ಶುಕ್ರವಾರ, ಮೇ 7, 2021
26 °C

ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ದುಬೈ ಮತ್ತು ಮಸ್ಕತ್‌ಗೆ ಕರೆದೊಯ್ದು ವೇಶ್ಯಾವಾಟಿಕೆ ದಂಧೆಯ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸುಬ್ರಹ್ಮಣ್ಯಪುರ ಪೊಲೀಸರು ಮುಂಬೈ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಕೆ.ಪಿ.ಸಾಲೇಹ್ ಅಲಿಯಾಸ್ ಸಾಲೇಹಕುನ್ನಿ (59) ಮತ್ತು ನಫೀಜಾ ಬಾನು (38) ಬಂಧಿತರು. ಆರೋಪಿಗಳು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸುಮಾರು 200 ಯುವತಿಯರನ್ನು ಇದೇ ರೀತಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೂಲತಃ ಕೇರಳದ ಸಾಲೇಹ್ ಮುಂಬೈನಲ್ಲಿ 12 ವರ್ಷಗಳಿಂದ ಪಾಸ್‌ಪೋರ್ಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆತ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಧ್ಯಪ್ರದೇಶ, ಪಶ್ಚಿಮಬಂಗಾಳ, ಉತ್ತರಪ್ರದೇಶ, ದೆಹಲಿ ಮತ್ತು ರಾಜ್ಯದ ಬೆಂಗಳೂರು, ಮೈಸೂರು, ಚಾಮರಾಜನಗರ ಮುಂತಾದೆಡೆ ದಲ್ಲಾಳಿಗಳನ್ನು ನೇಮಿಸಿಕೊಂಡಿದ್ದ.ಆ ದಲ್ಲಾಳಿಗಳ ಮೂಲಕ ಮುಸ್ಲಿಂ ಯುವತಿಯರನ್ನು ಪರಿಚಯ ಮಾಡಿಕೊಂಡು ಅವರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಅಲ್ಲದೇ ಆ ಯುವತಿಯರಿಗೆ ಸ್ವಂತ ಖರ್ಚಿನಲ್ಲೇ ವೀಸಾ ಹಾಗೂ ಪಾಸ್‌ಪೋರ್ಟ್ ಮಾಡಿಸಿಕೊಡುತ್ತಿದ್ದ. ಬಳಿಕ ವಿದೇಶಕ್ಕೆ ಕರೆದೊಯ್ದು, ವೇಶ್ಯಾವಾಟಿಕೆ ದಂಧೆಯ ದಲ್ಲಾಳಿಗಳಾದ ಷರೀಫ್ ಮತ್ತು ಕುಮಾರಿ ಎಂಬುವರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತೀಚೆಗಷ್ಟೇ ನಗರಕ್ಕೆ ಬಂದು ನೆಲೆಸಿದ್ದ ನಫೀಜಾ ಬಾನು, ಆರೋಪಿ ಸಾಲೇಹ್ ಮೂಲಕ ಕರ್ನಾಟಕ ಮತ್ತು ಮಧ್ಯಪ್ರದೇಶದ ಯುವತಿಯರನ್ನು ವೇಶ್ಯಾವಾಟಿಕೆ ದಲ್ಲಾಳಿಗಳಿಗೆ ಮಾರಾಟ ಮಾಡಿಸಿದ್ದಳು. ಎಂಟಕ್ಕೂ ಹೆಚ್ಚು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ಆರೋಪಿಗಳು, ಯುವತಿಯೊಬ್ಬಳಿಗೆ ದಲ್ಲಾಳಿಗಳಿಂದ ಸುಮಾರು ಒಂದು ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ಇದೇ ರೀತಿ 2009ರಲ್ಲಿ ಜೆ.ಪಿ.ನಗರ ಎಂಟನೇ ಹಂತದಿಂದ, 2010ರಲ್ಲಿ ಬಿಡದಿ ಮತ್ತು ಬೆಂಗಳೂರಿನಿಂದ ಮೂವರು ಯುವತಿಯರನ್ನು ವಿದೇಶಕ್ಕೆ ಕರೆದೊಯ್ದು ಮಾರಾಟ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.ಈ ಸಂಬಂಧ ಸುಬ್ರಹ್ಮಣ್ಯಪುರ, ಬಿಡದಿ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮಸ್ಕತ್ ಪೊಲೀಸರು ಅಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಆ ಮನೆಯಲ್ಲಿ 12ಕ್ಕೂ ಹೆಚ್ಚು ಮಂದಿ ಭಾರತೀಯ ಯುವತಿಯರು ಸಿಕ್ಕಿ ಬಿದ್ದಿದ್ದರು. ಆ ಯುವತಿಯರ ವಿಚಾರಣೆ ನಡೆಸಿದಾಗ ಆರೋಪಿಗಳ ವಂಚನೆ ಪ್ರಕರಣ ಬಯಲಿಗೆ ಬಂದಿತ್ತು. ಈ ಬಗ್ಗೆ ಮಸ್ಕತ್ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಅವರ ಮಾರ್ಗದರ್ಶನಲ್ಲಿ ಇನ್‌ಸ್ಪೆಕ್ಟರ್ ಬಾಳೇಗೌಡ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.