ಮಂಗಳವಾರ, ಮಾರ್ಚ್ 9, 2021
23 °C

ವೇಷ ಹಾಕುವವರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೇಷ ಹಾಕುವವರ ಸಮಾವೇಶ

ಯಕ್ಷಗಾನ ಮೇಳವೆಂಬುದೊಂದು ಸಂಕೀರ್ಣ ವ್ಯವಸ್ಥೆ. ಯಕ್ಷಗಾನ ಕಲಾವಿದ ಹೇಗಿರುತ್ತಾನೆ ಎಂಬ ಕಲ್ಪನೆ ಹೆಚ್ಚಿನವರಿಗೆ ಲಭಿಸುವುದು ಗಿರೀಶ ಕಾಸರವಳ್ಳಿಯವರ ‘ಬಣ್ಣದ ವೇಷ’ ಸಿನಿಮಾದ ಶ್ರೀಧರ್ ಅವರ ಅಭಿನಯದ ಮೂಲಕ. ಮನೆ ಬಿಟ್ಟು, ಮನೆಯವರನ್ನೂ ತಾತ್ಕಾಲಿಕವಾಗಿ ಮರೆತು, ಮೇಳದ ಹಗಲಿನ ಬಿಡಾರದಲ್ಲಿಯೇ ನೆಲೆಯಾಗಿ, ಮತ್ತೆ ರಾತ್ರಿಯಲ್ಲಿ ಯಕ್ಷನಾಗಿ ವಿಜೃಂಭಿಸಿ... ಹೀಗೆ ಕಲಾವಿದನ ಬದುಕು. ನೇಹಿಗರಾಗಿರುವ ಕೃಷ್ಣಾರ್ಜುನರು ಶತ್ರುಗಳಂತೆ ಮುಖಾಮುಖಿಯಾಗಿ ಕಾಳಗ ಮಾಡಿದ ಕಥೆಯಿದೆ. ರಾಮನೂ ಆಂಜನೇಯನೂ ಮಾರ್ಮಲೆತು ನಿಂತ ಪ್ರಸಂಗವಿದೆ.

ರಂಗಸ್ಥಳದಲ್ಲಿ ಇಂಥ ಪ್ರಸಂಗಗಳೆಲ್ಲ ಮಾಮೂಲು. ಬಣ್ಣದ ಮನೆಯಲ್ಲಿಯೂ ಇವೆಲ್ಲ ಸಾಮಾನ್ಯವೇ! ಯಕ್ಷಗಾನವೇನು, ನಾಟಕರಂಗದಲ್ಲಿಯೂ ಹೀಗೆಯೇ. ಕಲೆಯಿರುವಲ್ಲಿ, ಕಲಾವಿದರಿರುವಲ್ಲಿ ಮೇಲಾಟಗಳು ಸಹಜವಾಗಿರುವುದರಿಂದ ಪ್ರೀತಿ-ಮುನಿಸುಗಳು ಸಾಮಾನ್ಯವೇ (ಕಲೆ, ಸಾಹಿತ್ಯಗಳು ಯೋಚಿಸುವಂತೆ ಪ್ರೇರೇಪಿಸುತ್ತವೆ. ಮನುಷ್ಯ ಯೋಚಿಸಲಾರಂಭಿಸಿದ ಕ್ಷಣದಿಂದ ‘ಡಾಮಿನೇಟೆಡ್’ ಆಗಲು ಹಾತೊರೆಯುತ್ತಾನೆ.

ಮೇಲಾಟಗಳಿರುವುದೇ ಇದೇ ಕಾರಣಕ್ಕೆ. ಇರಲಿ ಇದೊಂದು ಚರ್ಚೆಯ ವಿಷಯ). ದ್ರೌಪದಿಯ ಮುಡಿಯಂತೆ ಹರಡಿಕೊಂಡಿರಬಹುದಾದ ಕಲಾವಿದರ ಮನಸ್ಸುಗಳನ್ನು ಒಂದೇ ಚಪ್ಪರದಡಿ ಕಟ್ಟುವಲ್ಲಿ ಮೇಳವೊಂದರ ಯಜಮಾನನ ಭೀಮಸಾಹಸ ಬಹಳ ದೊಡ್ಡದು.

ಹಾಗಿದ್ದರೆ ಹಲವು ಮೇಳಗಳ ಕಲಾವಿದರನ್ನು ಒಂದೆಡೆ ಕಲೆಹಾಕುವ ಪ್ರಯತ್ನ ನಡೆದರೆ ಅದಕ್ಕೆ ಏನೆನ್ನಬೇಕು! ‘ಭಾಪುರೇ’ ಎನ್ನಬೇಕು, ಅಭಿಮಾನದಿಂದ. ‘ನಮ್ಮ ಕಾರ್ಯವೈಖರಿಯಲ್ಲಿ ಹೊಂದಿರುವ ‘ಮಾನವೀಯ ಕಾಳಜಿ’ಯೆಂಬ ಸೂತ್ರದಿಂದಲಷ್ಟೇ ಕಲಾವಿದರ ಮನಸ್ಸುಗಳನ್ನು ಪೋಣಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್. ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ಬರುವ ಮೇ 31ರಂದು ಯಕ್ಷಗಾನ ಕಲಾವಿದರ ಸಮಾವೇಶವನ್ನು ಆಯೋಜಿಸುತ್ತಿದೆ.

ಎಷ್ಟು ಮಂದಿ ಯಕ್ಷಗಾನ ಕಲಾವಿದರಿದ್ದಾರೆ?ತಲ್ಲೂರು ಶಿವರಾಮ ಶೆಟ್ಟಿ

ಕರ್ನಾಟಕದ ಕರಾವಳಿಯಲ್ಲಿ ಯಕ್ಷಗಾನವನ್ನೇ ಜೀವನಾಧಾರವಾಗಿಸಿಕೊಂಡ ಎಷ್ಟು ಮಂದಿ ಇದ್ದಾರೆ ಎಂಬ ಪ್ರಶ್ನೆಗೆ ದಾಖಲೆಯ ಸಮೇತ ಉತ್ತರ ಸಿಗುವುದು ಬಹುಶಃ ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಮಾತ್ರ. ಒಂದೇ ಕಲೆಗೆ ಸಂಬಂಧಿಸಿದಂತೆ ಇಂಥ ಸಮಗ್ರ ದಾಖಲಾತಿ ದೇಶದ ಯಾವುದಾದರೂ ಕಲಾಕ್ಷೇತ್ರಕ್ಕೆ ಸಂಬಂಧಿಸಿ ನಡೆದಿದೆಯೋ, ಗೊತ್ತಿಲ್ಲ. ಉಡುಪಿ ರಥಬೀದಿಯ ಪೇಜಾವರ ಮಠದ ಮೇಲಿನ ಪುಟ್ಟ ಅವಕಾಶವೇ ಯಕ್ಷಗಾನದ ಕಲಾರಂಗದ ಕಾರ್ಯತಾಣ. ಧಾರವಾಡದಲ್ಲೊಂದು ‘ಅಟ್ಟ’ ಇತ್ತಲ್ಲ, ಅಂಥದೇ. ಪ್ರತಿಸಂಜೆ ಒಂದಷ್ಟು ಮಂದಿ ಆಸಕ್ತರು, ಯಾವುದೇ -ಫಲಾಪೇಕ್ಷೆಯಿಲ್ಲದೆ ಇಲ್ಲಿ ಸೇರುತ್ತಾರೆ.

ಯಕ್ಷಗಾನವೆಂದಲ್ಲ, ಸುತ್ತಮುತ್ತ ನಡೆಯುವ ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ಸಮಾಲೋಚನೆಗೆ ಇದೇ ಆಸರೆ. ಸುಮಾರು 48 ಶಾಲೆಗಳಲ್ಲಿ ಯಕ್ಷಗಾನ ಕಲಿಸುವ ಯೋಜನೆಯಾದ ‘ಯಕ್ಷಶಿಕ್ಷಣ ಟ್ರಸ್ಟ್’ 50 ಲಕ್ಷ ರೂಪಾಯಿಗಳನ್ನು ದಾನಿಗಳಿಂದ ಸಂಗ್ರಹಿಸಿ, ಆರ್ಥಿಕವಾಗಿ ಹಿಂದುಳಿದ ಸುಮಾರು 800 ಮಕ್ಕಳಿಗೆ ಹಂಚುವ ‘ವಿದ್ಯಾಪೋಷಕ್’ನಂಥ ಸಂಸ್ಥೆಗಳು ಕಾರ್ಯವೆಸಗುವುದು ಯಕ್ಷಗಾನ ಕಲಾರಂಗದ ಶೀರ್ಷಿಕೆಯಡಿಯಲ್ಲಿ. ಎಲ್ಲ ರಥಗಳ ಮುನ್ನೆಲೆಯಲ್ಲಿ ಸಾರಥಿಯಂತೆ ಕುಳಿತವರು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್. ಬೆಂಬಲಕ್ಕಿರುವವರು ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟರು. ಜೊತೆಗೆ ಹತ್ತಾರು ಮಂದಿ ಕಾರ್ಯಕರ್ತರು, ನೂರಾರು ಪ್ರೋತ್ಸಾಹಕರು, ಸಾವಿರಾರು ಹಿತೈಷಿಗಳು.

ಯಕ್ಷಗಾನ ಕಲಾರಂಗವು ‘ಯಕ್ಷನಿಧಿ’ ಎಂಬ ಅಂಗಸಂಸ್ಥೆಯ ಮೂಲಕ, 1100ಕ್ಕಿಂತಲೂ ಅಧಿಕ ಯಕ್ಷಗಾನ ಕಲಾವಿದರನ್ನು ಸದಸ್ಯರನ್ನು ನೋಂದಾಯಿಸಿ, ಪ್ರತಿವರ್ಷ ಅವರ ಸಮ್ಮುಖದಲ್ಲಿಯೇ ಸಭೆ ನಡೆಯಿಸಿ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಮತ್ತೆ ಮೇ 31 ಬಂದಿದೆ. ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾವಿದರು ಸಮಾವೇಶಗೊಳ್ಳುವ ದಿನವಿದು. ಅರ್ಧ ವರ್ಷವಿಡೀ ರಂಗಸ್ಥಳದಲ್ಲಿ ಯಕ್ಷರಂತೆ ಮೆರೆಯುತ್ತಿದ್ದವರನ್ನು ಕೇವಲ ಮನುಷ್ಯರಾಗಿ ಕಾಣುವ ಅವಕಾಶವಿದು!

‘ನೀವು ಮಂದರ್ತಿ ಮೇಳದ ಆಟದಲ್ಲಿ ಕೃಷ್ಣ ಮಾಡಿದವರೆಯಾ, ಮೊನ್ನೆ ಕಟೀಲು ಮೇಳದಲ್ಲಿ ಮಹಿಷಾಸುರ ಮಾಡಿದವರು ನೀವೇ ಅಲ್ಲವೆ’ ಎಂದು ವಿಚಾರಿಸುತ್ತ ಸಹೃದಯರಾದ ನಾವು– ನೀವೆಲ್ಲ ಸಮಾವೇಶದಲ್ಲಿ ಓಡಾಡಬಹುದು. ನಮ್ಮ ನಿಮ್ಮನ್ನು ಇರುಳಿನಲ್ಲಿ ಬೆರಗುಗೊಳಿಸಿದ ರಾಮ ರಾವಣ ಕೃಷ್ಣ ಅರ್ಜುನರು ಮನುಷ್ಯರಂತೆ ತಾಂಬೂಲ ಮೆಲ್ಲುತ್ತ ನಮ್ಮ–ನಿಮ್ಮಂಥವರ ನೋಟಕ್ಕೆ ದಕ್ಕುತ್ತಾರೆ, ಮಾತಿಗೆ ಸಿಕ್ಕುತ್ತಾರೆ. ಕಲಾವಿದರು ಪರಸ್ಪರ ಇದಿರುಬದಿರಾಗಿ, ‘ಮುಂದಿನ ವರ್ಷ ಯಾವ ಮೇಳ?’ ಎಂದು ವಿಚಾರಿಸುತ್ತಾರೆ. ಒಂದು ವರ್ಷದ ತಿರುಗಾಟ ಮುಗಿದು ಕಲಾವಿದರು ಹಳ್ಳಿಗಳಿಗೆ ತೆರಳಿದರೆ ಮರಳಿ ಪ್ರತ್ಯಕ್ಷರಾಗುವುದು ದೀಪಾವಳಿ ಕಳೆದ ಮೇಲೆಯೇ ಅಲ್ಲವೆ!ಮುರಲಿ ಕಡೆಕಾರ್

‘ಇನ್ನೂ ಮಳೆ ಬಂದಿಲ್ಲ’ ಎಂದು ಕರ್ನಾಟಕ ಕರಾವಳಿಯ ರೈತ ಆಗಸದತ್ತ ಮುಖ ಮಾಡಿ ನಿಟ್ಟುಸಿರುಬಿಡುತ್ತಾನೆ. ‘ಛೆ! ಯಾಕಾದರೂ ಈ ಮಳೆ ಬರುತ್ತದೊ’ ಎಂದು ಯಕ್ಷಗಾನ ಕಲಾವಿದ ಪರಿತಪಿಸುತ್ತಾನೆ. ಮಳೆಯೇ ಇಲ್ಲದೆ ಹೊಲಗಳು ಒಣಗುತ್ತಿರುವುದನ್ನು ಕಂಡಿದ್ದೇವೆ. ಅಲ್ಲಲ್ಲಿ ಅಕಾಲ ಮಳೆ ಸುರಿದು ತೆರೆದ ಬಯಲಿನಲ್ಲಿ ಹಾಕಲಾದ ರಂಗಮಂಟಪವೂ ಬಣ್ಣದಮನೆಯೂ ಒದ್ದೆಯಾಗಿ ಪ್ರದರ್ಶನ ಅರ್ಧದಲ್ಲಿಯೇ ನಿಂತ ಉದಾಹರಣೆಗಳೂ ಘಟಿಸಿದ್ದಿದೆ. ಕೃಷಿಗೂ ಯಕ್ಷಗಾನ ಕಲೆಗೂ ಒಂದು ರೀತಿಯ ‘ಪರ್ಯಾಯ’ ಸಂಬಂಧವಿದ್ದಂತಿದೆ. ಕೃಷಿಯಿದ್ದಾಗ ಕಲೆ ಇಲ್ಲ. ಕಲೆಗೆ ಅವಕಾಶ ಸಿಗಬೇಕಾದರೆ ಕೃಷಿಗೆ ಬಿಡುವು ಬೇಕು. ಮನೆಯ ಮುಂದಿನ ಗದ್ದೆಗಳಲ್ಲಿ ಉತ್ತು ಬಿತ್ತಿ ಬೆಳೆಯಲು ಒಂದು ಕಾಲ, ಅದೇ ಗದ್ದೆಗಳಲ್ಲಿ ರಂಗಸ್ಥಳವನ್ನು ಸ್ಥಾಪಿಸಿ ಬಯಲಾಟ ಆಡಲು ಮತ್ತೊಂದು ಕಾಲ! (ಈಗ ಯಕ್ಷಗಾನ ಪ್ರದರ್ಶನಗಳು ಸಭಾಂಗಣಗಳಲ್ಲಿಯೂ ಜರುಗುತ್ತಿವೆ. ಆ ಮಾತು ಇರಲಿ).

ಒಂದು ಸಾಮಾಜಿಕ ಪರಿವೇಷದ ಎರಡು ಪದರಗಳಂತೆ ಕೃಷಿಯೂ ಕಲೆಯೂ ಸಾಗುತ್ತಿರುತ್ತವೆ. ಒಳಪದರದಲ್ಲಿ ಕೃಷಿ... ಮೇಲ್ಪದರದಲ್ಲಿ ಕಲೆ!

ಒಬ್ಬ ಕೃಷಿಕ ಮತ್ತು ಒಬ್ಬ ಕಲಾವಿದ- ಇವರಲ್ಲಿ ಸಮಾಜಕ್ಕೆ ಯಾರು ಮುಖ್ಯ ಎಂಬುದು ಜಿಜ್ಞಾಸೆಯ ವಿಷಯ. ಇಬ್ಬರೂ ಮುಖ್ಯ ಎಂಬುದು ಜಾಣತನದ ಉತ್ತರ. ಕೃಷಿಕನಷ್ಟು ಕಲಾವಿದನಾಗಲಿ ಸಾಹಿತಿಯಾಗಲಿ ಮುಖ್ಯರಲ್ಲ ಎಂಬುದು ಒಂದು ರೀತಿಯ ವಾಸ್ತವವಾದ. ಇದನ್ನು ಒಪ್ಪಿಕೊಳ್ಳಲು ಮನಸ್ಸು ಪರದಾಡುತ್ತದೆ. ಸಮಾಜಕ್ಕೆ ಯಕ್ಷಗಾನ ಕಲಾವಿದ ಅನಿವಾರ್ಯವಲ್ಲ, ಆದರೆ, ಯಕ್ಷಗಾನ ಕಲಾವಿದನಿಗೆ ಸಮಾಜದ ಅವಲಂಬನೆ ಬೇಕೇ ಬೇಕು!

ಕಲೆಯೆಂಬುದು ‘ಅನುತ್ಪಾದಕ’ ಉದ್ಯಮವಾದುದರಿಂದ ಯಾವುದೇ ಸಂದರ್ಭದಲ್ಲಿ ಕಲಾವಿದ ಅಪ್ರಸ್ತುತನಾಗುವ ಭಯವಿದ್ದೇ ಇರುತ್ತದೆ. ಇಂಥ ‘ಅಮುಖ್ಯ’ ಸ್ಥಿತಿಯೊಂದು ಕಲಾವಿದನನ್ನೂ ಬರಹಗಾರನನ್ನೂ ಮೆಕ್ಯಾನಿಕಲ್ ರಿ-ಪ್ರೊಡಕ್ಷನ್‌ನ ಕ್ರಿಯೆಗೆ ಪಕ್ಕಾಗುವಂತೆ ಮಾಡುತ್ತದೆ. ಸಮಾಜದ ವಾಹಿನಿಯಲ್ಲಿ ತನ್ನ ಅಭಿವ್ಯಕ್ತಿಯ ಅವಕಾಶವನ್ನು ಸ್ಥಿರವಾಗಿರಿಸಿ ನಿರಂತರ ಆಕರ್ಷಣೀಯ ಗುಣವನ್ನು ಉಳಿಸಿಕೊಳ್ಳಲು ಯಕ್ಷಗಾನ ಕಲಾವಿದ ಕಿರೀಟವನ್ನು ನೆಲಕ್ಕೆ ತಾಗಿಸುವ ಸರ್ಕಸ್ ಮಾಡುತ್ತಾನೆ, ಬರಹಗಾರ ಫೇಸ್‌ಬುಕ್ ಮೂಲಕ ತನ್ನ ಹನಿಗವನಗಳನ್ನು ಹರಿಯಬಿಡುತ್ತಾನೆ. ನಿಜವಾಗಿ ನೋಡಿದರೆ, ಯಕ್ಷಗಾನ ಕಲಾವಿದನಿಗಾಗಲಿ ಬರಹಗಾರನಿಗಾಗಲಿ ಸಿಗುವಷ್ಟು ಪ್ರಮಾಣದ ಪ್ರಶಸ್ತಿ, ಗೌರವಗಳು ಒಳ್ಳೆಯ ಸಾವಯವ ಕೃಷಿಕನಿಗೆ ಸಿಗುವುದಿಲ್ಲ! ತಾನು ಸಾಮಾಜಿಕ ಅಪ್ರಸ್ತುತನಾಗಬಹುದಾದ ಸಂದರ್ಭದಿಂದ ಪಾರಾಗುವುದಕ್ಕಾಗಿಯೇ ಕಲಾವಿದ ತನ್ನ ‘ಅಸ್ತಿತ್ವ’ವನ್ನು ನಿರಂತರ ಊರ್ಜಿತದಲ್ಲಿರಿಸಿಕೊಳ್ಳುತ್ತಾನೆ. ಇಂಥ ಅನಿವಾರ್ಯತೆ ಇರುವುದು ರಾಜಕೀಯ ನಾಯಕರಿಗೆ ಮಾತ್ರ.

ಯಕ್ಷಗಾನದಲ್ಲಿ ಸಂಪ್ರದಾಯವನ್ನು ಉಳಿಸಬೇಕೆನ್ನುವ ಕಾಳಜಿಯ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ. ಹಳೆಯದನ್ನು ಉಳಿಸಿಕೊಳ್ಳಬೇಕು, ಎಷ್ಟು ಹಳೆಯದನ್ನು ಎಂಬ ಬಗ್ಗೆ ಯಾರಲ್ಲಿಯೂ ಖಚಿತವಾದ ತೀರ್ಮಾನವಿಲ್ಲ. ಜೊತೆಗೆ, ಹಿಂದೆ ಎಲ್ಲವೂ ಚೆನ್ನಾಗಿತ್ತು, ಈಗ ಹಾಳಾಗಿದೆ ಎಂಬುದು ಕೂಡ ಒಂದು ಆರೋಪ. ಇದೊಂದು ಅಪ್ಪಟ ಪೌರಾತ್ಯ ಧೋರಣೆಯ ನಿಲುವು. (ಪಾಶ್ಚಾತ್ಯರಲ್ಲಾದರೆ ಹಿಂದೆ ಹಾಳಾಗಿತ್ತು, ಈಗ ಒಳ್ಳೆಯದರ ಕಡೆಗೆ ಸಾಗುತ್ತಿದ್ದೇವೆ ಎಂದು ತಿಳಿವಳಿಕೆ ಇರುತ್ತಿತ್ತು!).

ಆಧುನಿಕತೆಯೆಂಬ ಹಾಯಿದೋಣಿ ಪೌರಾತ್ಯರ ಮಾನಸಸರೋವರದಲ್ಲಿ ತೇಲತೊಡಗಿದ ಮೇಲೆ ಅಂದರೆ, ಸುಮಾರು ನೂರು ವರ್ಷಗಳಿಂದೀಚೆಗೆ ‘ಹಳೆಯದರ ಮೋಹ’ಕ್ಕೆ ವಿಶೇಷವಾದ ಬೆಲೆ ಬಂತು. ಹಳೆಯದೆಲ್ಲವನ್ನು ಉಳಿಸಿಕೊಂಡು, ವರ್ತಮಾನದೊಂದಿಗೆ ಸ್ಪಂದಿಸುವ ಮತ್ತು ಸಮಕಾಲೀನಗೊಳ್ಳುವ ಎಚ್ಚರವನ್ನೇ ಕಳೆದುಕೊಳ್ಳುವ ಒಂದು ಮನಸ್ಥಿತಿಯಿದು. ಹಿಂದಿನ ನಾಟ್ಯಶೈಲಿ, ಹಿಂದಿನ ರಾಗಪ್ರಸ್ತುತಿ, ಹಿಂದಿನ ಚಿಕಣಿಚಿತ್ರ, ಹಿಂದಿನ ಕೆತ್ತನೆಕಂಬದ ಮನೆ, ಹಿಂದಿನ ಊಟಮಾಡುವ ಕ್ರಮ ಎಲ್ಲವನ್ನೂ ಹಾಗೆ ಹಾಗೆಯೇ ಉಳಿಸಿಕೊಳ್ಳುವಂಥ ಒತ್ತಾಸೆಯಿದು.

ಜೊತೆಗೆ ಹಳೆಯದರ ‘ದಾಖಲಾತಿ’ ಮಾಡಲು ಎಲ್ಲ ರೀತಿಯ ತಾಂತ್ರಿಕ ಸಹಕಾರಗಳಿರುವುದರಿಂದ ಅದು ಹಾಗೆ ಹಾಗೆಯೇ ತಲೆಮಾರಿನಿಂದ ತಲೆಮಾರಿಗೆ ಸಾಗುವ ಸೌಲಭ್ಯವೂ ಒದಗಿತು. ಹಿಂದಿನದೆಲ್ಲವನ್ನೂ ಉಳಿಸುತ್ತ ಹೋಗುವುದೇ ಸಿದ್ಧಾಂತವಾದರೆ ಇಂದು ಬೆಳೆಸುವುದಕ್ಕೇನಿದೆ ಎಂಬೊಂದು ಪ್ರಶ್ನೆಯನ್ನು ಯಾರೂ ಕೇಳಿಕೊಳ್ಳುವುದಿಲ್ಲ. ಯಕ್ಷಗಾನವೆಂದಲ್ಲ, ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ ಮಾತನಾಡುವ ಎಲ್ಲ ಕ್ಷೇತ್ರಗಳಲ್ಲಿಯೂ ‘ವರ್ತಮಾನ’ವನ್ನು ಮರೆತು, ಭೂತಕಾಲದಲ್ಲಿ ಮುಳುಗಿರುವವರೇ ಹೆಚ್ಚು.

ಪರಂಪರೆ, ಸಂಪ್ರದಾಯಗಳು ಬಹಳ ಸೂಕ್ಷ್ಮ ಪದಗಳು. ಹೆಚ್ಚು ಬಳಸಿದರೆ ಸಮಕಾಲೀನತೆಯನ್ನು ಕಳೆದುಕೊಳ್ಳುವ ಭಯ. ಹೆಚ್ಚು ನಿರ್ಲಕ್ಷಿಸಿದರೆ ಸಮಕಾಲೀನತೆಯ ಆಧಾರವು ಕುಸಿದುಹೋಗುವ ಅಪಾಯ.

ಯಕ್ಷಗಾನದ ಜೊತೆಗೆ ವ್ಯವಹರಿಸುವಾಗಲೂ ಇಂಥ ಎಚ್ಚರ ಬೇಕಾಗುತ್ತದೆ. ‘ಕಲಾವಿದ ಗೆಳೆಯರೇ, ನೀವು ಕಲೆಯಲ್ಲಿ ಸಂಪ್ರದಾಯವನ್ನು ಉಳಿಸುವ ಪ್ರಯತ್ನ ಮಾಡಿ... ಯಕ್ಷಗಾನೀಯ ವೇಷಭೂಷಣಕ್ಕೆ ಒತ್ತು ಕೊಡಿ... ಪೌರಾಣಿಕ ಪ್ರಸಂಗಗಳಿಗೆ ಮಹತ್ವಕೊಡಿ’ ಎಂದೆಲ್ಲ ವಿನಯದಿಂದ ಕೇಳಿಕೊಂಡರೂ ಯಕ್ಷಗಾನ ಕಲಾವಿದರು ಕೇಳುತ್ತಾರೆ, ‘ಹಾಗೆಲ್ಲ ಮಾಡಿದರೆ ನೀವೇನು ಕೊಡುತ್ತೀರಿ?’.

ಇದೊಂದು ಉದ್ಧಟತನದ ಪ್ರಶ್ನೆಯಲ್ಲ. ಕಲೆಗಾಗಿ ಏನನ್ನೂ ಮಾಡದೆ ಕೇವಲ ಸಂಪ್ರದಾಯವನ್ನುಳಿಸುವ ಮಾತನಾಡುವವರು ಯಕ್ಷಗಾನ ವಲಯದಲ್ಲಿ ಹೆಚ್ಚಾಗುತ್ತಿರುವ ಕಾರಣ ಕಲಾವಿದರು ಸಹಜವಾಗಿಯೇ ಇಂಥ ಪ್ರಶ್ನೆಯನ್ನು ಕೇಳುತ್ತಾರೆ. ಮೇಲಾಗಿ, ಅವರು ಅಸಂಘಟಿತ ವಲಯದಲ್ಲಿ ದುಡಿಯುವವರು, ಯಾವುದೇ ಸಮಯದಲ್ಲಿ ಅಪ್ರಸ್ತುತವೆನಿಸಬಹುದಾದ ಸಾಮಾಜಿಕ ಪರಿಯಲ್ಲಿ ಬದುಕುವವರು... ಹಾಗಾಗಿ, ಪ್ರಶ್ನೆ ಸಹಜವಾದುದೇ. ‘ನೀವೇನು ಕೊಡುತ್ತೀರಿ?’.

‘ನಾವು ನಿಮಗೆ ಗುಂಪುವಿಮೆ, ಅಪಘಾತ ವಿಮೆಗಳ ಮೂಲಕ ಆಪತ್ಕಾಲದಲ್ಲಿ ಕಿರು ನೆರವನ್ನು ನೀಡುವ ರಚನಾತ್ಮಕ ಪ್ರಯತ್ನ ಮಾಡುತ್ತೇವೆ. ಜೊತೆಗೆ, ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಣ್ಣ ಮಟ್ಟದ ಸಹಾಯ, ನಿಮ್ಮ ಕಸುಬಿನ ದಿನಗಳಲ್ಲಿ ಓಡಾಟಕ್ಕೆ ಬಸ್‌ಪಾಸ್....’ ಎಂದು ಹೇಳತೊಡಗುತ್ತಾರೆ ಮುರಲಿ ಕಡೆಕಾರ್.

***

ಮುರಲಿಯವರಿಗೆ ಬದುಕಿನ ಸೂಕ್ಷ್ಮಗಳು, ಸುಗ್ಗಿ-ಸಂಕಟಗಳು ಚೆನ್ನಾಗಿ ಗೊತ್ತಿವೆ. ತಮ್ಮ ‘ವಿದ್ಯಾಪೋಷಕ್’ ಫಲಾನುಭವಿ ವಿದ್ಯಾರ್ಥಿಗಳು ಅಂಕ ಕಡಿಮೆ ಪಡೆದಾಗ ಅವರನ್ನು ಗದರಿಸುತ್ತಾರೆ. ‘ನಮ್ಮ ಮನೆಯಲ್ಲಿ ವಿದ್ಯುದ್ದೀಪವಿಲ್ಲ. ಓದಲು ಕಷ್ಟವಾಗುತ್ತಿದೆ’ ಎಂದು ಹೇಳಿದರೆ, ಸೆಲ್ಕೊ ಸಂಸ್ಥೆಯ ಹರೀಶ ಹಂದೆಯವರ ಮೂಲಕ ಸೋಲಾರ್ ದೀಪವನ್ನು ಅವರ ಮನೆಗೆ ಉಚಿತವಾಗಿ ಹಾಕಿಸುವ ವ್ಯವಸ್ಥೆಯನ್ನು ಮುರಲಿಯರೇ ಕಲಾರಂಗದ ಮೂಲಕ ಮಾಡುತ್ತಾರೆ. ಹಾಗೆ, ಆರ್ಥಿಕವಾಗಿ ಹಿಂದುಳಿದ ಮೂರ್ನಾಲ್ಕು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಾರಂಗವು ದಾನಿಗಳ ನೆರವಿನಿಂದ ಮನೆ ನಿರ್ಮಿಸಿ ಕೊಟ್ಟದ್ದೂ ಇದೆ. ಯಕ್ಷಗಾನ ಕಲೆಯನ್ನು ಉಳಿಸುವ, ಕಲೆಯ ಸೌಂದರ್ಯವನ್ನು ಸಂರಕ್ಷಿಸುವ ಕಾಯಕದಲ್ಲಿಯೂ ಮುರಲಿ ಮತ್ತು ಯಕ್ಷಗಾನ ಕಲಾರಂಗದ ತಂಡ ಹೆಚ್ಚು ‘ಪ್ರಾಕ್ಟಿಕಲ್’ ಆಗಿ ಯೋಚಿಸಿರುವುದರಿಂದ ಕಲಾವಿದರ ಕ್ಷೇಮಾಭ್ಯುದಯಕ್ಕೆ ಕ್ರಿಯಾತ್ಮಕವಾಗಿ ಶ್ರಮಿಸಲು ಸಾಧ್ಯವಾಗುತ್ತಿದೆ. ತನ್ನ ಕಾರ್ಯಶೈಲಿಯಲ್ಲಿರುವ ಮಾನವೀಯ ಕಾಳಜಿ, ಸಾಮಾಜಿಕ ಸಮಾನತೆಯ ಧೋರಣೆಗಳಿಂದಾಗಿ ಕಲಾರಂಗಕ್ಕೆ ಹೆಚ್ಚಿನ ಬಲ ಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.