ವೇದಾಂತ ಪ್ರತಿಷ್ಠಾನ ತೆಕ್ಕೆಗೆ ಅಂಗನವಾಡಿ ಕೇಂದ್ರಗಳು

7

ವೇದಾಂತ ಪ್ರತಿಷ್ಠಾನ ತೆಕ್ಕೆಗೆ ಅಂಗನವಾಡಿ ಕೇಂದ್ರಗಳು

Published:
Updated:

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನಾಲ್ಕು ತಾಲ್ಲೂಕುಗಳಲ್ಲಿನ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯು ವೇದಾಂತ ಪ್ರತಿಷ್ಠಾನದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರಗಳಿಗೆ ಹೊಸ ಸ್ವರೂಪ ನೀಡಲು ಸಿದ್ಧತೆ ಮಾಡಲಾಗುತ್ತಿದೆ.

 

ಅಂಗನವಾಡಿ ಕೇಂದ್ರಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊತ್ತಿರುವ ವೇದಾಂತ ಪ್ರತಿಷ್ಠಾನ ಹೊಸ ರೀತಿಯ ಬದಲಾವಣೆಗಳನ್ನು ತರಲಿದೆ.ಆದರೆ ಅಂಗನವಾಡಿ ಕೇಂದ್ರಗಳನ್ನು ವೇದಾಂತ ಪ್ರತಿಷ್ಠಾನಕ್ಕೆ ಒಪ್ಪಿಸುವುದಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಸರ್ಕಾರವು ತನ್ನ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಿವೆ.ಸರ್ಕಾರವೇ ನಿಭಾಯಿಸಬೇಕಾದ ಕಾರ್ಯವನ್ನು ಖಾಸಗಿ ಸಂಸ್ಥೆಗೆ ಒಪ್ಪಿಸುವುದು ಸರಿಯಲ್ಲ. ಸಾಕಷ್ಟು ಪ್ರಮಾಣದಲ್ಲಿ ಅನುದಾನ ಮತ್ತು ಹಲವು ಸೌಕರ್ಯಗಳಿದ್ದರೂ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಖಂಡನೀಯ ಎಂದು ಸಂಘಟನೆಯ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ವೀರಪ್ಪ ಮೊಯಿಲಿ ಜಿಲ್ಲಾ ಪಂಚಾಯಿತಿ ಮತ್ತು ವೇದಾಂತ ಪ್ರತಿಷ್ಠಾನದ ನಡುವಿನ ಒಡಂಬಡಿಕೆಗೆ ಹೆಚ್ಚಿನ ಆಸಕ್ತಿ ತೋರಿದ್ದು, ಲೋಕಸಭಾ ಕ್ಷೇತ್ರದ ನಾಲ್ಕು ಜಿಲ್ಲೆಗಳ ಒಟ್ಟು 2,635 ಅಂಗನವಾಡಿ ಕೇಂದ್ರಗಳು ಪ್ರತಿಷ್ಠಾನದ ವ್ಯಾಪ್ತಿಗೆ ಒಳಪಡಲಿವೆ.ಚಿಕ್ಕಬಳ್ಳಾಪುರ ಜಿಲ್ಲೆಯ 1139, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1207, ಬೆಂಗಳೂರು ನಗರ ಜಿಲ್ಲೆಯ 222 ಮತ್ತು ರಾಮನಗರ ಜಿಲ್ಲೆಯ 67 ಅಂಗನವಾಡಿ ಕೇಂದ್ರಗಳ ಉಸ್ತುವಾರಿಯನ್ನು ಪ್ರತಿಷ್ಠಾನ ವಹಿಸಿಕೊಳ್ಳಲಿದೆ.ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳ 1139 ಅಂಗನವಾಡಿ ಕೇಂದ್ರಗಳು ಪ್ರತಿಷ್ಠಾನದ ತಕ್ಕೆಗೆ ಒಳಪಡಲಿದ್ದು, ಐದು ವರ್ಷಗಳ ಕಾಲ ಪ್ರತಿಷ್ಠಾನವೇ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಿದೆ. ಈ ಅವಧಿಯಲ್ಲಿ ಸರ್ಕಾರದಿಂದ ಯಾವುದೇ ರೀತಿಯ ನೆರವನ್ನು ಮತ್ತು ಅನುದಾನವನ್ನು ಪ್ರತಿಷ್ಠಾನ ಅಪೇಕ್ಷಿಸುವುದಿಲ್ಲ. ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಆಹಾರ ನೀಡುವ ಪ್ರತಿಷ್ಠಾನವು ಕೇಂದ್ರಗಳಿಗೆ ಅಗತ್ಯ ಸಾಧನ-ಸಲಕರಣೆಗಳನ್ನು ವಿತರಿಸಲಿದೆ.ಒಡಂಬಡಿಕೆ ಪ್ರಕಾರ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಮಾತ್ರವೇ ಸೀಮಿತಗೊಳ್ಳದೇ ಪ್ರತಿಷ್ಠಾನವು ಗ್ರಾಮೀಣಾಭಿವೃದ್ಧಿಯ ಕಡೆಗೂ ಗಮನಹರಿಸಲಿದೆ. ಗ್ರಾಮಮಟ್ಟದಲ್ಲಿ ಗ್ರಾಮ ಸಮಿತಿಗಳನ್ನು ರಚಿಸುವುದರ ಜೊತೆಗೆ ಗ್ರಾಮಸ್ಥರಲ್ಲಿ ಆರೋಗ್ಯ ಮತ್ತು ನೈರ್ಮಲೀ ಕರಣ ಕುರಿತು ಜಾಗೃತಿಯೂ ಮೂಡಿಸಲಿದೆ. ಗ್ರಾಮಗಳಲ್ಲಿ ಆಗಿಂದಾಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಗ್ರಾಮಸ್ಥರಲ್ಲಿ ತಮ್ಮದೇ ಆದ ರೀತಿಯಲ್ಲಿ ಅರಿವು ಮೂಡಿಸಲಿದ್ದಾರೆ. ಹೊಸ ವಿಚಾರ, ವಿಷಯಗಳನ್ನು ತಿಳಿಪಡಿಸಲಿದ್ದಾರೆ.ಆದರೆ ಈ ಎಲ್ಲ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಿಐಟಿಯು ಅಂಗನವಾಡಿ ನೌಕರರ ಮತ್ತು ಸಹಾಯಕಿಯರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಷ್ಮಿದೇವಮ್ಮ, `ಸರ್ಕಾರಿ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದೆಯೇ ಹೊರತು ಮತ್ತೇನೂ ಅಲ್ಲ.ಸರ್ಕಾರವೇ ಆರ್ಥಿಕವಾಗಿ ಮತ್ತು ಸೌಲಭ್ಯಯುತವಾಗಿ ಸಶಕ್ತವಾಗಿರುವಾಗ ಅಂಗನವಾಡಿ ಕೇಂದ್ರಗಳನ್ನು ಖಾಸಗಿ ಸಂಸ್ಥೆಯಾದ ವೇದಾಂತ ಪ್ರತಿಷ್ಠಾನಕ್ಕೆ ಒಪ್ಪಿಸುವ ಅಗತ್ಯವೇನಿದೆ? ಅಂಗನವಾಡಿ ಕೇಂದ್ರಗಳತ್ತ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಲಾಗುತ್ತಿದ್ದು, ವಿನಾಕಾರಣ ಖಾಸಗಿ ಸಂಸ್ಥೆಗೆ ವಹಿಸಲಾಗುತ್ತಿದೆ~ ಎನ್ನುತ್ತಾರೆ.`ಸರ್ಕಾರಿ ಸೇವೆ ಮತ್ತು ಕಾರ್ಯಗಳ ಬಗ್ಗೆ ಅಭಿಮಾನ ವ್ಯಕ್ತಪಡಿಸುವ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲೇ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಬಹುದಿತ್ತು. ಸಭೆ-ಸಮಾರಂಭಗಳಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸುವ ವೀರಪ್ಪ ಮೊಯಿಲಿಯವರು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೂ ನೂತನ ಯೋಜನೆ ರೂಪಿಸಬೇಕಿತ್ತು. ಖಾಸಗಿ ಸಂಸ್ಥೆಗೆ ವಹಿಸುವ ಬದಲು ಹೆಚ್ಚಿನ ಅನುದಾನ ದೊರೆಯುವಂತೆ ಮಾಡಿ, ಕೇಂದ್ರಗಳನ್ನು ಅಭಿವೃದ್ಧಪಡಿಸಬೇಕಿತ್ತು~ ಎಂದರು.ಜಿಲ್ಲೆಯಲ್ಲಿ 1139 ಕೇಂದ್ರಗಳು

