ವೈಕುಂಠ ಏಕಾದಶಿ ವೈಭವ

7

ವೈಕುಂಠ ಏಕಾದಶಿ ವೈಭವ

Published:
Updated:

ಬೆಂಗಳೂರು ಎಂದಾಕ್ಷಣ ನೆನಪಾಗುವುದು ಐಟಿ–ಬಿಟಿ ಕಂಪೆನಿಗಳು, ಕಣ್ಣು ಕುಕ್ಕುವ ಗಗನಚುಂಬಿ ಕಟ್ಟಡಗಳು, ಹಾದಿ ಬೀದಿಯಲ್ಲಿ ಪಬ್ಬು ಬಾರುಗಳು, ಆಧುನಿಕತೆಗೆ ಮೈಯೊಡ್ಡಿ ನಿಂತಿರುವ ಯುವಜನತೆ. ಆದರೆ ಬದಲಾಗುತ್ತಿರುವ ಬೆಂಗಳೂರಿನಲ್ಲಿ ಬೆಳೆದು ನಿಲ್ಲುತ್ತಿರುವ ಹೊಸ ಬಡಾವಣೆಗಳ ನಡುವೆ 15ನೇ ಶತಮಾನದ ಬೆಂಗಳೂರು ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಇಂದಿಗೂ ಶ್ರದ್ಧಾಭಕ್ತಿ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.ಇಲ್ಲೀಗ ವೈಕುಂಠ ಏಕಾದಶಿ ಸಡಗರ. ಇದೇ 11ರಂದು ಸತತವಾಗಿ 24 ಗಂಟೆಗಳ ಕಾಲ ದೇವಾಲಯದಲ್ಲಿ ಪೂಜೆ ನಡೆಯುವುದು ಇಲ್ಲಿನ ವಿಶೇಷಗಳಲ್ಲಿ ಒಂದು.ಚಾಮರಾಜಪೇಟೆ ಬಳಿಯ ಕೃಷ್ಣರಾಜೇಂದ್ರ ರಸ್ತೆಯಲ್ಲಿರುವ ಈ ದೇವಾಲಯ ನಿರ್ಮಿತವಾಗಿದ್ದು 1689ರಲ್ಲಿ. ಆಗಿನ ಮೈಸೂರು ಸಂಸ್ಥಾನದ ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ್‌ ಅವರು ಈ ದೇವಾಲಯವನ್ನು ನಿರ್ಮಿಸಿದರು. ನಂತರ ಬಂದ ಕಂಠೀರವ ನರಸರಾಜ ಒಡೆಯರ್‌ ಅವರು ಈ ದೇವಾಲಯದ ದೈನಂದಿನ ಪಡಿತರ ದೀಪಾರಾಧನೆಗಾಗಿ ನಾಲ್ಕು ಗ್ರಾಮಗಳನ್ನು ದಾನವಾಗಿ ಈ ದೇವಾಲಯಕ್ಕೆ ನೀಡಿದರು ಎಂದು ತಿಳಿಸುವ ಶಿಲಾ ಶಾಸನವು ಕೆಂಗೇರಿ ಹೋಬಳಿಯ ಕೊತ್ತನೂರು ಗ್ರಾಮದ ಬಳಿ ಇದೆ.ದ್ರಾವಿಡ ಶಿಲ್ಪದಿಂದ ಕೂಡಿದ ಮುಖಮಂಟಪವು ನೋಡಲು ಸುಂದರವಾಗಿದೆ. ದೇವಸ್ಥಾನದ ಪ್ರಾಕಾರದಲ್ಲಿ ಕಾಣಸಿಗುವ ಗರ್ಭಗುಡಿ ಕಲ್ಲು ಗೋಡೆಗಳ ಮೇಲೆ ರಥಾರೂಢ ಮತ್ತು ವಾಹನಾರೂಢರಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರ, ಸಪ್ತ ಋಷಿಗಳು, ಸಪ್ತ ಮಾತೃಕೆಗಳು ಹಾಗೂ ಅಷ್ಟ ದಿಕ್ಪಾಲಕರಿಂದ ಕೂಡಿರುವ ಗಿರಿಜಾ ಕಲ್ಯಾಣ ಮೂರ್ತಿಗಳನ್ನು ನೋಡಬಹುದು. ಸಂಪೂರ್ಣ ಶಿಲೆಯಿಂದಲೇ ಕಟ್ಟಲಾಗಿರುವ ಈ ದೇವಾಲಯವು ಆಗಮ ಹಾಗೂ ಶಿಲ್ಪ ಶಾಸ್ತ್ರಗಳ ರೀತಿಯಲ್ಲಿದೆ. ವಿವಿಧ ಪ್ರಾಣಿಗಳನ್ನು ಹೋಲುವ ಕೆತ್ತನೆಗಳಿಂದ ಕೂಡಿದ ನಾಲ್ಕು ಕಂಬಗಳನ್ನು ಹೊಂದಿರುವ ನವರಂಗ ನೋಡಲು ನಯನ ಮನೋಹರ. ಮಂಟಪದೊಳಗೆ ಅಪರೂಪದ ಪ್ರಾಣಿ, ಪಕ್ಷಿಗಳ ಕೆತ್ತನೆಗಳನ್ನು ನೋಡಬಹುದು.ಮಹಾದ್ವಾರ ಗೋಪುರ, ಬಲಿಪೀಠ, ಧ್ವಜಸ್ತಂಭ, ಗರುಡ ಮಂಟಪ, ಮುಖಮಂಟಪ, ದ್ವಾರಪಾಲಕರು, ಶುಖಾನಾಸೀ ಮತ್ತು ಗರ್ಭಗೃಹ ಹಾಗೂ ವಿಮಾನ ಗೋಪುರವನ್ನು ಒಳಗೊಂಡ ಈ ಪುರಾತನ ದೇವಸ್ಥಾನದ ಗರ್ಭಗುಡಿಯಲ್ಲಿ ನಾಲ್ಕು ಅಡಿ ಎತ್ತರದ ‘ಮಕರ ತೋರಣ’ದಿಂದ ಅಲಂಕೃತ ಪ್ರಸನ್ನ ವೆಂಕಟರಮಣಸ್ವಾಮಿ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮುಂಭಾಗದಲ್ಲಿ ಶ್ರೀದೇವಿ, ಭೂದೇವಿ ಸಮೇತ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ನೈರುತ್ಯ ಭಾಗದಲ್ಲಿ ಆಂಜನೇಯಸ್ವಾಮಿ, ವಾಯುವ್ಯ ದಿಕ್ಕಿನಲ್ಲಿ ಪದ್ಮಾವತಿ ದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಜತೆಯಲ್ಲಿ ಆಂಡಾಳ್‌ ಅಮ್ಮನವರು ಹಾಗೂ ವೈಷ್ಣವ ದೇವಾಲಯಗಳಲ್ಲಿ ಇರುವ ಆಳ್ವಾರ್‌ ಆಚಾರ್ಯರ ಸನ್ನಿಧಿಯೂ ಇದೆ.‘ವಾಯುವ್ಯ ದಿಕ್ಕಿನಲ್ಲಿರುವ ಯಾಗಶಾಲೆ, ಉತ್ತರದಲ್ಲಿರುವ ಪಾಕಶಾಲೆ ಹಾಗೂ ವೈಕುಂಠ ದ್ವಾರಗಳನ್ನು ಒಳಗೊಂಡಿರುವ ಕೋಟೆ ವೆಂಟಕರಮಣ ಸ್ವಾಮಿ ದೇವಾಲಯದ ಭಕ್ತರಾಗಿ ಸೇವೆ ಸಲ್ಲಿಸಿದವರು ಮೈಸೂರು ಅರಸರಿಗೆ ಮಾತ್ರವಲ್ಲ ಹೈದರ್‌ ಅಲಿ ಹಾಗೂ ಟಿಪ್ಪು ಸುಲ್ತಾನ ಕೂಡಾ ಇದ್ದರು ಎಂದು ಇತಿಹಾಸ ಹೇಳುತ್ತದೆ. 1791ರಲ್ಲಿ ಲಾರ್ಡ್‌ ಕಾರನ್ ವಾಲೀಸ್‌ ಆದೇಶದಂತೆ ಕವಾಯಿತು ಮೈದಾನದಿಂದ ದೇವಾಲಯದ ಹಿಂಭಾಗದಲ್ಲಿರುವ ಟಿಪ್ಪು ಅರಮನೆಯತ್ತ ಗುಂಡು ಹಾರಿಸಿದಾಗ ಅದು ದೊಡ್ಡ ಗರುಡಗಂಬಕ್ಕೆ ತಗುಲಿ ಟಿಪ್ಪುವಿನ ಪ್ರಾಣ ಉಳಿಸಿತಂತೆ. ಹೀಗಾಗಿ ಈ ದೇವಾಲಯದ ಮೇಲೆ ಟಿಪ್ಪುವಿಗೆ ಅಪಾರ ಶ್ರದ್ಧೆ ಹಾಗೂ ನಂಬಿಕೆ ಇತ್ತು. ಇದರಿಂದಾಗಿಯೇ ಹಿಂದೂ ಮುಸಲ್ಮಾನರ ಐಕ್ಯಮತ ಬೆಳೆಸಿದ ಪವಿತ್ರ ಸ್ಥಳವೂ ಇದು’ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಎಸ್.ಆರ್‌. ಶೇಷಾದ್ರಿ ಭಟ್ಟರ್‌ ಅವರು ತಿಳಿಸುತ್ತಾರೆ.ದೇವಸ್ಥಾನದಲ್ಲಿ ‘ಶ್ರೀ ಪಂಚರಾತ್ರಾಗಮ’ ರೀತಿಯಲ್ಲಿ ಹಾಗೂ ವಡಹಲೆ ಸಂಪ್ರದಾಯವಾಗಿ ದೈನಂದಿನ ಪೂಜೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರ ಜತೆಯಲ್ಲಿ ವಿಶೇಷ ದಿನಗಳ ಪೂಜೆಗಳಲ್ಲಿ ನವರಾತ್ರಿಯ ಒಂಬತ್ತು ದಿನಗಳ ಉತ್ಸವ, ಧನುರ್‌ಮಾಸ, ಕಾರ್ತಿಕಮಾಸ, ಶ್ರಾವಣಮಾಸ, ವಿಷ್ಣುದೀಪದ ಉತ್ಸವಗಳನ್ನು ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ವೃಷಭ ಮಾಸದ ಪುಬ್ಬಾ ನಕ್ಷತ್ರದಲ್ಲಿ ದೇವಾಲಯದ ರಥೋತ್ಸವ ಜರುಗುತ್ತದೆ. ಉಳಿದಂತೆ ಪ್ರತಿ ಶನಿವಾರ ಪ್ರಾಕಾರ ಉತ್ಸವ ಹಾಗೂ ಪ್ರತಿ ಶುಕ್ರವಾರ ಅಮ್ಮನವರ ಉತ್ಸವ ಇಲ್ಲಿ ನಡೆಯುತ್ತದೆ. ಮದುವೆ ಹಾಗೂ ಮಕ್ಕಳ ಬೇಡಿಕೆ ಸೇರಿದಂತೆ ಬೇಡಿದ ವರ ಈಡೇರುವುದರಿಂದ ಇಲ್ಲಿ ಆಗಾಗ ಉಯ್ಯಾಲೆ ಸೇವೆ, ಗರುಡ ಸೇವೆ, ಶೇಷವಾಹನೋತ್ಸವ, ವಾಹನೋತ್ಸವ ನಡೆಯುತ್ತಲೇ ಇರುತ್ತದೆ. ಪ್ರತಿ ಭಾನುವಾರ ನಡೆಯುವ ಕಲ್ಯಾಣೋತ್ಸವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ ದೇವಾಲಯದ ಟ್ರಸ್ಟಿಗಳಾದ ಡಿ. ಗೋಪಾಲ್‌ ಹಾಗೂ ಎ. ಶ್ರೀನಾಥ್‌.ಈ ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದರೂ ಇಲ್ಲಿನ ಭಕ್ತ ಸಮೂಹ ತಮ್ಮದೇ ಟ್ರಸ್ಟ್‌ ಸ್ಥಾಪಿಸಿ ದೇವಾಲಯದ ನಿತ್ಯ ಪೂಜೆ, ಉತ್ಸವದ ಜತೆಯಲ್ಲಿ ಇಲ್ಲಿನ ಪಾರಂಪರಿಕ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಹೊತ್ತಿದೆ. ಭಕ್ತರು ನೀಡಿದ ಹಣದಿಂದಲೇ ದೇವಾಲಯದಲ್ಲಿ 500 ಕೆ.ಜಿ. ತೂಕದ ಬೆಳ್ಳಿ ತೇರು ದೇವಾಲಯಕ್ಕೆ ಮತ್ತಷ್ಟು ಕಳೆ ಕಟ್ಟಿದೆ.ಬೆಂಗಳೂರಿನಲ್ಲಿರುವ ಕೆಲವೇ ಪುರಾತನ ದೇವಾಲಯಗಳಲ್ಲಿ ಗವಿ ಗಂಗಾಧರೇಶ್ವರ, ಹಲಸೂರು ಸೋಮೇಶ್ವರ, ಹಲಸೂರು ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಕಾಡು ಮಲ್ಲೇಶ್ವರ ಹಾಗೂ ಕಾಶಿ ವಿಶ್ವೇಶ್ವರ ದೇವಾಲಯದ ಜತೆಯಲ್ಲಿ ಕೋಟೆ ವೆಂಕಟರಮಣ ದೇವಾಲಯವೂ ಒಂದು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ದೇವಾಲಯ ದೇವರ ದರ್ಶನದ ಜತೆಗೆ ಇತಿಹಾಸವನ್ನೂ ತಿಳಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry