ಭಾನುವಾರ, ಮೇ 16, 2021
22 °C

ವೈಚಾರಿಕ ಭಾರದ ಸಂಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾನಪದ ಕ್ಷೇತ್ರದಲ್ಲಿ ಕ್ಷೇತ್ರಕಾರ್ಯಾಧಾರಿತ ಅಧ್ಯಯನಗಳು, ಸಂಗ್ರಹಗಳು ಅಪರೂಪವಾಗುತ್ತಿರುವ ಸಂದರ್ಭದಲ್ಲಿ `ವಡ್ಡಗೆರೆ ನಾಗಮ್ಮ - ಮಹಾಸತಿ ಕಾವ್ಯ~ ಕೃತಿ ಹೊರಬಂದಿರುವುದು ಸ್ವಾಗತಾರ್ಹ.

 

ಕೃತಿಯ ಹೆಸರೇ ಹೇಳುವಂತೆ ಇದೊಂದು ಮಹಾಸತಿಯ ಬಲಿದಾನವನ್ನು ಗುಣಗಾನ ಮಾಡುವ ತ್ರಿಪದಿ ಕಾವ್ಯ. ಇದರಲ್ಲಿ ಎರಡು ಭಾಗಗಳಿವೆ. ಒಂದು ಮಹಾಸತಿ ನಾಗಮ್ಮನನ್ನು ಕುರಿತ ಭಾಗವಾದರೆ, ಇನ್ನೊಂದು ಆಕೆಯ ಮಾವ (ಗಂಡನ ತಂದೆ) ವೀರಕ್ಯಾತರಾಯನ ದಿಗ್ವಿಜಯವನ್ನು ಕುರಿತದ್ದು.ಒಟ್ಟು 953 ತ್ರಿಪದಿಗಳಿಂದ ಕೂಡಿದ ಈ ಕೃತಿಯಲ್ಲಿ ನಾಗಮ್ಮನನ್ನು ಕುರಿತು 814 ಪದ್ಯಗಳಿದ್ದರೆ, ವೀರಕ್ಯಾತರಾಯನನ್ನು ಕುರಿತು ಕೇವಲ 139 ತ್ರಿಪದಿಗಳು ದೊರೆಯುತ್ತವೆ. ಹಾಗೂ ವೀರಕ್ಯಾತರಾಯನ ಪ್ರಸಂಗ ಎಲ್ಲೂ ನಾಗಮ್ಮನ ಕತೆಯೊಂದಿಗೆ ಸಾವಯವ ಸಂಬಂಧ ಪಡೆಯದೆ ಒಂದು ಪ್ರತ್ಯೇಕ ಪ್ರಕರಣದಂತೆಯೇ ಉಳಿದು ಬಿಡುತ್ತದೆ.ಬಹುಪಾಲು ಮಹಿಳಾ ಗಾಯಕಿಯರು ಈ ಪ್ರಸಂಗವನ್ನೇ ಕೈಬಿಟ್ಟು, ತಮ್ಮ ಹೆಂಗರುಳುಗಳಿಗೆ ಸಹಜವಾದ, ಸಮಾನ ಸ್ತ್ರೀ ದುಃಖಿಗಳಾದ ನಾಗಮ್ಮನ ಪ್ರಸಂಗಕ್ಕೇ ಒತ್ತುಕೊಟ್ಟು ಹಾಡುತ್ತಾರೆ. ಇನ್ನೂ `ಚಿಕ್ಕ ವಯಸ್ಸಿಗೇ ಗಂಡನನ್ನು ಕಳೆದುಕೊಳ್ಳುವ ನಾಗಮ್ಮ, ಬಂಧು ಬಳಗ ಬೇಡವೆಂದು ತಡೆದರೂ ಕೊಂಡಕ್ಕೆ ಬೀಳುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ.ಈ ನಿರ್ಧಾರ ಅಪಾರ ಕರುಣೆಗೆ ಪಾತ್ರವಾದುದರಿಂದಲೋ ಏನೋ ಜನ ಪದ ಕಟ್ಟಿ ಹಾಡಿದ್ದಾರೆ. ಬಹುಶಃ 12ನೇ ಶತಮಾನದಲ್ಲಿ ನಡೆದಿರಬಹುದಾದ ಈ ಐತಿಹಾಸಿಕ ಘಟನೆ ಶತಶತಮಾನಗಳನ್ನು ದಾಟುತ್ತಾ ಇತಿಹಾಸದ ನೆನಪಾಗಿ ಇಂದು ನಮ್ಮ ಮಧ್ಯೆ ಉಳಿದು ಬಂದಿದೆ.ಈ ಪದ 12 ಸಂದು(ಸಂಧಿ)ಗಳಲ್ಲಿ ಹರಡಿಕೊಂಡಿದ್ದು ತನ್ನ ಕಾವ್ಯಮಯ ಶೀರ್ಷಿಕೆ ಮತ್ತು ಸಹಜ ಸೊಗಸಿನಿಂದ ಗಮನ ಸೆಳೆಯುತ್ತದೆ. ಇಲ್ಲೆಲ್ಲಾ ಸಂಪಾದಕರ ಶ್ರಮ ನಮ್ಮ ಅರಿವಿಗೆ ಬರುತ್ತದೆ. ತಮ್ಮ ವಿಶಿಷ್ಟ `ಆನಾದಿ~ ಕಾವ್ಯದ ಮೂಲಕ ಕಾವ್ಯಲೋಕದ ಗಮನ ಸೆಳೆದ ಕವಿಹೃದಯದ ನಾಗರಾಜಯ್ಯನವರಿಗೆ ತಮ್ಮ ಹುಟ್ಟೂರಿನ ದೇವತೆಯೇ ಆದ ನಾಗಮ್ಮನನ್ನು ಕುರಿತ ಈ ಕಾವ್ಯ ಬಾಲ್ಯದಿಂದ ಕಾಡಿದ್ದರೆ ಆಶ್ಚರ್ಯವಿಲ್ಲ.ಆಧುನಿಕ, ಪ್ರಗತಿಪರ ಆರೋಪಗಳು ತಮ್ಮನ್ನು ಈ ಕೃತಿಗೆ ತೆತ್ತುಕೊಳ್ಳದಿರುವ ಒತ್ತಡಗಳನ್ನು ಸೃಷ್ಟಿಸುತ್ತಿದ್ದರೂ, ಅವೆಲ್ಲವುಗಳಿಂದ ಪಾರಾಗಿ ತಮ್ಮ ಹುಟ್ಟೂರಿನ ಋಣ ತೀರಿಸುವ ರೀತಿಯಲ್ಲಿ ಈ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ನೂರು ಪುಟಗಳ ಈ ಕಾವ್ಯಕ್ಕೆ, ಸಂಪಾದಕರ ಸುಮಾರು ನೂರು ಪುಟಗಳ ಕ್ಷೇತ್ರಕಾರ್ಯಾಧಾರಿತ ಪಾಂಡಿತ್ಯಪೂರ್ಣ ಪ್ರಸ್ತಾವನೆಯಿದೆ.

 

ಸಂಸ್ಕೃತಿ ಚರಿತ್ರೆಗೆ ಇದೊಂದು ಕೊಡುಗೆ. ನಾಗಮ್ಮನ ಪರಿಷೆ, ಆಚರಣೆಗಳು, ಪೂರಕ ದೈವದ ವಿವರಗಳು, ಈ ಕಾವ್ಯದ ನಾಯಕ ಮೆರೆದಾಡಿದ ಸ್ಥಳಗಳ ಸಮೀಕ್ಷೆ - ಹೀಗೆ ಯಾವ ಸೂಕ್ಷ್ಮವನ್ನೂ ಬಿಡದೆ ಲೇಖಕರು ತಮ್ಮ ಅಧ್ಯಯನದ ಕಣ್ಣನ್ನು ಹಾಯಿಸಿದ್ದಾರೆ.

ವೈಚಾರಿಕ ಒಳನೋಟಗಳ ಸೆಳಕು, ಚರ್ಚೆ, ವಾಗ್ವಾದಗಳು `ದಲಿತ ದೃಷ್ಟಿಕೋನ~ದಿಂದ ಕೂಡಿರುವುದರಿಂದ ಕೃತಿಗೆ ಒಂದು ಹೊಸ ಆಯಾಮ ಪ್ರಾಪ್ತವಾಗಿದೆ. ಆದರೆ ಕೆಲವು ಬಾರಿ ಅವರ ವಾದಗಳು ಅತಿ ಎನಿಸಿಬಿಡುತ್ತದೆ.ಉದಾಹರಣೆಗೆ ವಡ್ಡರನ್ನು ಮೂಲ ನಿವಾಸಿಗಳೆಂದು ಕರೆಯುವುದು. ಮಂಡೆ ಬೋಳಿಸಿಕೊಳ್ಳುವುದಕ್ಕೆ ಬೌದ್ಧಮೂಲವನ್ನು ಆರೋಪಿಸುವುದು, ಹುತ್ತವನ್ನು ಯೋನಿಪೂಜೆಯ ಪ್ರತೀಕ ಎನ್ನುವುದು ತಮಟೆಯನ್ನು ದೂರ ಇಟ್ಟ ದೇವತೆ ಎಂದು ಅಪವ್ಯಾಖ್ಯಾನ ಮಾಡುವುದು ಇತ್ಯಾದಿ...ನಾಗಮ್ಮನ ಗಂಡ ವೀರನಾಗಪ್ಪನ ಸಾವಿಗೆ ಕಾರಣ ಬೇಡರು ಎಂಬುದನ್ನು `ತುಂಬಾಡಿ ಪ್ರದೇಶ ನಿಷೇಧ~ದ ಆಚರಣೆಯೇ ಸ್ಪಷ್ಟವಾಗಿ ಹೇಳುವಾಗ ಅದನ್ನು ತುರುಕರು ಎಂದು ಹೇಳಿ ಗೊಂದಲಗೊಳಿಸುವುದು ಸರಿಯಲ್ಲ. ಆ ಕಾಲಕ್ಕೆ ಮುಸ್ಲಿಂರ ಪ್ರಾಬಲ್ಯವೇ ಇರಲಿಲ್ಲ. ಅದೇನೇ ಇರಲಿ ನಾಗಮ್ಮನ ಕಥನ ಕುಂಚಿಟಿಗರು (ವಕ್ಕಲಿಗರು) ನಡೆದು ಬಂದ ಇತಿಹಾಸ ಕಥನವನ್ನು ಗರ್ಭೀಕರಿಸಿಕೊಂಡಿದೆ ಎಂಬುದನ್ನು ಸಂಪಾದಕರು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ.ಈ ಕಾವ್ಯವನ್ನು ವಡ್ಡಗೆರೆ ನಾಗರಾಜಯ್ಯನವರಲ್ಲದೆ, ವೈಜಯಂತಿಮಾಲಾ (1981) ಮತ್ತು ಕೃಷ್ಣಮೂರ್ತಿ ಹನೂರು ಬಹಳ ಹಿಂದೆಯೇ ಸಂಪಾದಿಸಿ ಪ್ರಕಟಿಸಿದ್ದಾರೆ.ವೈಜಯಂತಿಮಾಲಾ ಅವರ ಸಂಗ್ರಹದಲ್ಲಿ ನಾಗಮ್ಮನನ್ನು ಕುರಿತೇ 744 ತ್ರಿಪದಿಗಳಿದ್ದರೆ, ಹನೂರರ ಸಂಗ್ರಹದಲ್ಲಿ ಕೇವಲ 306 ತ್ರಿಪದಿಗಳಿವೆ. ಅದರ ಸಂಗ್ರಹದ ಕತೆಗೂ, ತಮ್ಮ ಸಂಗ್ರಹದ ಕತೆಗೂ ಇರುವ ವ್ಯತ್ಯಾಸಗಳೇನು ಎಂಬುದನ್ನು ನಾಗರಾಜಯ್ಯನವರು ಚರ್ಚಿಸಬೇಕಿತ್ತು. ಈ ಸಂಪಾದನೆಗಳನ್ನು ಅವರು ಗಮನಿಸಿಯೂ ಸುಮ್ಮನಿದ್ದಾರೆ. ಇವಲ್ಲದೆ ನಾಗಮ್ಮನ ಕುರಿತ ಬೇರೆ ಕೃತಿಗಳು ಬಂದಿವೆ. ಪ್ರಕಟವಾದ ಇತರ ಕೃತಿಗಳ ಬಗ್ಗೆಯೂ ಸಣ್ಣ ಟಿಪ್ಪಣಿಗಳನ್ನು ಮಂಡಿಸಬೇಕಾಗಿತ್ತು.ಈ ಕೃತಿ ಸರಳ ಸಂಪಾದನೆಗಷ್ಟೇ ಸೀಮಿತವಾಗದೆ ಒಂದು ವೈಚಾರಿಕ ವಾಗ್ವಾದಕ್ಕೂ ಕಾರಣವಾಗಿರುವುದನ್ನು ಬಹಳ ಮುಖ್ಯವಾಗಿ ಇಲ್ಲಿ ಚರ್ಚಿಸಬೇಕಾಗಿದೆ.ಶೂದ್ರವರ್ಗದ ಕುಂಚಿಟಿಗ ವಕ್ಕಲಿಗ ಜಾತಿಗೆ ಸೇರಿದ ನಾಗಮ್ಮನನ್ನು ಕುರಿತ ಈ ಕಾವ್ಯವನ್ನು ದಲಿತ ಸಮುದಾಯಕ್ಕೆ ಸೇರಿದವರು ಮಾತ್ರ ಹಾಡುತ್ತಾರೆ ಎಂಬ ತಪ್ಪುಕಲ್ಪನೆ ಮೂಡುವಂತೆ ಸಂಪಾದಕರು ಬರೆದಿದ್ದಾರೆ. ಅದು ಸರಿಯಲ್ಲ.ನಾಗಮ್ಮನ ಜಾತಿಯ ಕುಂಚಿಟಿಗರೂ ಸೇರಿದಂತೆ ಕಾಡುಗೊಲ್ಲರು, ಬೇಡರು, ಕುರುಬರು ಕೂಡಾ ಈಕೆಯ ಕಾವ್ಯವನ್ನು ಹಾಡುತ್ತಾರೆ. ಜಾತ್ಯತೀತವಾಗಿ ಎಲ್ಲ ಸಮುದಾಯದವರೂ ಈಕೆಯನ್ನು ಆರಾಧಿಸುತ್ತಾರೆ. ಅಸ್ಪೃಶ್ಯ ಜನಾಂಗದವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವ ಬಗ್ಗೆ ಜಾಗೃತಿ ಮೂಡುತ್ತಾ ಬಂದಂತೆಲ್ಲಾ ಅದು ಅದೃಶ್ಯವಾಗುತ್ತಿರುವುದನ್ನು ಕಾಣುತ್ತಿದ್ದೇವೆ.ಇದು ನಾಗಮ್ಮನ ದೇವಸ್ಥಾನಕ್ಕೂ ಅನ್ವಯಿಸುತ್ತದೆ. `ದಲಿತರನ್ನು ದೂರವಿಟ್ಟ ಇಂಥ ದೇವಿಯ ಕತೆಯ ಸಂಪಾದನೆಯಾದರೂ ಯಾಕೆ, ಹೊಡಿ ಗೋಲಿ~ ಎಂದು ಶಿವರಾಮಯ್ಯನವರು ಹೇಳಿದ ನಂತರವೂ ನಾಗರಾಜಯ್ಯನವರು ಇದನ್ನು ಸಂಪಾದಿಸಿದ್ದೇಕೆ? ಇದನ್ನು ಇತಿಹಾಸದ ಅವಲೋಕವೆನ್ನಬೇಕೋ, ಸಂಸ್ಕೃತಿ ನಡೆದು ಬಂದ ಹೆಜ್ಜೆ ಗುರುತುಗಳ ಹುಡುಕಾಟ ಎನ್ನಬೇಕೋ?- ಇಂಥ ಕೆಲವು ಪ್ರಶ್ನೆಗಳನ್ನು ಈ ಕೃತಿಯೊಳಗಿನ `ಮುಮ್ಮೇಳ~ದ ನುಡಿಗಳನ್ನು ಬರೆದಂಥ ಡಾ.ರಂಗನಾಥ ಕಂಟನ ಕುಂಟೆ ಅವರ ಆಕ್ರೋಶಭರಿತ `ಜನಪದ ಸಾಹಿತ್ಯವೆಲ್ಲ ಜನಪರವಲ್ಲ~ ಹಾಗೂ `ಹಿಮ್ಮೇಳ~ದ ನುಡಿ ಬರೆದಂಥ ಪ್ರೊ.ಶಿವರಾಮಯ್ಯನವರ ಸಮತೂಕದ `ಊಳಿಗಮಾನ್ಯ ಸಂಸ್ಕೃತಿ ಸಂಕಥನ~ ಮತ್ತು `ಬೆನ್ನುಡಿ~ಯ ಬಂಜಗೆರೆ ಜಯಪ್ರಕಾಶ್‌ರ ಮಾತುಗಳು ಎತ್ತುತ್ತವೆ.ಇಂದಿನ ಆಧುನಿಕ ಪ್ರಗತಿಪರ ಕನ್ನಡಕದ ಮೂಲಕ ಗತಕಾಲದ ಬದುಕನ್ನು ಅವಲೋಕಿಸುವುದು ಎಷ್ಟು ಸರಿ? ಎಲ್ಲವನ್ನೂ ಸರಕು ಸಂಸ್ಕೃತಿಯ ಪ್ರಯೋಜನಕಾರಿ ದೃಷ್ಟಿಯಿಂದ ಕಾಣಲಾದೀತೆ? ಆಧುನಿಕ ಕಾಲದ ನಮ್ಮ ನಿರೀಕ್ಷೆಯ ವೈಚಾರಿಕ ಭಾರವನ್ನೆಲ್ಲ ಅದು ತಡೆದುಕೊಂಡೀತೆ? ಪಂಪನ ಕಾಲದ ವೀರಯುಗ, ಅಂದಿನ ಯುಗಧರ್ಮಕ್ಕೆ ಅನುಗುಣವಾದ ರೀತಿಯಲ್ಲಿ ಅವನ ಕಾವ್ಯದಲ್ಲಿ ಕಾಣಿಸಿಕೊಂಡಿದೆ.ಭಕ್ತಿಯುಗದ ಕುಮಾರವ್ಯಾಸನಲ್ಲಿ ಆ ಕಾಲದ ಮೌಲ್ಯಗಳ ಪಲ್ಲಟವನ್ನು ಕಾಣಬಹುದು. ಕೊಂಡ ಬೀಳಲು ಹೊರಟ ನಾಗಮ್ಮ ಅಂದಿನ ನಂಬಿಕೆ, ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಂಡಳು. ಆ ಕಾಲದಲ್ಲಿ ಗಂಡ ಸತ್ತವರೆಲ್ಲ ಕೊಂಡಕ್ಕೆ ಬೀಳುತ್ತಿರಲಿಲ್ಲ.