ಚಿಕ್ಕಬಳ್ಳಾಪುರದಲ್ಲಿ  302 ಅಂಗನವಾಡಿ ಕೇಂದ್ರಗಳು, 6,342 ಮಕ್ಕಳಿದ್ದಾರೆ. ಗೌರಿಬಿದನೂರಿನ 349 ಅಂಗನವಾಡಿ ಕೇಂದ್ರಗಳಲ್ಲಿ 8864 ಮಕ್ಕಳು, ಬಾಗೇಪಲ್ಲಿ 363 ಕೇಂದ್ರಗಳಲ್ಲಿ 7559, ಗುಡಿಬಂಡೆಯ 125 ಕೇಂದ್ರಗಳಲ್ಲಿ 2000 ಮಕ್ಕಳಿದ್ದಾರೆ. ಒಟ್ಟು 1139 ಕೇಂದ್ರಗಳಲ್ಲಿ  24765 ಮಕ್ಕಳಿದ್ದಾರೆ.ಇಂದು ಪ್ರತಿಭಟನೆ: ಸರ್ಕಾರಿ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಸಿಐಟಿಯು ಅಂಗನವಾಡಿ ನೌಕರರ ಮತ್ತು ಸಹಾಯಕಿಯರ ಸಂಘದ ಸದಸ್ಯರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ. ನಗರದ ಪ್ರವಾಸಿ ಮಂದಿರದಿಂದ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.ವೇದಾಂತ ಪ್ರತಿಷ್ಠಾನದ ಸೌಕರ್ಯಗಳು*  3 ರಿಂದ 6 ವರ್ಷದ ಮಕ್ಕಳಿಗೆ ಪ್ರತಿ ಬುಧವಾರ ಮೊಟ್ಟೆ.*  ಸಮವಸ್ತ್ರ ಮತ್ತು ಪಾದರಕ್ಷೆ, ಸೋಮವಾರದಿಂದ ಶನಿವಾರದವರೆಗೆ     ಮಕ್ಕಳಿಗೆ ಆಹಾರ.*  ಪೌಷ್ಟಿಕಾಂಶ ಕೊರತೆಯುಳ್ಳ ಮಕ್ಕಳಿಗೆ ಪೌಷ್ಟಿಕ ಔಷಧಿ.*  ಮಕ್ಕಳ ತೂಕ ಮತ್ತು ಅಳತೆ ಪರಿಶೀಲನೆ.*  ತಾಯಿ ಮತ್ತು ಮಕ್ಕಳಿಗೆ ಆರೋಗ್ಯದ ಕುರಿತು ಅರಿವು.*  ಕಥಾ ಮತ್ತು ಚಿತ್ರಪಟಗಳು.*  ಪ್ರಾಣಿ, ಪಕ್ಷಿ, ತರಕಾರಿ, ಅಂಗಾಂಗಗಳ ಕುರಿತು ಚಿತ್ರಪಟಗಳು.*  ಆಟಿಕೆ ವಸ್ತುಗಳು, ಚೆಂಡುಗಳು ಮತ್ತಿತರ ವಸ್ತುಗಳು.*  ಅಂಗನವಾಡಿ ನೌಕರರಿಗೆ ತರಬೇತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry