ಶನಿವಾರ, ಏಪ್ರಿಲ್ 17, 2021
23 °C

ವೇಶ್ಯೆಯರಿಗೂ ಕಾನೂನು ರಕ್ಷಣೆ ಅಗತ್ಯ:ಕಾನೂನು ಆಯೋಗ ಅಧ್ಯಕ್ಷ ವಿ.ಎಸ್.ಮಳೀಮಠ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೇಶದ ಎಲ್ಲ ಮಹಿಳೆಯರಿಗೂ ಸೂಕ್ತ ರಕ್ಷಣೆ ಒದಗಿಸುವ ಉದ್ದೇಶದಿಂದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನೂ ಸೇರಿಸಬೇಕು~ ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಮಳೀಮಠ ಸಲಹೆ ನೀಡಿದರು.ಕರ್ನಾಟಕ ನ್ಯಾಯಾಂಗ ಅಕಾಡೆಮಿ ಮತ್ತು ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಜಂಟಿಯಾಗಿ ಶನಿವಾರ ಆಯೋಜಿಸಿದ್ದ `ನಿರ್ಲಕ್ಷಿತ ಮಹಿಳೆಯರ ಮೇಲಿನ ದೌರ್ಜನ್ಯ - ಕಾನೂನು ಮತ್ತು ಸಾಮಾಜಿಕ ದೃಷ್ಟಿಕೋನಗಳು~ ಕುರಿತು ನ್ಯಾಯಾಧೀಶರ ಸರಣಿ ಸಂವೇದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ವ್ಯಾಪ್ತಿಗೆ ತರಲು ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. `ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಹಲವು ಮಹಿಳೆಯರು ಪರಿಸ್ಥಿತಿಯ ಒತ್ತಡದಿಂದಾಗಿ ಈ ಹಾದಿ ಹಿಡಿದಿರುತ್ತಾರೆ.ಬಡತನ ಇದಕ್ಕೆ ಮುಖ್ಯ ಕಾರಣವೂ ಹೌದು. ವೇಶ್ಯಾವಾಟಿಕೆ ಪ್ರಕರಣಗಳಲ್ಲಿ ಮಹಿಳೆಯರನ್ನು ನ್ಯಾಯಾಲಯಕ್ಕೆ ಕರೆತಂದಾಗ ನ್ಯಾಯಾಧೀಶರು ಅವರನ್ನು ಕೇವಲ ಆರೋಪಿಗಳೆಂಬ ದೃಷ್ಟಿಕೋನದಿಂದ ನೋಡಬಾರದು. ಸಮಸ್ಯೆಗಳನ್ನು ಅರಿತು ಪರಿಹಾರ ದೊರಕಿಸುವುದಕ್ಕೆ ಯತ್ನಿಸಬೇಕು~ ಎಂದು ಮಳೀಮಠ ಕಿವಿಮಾತು ಹೇಳಿದರು.

ಪೊಲೀಸರು, ಸಮಾಜ ಕೂಡ ಈ ಮಹಿಳೆಯರನ್ನು ಗೌರವ ಭಾವನೆಯಿಂದ ನೋಡಬೇಕಿದೆ. ಈ ವಿಚಾರಗಳು ಕೇವಲ ಚರ್ಚೆ, ವಿಚಾರ ಗೋಷ್ಠಿಗಳಿಗೆ ಸೀಮಿತವಾಗಬಾರದು ಎಂದರು.ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, `ವೇಶ್ಯಾವಾಟಿಕೆ ಎಂಬ ಪದ ಬಳಕೆಯನ್ನೇ ಕೈಬಿಡಬೇಕು. ಈ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರನ್ನು `ನಿರ್ಲಕ್ಷಿತರು~ ಎಂದು ಸಂಬೋಧಿಸಬೇಕು ಎಂದರು.ನಿರ್ಲಕ್ಷಿತ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನೂತನ ನ್ಯಾಯಾಧೀಶರಲ್ಲಿ ಅರಿವು ಮೂಡಿಸಲು ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಸಂಯೋಜಕಿ ಡಾ.ಸರಸು ಎಸ್ತರ್ ಥಾಮಸ್ ಮತ್ತು ಐಎಎಸ್ ಅಧಿಕಾರಿ ಎಚ್.ಎಸ್. ಅಶೋಕಾನಂದ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.