಳನ್ನು ಹೇಳುವುದು ನನಗೆ ಸಾಧ್ಯವೇ ಇಲ್ಲ. ಏಕೆಂದರೆ ಅವರು ಎಂದೂ ಕೋಪಿಸಿಕೊಂಡಿದ್ದನ್ನು ಕಂಡಿಲ್ಲ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದಲೇ ಮಾತನಾಡಿಸುವ ಗುಣ ಅವರಲ್ಲಿತ್ತು. ಅದಕ್ಕಾಗಿಯೇ ಏನೋ, ಉಡುಪಿಯ ಎರಡು ಕಡೆ ಅವರು ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಎರಡೂ ಕಡೆ ರೋಗಿಗಳ ದಂಡೇ ಇರುತ್ತಿತ್ತು.ನನಗೆ 75 ವರ್ಷವಾದಾಗ ಅಂದರೆ 2005ರಲ್ಲಿ ನಾನು ಸಕ್ರಿಯ ರಾಜಕೀಯದಿಂದ ದೂರ ಉಳಿದೆ. ಆದರೆ ಅಧಿಕಾರದ ರುಚಿ ನೋಡಿದ ಬಿಜೆಪಿ ಅನರ್ಹ ಅಭ್ಯರ್ಥಿಗಳನ್ನೂ ತಂದು ನಿಲ್ಲಿಸಿ ಹೇಗಾದರೂ ಸರ್ಕಾರ ರಚಿಸಲೇಬೇಕು ಎಂಬ ಹಟಕ್ಕೆ ಬಿದ್ದಾಗ ನನಗೂ ಮೈಯೆಲ್ಲ ಉರಿದು ಹೋಯಿತು. ನನ್ನ ನಿಲುವು ಕಂಡು ಸ್ವತಃ ಆಚಾರ್ಯರೂ ನನ್ನ ಬಳಿ ಬಂದಿದ್ದರು. ಪಕ್ಷದ ಹಿತವೇ ಮುಖ್ಯ ಎಂಬ ನನ್ನ ನಿಲುವನ್ನು ಅವರೂ ಒಪ್ಪಿಕೊಂಡಿದ್ದರು. ಆದರೆ ಸರ್ಕಾರದ ಒಂದು ಭಾಗವಾದ್ದರಿಂದ ಅವರು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಾನು ಇಂದಿಗೂ ಬಿಜೆಪಿಯಲ್ಲೇ ಇದ್ದೇನೆ. ನನ್ನನ್ನು ಯಾರೂ ಪಕ್ಷದಿಂದ ಉಚ್ಚಾಟಿಸಿಲ್ಲ. ಆದರೆ ದಿನಕಳೆದಂತೆ ಬಿಜೆಪಿ ಸಾಗುತ್ತಿರುವ ಹಾದಿ ಕಂಡು ನನಗೆ ದಿಗಿಲಾಗಿದೆ. ಆಚಾರ್ಯ ಅವರಂತಹ ಮಾರ್ಗದರ್ಶಕರು ಪಕ್ಷಕ್ಕೆ ಇದ್ದಾರೆ ಎಂಬ ಸಮಾಧಾನ ನನಗೆ ಇಲ್ಲಿಯವರೆಗೂ ಇದ್ದಿತು. ವಿಧಿ ಇದೀಗ ನನ್ನಿಂದ ಆ ಸಮಾಧಾನವನ್ನೂ ಕಿತ್ತುಕೊಂಡಿದೆ.ಲೇಖಕರು ಪುತ್ತೂರಿನ ಬಿಜೆಪಿಯ

 ಹಿರಿಯ ನಾಯಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry