ವೇದಾವತಿ ನದಿ ಪಾತ್ರ: 5 ಸಾವಿರ ಟನ್ ಮರಳು ವಶ

7

ವೇದಾವತಿ ನದಿ ಪಾತ್ರ: 5 ಸಾವಿರ ಟನ್ ಮರಳು ವಶ

Published:
Updated:

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಮೈಲನಹಳ್ಳಿ, ಹಿರಿಯೂರು ತಾಲ್ಲೂಕಿನ ಬುಡರಕುಂಟೆ ಗ್ರಾಮ ವ್ಯಾಪ್ತಿಯ ವೇದಾವತಿ ನದಿ ಪಾತ್ರದಿಂದ ಅಕ್ರಮವಾಗಿ ಮರಳು ಸಾಗಾಣಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಲನಹಳ್ಳಿ ವ್ಯಾಪ್ತಿಯಲ್ಲಿ ಅಂದಾಜು 5,000 ಮೆಟ್ರಿಕ್‌ಟನ್ ಮರಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.`ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳು ಸಾಗಾಣಿಕೆ~ ಕುರಿತು `ಪ್ರಜಾವಾಣಿ~ಯಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಗೆ ಅವರು ವಿವರವಾದ ಸ್ಪಷ್ಟನೆ ನೀಡಿದ್ದಾರೆ.2012ರ ಜನವರಿ 3ರಂದು ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷರು ಮರಳು ಬ್ಲಾಕ್‌ಗಳನ್ನು ಗುರುತಿಸಿ, ಮರಳು ಎತ್ತುವಳಿ ಮಾಡಲು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಲನಹಳ್ಳಿ ವ್ಯಾಪ್ತಿಯಲ್ಲಿ 3 ಬ್ಲಾಕ್‌ಗಳು ಮತ್ತು ಬುಡುರಕುಂಟೆ ವ್ಯಾಪ್ತಿಯಲ್ಲಿ ಎರಡು ಬ್ಲಾಕ್‌ಗಳನ್ನು ಗುರುತಿಸಿ, ಮರಳು ಎತ್ತುವಳಿ ಮಾಡಿ ತಾತ್ಕಾಲಿಕ ಸ್ಟಾಕ್‌ಯಾರ್ಡ್‌ನಿಂದ ಮರಳು ಮಾರಾಟ ಮಾಡಲು ಲೋಕೋಪಯೋಗಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಕರ್ನಾಟಕ ರಾಜ್ಯ ರೈತ ಸಂಘದ ಚಳ್ಳಕೆರೆ ಶಾಖೆಯ ಮುಖಂಡರು ಫೆ. 9ರಂದು ಚಳ್ಳಕೆರೆ ತಾಲ್ಲೂಕನ್ನು ಸರ್ಕಾರ ಬರ ಪ್ರದೇಶವೆಂದು ಘೋಷಣೆ ಮಾಡಿದ್ದು, ಜನ-ಜಾನುವಾರುಗಳಿಗೆ ಕುಡಿಯಲು ನೀರಿಗೂ ತೊಂದರೆಯಾಗುತ್ತಿದೆ. ಈ ಸಂಬಂಧವಾಗಿ ಮೈಲನಹಳ್ಳಿ ಗ್ರಾಮದ ಹತ್ತಿರ ವೇದಾವತಿ ನದಿ ಮರಳನ್ನು ಲೋಕೋಪಯೋಗಿ ಇಲಾಖೆಯಿಂದ ಎತ್ತುವಳಿ ಮಾಡಿ ಮಾರಾಟ ಮಾಡದಿರಲು ರೈತರು ಧರಣಿ ಹಮ್ಮಿಕೊಂಡಿದ್ದರು. ಯಾವುದೇ ಕಾರಣಕ್ಕೂ ಮರಳು ಅನಧಿಕೃತ ಗಣಿಗಾರಿಕೆಯಾಗದಂತೆ ತಡೆಯುವುದಾಗಿ ರೈತರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೈಲನಹಳ್ಳಿ ನದಿ ಪಾತ್ರದಿಂದ ಮರಳು ಎತ್ತುವಳಿ ಕಾರ್ಯ ಸ್ಥಗಿತಗೊಳಿಸಿ ದಾಸ್ತಾನಿಸಿದ ಮರಳನ್ನು ಮಾರಾಟ ಮಾಡಲು ಆದೇಶಿಸಿದೆ.

 ಚಳ್ಳಕೆರೆ, ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳ ವೇದಾವತಿ ನದಿ ಪಾತ್ರದಿಂದ ಆಗಾಗ ಅನಧಿಕೃತ ಗಣಿಗಾರಿಕೆಯಿಂದ ಮರಳು ಸಾಗಾಣಿಕೆಯಾಗುತ್ತಿದ್ದು, ಸ್ಥಳೀಯ ಗ್ರಾಮಸ್ಥರ ಪಾತ್ರವೂ ಎದ್ದು ಕಾಣುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಲಾಖೆ ವತಿಯಿಂದ ಮರಳು ಅನಧಿಕೃತ ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ 2011-12 ನೇ ಸಾಲಿನಲ್ಲಿ ಜನವರಿ-2012ರ ಅಂತ್ಯದವರೆಗೆ ರೂ. 138.13 ಲಕ್ಷ ದಂಡ ವಸೂಲಿ ಮಾಡಲಾಗಿದೆ ಮತ್ತು 6 ಪ್ರಕರಣಗಳನ್ನು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಿಸಲಾಗಿದೆ.ಲೋಕೋಪಯೋಗಿ ಇಲಾಖೆ ವತಿಯಿಂದ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ 2012ರ ಜನವರಿ 21ರ ಅಂತ್ಯದವರೆಗೆ ರೂ. 212 ಲಕ್ಷಗಳ ರಾಜಧನ ಸಂಗ್ರಹಿಸಲಾಗಿದೆ.  ಸದ್ಯ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯು 1 ಮೀಟರ್‌ಗಿಂತ ಹೆಚ್ಚಿನ ಆಳ ತೆಗೆದಿರುವ ಜಾಗಗಳಲ್ಲಿಯೇ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಗ್ರಾಮಸ್ಥರ ಸಹಕಾರ ಅಗತ್ಯವಿರುತ್ತದೆ ಎಂದು ಕೋರಿದ್ದಾರೆ.ನದಿ ಪಾತ್ರದಲ್ಲಿ ಲಭ್ಯವಿರುವ ಮರಳಿನ ಆಧಾರದ ಮೇಲೆ, ಲೋಕೋಪಯೋಗಿ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿ ಪ್ರತಿ ಮರಳು ಬ್ಲಾಕಿನ ವಿಸ್ತೀರ್ಣ 12 ಎಕರೆಗೆ ಮೀರದಂತೆ, ನಕ್ಷೆಗಳೊಂದಿಗೆ ವಿವರಗಳನ್ನು ತಾಲ್ಲೂಕುವಾರು, ಲೋಕೋಪಯೋಗಿ ಇಲಾಖೆಗೆ  ಹಸ್ತಾಂತರಿಸಲಾಗಿದೆ., ವಿವರಗಳು ಈ ಕೆಳಗಿನಂತಿರುತ್ತವೆ.ಜಿಲ್ಲೆಯಲ್ಲಿ 69 ಬ್ಲಾಕ್‌ಗಳಿದ್ದು, 27,32,274 ಮೆಟ್ರಿಕ್ ಟನ್ ಮರಳು ಪ್ರಮಾಣ ಲಭ್ಯವಿದೆ. ಹೊಸ ಮರಳು ನೀತಿ-2011 ಅನ್ವಯ ಲೋಕೋಪಯೋಗಿ ಇಲಾಖೆ ಕಾರ್ಯೋನ್ಮುಖವಾಗುವ ನಿಟ್ಟಿನಲ್ಲಿ ಗುತ್ತಿಗೆ ಮೂಲಕ ಗುತ್ತಿಗೆದಾರರನ್ನು ನೇಮಿಸುವ ಹಾಗೂ ಇನ್ನಿತರೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಕಾಲಾವಕಾಶ ಕೋರಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ಲೋಕೋಪಯೋಗಿ ಇಲಾಖೆ ನವೆಂಬರ್-2011ರಿಂದ ಪ್ರಾರಂಭಿಸಲಾಗಿದೆ. ಕರ್ನಾಟಕ ಮರಳು ನೀತಿ-2011ರ ಅನ್ವಯ, ಮರಳು ವಾಹನಗಳಿಗೆ ಜಿಪಿಎಸ್, ಆರ್‌ಎಫ್‌ಐಡಿ ಉಪಕರಣ ಅಳವಡಿಕೆ, ವಾಹನ ಮುಂಭಾಗದಲ್ಲಿ ಹಳದಿ ಬಣ್ಣ ಲೇಪಿಸುವುದು, ಮರಳು ಸ್ಟಾಕ್‌ಯಾರ್ಡ್‌ಗಳನ್ನು ಸ್ಥಾಪಿಸಿ ಸಿ.ಸಿ. ಟಿ.ವಿ. ಕ್ಯಾಮರಾ ಅಳವಡಿಸುವುದು ನಂತರ ಲಾರಿಗಳು ಮಾರ್ಗದಲ್ಲಿ ಗಣಕೀಕೃತ ಚೆಕ್‌ಪೋಸ್ಟ್ ಪ್ರಾರಂಭಿಸುವುದು ಕಡ್ಡಾಯವಾಗಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.ಚಳ್ಳಕೆರೆಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು, ಚಳ್ಳಕೆರೆ ತಾಲ್ಲೂಕಿನ 31 ಮರಳು ಬ್ಲಾಕ್‌ಗಳಲ್ಲಿ ಕೆಲ ಬ್ಲಾಕ್‌ಗಳಲ್ಲಿ ಅನಧಿಕೃತ ಗಣಿಗಾರಿಕೆಯಿಂದ 1 ಮೀಟರ್ ಹೆಚ್ಚಿಗೆ ಮರಳು ತೆಗೆದಿರುವುದರಿಂದ ಅಂತರ್ಜಲ ವಿಫಲವಾಗುವ ಸಂಭವವಿರುವ ಹಿನ್ನೆಲೆಯಲ್ಲಿ ಪುನಃ ಮರಳು ಬ್ಲಾಕ್‌ಗಳನ್ನು ಪರಿಶೀಲಿಸಲು ಕೋರಿದ್ದರು.ಈ ಹಿನ್ನೆಲೆಯಲ್ಲಿ 2011ರ ನವೆಂಬರ್ 17ರಂದು ಎಲ್ಲ ಮರಳು ಬ್ಲಾಕ್‌ಗಳನ್ನು ತಪಾಸಿಸಿ, ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಿಂದ ಕ್ರಮವಾಗಿ 10 ಮತ್ತು 8 ಬ್ಲಾಕ್‌ಗಳಿಂದ ಅನಧಿಕೃತ ಗಣಿಗಾರಿಕೆಯಿಂದ 1 ಮೀ. ಆಳಕ್ಕಿಂತ ಹೆಚ್ಚು ಗಣಿಗಾರಿಕೆ ಮಾಡಿರುವುದು ಕಂಡುಬಂದೆ.ಆದ್ದರಿಂದ ಸದರಿ ಸಾಲಿನಲ್ಲಿ ಮರಳು ಗಣಿಗಾರಿಕೆಯನ್ನು ಚಳ್ಳಕೆರೆ ತಾಲ್ಲೂಕಿನ ಗೊರ‌್ಲತ್ತು, ತೊರೆಬೀರನಹಳ್ಳಿ, ಕೋನಿಗರಹಳ್ಳಿ ಮತ್ತು ಹಿರಿಯೂರು ತಾಲ್ಲೂಕಿನ ಕುಂದಲಗುರ, ಹೂವಿನಹೊಳೆ (ಭಾಗಶಃ), ಕೂಡ್ಲಹಳ್ಳಿ, ಬಿದರಕೆರೆ ವ್ಯಾಪ್ತಿಯ ವೇದಾವತಿ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಯನ್ನು ನಡೆಸದಿರಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry