ವೇದ ಪಠಣ ಎಲ್ಲಾ ವರ್ಗಕ್ಕೂ ಪಸರಿಸಲಿ

7

ವೇದ ಪಠಣ ಎಲ್ಲಾ ವರ್ಗಕ್ಕೂ ಪಸರಿಸಲಿ

Published:
Updated:

 

ಶಿವಮೊಗ್ಗ: ವೇದ ಶಾಲೆ, ವೇದ ಪಠಣಗಳು ಕೇವಲ ಒಂದೇ ಜಾತಿಗೆ ಮೀಸಲಾಗದೇ ಎಲ್ಲಾ ವರ್ಗದ ಜನಾಂಗಕ್ಕೂ ಪಸರಿಸಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ವರ್ತಕರ ಮತ್ತು ವೃತ್ತಿನಿರತರ ಸಂಘದ 4ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 157ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವೇದ, ಉಪನಿಷತ್ತು ಹಾಗೂ ಸಂಸ್ಕೃತ  ಯಾವುದೇ ಒಂದು ಸಮುದಾಯದ ಸ್ವತ್ತಲ್ಲ. ಇದರ ಅಧ್ಯಯನಕ್ಕೆ ಎಲ್ಲರಿಗೂ ಅವಕಾಶವಿದ್ದು, ಹಿಂದುಳಿದ ವರ್ಗಕ್ಕೂ ಸಹ  ವೇದಶಾಲೆ ತೆರೆಯುವ ಮೂಲಕ ಸಮಾಜದಲ್ಲಿ ಸಮಾನತೆ ಮೂಡಿಸಲು ಮುಂದಾಗಬೇಕು ಎಂದರು. ಈಡಿಗ ಸಮುದಾಯದ ವತಿಯಿಂದ ಸೋಲೂರು ಸ್ವಾಮಿಗಳ ನೇತೃತ್ವದಲ್ಲಿ ವೇದಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.ಬಹುಕಾಲದಿಂದ ಈಡಿಗ ಸಮುದಾಯದವರು ಬದುಕುವ ದಾರಿಯನ್ನು ಹುಡುಕುತ್ತಿದ್ದರೇ ಹೊರತು ಸಮಾಜವನ್ನು ಬಲಪಡಿಸಲು ಯತ್ನಿಸಲಿಲ್ಲ. ಹಾಗಾಗಿ, ಈಡಿಗ ಸಮಾಜ ಹಿಂದುಳಿದ ಸಮಾಜವಾಗಿಯೇ ಉಳಿಯಿತು. ಇದೀಗ ಕಾಲ ಬದಲಾಗಿದ್ದು, ಈಡಿಗ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಿದೆ ಎಂದರು.ಆರ್ಯ ರೇಣುಕಾನಂದ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಸಂಘದ ಅಧ್ಯಕ್ಷಎಸ್.ಎಂ. ಮಹೇಶ್, ಗೌರವಾಧ್ಯಕ್ಷ ಎಚ್.ಎನ್. ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.ದೊಡ್ಡಪೇಟೆ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್,  ಮೆಗ್ಗಾನ್ ಆಸ್ಪತ್ರೆಯ ಫಿಜಿಷಿಯನ್ ಡಾ.ಪರಮೇಶ್, ನಾಗರಾಜ ನೇರಿಗೆ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry