ಬುಧವಾರ, ಅಕ್ಟೋಬರ್ 16, 2019
26 °C

ವೈಕುಂಠ ಏಕಾದಶಿ: ವಾಹನ ಸಂಚಾರ ಬದಲಾವಣೆ

Published:
Updated:

ಬೆಂಗಳೂರು: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಇಸ್ಕಾನ್ ಸುತ್ತಮುತ್ತಲ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತುಮಕೂರು ರಸ್ತೆಯಿಂದ ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಬರುವ ವಾಹನಗಳು ಸಾಬೂನು ಕಾರ್ಖಾನೆ ವೃತ್ತ, ಡಾ.ರಾಜ್‌ಕುಮಾರ್ ರಸ್ತೆ ಮೂಲಕ ಹತ್ತನೇ ಅಡ್ಡರಸ್ತೆಯಲ್ಲಿ ಸಾಗಿ ಬಲ ತಿರುವು ಪಡೆದು ರಾಜಾಜಿನಗರ ಒಂದನೇ ಬ್ಲಾಕ್ ಮುಖಾಂತರ ಬರಬೇಕು. ನವರಂಗ್ ವೃತ್ತದ ಕಡೆಯಿಂದ ಬರುವ ವಾಹನಗಳು ಡಾ.ರಾಜ್‌ಕುಮಾರ್ ರಸ್ತೆ, ಹತ್ತನೇ ಅಡ್ಡರಸ್ತೆಯಲ್ಲಿ ಎಡಕ್ಕೆ ತಿರುಗಿ ರಾಜಾಜಿನಗರ ಒಂದನೇ ಬ್ಲಾಕ್‌ಗೆ ಬಂದು ಬಲ ತಿರುವು ಪಡೆದು ಸರ್ಕಾರಿ ಸಾಬೂನು ಕಾರ್ಖಾನೆ ಮುಖಾಂತರ ತುಮಕೂರು ರಸ್ತೆಗೆ ಸಾಗಬೇಕು ಎಂದು ಪೊಲೀಸರು ಹೇಳಿದ್ದಾರೆ.ಇಸ್ಕಾನ್‌ಗೆ ಬರುವ ಗಣ್ಯ ವ್ಯಕ್ತಿಗಳ ವಾಹನಗಳ ನಿಲುಗಡೆಗೆ ಜಿಕೆಡಬ್ಲ್ಯೂ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳು ಹಾಗೂ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಮಹಾಲಕ್ಷ್ಮಿಲೇ ಔಟ್ ಆಟದ ಮೈದಾನದಲ್ಲಿ ಅವಕಾಶ ವಿದೆ ಎಂದು ಮಾಹಿತಿ ನೀಡಿದ್ದಾರೆ.ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತಾದಿಗಳು ಇಸ್ಕಾನ್‌ಗೆ ಬರುವುದರಿಂದ ವಾಹನ ದಟ್ಟಣೆ ಹೆಚ್ಚಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಅಲ್ಲದೇ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಮೆಟ್ರೊ ರೈಲು ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಪೊಲೀಸರು ಮನವಿ ಮಾಡಿದ್ದಾರೆ.

Post Comments (+)