 

ಒಂದು ಅಪರೂಪದ ಪ್ರಕರಣವಾಗಿ ಕಿರಿಯ ವಯಸ್ಸಿನಲ್ಲೇ ವೈಧವ್ಯಕ್ಕೆ ಗುರಿಯಾದ ಆಕೆಯ ದೈನೇಸಿ ಸ್ಥಿತಿ, ಬಲಿದಾನ ಮಾಡಿಕೊಳ್ಳುವ ಆಕೆಯ ಅಚಲ ನಿರ್ಧಾರ ಜನರಿಗೆ ಕಾವ್ಯಕಟ್ಟಲು ಪ್ರೇರಣೆ ಒದಗಿಸಿರಬೇಕು.ಅವತ್ತಿನ ಕಾಲದ ಮೌಲ್ಯದ ಅಚ್ಚಿನಲ್ಲಿ ಸಿದ್ಧವಾದ ನಾಗಮ್ಮ ಹಾಗೆ ಚಿಂತಿಸಿ ನಡೆದುಕೊಂಡಿದ್ದರೆ ಆಶ್ಚರ್ಯವೇನು? `ಸತಿ~ಯಾಗುವ ಶ್ರೇಷ್ಠತೆಯ ಉನ್ಮಾದಕ್ಕೆ ಆಕೆ ಸಿಕ್ಕಿದ್ದರೆ ಆಶ್ಚರ್ಯವೇನು?ಅಂದರೆ ನಾಗಮ್ಮನ ನಡವಳಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಭಾವಿಸಬೇಕಿಲ್ಲ. ಆ ಕಾಲಘಟ್ಟದ ಪಡಿಯಚ್ಚಿನಂತಿರುವ ಅವರನ್ನು ನಮ್ಮ ಕಾಲದ ಅಚ್ಚಿನಲ್ಲಿಟ್ಟು ಏಕೆ ನೋಡಬೇಕು? ಸತಿ ಪದ್ಧತಿ ಮೇಲುವರ್ಗದ್ಲ್ಲಲಷ್ಟೇ ಇರಲಿಲ್ಲ, ಬುಡಕಟ್ಟುಗಳಲ್ಲೂ ಈ ಸಂಪ್ರದಾಯ ಇತ್ತು ಎನ್ನುವುದಕ್ಕೆ ಕಾಡುಗೊಲ್ಲ ಬುಡಕಟ್ಟಿಗೆ ಸೇರಿದ `ಕೊಂಡದ ಕಾಟವ್ವ~ನ ಕತೆಯೇ ಸಾಕ್ಷಿ.ಈ ಕತೆಯಲ್ಲಿ ಈಕೆಯ ಗಂಡ ತನ್ನ ಶೀಲವನ್ನು ಶಂಕಿಸಿದನೆಂದು ಗಂಡ ಬದುಕಿದ್ದಾಗಲೇ ಕೆಂಡಕೊಂಡವಾಗುತ್ತಾಳೆ! ಇಂಥ ನೂರಾರು ಕತೆಗಳು ಚಿದಾನಂದಮೂರ್ತಿಯವರ `ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ~ ಕೃತಿಯಲ್ಲಿ ದೊರೆಯುತ್ತವೆ.`ಗರತಿಯ ಹಾಡು~ ಸಂಕಲನವೂ ಆ ಕಾಲದ ಗರತಿಯ ಸ್ಥಿತಿಗತಿ ಬಗ್ಗೆ ಹೇಳುತ್ತದೆ. ಅದು ಆ ಕಾಲಘಟ್ಟದ ಬದುಕಿನ ಚಿಂತನೆ - ದರ್ಶನಗಳನ್ನು ಹಿಡಿದಿಟ್ಟಿದೆ. ನಾಗಮ್ಮನ ಕತೆಯೂ ಆ ಕಾಲದ ಸಂಕಥನವನ್ನು ಹೇಳುತ್ತದೆ. ಅದನ್ನು ಸಾಂಸ್ಕೃತಿಕ ಪಠ್ಯದಂತೆ, ಇತಿಹಾಸದಂತೆ ಓದೋಣ.

 

ಅತಿಯಾದ ನಿರೀಕ್ಷೆಗಳ ಭಾರವನ್ನು ಆ ಕೃತಿಯ ಮೇಲೆ ಹೇರುವುದು ಬೇಡ. ಇಷ್ಟೆಲ್ಲ ವಾಗ್ವಾದಗಳ ನಡುವೆಯೂ ಈ ಆಶಯವೇ ನಾಗರಾಜಯ್ಯನವರಲ್ಲಿ ಕೆಲಸ ಮಾಡಿದಂತೆ ಕಾಣುತ್ತದೆ. ಇಲ್ಲದಿದ್ದರೆ ಅವರು ಈ ಕೃತಿ ಸಂಪಾದಿಸುತ್ತಿರಲಿಲ್ಲ, ಪ್ರಕಟಿಸುತ್ತಿರಲಿಲ್ಲ.ವಡ್ಡಗೆರೆ ನಾಗಮ್ಮ - ಮಹಾಸತಿ ಕಾವ್ಯ

ಸಂ: ವಡ್ಡಗೆರೆ ನಾಗರಾಜಯ್ಯ

ಪುಟ: 255+28, ಬೆಲೆ: ರೂ. 250, ವರ್ಷ: 2010.

ಪ್ರ: ಅನ್ನಪೂರ್ಣ ಪಬ್ಲಿಸಿಂಗ್ ಹೌಸ್

ನಂ. 176, 12ನೇ ಮೇನ್, ಮಾಗಡಿ ಮೇನ್ ರೋಡ್,

ಗ್ರೌಂಡ್ ಫ್ಲೋರ್, ಅಗ್ರಹಾರ ದಾಸರಹಳ್ಳಿ, ಬೆಂಗಳೂರು - 560079.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.