ಶನಿವಾರ, ಮೇ 8, 2021
26 °C

ವೇಶ್ಯಾವಾಟಿಕೆ ದಂಧೆಗೆ ಸಿಲುಕಿದ್ದ ಬಾಲಕಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪಿರಿಯಾಪಟ್ಟಣದ ವಾಸವಿ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿಬಿದ್ದ ನಾಲ್ವರು ಯುವತಿಯರ ಪೈಕಿ ಅಪ್ರಾಪ್ತ ಬಾಲಕಿ ಪತ್ತೆಯಾಗಿದ್ದು, ಆಕೆಯನ್ನು ರಕ್ಷಣೆ ಮಾಡಲಾಗಿದೆ.ಮೂಲತಃ ನೇಪಾಳಿಯಾದ ಈಕೆ ಎರಡು ವರ್ಷಗಳ ಹಿಂದೆ ಮನೆ ತೊರೆದಿದ್ದಾಳೆ. ವೇಶ್ಯಾ ವಾಟಿಕೆ ದಂಧೆಗೆ ಸಿಲುಕಿದ್ದ ಈಕೆ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಮನೆಯವರಿಗೆ ಸುಳ್ಳು ಹೇಳಿ ಮೈಸೂರು ಸುತ್ತಮುತ್ತ ವಾಸವಿದ್ದಳು ಎಂದು ತಿಳಿದುಬಂದಿದೆ. ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಈಕೆ 16 ವರ್ಷದ ಬಾಲಕಿ ಎಂಬುದು ತಿಳಿದುಬಂತು. ಬಳಿಕ ಒಡನಾಡಿ ಸೇವಾ ಸಂಸ್ಥೆಯಲ್ಲಿ ಈಕೆಯನ್ನು ಕರೆತಂದು ಕೌನ್ಸೆಲಿಂಗ್ ಮಾಡಿದ ನಂತರ ರೇಸ್‌ಕೋರ್ಸ್ ರಸ್ತೆಯ ಬಾಲಕಿಯರ ಬಾಲಮಂದಿರದ ಸುಪರ್ದಿಗೆ ಒಪ್ಪಿಸಲಾಯಿತು.ಇಬ್ಬರ ವಿಚಾರಣೆ: ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಅಪ್ರಾಪ್ತ ಬಾಲಕಿ ಮತ್ತು ಯುವತಿ ಋಣ ತಮ್ಮ ಸಂಬಂಧಿ ಎಂದು ಹೇಳಿಕೊಂಡು ಮೂಲತಃ ಔರಂಗಾ ಬಾದ್‌ನ ಕೃಷ್ಣ ಲಾಮ ಮತ್ತು ಮಹಾರಾಷ್ಟ್ರದ ಪೂನಾ ಮೂಲದ ಗ್ರೀನ್ ಖಾನ್ ಎಂಬುವರು ಬುಧವಾರ ಒಡನಾಡಿ ಸೇವಾ ಸಂಸ್ಥೆಗೆ ಬಂದರು.ಬಾಲಕಿಗೆ ಸಂಬಂಧಿಸಿದ ದಾಖಲಾತಿ ಒದಗಿಸುವಂತೆ ಇಬ್ಬರು ಯುವಕರನ್ನು ಒಡನಾಡಿ ಸಂಸ್ಥೆ ಕೇಳಲಾಗಿ ಕೃಷ್ಣ ಲಾಮ ಔರಂಗಬಾದ್‌ಗೆ ಸೇರಿದ ಡಿಎಲ್ ಮತ್ತು ಮಹಾರಾಷ್ಟ್ರ ಪೂನಾದ ಹೋಟೆಲ್‌ನಲ್ಲಿ ಕುಕ್ ಆಗಿರುವುದಾಗಿ ಗುರುತಿನ ಚೀಟಿ ತೋರಿಸಿದ. ಋಣ ಎಂಬ ಯುವತಿ ಸಂಬಂಧಿ ಎಂದು ಹೇಳಿಕೊಳ್ಳುತ್ತಿರುವ ಗ್ರೀನ್ ಖಾನ್‌ನ ದಾಖಲಾತಿ ಪರಿಶೀಲಿಸಿದಾಗ ಗ್ರೀನ್ ಖಾನ್ ಮತ್ತು ಋಣ ಪೂನಾದಲ್ಲಿ ಒಂದೇ ದಿನ ಆದಾಯ ತೆರಿಗೆ ಇಲಾಖೆಯಿಂದ ಪಾನ್ ಕಾರ್ಡ್ ಮಾಡಿಸಿಕೊಂಡಿರುವುದು ಪತ್ತೆಯಾಯಿತು. ಅಲ್ಲದೆ ಯುವತಿಯೊಬ್ಬಳನ್ನು ತನ್ನ ಜೊತೆಗೆ ಕರೆತಂದಿದ್ದ ಈತ ತನ್ನ ಪತ್ನಿಯೆಂದು ಹೇಳಿಕೆ ನೀಡುತ್ತಿದ್ದ. ಇದರಿಂದ ಅನುಮಾನಗೊಂಡ ಒಡನಾಡಿ ಸೇವಾ ಸಂಸ್ಥೆಯ ಪರಶುರಾಮ್ ಮತ್ತು ಸ್ಟ್ಯಾನ್ಲಿ ಅವರು ಕೂಡಲೇ ಜಿಲ್ಲಾ ಎಸ್ಪಿ ಆರ್.ದಿಲೀಪ್ ಮತ್ತು ಡಿಜಿ ಕಚೇರಿಗೆ ಕರೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಶ್ಯಾವಾಟಿಕೆ ಜಾಲ ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಮಾಹಿತಿ ನೀಡಿದರು.ಕೂಡಲೇ ಒಡನಾಡಿಗೆ ಆಗಮಿಸಿದ ಗ್ರಾಮಾಂತರ ಠಾಣೆ ಎಸ್‌ಐ ವೆಂಕಟೇಶಯ್ಯ, ಇಲವಾಲ ಪೊಲೀಸ್ ಠಾಣೆ ಎಸ್‌ಐ ಆರ್.ವೆಂಕಟೇಶ್ ಅವರು ಇಬ್ಬರು ಯುವಕರನ್ನು ವಿಚಾರಣೆ ಮಾಡಿ ತಪಾಸಣೆ ಮಾಡಿದರು. ಕೃಷ್ಣ ಲಾಮನ ಬಳಿ ವಿದೇಶಿ ಕರೆನ್ಸಿಗಳು ಮತ್ತು ರೂ.2,600 ನಗದು ಪತ್ತೆಯಾಯಿತು. ಗ್ರೀನ್ ಖಾನ್ ಬಳಿ ಇದ್ದ ಎರಡು ಪಾನ್ ಕಾರ್ಡ್‌ಗಳನ್ನು ವಶಕ್ಕೆ ಪಡೆದು, ಬಳಿಕ ಎಸ್ಪಿ ಕಚೇರಿಗೆ ಕರೆದೊಯ್ದು ವಿಚಾರಣೆ ಮಾಡಿದರು.`ಬಾಲಕಿ ಮತ್ತು ಯುವತಿಯ ಸಂಬಂಧಿ ಎಂದು ಹೇಳಿಕೊಂಡು ಯುವಕರಿಬ್ಬರು ಒದಗಿಸಿದ ದಾಖಲಾತಿಗಳು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತು. ಹಾಗಾಗಿ ಬಾಲಕಿ ಮತ್ತು ಯುವತಿಯನ್ನು ಅವರ ವಶಕ್ಕೆ ಒಪ್ಪಿಸಲಿಲ್ಲ. ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ದಂಧೆ ಮತ್ತು ಮಾನವ ಸಾಗಾಣಿಕೆಯಲ್ಲಿ ಇಬ್ಬರು ಯುವಕರು ಭಾಗಿಯಾಗಿರುವ ಶಂಕೆ ಇದೆ. ಬಾಲಕಿಯ ಬಗ್ಗೆ ಪರಿಶೀಲಿಸುವಂತೆ ನೇಪಾಳದ ಎಬಿಸಿ ಸಂಸ್ಥೆಗೆ ಮಾಹಿತಿ ನೀಡಲಾಗಿದೆ~ ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಪರಶುರಾಮ್ ಮತ್ತು ಸ್ಟ್ಯಾನ್ಲಿ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.